ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಟೂರ್‌ ಫೈನಲ್ಸ್‌ಗೆ ನೇರ ಪ್ರವೇಶ: ಸಿಂಧುಗೆ ಅವಕಾಶ ಇಲ್ಲ

ವಿಶ್ವ ಚಾಂಪಿಯನ್ನರಿಗೆ ನೇರ ಅರ್ಹತೆ: ನಿಯಮ ಕೈಬಿಡಲು ನಿರ್ಧರಿಸಿದ ಬಿಡಬ್ಲ್ಯುಎಫ್‌
Last Updated 12 ಅಕ್ಟೋಬರ್ 2020, 16:53 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಪಿ.ವಿ.ಸಿಂಧು ಅವರು ಈ ಬಾರಿಯ ವಿಶ್ವ ಟೂರ್‌ ಫೈನಲ್‌ ಬ್ಯಾಡ್ಮಿಂಟನ್‌ ಟೂರ್ನಿಗೆ ನೇರ ಪ್ರವೇಶದ ಅವಕಾಶ ಕಳೆದುಕೊಂಡಿದ್ದಾರೆ. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಜಯಿಸಿದವರಿಗೆ ಇದ್ದ ಈ ಅರ್ಹತೆಯ ನಿಯಮವನ್ನು ಕೈಬಿಡಲು ವಿಶ್ವ ಬ್ಯಾಡ್ಮಿಂಟನ್‌ ಫೆಡರೇಷನ್‌ (ಬಿಡಬ್ಲ್ಯುಎಫ್‌) ಸೋಮವಾರ ನಿರ್ಧರಿಸಿದೆ.

ವಿಶ್ವ ಚಾಂಪಿಯನ್‌ ಆದವರು ಯಾವಾಗಲೂ ಬಿಡಬ್ಲ್ಯುಎಫ್‌ ಫೈನಲ್ಸ್‌ಗೆ ನೇರ ಪ್ರವೇಶ ಪಡೆಯುತ್ತಿದ್ದರು. ಆದರೆ ಈ ವರ್ಷ ಕೋವಿಡ್‌–19 ಸೃಷ್ಟಿಸಿರುವ ಬಿಕ್ಕಟ್ಟು ಬ್ಯಾಡ್ಮಿಂಟನ್‌ ಟೂರ್ನಿಗಳ ಮೇಲೆ ಪರಿಣಾಮ ಬೀರಿದೆ. ಹಲವು ಟೂರ್ನಿಗಳು ಸ್ಥಗಿತಗೊಂಡಿದ್ದವು. ಕೆಲವು ಮುಂದೂಡಿಕೆಯಾಗಿವೆ. ಹೀಗಾಗಿ ನೇರ ಅರ್ಹತೆಯ ನಿಯಮ ಕೈಬಿಡಲು ನಿರ್ಧರಿಸಲಾಗಿದೆ.

‘ಥಾಯ್ಲೆಂಡ್‌ನ ಬ್ಯಾಂಕಾಂಕ್‌ನಲ್ಲಿ ನಡೆಯಬೇಕಿರುವ ವಿಶ್ವ ಟೂರ್‌ ಫೈನಲ್ಸ್‌ಗೆ ಆಟಗಾರರು ಅರ್ಹತೆ ಗಳಿಸಬೇಕು. ವಿಶ್ವ ಟೂರ್‌ ಟೂರ್ನಿಗಳಲ್ಲಿ ಗಳಿಸಿದ ಪಾಯಿಂಟ್‌ಗಳನ್ನು ಟೂರ್ನಿಯ ಅರ್ಹತೆಗೆ ಪರಿಗಣಿಸಲಾಗುತ್ತದೆ‘ ಎಂದು ಬಿಡಬ್ಲ್ಯುಎಫ್‌ ಹೇಳಿದೆ.

‘ಡ್ಯಾನಿಸಾ ಡೆನ್ಮಾರ್ಕ್‌ ಓಪನ್‌, ಏಷ್ಯಾ ಓಪನ್‌ ಮೊದಲ ಹಂತ ಹಾಗೂ ಎರಡನೇ ಹಂತದ ಟೂರ್ನಿಗಳು, ವಿಶ್ವ ಟೂರ್‌ ಫೈನಲ್ಸ್‌ಗೆ ಈಗ ಅರ್ಹತೆ ಗಳಿಸಲು ಇರುವ ಟೂರ್ನಿಗಳಾಗಿವೆ.

ಹೋದ ವರ್ಷ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದಿರುವ ಪಿ.ವಿ.ಸಿಂಧು, ಈ ಬಾರಿಯ ಡೆನ್ಮಾರ್ಕ್‌ ಓಪನ್‌ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಟೂರ್‌ ಫೈನಲ್ಸ್‌ಗೆ ಅರ್ಹತೆ ಗಳಿಸಲು ಅವರು ಈಗ ಏಷ್ಯನ್‌ ಟೂರ್ನಿಗಳಲ್ಲಿ ಉತ್ತಮ ಸಾಮರ್ಥ್ಯ ತೋರಬೇಕಿದೆ.

’ಡೆನ್ಮಾರ್ಕ್‌ ಓಪನ್‌ನಿಂದ ಹಿಂದೆ ಸರಿದಿರುವುದಕ್ಕೆ ವಿಷಾದವಿಲ್ಲ. ಏಷ್ಯನ್‌ ಟೂರ್ನಿಗಳಲ್ಲಿ ಉತ್ತಮ ಆಟವಾಡಲು ಸಿಂಧು ಪ್ರಯತ್ನಿಸಲಿದ್ದಾರೆ‘ ಎಂದು ಸಿಂಧು ಅವರ ತಂದೆ ಪಿ.ವಿ.ರಮಣ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT