ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್‌ ಆಯೋಜಿಸುವದು ಸ್ಥೈರ್ಯದ ಸಂಕೇತ: ನರಿಂದರ್ ಬಾತ್ರಾ

ಅಂತರರಾಷ್ಟ್ರೀಯ ಒಲಿಂಪಿಕ್ ಸಂಸ್ಥೆಯ ಸದಸ್ಯ ನರಿಂದರ್ ಬಾತ್ರಾ ಅಭಿಮತ
Last Updated 15 ಮೇ 2021, 12:43 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್ ಏರುಗತಿಯಲ್ಲಿ ಸಾಗುತ್ತಿರುವುದರಿಂದ ಒಲಿಂಪಿಕ್ಸ್ ಕೂಟವನ್ನು ರದ್ದುಗೊಳಿಸಬೇಕು ಎಂಬ ಬೇಡಿಕೆ ಹೆಚ್ಚಾಗಿರುವುದು ನಿಜ. ಆದರೆ ಟೋಕಿಯೊ ಕೂಟವನ್ನು ಯಶಸ್ವಿಯಾಗಿ ನಡೆಸಿದರೆ ಕೋವಿಡ್‌ಗಿಂತ ನಾವು ಒಂದು ಹೆಜ್ಜೆ ಮುಂದಿರಿಸಿದ್ದೇವೆ ಎಂಬ ಸಂದೇಶವನ್ನು ಜಗತ್ತಿಗೆ ಸಾರಿದಂತಾಗುತ್ತದೆ ಎಂದು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಸದಸ್ಯ ನರಿಂದರ್ ಬಾತ್ರಾ ಅಭಿಪ್ರಾಯಪಟ್ಟಿದ್ದಾರೆ.

ಕಳೆದ ವರ್ಷ ನಡೆಯಬೇಕಾಗಿದ್ದ ಒಲಿಂಪಿಕ್ ಕೂಟವನ್ನು ಕೋವಿಡ್‌ನಿಂದಾಗಿ ಈ ವರ್ಷಕ್ಕೆ ಮುಂದೂಡಲಾಗಿದೆ. ಜುಲೈ 23ರಂದು ಕೂಟ ಆರಂಭವಾಗಲಿದೆ. ನಿಗದಿಯಂತೆ ಕೂಟ ನಡೆಯಲಿದೆ ಎಂದು ಭಾರತ ಒಲಿಂಪಿಕ್ಸ್‌ ಸಂಸ್ಥೆಯ ಅಧ್ಯಕ್ಷರೂ ಆಗಿರುವ ನರಿಂದರ್ ಬಾತ್ರಾ ಸುದ್ದಿಸಂಸ್ಥೆಗೆ ಶನಿವಾರ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

‘ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಭಾರತದ ಕ್ರೀಡಾಪಟುಗಳ ಸುರಕ್ಷತೆಗೆ ಎಲ್ಲ ಬಗೆಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಮೂಲಕ ಅವರಿಗೆ ಸ್ಪರ್ಧೆಗಳಲ್ಲಿ ಪರಿಪೂರ್ಣ ಸಾಮರ್ಥ್ಯ ಪ್ರದರ್ಶಿಸಲು ಸಾಧ್ಯವಾಗುವಂತೆ ಮಾಡಲಾಗುತ್ತಿದೆ’ ಎಂದು ಅವರು ಹೇಳಿದರು.

ಕೋವಿಡ್–19ರ ನಾಲ್ಕನೇ ಅಲೆಯಿಂದಾಗಿ ವಿಷಮ ಪರಿಸ್ಥಿತಿ ಇರುವ ಕಾರಣ ಒಲಿಂಪಿಕ್ಸ್ ರದ್ದುಗೊಳಿಸಬೇಕು ಎಂದು ಶುಕ್ರವಾರ ಮನವಿ ಸಲ್ಲಿಸಲಾಗಿದೆ. 3,50,000 ಮಂದಿ ಸಹಿ ಮಾಡಿರುವ ಪತ್ರವನ್ನು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಮತ್ತು ಅಂತರರಾಷ್ಟ್ರೀಯ ಪ್ಯಾರಾಲಿಂಪಿಕ್ ಸಮಿತಿಯ ಮುಖ್ಯಸ್ಥರು ಹಾಗೂ ಟೋಕಿಯೊ ಗವರ್ನರ್ ಯುರಿಕೊ ಕೊಯ್ಕೆ ಅವರಿಗೆ ಸಲ್ಲಿಸಲಾಗಿತ್ತು.

ಒಲಿಂಪಿಕ್ಸ್ ಆರಂಭವಾಗಲು 10 ವಾರಗಳು ಉಳಿದಿರುವಾಗ ಜಪಾನ್‌ನ ಮತ್ತಷ್ಟು ಪ್ರದೇಶಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಭಾರತ ಸೇರಿದಂತೆ 153 ದೇಶಗಳ ಜಪಾನ್ ಪ್ರವೇಶದ ಮೇಲೆ ಗುರುವಾರ ನಿರ್ಬಂಧ ವಿಧಿಸಲಾಗಿದೆ. ಇದರಿಂದ ಭಾರತದ ಕ್ರೀಡಾಪಟುಗಳ ಒಲಿಂಪಿಕ್ಸ್ ಪಾಲ್ಗೊಳ್ಳುವಿಕೆ ಮೇಲೆ ಪರಿಣಾಮ ಬೀರದು ಎಂದು ಬಾತ್ರಾ ಹೇಳಿದರು.

ಅನಿಶ್ಚಿತ ಸ್ಥಿತಿಗೆ ಕೊನೆ ಹಾಡಿ: ಫೆಡರರ್‌

ಬೆರಾಂಪೂರ್ (ರಾಯಿಟರ್ಸ್‌): ಟೋಕಿಯೊ ಒಲಿಂಪಿಕ್ಸ್‌ಗೆ ಸಂಬಂಧಿಸಿದ ಅನಿಶ್ಚಿತ ಸ್ಥಿತಿಗೆ ಅಂತ್ಯ ಹಾಡಬೇಕು ಎಂದು ಟೆನಿಸ್ ದಿಗ್ಗಜ ರೋಜರ್ ಫೆಡರರ್ ಆಗ್ರಹಿಸಿದ್ದಾರೆ. ಕೂಟ ನಡೆಯುತ್ತದೆಯೋ ಇಲ್ಲವೋ ಎಂದು ಇನ್ನೂ ಸ್ಪಷ್ಟವಾಗದೇ ಇರುವುದರಿಂದ ಇನ್ನೂ ದ್ವಂದ್ವದಲ್ಲಿರುವುದಾಗಿ 20 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಫೆಡರರ್ ಹೇಳಿದ್ದಾರೆ.

‘ನಿಜ ಹೇಳುತ್ತಿದ್ದೇನೆ, ಒಲಿಂಪಿಕ್ಸ್ ಸಿದ್ಧತೆಗೆ ಸಂಬಂಧಿಸಿ ಏನು ಮಾಡಬೇಕು ಎಂದು ನನಗೆ ಇನ್ನೂ ತೋಚುತ್ತಿಲ್ಲ’ ಎಂದು ಸ್ವಿಟ್ಜರ್ಲೆಂಡ್‌ನ ಟಿವಿ ಚಾನಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು ಹೇಳಿದ್ದಾರೆ. 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಡಬಲ್‌ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದ ಫೆಡರರ್ 2012ರ ಲಂಡನ್ ಒಲಿಂಪಿಕ್ಸ್‌ನ ಸಿಂಗಲ್ಸ್ ವಿಭಾಗದಲ್ಲಿ ಬೆಳ್ಳಿ ಗೆದ್ದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT