ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮನ್‌ವೆಲ್ತ್ ಕ್ರೀಡಾಕೂಟ 2022: ಹೆಚ್ಚು ಪದಕ ಗೆಲ್ಲುವ ಉತ್ಸಾಹದಲ್ಲಿ ಭಾರತ

ಅಕ್ಷರ ಗಾತ್ರ

ಬರ್ಮಿಂಗ್‌ಹ್ಯಾಮ್: ವಿಶ್ವದ ಅತಿದೊಡ್ಡ ಕ್ರೀಡಾಕೂಟಗಳಲ್ಲಿ ಒಂದಾದ ಕಾಮನ್‌ವೆಲ್ತ್ ಕ್ರೀಡಾಕೂಟದ 22ನೇ ಆವೃತ್ತಿಗೆ ಗುರುವಾರ ರಾತ್ರಿ ಅದ್ಧೂರಿ ಚಾಲನೆ ಸಿಕ್ಕಿದೆ.

ಇಂಗ್ಲೆಂಡಿನ ಬರ್ಮಿಂಗ್‌ಹ್ಯಾಮ್‌ನ ಅಲೆಕ್ಸಾಂಡರ್ ಕ್ರೀಡಾಂಗಣದಲ್ಲಿ ಉದ್ಘಾಟನಾ ಸಮಾರಂಭ ನಡೆಯಿತು. ಇಂಗ್ಲೆಂಡ್​ ರಾಜಮನೆತನದ ಪ್ರಿನ್ಸ್ ಚಾರ್ಲ್ಸ್ ಅವರು ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಈ ಬಾರಿಯ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ 72 ರಾಷ್ಟ್ರಗಳ 5000ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸುತ್ತಿರುವುದು ವಿಶೇಷ. ಇದರಲ್ಲಿ ಭಾರತದಿಂದ 214 ಸ್ಪರ್ಧಿಗಳು ಕಣಕ್ಕಿಳಿಯುತ್ತಿದ್ದಾರೆ. ಇನ್ನು ಈ ಕ್ರೀಡಾಕೂಟಗಳಲ್ಲಿ 134 ಪುರುಷರ ಪದಕ ಸ್ಪರ್ಧೆಗಳು ಮತ್ತು 136 ಮಹಿಳೆಯರ ಪದಕ ಸ್ಪರ್ಧೆಗಳು ನಡೆಯಲಿವೆ.

ಸಿಂಧು ಧ್ವಜಧಾರಿ:ಎರಡು ಒಲಿಂಪಿಕ್ಸ್ ಪದಕ ವಿಜೇತ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಅವರು ಕಾಮನ್‌ವೆಲ್ತ್ ಕ್ರೀಡಾಕೂಟದ ಪಥಸಂಚಲನದಲ್ಲಿ ತ್ರಿವರ್ಣ ಧ್ವಜ ಹಿಡಿದು ಭಾರತ ತಂಡವನ್ನು ಮುನ್ನಡೆಸಿದರು.

ಗುರ್ಜಿತ್ ಕೌರ್‌– ಪಿಟಿಐ ಚಿತ್ರ
ಗುರ್ಜಿತ್ ಕೌರ್‌– ಪಿಟಿಐ ಚಿತ್ರ

ಪದಕ ಬರ ನೀಗಿಸುವತ್ತ..
ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ 16 ವರ್ಷಗಳಿಂದ ಪದಕದ ಬರ ಎದುರಿಸುತ್ತಿರುವ ಭಾರತ ಮಹಿಳಾ ಹಾಕಿ ತಂಡವು ಈ ಬಾರಿ ವಿಜಯ ವೇದಿಕೆಯಲ್ಲಿ ಸಂಭ್ರಮಿಸುವ ಛಲದಲ್ಲಿದೆ.

ಸವಿತಾ ಪೂನಿಯಾ ನಾಯಕತ್ವದ ತಂಡವು ಇಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಕ್ರೀಡಾಕೂಟದ ಮೊದಲ ಪಂದ್ಯದಲ್ಲಿ ಶುಕ್ರವಾರ ಘಾನಾ ಸವಾಲು ಎದುರಿಸಲಿದ್ದು ಶುಭಾರಂಭದ ನಿರೀಕ್ಷೆಯಲ್ಲಿದೆ.

ಶಿವ ಥಾಪಗೆ ಸುಲೇಮಾನ್ ಸವಾಲು:ಮಾಜಿ ವಿಶ್ವ ಚಾಂಪಿಯನ್, ಭಾರತದ ಶಿವ ಥಾಪಾ ಅವರು ಶುಕ್ರವಾರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಆರಂಭವಾಗಲಿರುವ ಪುರುಷರ ಬಾಕ್ಸಿಂಗ್‌ನಲ್ಲಿ ತಮ್ಮ ಅಭಿಯಾನ ಆರಂಭಿಸುವರು.

ಶುಕ್ರವಾರ ನಡೆಯುವ ಲೈಟ್‌ವೆಲ್ಟರ್‌ವೇಟ್ (60–63.5ಕೆ.ಜಿ) ವಿಭಾಗದಲ್ಲಿ ಶಿವ ಥಾಪ ಅವರು ಪಾಕಿಸ್ತಾನದ ಸುಲೇಮಾನ್ ಬಲೂಚ್ ವಿರುದ್ಧ ಕಾದಾಡುವರು.

ಹರ್ಮನ್‌ಪ್ರೀತ್ ಕೌರ್
ಹರ್ಮನ್‌ಪ್ರೀತ್ ಕೌರ್

ಹರ್ಮನ್‌ಪ್ರೀತ್ ಪಡೆಗೆ ಶುಭಾರಂಭದ ನಿರೀಕ್ಷೆ:24 ವರ್ಷಗಳ ಬಳಿಕ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಕ್ರಿಕೆಟ್‌ ಮರುಸೇರ್ಪೆಯಾಗಿದ್ದು, ಭಾರತ ಮಹಿಳಾ ತಂಡವು ಟಿ20 ಮಾದರಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಸವಾಲು ಎದುರಿಸಲಿದೆ.

ಎಜ್‌ಬಾಸ್ಟನ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆಯುವ ಹಣಾಹಣಿಯಲ್ಲಿ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ಗೆಲುವಿನ ಭರವಸೆಯಲ್ಲಿದೆ.1998ರ ಕ್ವಾಲಾಲಂಪುರ ಕೂಟದಲ್ಲಿ ಪುರುಷರ 50 ಓವರ್‌ಗಳ ಪಂದ್ಯಗಳನ್ನು ಆಡಿಸಲಾಗಿತ್ತು. ಆ ಬಳಿಕ ಕ್ರಿಕೆಟ್‌ ನಡೆದಿರಲಿಲ್ಲ.

ಶ್ರೀಹರಿ
ಶ್ರೀಹರಿ

ಈಜು: ಕನ್ನಡಿಗ ಶ್ರೀಹರಿ ಮೇಲೆ ನಿರೀಕ್ಷೆ
ಕನ್ನಡಿಗ ಶ್ರೀಹರಿ ನಟರಾಜ್ ಶುಕ್ರವಾರ ಆರಂಭವಾಗಲಿರುವ ಪುರುಷರ ಈಜು ವಿಭಾಗದ 100 ಮೀಟರ್ಸ್ ಬ್ಯಾಕ್‌ಸ್ಟ್ರೋಕ್‌ನಲ್ಲಿ ಸ್ಪರ್ಧಿಸಲಿದ್ದಾರೆ. ಬೆಂಗಳೂರಿನ ಶ್ರೀಹರಿ ಹೋದ ವರ್ಷ ಟೋಕಿಯೊ ಒಲಿಂಪಿಕ್‌ ಕೂಟದಲ್ಲಿಯೂ ಸ್ಪರ್ಧಿಸಿದ್ದರು.

ಬ್ರಿಟಿಷ್‌ ಸಾಮ್ರಾಜ್ಯದ ಆಟಗಳಿಂದ ಕಾಮನ್‌ವೆಲ್ತ್ ಗೇಮ್ಸ್‌ವರೆಗೆ..
1930ರಲ್ಲಿ ಆರಂಭವಾದ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು 1950ರವರೆಗೆ ಬ್ರಿಟಿಷ್‌ ಸಾಮ್ರಾಜ್ಯದ ಗೇಮ್‌ಗಳೆಂದು ಕರೆಯಲಾಗುತ್ತಿತ್ತು. ಪ್ರತಿ ನಾಲ್ಕು ವರ್ಷಗಳವರೆಗೆ ನಡೆಯುವ ಕೂಟವನ್ನು 1954–66ರವರೆಗೆ ‘ಬ್ರಿಟಿಷ್‌ ಎಂಪೈರ್‌ ಮತ್ತು ಕಾಮನ್‌ವೆಲ್ತ್ ಗೇಮ್ಸ್’ ಎನ್ನಲಾಗುತ್ತಿತ್ತು. ತರುವಾಯ ಇದು ಕಾಮನ್‌ವೆಲ್ತ್ ಕೂಟವಾಗಿ ಬದಲಾಯಿತು.

ಚೊಚ್ಚಲ ಕೂಟವನ್ನು ಆಯೋಜಿಸಿದ್ದು ಕೆನಡಾದ ಹ್ಯಾಮಿಲ್ಟನ್‌ ನಗರ. ಕೆನಡಾದ ಪತ್ರಕರ್ತ ಮೆಲ್ವಿಲ್ಲೆ ಮಾರ್ಕ್ಸ್ ರಾಬಿನ್ಸನ್ ಅವರನ್ನು ಗೇಮ್ಸ್‌ನ ಜನಕ ಎಂದು ಕರೆಯಲಾಗುತ್ತದೆ. ಬ್ರಿಟಿಷರು ಆಳಿದ ದೇಶಗಳಲ್ಲಿ, ಹಬ್ಬಗಳ ವೇಳೆ ಆಯೋಜಿಸುವ ಆಟಗಳಿಂದ ಸ್ಫೂರ್ತಿ ಪಡೆದು ಕಾಮನ್‌ವೆಲ್ತ್ ಗೇಮ್ಸ್ ಶುರುವಾದವು.

1942 ಮತ್ತು 1946ರ ಕೂಟಗಳು ವಿಶ್ವ ಎರಡನೇ ಮಹಾಯುದ್ಧದ ಕಾರಣ ನಡೆಯಲಿಲ್ಲ.

ಸಿಜಿಎಫ್‌ ಮೇಲ್ವಿಚಾರಣೆ: ಕಾಮನ್‌ವೆಲ್ತ್ ಕೂಟದ ಮೇಲ್ವಿಚಾರಣೆಯ ಹೊಣೆಯನ್ನು ಕಾಮನ್‌ವೆಲ್ತ್ ಗೇಮ್ಸ್ ಫೆಡರೇಷನ್ (ಸಿಜಿಎಫ್‌) ನೋಡಿಕೊಳ್ಳುತ್ತದೆ. ಕ್ರೀಡಾ ಚಟುವಟಿಕೆಗಳು, ಆತಿಥ್ಯ ದೇಶಗಳ ಆಯ್ಕೆಯು ಸಿಜಿಎಫ್‌ನ ಜವಾಬ್ದಾರಿಯಾಗಿದೆ.

ಅತಿ ಹೆಚ್ಚು ಬಾರಿ ಗೇಮ್ಸ್ ಆಯೋಜಿಸಿದ್ದು ಆಸ್ಟ್ರೇಲಿಯಾ (5). ಕಳೆದ ಆವೃತ್ತಿಗೂ (2018) ಆ ದೇಶವೇ ಆತಿಥ್ಯ ವಹಿಸಿತ್ತು. ದೆಹಲಿಯಲ್ಲಿ ನಡೆದ 2010ರ ಆವೃತ್ತಿಯಲ್ಲಿ ಭಾರತ 101 ಪದಕ ಜಯಿಸಿ 2ನೇ ಸ್ಥಾನ ಗಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT