ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

11 ಸಚಿವ ಸ್ಥಾನ ಹಂಚುವುದು ಹೇಗೆ?

Last Updated 26 ಮೇ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪಕ್ಷಕ್ಕೆ ಹಂಚಿಕೆಯಾಗಿರುವ 11 ಸಚಿವ ಸ್ಥಾನಗಳನ್ನು ಯಾರಿಗೆ ನೀಡುವುದು, ಯಾರನ್ನು ದೂರ ಇಡುವುದು ಎಂಬ ಇಕ್ಕಟ್ಟು ಜೆಡಿಎಸ್‌ನಲ್ಲಿ ಸೃಷ್ಟಿಯಾಗಿದೆ.

ಜೆಡಿಎಸ್‌–ಕಾಂಗ್ರೆಸ್ ದೋಸ್ತಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ‘ಸಂಪುಟ ಸಂಕಟ’ ಎರಡೂ ಪಕ್ಷಗಳನ್ನು ಕಾಡತೊಡಗಿದೆ.

‘ಐದು ವರ್ಷ ಸಚಿವರಾಗಿದ್ದೀರಿ, ಇನ್ನೊಂದು ಐದು ವರ್ಷ ಪಕ್ಷಕ್ಕೆ ಕೆಲಸ ಮಾಡಿ’ ಎಂದು ಸೂಚಿಸಿ ಪಾರಾಗಬಹುದಾದ ದಾರಿ ಕಾಂಗ್ರೆಸ್‌ ನಾಯಕರಿಗೆ ಇದೆ. ಆದರೆ, 10 ವರ್ಷಗಳಿಂದೀಚೆಗೆ ‘ಅಧಿಕಾರ’ ಸಿಗದೇ ಇರುವ ಜೆಡಿಎಸ್‌ನಲ್ಲಿ ಸಚಿವ ಆಕಾಂಕ್ಷಿಗಳ ದಂಡು ಹೆಚ್ಚುತ್ತಿದೆ. ಇದು ವರಿಷ್ಠರಿಗೆ ತಲೆ ನೋವು ತಂದಿದೆ ಎಂದು ಮೂಲಗಳು ಹೇಳಿವೆ.

ದಶಕಗಳ ಹಿಂದೆ ಪಕ್ಷ ಅಧಿಕಾರದಲ್ಲಿದ್ದಾಗ ಸಚಿವರಾಗಿದ್ದ ಅನೇಕರು ಈಗ ಗೆದ್ದಿಲ್ಲ, ಇಲ್ಲವೇ ಪಕ್ಷ ತೊರೆದಿದ್ದಾರೆ. ನಂತರ ಎರಡು ಅವಧಿಯಲ್ಲಿ ಗೆದ್ದ ಶಾಸಕರಿಗೆ ಸಚಿವ ಸ್ಥಾನ ಸಿಗುವ ಅವಕಾಶವೇ ಇರಲಿಲ್ಲ. ಹೀಗಾಗಿ 3–4 ಬಾರಿ ಆಯ್ಕೆಯಾದವರು ಈಗ ಸಚಿವ ಸ್ಥಾನ ಬೇಕೇ ಬೇಕು ಎಂದು ದುಂಬಾಲು ಬಿದ್ದಿದ್ದಾರೆ.

ಯಾರಿಗೆ ಎಂಬ ಚಿಂತೆ: ಮುಖ್ಯಮಂತ್ರಿ ಸೇರಿದಂತೆ 12 ಸಚಿವ ಸ್ಥಾನಗಳಷ್ಟೇ ಜೆಡಿಎಸ್‌ಗೆ ಸಿಕ್ಕಿದೆ. ಒಂದು ಸ್ಥಾನವನ್ನು ಮುಖ್ಯಮಂತ್ರಿಯ ಅಣ್ಣ ಎಚ್.ಡಿ. ರೇವಣ್ಣ ಅವರಿಗೆ ನೀಡಲೇಬೇಕು. ಅಲ್ಲಿಗೆ 10  ಉಳಿಯಲಿದೆ.

38 ವರ್ಷಗಳಿಂದ ವಿಧಾನಪರಿಷತ್ತಿನ ಸದಸ್ಯರಾಗಿರುವ  ಬಸವರಾಜ ಹೊರಟ್ಟಿ, ಲಿಂಗಾಯತ ಸಮುದಾಯದ ನಾಯಕರೂ ಹೌದು. ಪರಿಷತ್ತಿನ ಹಿರೀಕ, ಉತ್ತರ ಕರ್ನಾಟಕ ಹಾಗೂ ಜಾತಿ ಪ್ರಾತಿನಿಧ್ಯ ಲೆಕ್ಕದಲ್ಲಿ ಅವರಿಗೆ ನೀಡುವುದು ಅನಿವಾರ್ಯ. ಇದಲ್ಲದೇ, ಬಿಎಸ್‌ಪಿಯಿಂದ ಗೆದ್ದ ಮಹೇಶ್ ಅವರಿಗೆ ಸಚಿವ ಸ್ಥಾನ ಕೊಡಲೇಬೇಕು.

ಕುರುಬ ಸಮುದಾಯಕ್ಕೆ ಸೇರಿರುವ ಎಚ್. ವಿಶ್ವನಾಥ್, ಬಂಡೆಪ್ಪ ಕಾಶೆಂಪೂರ ಅವರಿಗೆ ದಕ್ಷಿಣ–ಉತ್ತರ ಪ್ರಾದೇಶಿಕ ಲೆಕ್ಕಾಚಾರ ಮತ್ತು ಜಾತಿಯ ಕಾರಣಕ್ಕೆ ಪ್ರಾತಿನಿಧ್ಯ ನೀಡಬೇಕಾಗುತ್ತದೆ. ಇಷ್ಟನ್ನು ಕಳೆದರೆ ಆರು ಸಚಿವ ಸ್ಥಾನ ಉಳಿಯುತ್ತದೆ.

ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಸಿದ್ದರಾಮಯ್ಯ ಅವರನ್ನು ಸೋಲಿಸಿದ ಜಿ.ಟಿ. ದೇವೇಗೌಡ ಅವರನ್ನು ಬಿಡುವಂತೆ ಇಲ್ಲ. ಮಂಡ್ಯ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳು, ಹಾಸನ ಜಿಲ್ಲೆಯಲ್ಲಿ ಒಂದು ಸ್ಥಾನ ಬಿಟ್ಟು ಎಲ್ಲ ಕ್ಷೇತ್ರಗಳಲ್ಲಿ ಜೆಡಿಎಸ್‌ ಗೆದ್ದಿದೆ. ಮಂಡ್ಯದಲ್ಲಿ ಸಂಸದ ಸ್ಥಾನ ತ್ಯಜಿಸಿರುವ ಶಾಸಕ ಸಿ.ಎಸ್. ಪುಟ್ಟರಾಜು ಹಾಗೂ ಗೌಡರ ಕುಟುಂಬದ ಸಂಬಂಧಿ ಡಿ.ಸಿ. ತಮ್ಮಣ್ಣ ಇಬ್ಬರಿಗೂ ನೀಡಬೇಕಾಗುತ್ತದೆ. ಇಲ್ಲದಿದ್ದರೆ ಇಬ್ಬರೂ ಮುನಿಸಿಕೊಳ್ಳುತ್ತಾರೆ. ಈ ತಲೆನೋವು ತಪ್ಪಿಸಿಕೊಳ್ಳುವುದು ಹೇಗೆ ಎಂಬುದು ಸಮಸ್ಯೆಯಾಗಿದೆ ಎಂದು ಮೂಲಗಳು ವಿವರಿಸಿವೆ.

ಈ ಮೂವರಿಗೂ ಕೊಟ್ಟರೆ ಉಳಿಯುವುದು ಕೇವಲ 3. ಆರು ಬಾರಿ ಗೆದ್ದಿರುವ, ದಲಿತ ಸಮುದಾಯಕ್ಕೆ ಸೇರಿರುವ ಸಕಲೇಶಪುರ ಶಾಸಕ ಎಚ್.ಕೆ. ಕುಮಾರಸ್ವಾಮಿ ಅವರನ್ನು ಕೈಬಿಡುವಂತಿಲ್ಲ. ಅವರಿಗೆ ಉಪ ಸಭಾಧ್ಯಕ್ಷರನ್ನಾಗಿ ಆಯ್ಕೆ ಮಾಡಿ, ಮನವೊಲಿಸಬಹುದು. ಆದರೆ, ಅದೇ ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಮೂರು ಬಾರಿ ಆಯ್ಕೆಯಾಗಿದ್ದಾರೆ. ಅವರು ಈ ಬಾರಿ ಸಚಿವ ಸ್ಥಾನದ ಆಕಾಂಕ್ಷಿ. ಇದರ ಜತೆಗೆ, ಕೋಲಾರ ಶಾಸಕ ಶ್ರೀನಿವಾಸಗೌಡ, ಶಿರಾ ಶಾಸಕ ಸತ್ಯನಾರಾಯಣ ಅವರಿಗೆ ನೀಡಬೇಕು. ಈ ಮೂವರಿಗೆ ಕೊಟ್ಟರೆ ‘ಕೋಟಾ’ ಮುಗಿಯುತ್ತದೆ.

ಸಿಂಧನೂರು ಶಾಸಕ ವೆಂಕಟರಾವ್ ನಾಡಗೌಡ ‍‍ಲಿಂಗಾಯತ ಸಮುದಾಯಕ್ಕೆ ಸೇರಿದವರು. ಈ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಬೇಕಾದ ಅನಿವಾರ್ಯ ಇದೆ. ಅದೇ ರೀತಿ, ಮಾನ್ವಿ ಕ್ಷೇತ್ರದ ರಾಜಾ ವೆಂಕಟಪ್ಪ ನಾಯಕ ಅವರಿಗೆ ದಲಿತ ಸಮುದಾಯದ ಪ್ರಾತಿನಿಧ್ಯ ನೀಡಬೇಕಾಗುತ್ತದೆ. ಜಾತಿ ಮತ್ತು ಹೈದರಾಬಾದ್ ಕರ್ನಾಟಕದ ಇಬ್ಬರಿಗೆ ಆದ್ಯತೆ ಕೊಡಲು ಮುಂದಾದರೆ ಕೆಲವು ಜಿಲ್ಲೆಗಳಿಗೆ ಪ್ರಾತಿನಿಧ್ಯವೇ ಕೈತಪ್ಪುತ್ತದೆ ಎಂಬ ಭೀತಿ ಪಕ್ಷದ ವರಿಷ್ಠರದ್ದಾಗಿದೆ.

ಮುಸ್ಲಿಂ ಸಮುದಾಯಕ್ಕೆ ಸೇರಿರುವ ಬಿ.ಎಂ. ಫಾರೂಕ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಇರಾದೆ ವರಿಷ್ಠರದ್ದಾಗಿದೆ. ನಾಲ್ಕರಲ್ಲಿ ಎರಡು ಸ್ಥಾನ ಗೆಲ್ಲಿಸಿದ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ, ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರಾತಿನಿಧ್ಯ ಇಲ್ಲದಂತಾಗುತ್ತದೆ.

ಬೆಂಗಳೂರು ನಗರ ಮಹಾಲಕ್ಷ್ಮೀ ಲೇಔಟ್‌ನ ಕೆ. ಗೋಪಾಲಯ್ಯ, ದಾಸರಹಳ್ಳಿಯಲ್ಲಿ ಮಂಜುನಾಥ್ ಗೆದ್ದಿದ್ದಾರೆ. ಅವರಿಗೆ ಸಚಿವ ಸ್ಥಾನ ನೀಡದೇ ಹೋದರೆ ರಾಜಧಾನಿಯನ್ನು ಕಡೆಗಣಿಸಿದಂತಾಗುತ್ತದೆ. ಈ ಸಮಸ್ಯೆಯನ್ನು ಹೇಗೆ ನಿಭಾಯಿಸುವುದು ಎಂಬುದು ವರಿಷ್ಠರನ್ನು ಸಂಕಷ್ಟಕ್ಕೆ ದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT