ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬಡ್ಡಿಗೂ ಕೊರೊನಾ ಸಂಕಟ

Last Updated 1 ಜೂನ್ 2020, 3:00 IST
ಅಕ್ಷರ ಗಾತ್ರ

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಇಷ್ಟೊತ್ತಿಗಾಗಲೇ ದೇಶದ ಪ್ರಮುಖ ನಗರಗಳಲ್ಲಿ ಪ್ರೊ ಕಬಡ್ಡಿ ಲೀಗ್‌ (ಪಿಕೆಎಲ್‌) ಸಂಭ್ರಮ ಗರಿಗೆದರಬೇಕಿತ್ತು. ಎಲ್ಲಾ ತಂಡಗಳ ಆಟಗಾರರು ಪೂರ್ವಸಿದ್ಧತಾ ಶಿಬಿರಗಳಲ್ಲಿ ಪಾಲ್ಗೊಂಡು ಮ್ಯಾಟ್‌ ಮೇಲೆ ಬೆವರು ಹರಿಸಬೇಕಿತ್ತು.ಆದರೆ ಕೊರೊನಾ ವೈರಾಣು ಇದೆಲ್ಲದಕ್ಕೂ ಕಡಿವಾಣ ಹಾಕಿಬಿಟ್ಟಿದೆ. ‌‘ಅಂತರ’ ನಿಯಮ ಈ ಕ್ರೀಡೆಯನ್ನು ಕಟ್ಟಿಹಾಕಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಲಾಕ್‌ಡೌನ್‌ನಿಂದ ಕ್ರೀಡಾ ಚಟುವಟಿಕೆಗಳಿಗೆ ವಿನಾಯಿತಿ ನೀಡಿದ ಬಳಿಕ ಕ್ರಿಕೆಟಿಗರು, ಸೈಕ್ಲಿಸ್ಟ್‌ಗಳು ಹಾಗೂ ಅಥ್ಲೀಟ್‌ಗಳು ಅಭ್ಯಾಸ ಆರಂಭಿಸಿದ್ದಾರೆ. ಆದರೆ ಕಬಡ್ಡಿಪಟುಗಳಿಗೆ ಮಾತ್ರ ಈ ‘ಅದೃಷ್ಟ’ ಇಲ್ಲ. ನೇರ ಸಂಪರ್ಕದ ಕ್ರೀಡೆ (ಕಾಂಟ್ಯಾಕ್ಟ್‌ ಸ್ಪೋರ್ಟ್ಸ್‌) ಎನ್ನುವ ಕಾರಣಕ್ಕೆ ಕಬಡ್ಡಿ ಮೇಲಿನ ನಿರ್ಬಂಧವನ್ನು ಸರ್ಕಾರ ಸಡಿಲಿಸಿಲ್ಲ. ಹೀಗಾಗಿಅವರೆಲ್ಲಾ ಇನ್ನಷ್ಟು ಕಾಲ ‘ಗೃಹ ಬಂಧನ’ದಲ್ಲೇ ಇರಬೇಕಾಗಿದೆ.

ಕೊರೊನಾ ಅಟ್ಟಹಾಸ ಹೀಗೆ ಮುಂದುವರಿದರೆ ಕಬಡ್ಡಿ ಕ್ರೀಡೆಯ ಮೆರುಗು ನಿಧಾನವಾಗಿ ಮಸುಕಾಗುವ ಅಪಾಯವಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಮಾಜಿ ಅಂತರರಾಷ್ಟ್ರೀಯ ಆಟಗಾರ ಬಿ.ಸಿ.ರಮೇಶ್‌ ಕೂಡ ಕಳವಳ ವ್ಯಕ್ತಪಡಿಸಿದ್ದಾರೆ.‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು ‘ನೇರ ಸಂಪರ್ಕದ ಕ್ರೀಡೆಗಳು ಎನ್ನುವ ಕಾರಣದಿಂದಾಗಿ ಕಬಡ್ಡಿ, ಈಜು ಹಾಗೂ ಕುಸ್ತಿಪಟುಗಳ ತಾಲೀಮಿಗೆ ಸರ್ಕಾರ ಹಸಿರು ನಿಶಾನೆ ತೋರಿಲ್ಲ. ಈ ಕ್ರೀಡೆಗಳಲ್ಲಿ ಅಂತರ ಕಾಯ್ದುಕೊಳ್ಳುವುದು ಅಸಾಧ್ಯ ಎಂಬ ಕಾರಣಕ್ಕೆ ಈ ತೀರ್ಮಾನ ಕೈಗೊಂಡಿದೆ. ಸರ್ಕಾರದ ಈ ನಿಲುವನ್ನು ನಾವೆಲ್ಲ ಸ್ವಾಗತಿಸ

ಲೇಬೇಕು. ಪರಿಸ್ಥಿತಿ ಹೀಗೆ ಮುಂದುವರಿದರೆ ಗ್ರಾಮೀಣ ಮೂಲದ ಜನಪ್ರಿಯ ಆಟವಾಗಿರುವ ಕಬಡ್ಡಿ, ಮತ್ತೆ ಅವನತಿಯ ಅಂಚಿಗೆ ಸರಿಯುವ ಅಪಾಯ ಇದೆ. ಇದರಿಂದ ಪಾರಾಗಲು ಈಗ ನಮಗೆ ಉಳಿದಿರುವುದು ಒಂದೇ ಮಾರ್ಗ. ಆಟಗಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಬಡ್ಡಿ ಚಟುವಟಿಕೆಗಳನ್ನು ಪುನರಾರಂಭಿಸುವುದು. ಇದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಅನುಮತಿ ನೀಡಬೇಕು’ ಎಂದು ಮನವಿ ಮಾಡಿದ್ದಾರೆ.

‘ಪಿಕೆಎಲ್‌ ಶುರುವಾದ ಬಳಿಕ ಕಬಡ್ಡಿ ಜನಪ್ರಿಯತೆ ಹೆಚ್ಚಿದೆ. ಕ್ರಿಕೆಟ್‌ ನಂತರ ಅತಿ ಹೆಚ್ಚು ಟಿ.ವಿ.ವೀಕ್ಷಕರನ್ನು ಸೆಳೆದಿರುವುದು ಪಿಕೆಎಲ್‌. ಹೀಗಾಗಿ ಈ ಲೀಗ್‌ ಆಯೋಜನೆಗೆ ಸರ್ಕಾರ ಅನುಮತಿ ಕೊಡಬೇಕು. ಕಬಡ್ಡಿ ಉಳಿವಿನ ದೃಷ್ಟಿಯಿಂದ ಇದು ಅನಿವಾರ್ಯ. ಸ್ಪರ್ಶದಿಂದ ಸೋಂಕು ಹಬ್ಬುವ ಅಪಾಯ ಹೆಚ್ಚು ಎಂದು ಹೇಳಲಾಗುತ್ತಿದೆ. ಇದನ್ನು ತಪ್ಪಿಸಲು ಹಲವು ಮಾರ್ಗೋಪಾಯಗಳೂ ಇವೆ. ಆಟಗಾರರು ಹಾಗೂ ಎಲ್ಲಾ ಸಿಬ್ಬಂದಿ ಕೈಗವಸು ಧರಿಸುವುದನ್ನು ಕಡ್ಡಾಯಗೊಳಿಸಬಹುದು. ಅಂತರರಾಷ್ಟ್ರೀಯ ಅಥ್ಲೀಟ್‌ಗಳ ಹಾಗೆ ಕಬಡ್ಡಿ ಆಟಗಾರರೂ ಸ್ಕಿನ್‌ ಟೈಟ್‌ ಉಡುಪುಗಳನ್ನು ಧರಿಸಿ ಆಡಬಹುದು’ ಎಂದು ಅರ್ಜುನ ಪ್ರಶಸ್ತಿ ಪುರಸ್ಕೃತರೂ ಆಗಿರುವ ರಮೇಶ್‌ ಹೇಳುತ್ತಾರೆ.

‘ಬೇರೆ ಬೇರೆ ರಾಜ್ಯಗಳಿಗೆ ಸತತ ಪ್ರಯಾಣ ಮಾಡುವುದು ಅಪಾಯವನ್ನು ಆಹ್ವಾನಿಸಿದಂತೆ. ಹೀಗಾಗಿ ಯಾವುದಾದರೂ ಒಂದು ನಗರದಲ್ಲಿಖಾಲಿ ಕ್ರೀಡಾಂಗಣದಲ್ಲಿ ಪ್ರೊ ಕಬಡ್ಡಿ ಆಯೋಜಿಸಿದರೂ ಒಳ್ಳೆಯದೇ. ಇದರಿಂದ ಅಭಿಮಾನಿಗಳಿಗೆ ಟಿ.ವಿ.ಯಲ್ಲಾದರೂ ಆಟ ನೋಡುವ ಅವಕಾಶ ಸಿಗುತ್ತದೆ. ಕೊರೊನಾದಿಂದಾಗಿ ಎಲ್ಲಾ ಕ್ರೀಡಾಪಟುಗಳು ಮೈದಾನದಿಂದ ದೂರ ಉಳಿಯಬೇಕಾಗಿದೆ. ಮನೆಯಲ್ಲೇ ಇದ್ದು ಫಿಟ್‌ನೆಸ್‌ ಕಾಪಾಡಿಕೊಳ್ಳುವುದು ಹೇಗೆ, ಡಯಟ್‌ ಹೇಗಿರಬೇಕು ಎಂಬುದರ ಬಗ್ಗೆ ನಾವು ಅಗತ್ಯ ಮಾರ್ಗದರ್ಶನ ನೀಡುತ್ತಿದ್ದೇವೆ’ ಎಂದು ಕರ್ನಾಟಕ ರಾಜ್ಯ ಅಮೆಚೂರ್‌ ಕಬಡ್ಡಿ ಸಂಸ್ಥೆಯ ಸಂಘಟನಾ ಕಾರ್ಯದರ್ಶಿಯೂ ಆಗಿರುವ ಅವರು ತಿಳಿಸಿದ್ದಾರೆ.

ಗುಣಮಟ್ಟ ಕುಸಿಯುವ ಆತಂಕ

‘ಮೇ ತಿಂಗಳ ವೇಳೆಗೆ ನಾವು ಪ್ರೊ ಕಬಡ್ಡಿ ಎಂಟನೇ ಆವೃತ್ತಿಯ ಪೂರ್ವ ಸಿದ್ಧತೆಯಲ್ಲಿ ತೊಡಗಿಕೊಳ್ಳಬೇಕಾಗಿತ್ತು. ಆದರೆ ಕೊರೊನಾದಿಂದಾಗಿ ಮನೆಯಲ್ಲಿ ಇರಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ವ್ಯಾಯಾಮ ಹೊರತುಪಡಿಸಿ ಇನ್ಯಾವ ಚಟುವಟಿಕೆಗಳಲ್ಲೂ ತೊಡಗಿಕೊಳ್ಳಲು ಆಗುತ್ತಿಲ್ಲ. ಇದರಿಂದ ಆಟದ ಗುಣಮಟ್ಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ. ಕೌಶಲಗಳನ್ನಂತೂ ಮರೆಯೊಲ್ಲ. ಕಬಡ್ಡಿ ಪುನರಾರಂಭವಾದ ಬಳಿಕ ಆಟಕ್ಕೆ ಹೊಂದಿಕೊಳ್ಳುವುದಕ್ಕೆ ಕಷ್ಟವಾಗುತ್ತದೆ’ ಎಂದು ಕರ್ನಾಟಕದ ಮತ್ತೊಬ್ಬ ಆಟಗಾರ ಸುಕೇಶ್‌ ಹೆಗ್ಡೆ ಹೇಳುತ್ತಾರೆ.

‘ತಂಡವೊಂದರಲ್ಲಿ 18ರಿಂದ 20 ಮಂದಿ ಇರುತ್ತಾರೆ. ಅವರನ್ನೆಲ್ಲಾ ಕೋವಿಡ್‌ ಪರೀಕ್ಷೆಗೆ ಒಳಪಡಿಸುವುದು. 14 ದಿನಗಳ ಸ್ವಯಂ ಪ್ರತ್ಯೇಕವಾಸ... ಇವೇ ಮೊದಲಾದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವ ಮೂಲಕ ಕಬಡ್ಡಿ ಚಟುವಟಿಕೆಗಳನ್ನು ಆರಂಭಿಸಲು ಸರ್ಕಾರ ಅನುಮತಿ ಕೊಟ್ಟರೆ ಉತ್ತಮ’ ಎಂದು ಬೆಂಗಾಲ್‌ ವಾರಿಯರ್ಸ್‌ ತಂಡದ ಬೆನ್ನೆಲುಬಾಗಿರುವ ಸುಕೇಶ್, ಅಭಿಪ್ರಾಯಪಟ್ಟಿದ್ದಾರೆ.

ಯುವಕರ ಕನಸಿಗೆ ಅಡ್ಡಿ

‘ಪ್ರೊ ಕಬಡ್ಡಿ ಲೀಗ್‌ ಈಗ ಎಲ್ಲರ ಮನೆಮಾತಾಗಿದೆ. ಪಿಕೆಎಲ್‌ ಹಾಗೂ ರಾಜ್ಯ ತಂಡಗಳಲ್ಲಿ ಮಿಂಚಬೇಕೆಂಬುದು ನನ್ನನ್ನೂ ಸೇರಿದಂತೆ ಅನೇಕ ಯುವ ಆಟಗಾರರ ಆಸೆಯಾಗಿತ್ತು. ಇದನ್ನು ಗಮನದಲ್ಲಿಟ್ಟುಕೊಂಡೇ ಎಲ್ಲರೂ ಹಗಲಿರುಳು ಅಭ್ಯಾಸ ನಡೆಸಿದ್ದರು. ನಮ್ಮೆಲ್ಲರ ಕನಸಿಗೆ ಈಗ ಕೊರೊನಾ ಅಡ್ಡಿಯಾಗಿದೆ’ ಎಂದು ಕರ್ನಾಟಕದ ಯುವ ಆಟಗಾರ ಜೆ.ದರ್ಶನ್ ಬೇಸರ ವ್ಯಕ್ತಪಡಿಸಿದ್ದಾರೆ.

‘ಕೊರೊನಾದಿಂದಾಗಿ ಅಭ್ಯಾಸದಿಂದ ದೂರ ಉಳಿಯಬೇಕಾಗಿದೆ. ಜಿಮ್‌ನಲ್ಲಿ ಸ್ಟ್ರೆಂಥನಿಂಗ್‌ ವ್ಯಾಯಾಮಗಳನ್ನು ಮಾಡುವುದಕ್ಕೂ ಅವಕಾಶ ಇಲ್ಲದಂತಾಗಿದೆ. ಹೀಗಾಗಿ ಫಿಟ್‌ನೆಸ್‌ ಮಟ್ಟ ಕುಸಿಯುವ ಆತಂಕ ಎದುರಾಗಿದೆ. ಮುಂದಿನ ದಿನಗಳಲ್ಲಿ ಅಭ್ಯಾಸ ನಡೆಸುವಾಗ ಗಾಯಗೊಳ್ಳುವ ಹಾಗೂ ಆಟದ ಗುಣಮಟ್ಟ ಕುಸಿಯುವ ಅಪಾಯವೂ ಹೆಚ್ಚಿರುತ್ತದೆ’ ಎಂದೂ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT