ಮಂಗಳವಾರ, ಜೂನ್ 2, 2020
27 °C

ಸೆಪ್ಟೆಂಬರ್‌ನಲ್ಲಿ ಅಥ್ಲೆಟಿಕ್ಸ್‌ ಆರಂಭ: ಸೆಬಾಸ್ಟಿಯನ್ ಕೋ ನಿರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೊನ್ಯಾಕೊ: ಕೋವಿಡ್ ಹಾವಳಿಯಿಂದ ಸ್ಥಗಿತಗೊಂಡಿರುವ ಅಥ್ಲೆಟಿಕ್ಸ್ ಚಟುವಟಿಕೆ ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ಆರಂಭವಾಗುವ ನಿರೀಕ್ಷೆ ಇದೆ ಎಂದು ವರ್ಲ್ಡ್‌ ಅಥ್ಲೆಟಿಕ್ಸ್‌ (ಹಿಂದಿನ ಅಂತರರಾಷ್ಟ್ರೀಯ ಅಥ್ಲೆಟಿಕ್ಸ್ ಫೆಡರೇಷನ್‌) ಅಧ್ಯಕ್ಷ ಸೆಬಾಸ್ಟಿಯನ್ ಕೋ ಹೇಳಿದ್ದಾರೆ. 

‘ಕೋವಿಡ್ ನಿಯಂತ್ರಣಕ್ಕೆ ಬೇರೆ ಬೇರೆ ದೇಶಗಳು ವಿಭಿನ್ನ ರೀತಿಯಲ್ಲಿ ಪ್ರಯತ್ನಿಸುತ್ತಿವೆ. ಈ ನಡುವೆ ಅಥ್ಲೆಟಿಕ್ಸ್‌ ಚಟುವಟಿಕೆ ಆದಷ್ಟು ಶೀಘ್ರ ಆರಂಭಿಸಲು ಏನೇನು ಮಾಡಬೇಕು ಎಂಬುದರ ಕುರಿತು ಸದಸ್ಯ ಸಂಸ್ಥೆಗಳಿಗೆ ಮತ್ತು ಅಥ್ಲೀಟ್‌ಗಳಿಗೆ ಮಾಹಿತಿ ನೀಡಲಾಗುತ್ತದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಆಗಸ್ಟ್ ಕೊನೆಯಲ್ಲಿ ಹೊರಾಂಗಣ ಚಟುವಟಿಕೆ ಆರಂಭಿಸುವ ಯೋಜನೆ ಇದೆ’ ಎಂದು ಹೇಳಿಕೆಯೊಂದರಲ್ಲಿ ಕೋ ತಿಳಿಸಿದ್ದಾರೆ.

‘ಈ ವರ್ಷ ಅಥ್ಲೆಟಿಕ್ಸ್‌ಗೆ ಸಂಬಂಧಿಸಿ ಮಹತ್ವದ್ದು. ಆದರೆ ಈಗ ಅಂತರರಾಷ್ಟ್ರೀಯ ಮಟ್ಟದ ಪರಿಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು ಮುಂದುವರಿಯಬೇಕಾಗಿದೆ. ಆದರೂ ಕೈಚೆಲ್ಲಿ ಕುಳಿತುಕೊಳ್ಳಲಾಗುವುದಿಲ್ಲ. ಎಲ್ಲವೂ ಸರಿಹೋಗುತ್ತದೆ ಎಂಬ ಆಶಾಭಾವನೆಯಿಂದ ದಿನಗಳನ್ನು ಕಳೆಯಬೇಕಾಗಿದೆ’ ಎಂದು ಕೋ ಹೇಳಿದ್ದಾರೆ. 

ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳನ್ನು ಏರ್ಪಡಿಸಲು ಆಗಸ್ಟ್ ಒಂಬತ್ತು ಮತ್ತು 10ನೇ ತಾರೀಕನ್ನು ವರ್ಲ್ಡ್‌ ಅಥ್ಲೆಟಿಕ್ಸ್ ಸದ್ಯ ನಿಗದಿ ಮಾಡಿದೆ. ಕೋವಿಡ್ ಮಹಾಮಾರಿಯಿಂದಾಗಿ ಒಲಿಂಪಿಕ್ಸ್ ಕೂಟವನ್ನು ಒಂದು ವರ್ಷ ಮುಂದೂಡಲಾಗಿದೆ. ಮುಂದಿನ ವರ್ಷ ನಡೆಯಬೇಕಾಗಿದ್ದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ 2022ಕ್ಕೆ ಮುಂದೂಡಲಾಗಿದೆ. ಒಲಿಂಪಿಕ್ಸ್ ಮತ್ತು ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ ಒಂದೇ ವರ್ಷ ನಡೆದರೆ ಆಯೋಜಕರಿಗೂ ಕ್ರೀಡಾಪಟುಗಳಿಗೂ ಸಮಸ್ಯೆ ಆದೀತು ಎಂಬ ಕಾರಣದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಕಳೆದ ಮಾರ್ಚ್‌ ತಿಂಗಳಲ್ಲಿ ಚೀನಾದಲ್ಲಿ ನಡೆಯಬೇಕಾಗಿದ್ದ ಒಳಾಂಗಣ ಅಥ್ಲೆಟಿಕ್ ಕೂಟವನ್ನು ಒಂದು ವರ್ಷ ಮುಂದೂಡಲಾಗಿದ್ದು ಲಂಡನ್‌, ಪ್ಯಾರಿಸ್ ಮತ್ತು ಬಾರ್ಸಿಲೋನ ಮ್ಯಾರಥಾನ್‌ ರದ್ದು ಮಾಡಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು