ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಿಲಿಕಾನ್‌ ವ್ಯಾಲಿಯನ್ನು ಪಾಪದ ಕಣಿವೆಯಾಗಿಸಿದ ಕಾಂಗ್ರೆಸ್‌’

Last Updated 3 ಮೇ 2018, 19:38 IST
ಅಕ್ಷರ ಗಾತ್ರ

ಬೆಂಗಳೂರು: ‘ಯುವಕರು, ಪ್ರತಿಭಾವಂತರು ಸೇರಿ ಈ ನಗರವನ್ನು ಸಿಲಿಕಾನ್‌ ವ್ಯಾಲಿಯನ್ನಾಗಿ ರೂಪಿಸಿದರು. ಆದರೆ, ಕಾಂಗ್ರೆಸ್‌ ಸರ್ಕಾರ ಐದೇ ವರ್ಷಗಳಲ್ಲಿ ಇದನ್ನು ಪಾಪದ ಕಣಿವೆಯನ್ನಾಗಿಸಿತು. ಯುವಜನರು ಇದನ್ನು ಜಗತ್ತಿನ ಕಂಪ್ಯೂಟರ್‌ ರಾಜಧಾನಿಯನ್ನಾಗಿ ಮಾಡಿದರೆ, ಸರ್ಕಾರವು, ಅಪರಾಧದ ರಾಜಧಾನಿಯನ್ನಾಗಿಸಿತು’

ಕೆಂಗೇರಿಯಲ್ಲಿ ಗುರುವಾರ ‌ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಲ್ಲಿನ ಸರ್ಕಾರದ ಸಾಧನೆಯನ್ನು ಬಣ್ಣಿಸಿದ್ದು ಹೀಗೆ.

‘ಇಲ್ಲಿನ ಸರ್ಕಾರದ ಐದು ವರ್ಷಗಳ ಸಾಧನೆ ಹೇಳಿದರೆ ಜನ ಆ ಪಕ್ಷದ ವಿರುದ್ಧ ತಿರುಗಿಬೀಳುತ್ತಾರೆ. ಈ ನಗರಕ್ಕೆ ಕಾಂಗ್ರೆಸ್‌ ನೀಡಿರುವ ಐದು ಕೊಡುಗೆಗಳನ್ನು ಮಾತ್ರ ಹೇಳುತ್ತೇನೆ’ ಎಂದು ಒಂದೊಂದೇ ಸಾಧನೆಯನ್ನು ಬಿಚ್ಚಿಟ್ಟರು.

ಉದ್ಯಾನ ನಗರಿಯನ್ನು ಸರ್ಕಾರ ಕಸದ ನಗರಿಯನ್ನಾಗಿಸಿತು.‘ಕಾಸ್ಮೋಪಾಲಿಟನ್‌’ ಸಂಸ್ಕೃತಿಯನ್ನು  ‘ಗೊಂದಲದ ಸಂಸ್ಕೃತಿ’ಯನ್ನಾಗಿ ಪರಿವರ್ತಿಸಿತು.  ‘ಸ್ಟಾರ್ಟ್‌ಅಪ್‌ ಹಬ್‌’  ಹಿರಿಮೆ ಹೊಂದಿದ ನಗರವು ‘ರಸ್ತೆಗುಂಡಿಗಳ ಕ್ಲಬ್‌’ ಆಗುವಂತೆ ಮಾಡಿತು. ರಸ್ತೆ ಗುಂಡಿ ಹಾಗೂ ಸಂಚಾರ ದಟ್ಟಣೆ ಸಮಸ್ಯೆಗೆ ಸಿಲುಕಿ ಜನ ನರಳುತ್ತಿದ್ದಾರೆ. ಎಷ್ಟೋ ಮಕ್ಕಳು, ಮಹಿಳೆಯರು ಹಾಗೂ ವೃದ್ಧರು ಇದರಿಂದಾಗಿ ಸತ್ತಿದ್ದಾರೆ ಎಂದು ಟೀಕಿಸಿದರು.

ಭ್ರಷ್ಟಾಚಾರದಲ್ಲಿ ಇಲ್ಲಿ ದಾಖಲೆ ನಿರ್ಮಾಣವಾಗಿದೆ. ಈ ವಿಚಾರದಲ್ಲಿ ಮಂತ್ರಿಗಳು ಪರಸ್ಪರ ಸ್ಪರ್ಧೆಗಿಳಿದಿದ್ದಾರೆ. ಸರ್ಕಾರ ಉಕ್ಕಿನ ಸೇತುವೆ ನಿರ್ಮಿಸಲು ಹೊರಟಿತ್ತು. ಅದು ‘steel’ (ಉಕ್ಕಿನ) ಸೇತುವೆಯಲ್ಲ; ‘steal’ (ಕದಿಯುವ) ಸೇತುವೆ. ಬಿಟ್ಟಿದ್ದರೆ, ಅದರ ಕೆಳಗೆ ಹಣದ ಹೊಳೆ ಹರಿದು ಮಂತ್ರಿಗಳ ಮನೆ ಸೇರುತ್ತಿತ್ತು. ಬೆಂಗಳೂರಿನ ಜನರು ಹಾಗೂ ಬಿಜೆಪಿ ಸೇರಿ ಆಂದೋಲನ ರೂಪಿಸಿದ ಪರಿಣಾಮವಾಗಿ ಸರ್ಕಾರ ಲೂಟಿಕಾರ್ಯದಿಂದ ಹಿಂದೆ ಸರಿಯಬೇಕಾಯಿತು ಎಂದು ನೆನಪಿಸಿದರು.

ವ್ಯಾಪಾರ–ವಹಿವಾಟು ಸುಲಭಗೊಳಿಸುವ ವಿಚಾರದಲ್ಲಿ ಭಾರತ 42 ಸ್ಥಾನಗಳಷ್ಟು ಮೇಲಕ್ಕೇರಿದೆ. ಆದರೆ, ಕರ್ನಾಟಕವು ‘ಕೊಲೆ ಮಾಡುವುದನ್ನು ಸುಲಭಗೊಳಿಸಿದೆ’ ಎಂದು ವ್ಯಂಗ್ಯವಾಡಿದರು.

ಹೊಸ ವರ್ಷದ ಸಂದರ್ಭದಲ್ಲಿ ಬೆಂಗಳೂರಿನ ನಡೆಯುವ ಘಟನೆಗಳು ಚಿಂತೆ ಮೂಡಿಸಿವೆ. ರಾಕ್ಷಸಿ ಪ್ರವೃತ್ತಿಯಿಂದ ಹೆಣ್ಣುಮಕ್ಕಳ ಮೇಲೆ ಇಂತಹ ಕುಕೃತ್ಯ ಎಸಗುವವರಿಗೆ ಗಲ್ಲು ಶಿಕ್ಷೆ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಬಿಜೆಪಿ ಸರ್ಕಾರ ಬಂದರೆ ಈ ರಾಜ್ಯದಲ್ಲೂ ಈ ಕಾನೂನನ್ನು ಜಾರಿಗೆ ತರಲಿದ್ದೇವೆ ಎಂದರು

ಅಧಿಕಾರದ ಮದ: ಸುಖಾಸುಮ್ಮನೆ ಇಂತಹ ಬೆಳವಣಿಗೆಗಳು ಆಗಿಲ್ಲ. ಇಲ್ಲಿನ ಪರಿಸ್ಥಿತಿ ಹದಗೆಡುವುದರ ಹಿಂದೆ ಪ್ರಭಾವಿಗಳ ಮಕ್ಕಳ ಹಾಗೂ ಅವರ ಹಿಂದಿರುವ ಸಮಾಜವಿರೋಧಿ ಶಕ್ತಿಗಳ ಕೈವಾಡ ಇದೆ. ಕಾಂಗ್ರೆಸ್‌ ಶಾಸಕರೊಬ್ಬರ ಮಗ ಅಧಿಕಾರದ ಮದದಿಂದ ಜನರಿಗೆ ಕಿರುಕುಳ ನೀಡುತ್ತಿದ್ದರೆ, ಅಂಥವರನ್ನು ರಕ್ಷಿಸುವ ಕಾರ್ಯವನ್ನು ಸರ್ಕಾರ ಮಾಡಿದೆ. ಪಾಲಿಕೆ ಕಚೇರಿಯಲ್ಲಿ ಕಾಂಗ್ರೆಸ್‌ ನಾಯಕರು ದಾಂದಲೆ ಮಾಡುತ್ತಾರೆ. ಇವರಿಗೆ ಅಧಿಕಾರದ ಮದ ಎಷ್ಟು ತಲೆಗೇರಿದೆ ಎಂದರೆ, ಸಚಿವರನ್ನು ಭೇಟಿ ಮಾಡಲು ಬಂದ ಅಂಗವಿಕಲನನ್ನೂ ಇಲ್ಲಿ ಹೊರದಬ್ಬುತ್ತಾರೆ. ಇಲ್ಲಿ ಯಾರಿಗೆ ರಕ್ಷಣೆ ಇದೆ ಯೋಚಿಸಿ ಎಂದರು.

ಪರಂಪರೆ ಎತ್ತಿ ಹಿಡಿಯುತ್ತೇವೆ: ನಾಡಪ್ರಭು ಕೆಂಪೇಗೌಡರು ಕಟ್ಟಿದ ಈ ನಗರದ ಪರಂಪರೆ ಅಪಾಯದಲ್ಲಿದೆ. ಬಿಜೆಪಿಯನ್ನು ಚುನಾಯಿಸಿದರೆ ಇಲ್ಲಿನ ಮಹಾನ್‌ ಪರಂಪರೆಯನ್ನು ಮತ್ತೆ ಎತ್ತಿ ಹಿಡಿಯುತ್ತೇವೆ.

ಚತುರ ನಾಗರಿಕರು ಇರುವಲ್ಲಿ ‘ಸ್ಮಾರ್ಟ್‌ ಸಿಟಿ’ ಮಾಡಲು ತಡವಾಗುತ್ತದೆಯೇ? ಎಂದು ಪ್ರಶ್ನಿಸಿದ ಅವರು, ‘ಸ್ಮಾರ್ಟ್‌ ಸಿಟಿ ಯೋಜನೆಯಡಿ ರಾಜ್ಯದ 7 ನಗರಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ  ₹ 836 ಕೋಟಿ ನೀಡಿದೆ. ಆದರೆ, ಬಳಕೆಯಾಗಿದ್ದು ₹ 12 ಕೋಟಿ ಮಾತ್ರ’ ಎಂದು ಬೇಸರ ವ್ಯಕ್ತಪಡಿಸಿದರು. 

ಕ್ರೀಡೆಯಲ್ಲಿ ದೇಶಕ್ಕೆ ಕೀರ್ತಿ ತಂದ ಪಿ.ಗುರುರಾಜ್ ಹಾಗೂ ಅಶ್ವಿನಿ ಪೊನ್ನಪ್ಪ ಅವರಂತಹ ಯುವಜನರ ಸಾಧನೆ ಬಗ್ಗೆ ಹೆಮ್ಮೆ ಪಡುತ್ತಿದೆ ಎಂದರು.

‘ಪ್ರಣಾಳಿಕೆ ಸುಳ್ಳೇ ಸುಳ್ಳು’

‘ಪ್ರಣಾಳಿಕೆಯಲ್ಲೂ ಕಾಂಗ್ರೆಸ್‌ ಸುಳ್ಳು ಹೇಳುವ ತಂತ್ರ ಅನುಸರಿದಿದೆ. ಐದು ವರ್ಷಗಳಲ್ಲಿ ಮಾಡಿದ ಸಾಧನೆ ಬಗ್ಗೆ ಅವರು ಹೇಳುತ್ತಿಲ್ಲ. ಮೋದಿಯವರೇ ನೀವೇನು ಮಾಡಿದಿರಿ ಎಂದು ಕೇಳುತ್ತಿದ್ದಾರೆ. ಇದು ಕರ್ನಾಟಕ ವಿಧಾನಸಭೆ ಚುನಾವಣೆ. ನೀವು ಏನು ಮಾಡಿದ್ದೀರಿ ಎಂಬುದನ್ನೂ ಸ್ವಲ್ಪ ಜನರಿಗೆ ಹೇಳಿ’ ಎಂದು ಮೋದಿ ವ್ಯಂಗ್ಯದ ಧಾಟಿಯಲ್ಲಿ ಹೇಳಿದರು.

‘ಸುಳ್ಳು ಹೇಳುವಾಗಲಾದರೂ ಸ್ವಲ್ಪವಾದರೂ ನಂಬುವಂತೆ ಹೇಳಿ. ಇನ್ನೊಮ್ಮೆ ಅವಕಾಶ ನೀಡಿದರೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ₹18 ಲಕ್ಷ ಕೋಟಿ ವ್ಯವಹಾರ ನಡೆಸುತ್ತೇವೆ ಎಂದು ಹೇಳಿಕೊಂಡಿದ್ದೀರಿ. ರಾಜ್ಯದ ಜಿಡಿಪಿಯನ್ನು ನೋಡಿದರೆ ಇದು ಅಸಂಭವ ಎಂಬುದು ಖಾತರಿಯಾಗುತ್ತದೆ. ಜೈವಿಕ ತಂತ್ರಜ್ಞಾನ ಕ್ಷೇತ್ರದ ವಹಿವಾಟನ್ನೂ ₹1.98 ಲಕ್ಷ ಕೋಟಿಗೆ ಹೆಚ್ಚಿಸುವುದಾಗಿ ಹೇಳಿದ್ದಾರೆ. ಇಡೀ ದೇಶದ   ಅಂಕಿಅಂಶವನ್ನು ತೆಗೆದುಕೊಂಡರೂ ಇದು ಅಸಾಧ್ಯ. ಸುಳ್ಳು ಹೇಳಿ ಮತ ಕೇಳುವ ಕಾಂಗ್ರೆಸ್‌ ಅನ್ನು ಜನ ಕ್ಷಮಿಸುವುದಿಲ್ಲ’ ಎಂದರು.

ಕನ್ನಡದಲ್ಲೇ ಮಾತು ಆರಂಭಿಸಿದ ಮೋದಿ

ಮೋದಿ ಅವರು ಕನ್ನಡದಲ್ಲೇ ಮಾತು ಆರಂಭಿಸಿದರು.

‘ಬೆಂಗಳೂರಿನ್‌ ಜನತೆಗೆ ನನ್ನ ನಮಸ್ಕಾರಗಳು. ನಾಡಪ್ರಭು ಕೆಂಪೇಗೌಡ್‌, ಶ್ರೇಷ್ಠ್‌ ಕಲಾವಿದ್‌ ಡಾ.ರಾಜ್‌ಕುಮಾರ್‌, ವಿಜ್ಞಾನಿ ಸರ್‌.ಸಿ.ವಿ.ರಾಮನ್‌, ವಿಶ್ವೇಶ್ವರಯ್ಯ ಅವರಿಗ್‌ ನನ್ನ ಅನಂತ್ ಪ್ರಣಾಮ್‌ಗಳ್‌. ನಮ್ಮ್‌ ದೇಶಕ್‌ ಕೀರ್ತಿ ತಂದ್‌ ಬೆಂಗಳೂರಿನ್‌ ಸಾಹಿತ್‌, ಕ್ರೀಡಾಪಟುಗಳಿಗೆ ನನ್ನ ನಮನಗಳ್’ ಎಂದು ಮೋದಿ ಹೇಳುತ್ತಿದ್ದಂತೆಯೇ ಅಭಿಮಾನಿಗಳ ಕೇಕೆ ಮುಗಿಲುಮುಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT