ಬುಧವಾರ, ಡಿಸೆಂಬರ್ 11, 2019
25 °C

ಅನುಪಮಾ ಚೊಚ್ಚಲ ಚಿನ್ನದ ಸಂಭ್ರಮ

Published:
Updated:
Prajavani

ಪಾಲ್ಗೊಂಡ ಮೊದಲ ರಾಷ್ಟ್ರೀಯ ರೋಡ್ ಸೈಕ್ಲಿಂಗ್ ಚಾಂಪಿಯನ್‍ಷಿಪ್‌ನಲ್ಲಿ ಚಿನ್ನದ ಹೊಳಪು ಮೂಡಿಸಿರುವ ಅನುಪಮಾ ಗುಳೇದ, ಜಮಖಂಡಿ ತಾಲ್ಲೂಕಿನ ಹುನ್ನೂರಿನವರು. ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಅನುಪಮಾಗೆ ಈ ಪದಕ ಮತ್ತಷ್ಟು ಸಾಧನೆಗೆ ಪ್ರೇರಣೆಯಾಗಿದೆ.

ಸಾಧನೆಯ ಕನಸು ಹಾಗೂ ಸಾಧಿಸಲೇಬೇಕು ಎನ್ನುವ ಛಲವೊಂದಿದ್ದರೆ ಏನು ಬೇಕಾದರೂ ಮಾಡಬಹುದು ಎನ್ನುವುದಕ್ಕೆ ಸೈಕ್ಲಿಸ್ಟ್‌ ಅನುಪಮಾ ಗುಳೇದ ಸಾಕ್ಷಿ.

ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಹುನ್ನೂರ ಗ್ರಾಮದ ಅನುಪಮಾ ಇತ್ತೀಚಿಗೆ ರಾಜಸ್ಥಾನದ ಬಿಕಾನೇರ್‌ನಲ್ಲಿ ನಡೆದ 24ನೇ ರಾಷ್ಟ್ರೀಯ ರೋಡ್ ಸೈಕ್ಲಿಂಗ್ ಚಾಂಪಿಯನ್‍ಷಿಪ್‌ನ 14 ವರ್ಷದೊಳಗಿನ ಬಾಲಕಿಯರ ವಿಭಾಗದ 10 ಕಿ.ಮೀ. ವೈಯಕ್ತಿಕ ಟೈಮ್ ಟ್ರಯಲ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು. ವಿಶೇಷವೆಂದರೆ ಅನುಪಮಾ ಪಾಲ್ಗೊಂಡಿದ್ದ ಚೊಚ್ಚಲ ರಾಷ್ಟ್ರೀಯ ರೋಡ್‌ ಸೈಕ್ಲಿಂಗ್‌ ಟೂರ್ನಿ ಇದು. ಮೊದಲ ಟೂರ್ನಿಯಲ್ಲಿ 16 ನಿಮಿಷ 08.602 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು.

ಗ್ರಾಮೀಣ ಪ್ರದೇಶದ ಪ್ರತಿಭೆ ಅನುಪಮಾ ಚಿನ್ನದ ಪದಕ ಗೆಲ್ಲಲು ಬಳಸಿದ್ದು ₹ 50ರಿಂದ ₹60 ಸಾವಿರ ಮೌಲ್ಯದ ಅಟ್ಲಾಸ್ ಸೈಕಲ್‌. ಇದೇ ವಿಭಾಗದಲ್ಲಿ ಸ್ಪರ್ಧೆಯಲ್ಲಿದ್ದ ಪ್ರತಿಸ್ಪರ್ಧಿ ಸೈಕ್ಲಿಸ್ಟ್‌ಗಳು ₹3ರಿಂದ ₹4 ಲಕ್ಷ ಮೌಲ್ಯದ ಉತ್ಕೃಷ್ಟ ಗುಣಮಟ್ಟದ ಸೈಕಲ್‌ಗಳನ್ನು ಬಳಸಿದ್ದರು. ಕಡಿಮೆ ಗುಣಮಟ್ಟದ ಸೈಕಲ್‌ ಇದ್ದರೂ ಎಲ್ಲರನ್ನೂ ಹಿಂದಿಕ್ಕಿ ಅನುಪಮಾ ಚಿನ್ನದ ಹೊಳಪು ಮೂಡಿಸಿದ್ದಾರೆ.

ಅನುಪಮಾ, ಹುನ್ನೂರ ಗ್ರಾಮದ ಕನ್ನಡ ಹಿರಿಯ ಪ್ರಾಥಮಿಕ ಮಾದರಿ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿ. ಈಶ್ವರ ಗುಳೇದ ಹಾಗೂ ಗಾಯತ್ರಿ ದಂಪತಿಯ ಪುತ್ರಿ.

ಮುಧೋಳ ತಾಲ್ಲೂಕಿನ ಮಹಾಲಿಂಗಪುರದಲ್ಲಿ ಪೊಲೀಸ್‌ ಹೆಡ್‌ ಕಾನ್‌ಸ್ಟೆಬಲ್‌ ಆಗಿರುವ ವಿಠ್ಠಲ ಬೋರ್ಜಿ ಅವರು ಸದ್ಯಕ್ಕೆ ಜಮಖಂಡಿಯಲ್ಲಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಗೆ ಸೈಕ್ಲಿಂಗ್‌ ಕೋಚ್‌ ಆಗಿ ನಿಯೋಜನೆಗೊಂಡಿದ್ದಾರೆ. ರಾಷ್ಟ್ರೀಯ ಟೂರ್ನಿಯಲ್ಲಿ ಐದು ಬಾರಿ ಪದಕ ಜಯಿಸಿರುವ ಬೋರ್ಜಿ ಅವರ ಬಳಿ ಅನುಪಮಾ ತರಬೇತಿ ಪಡೆಯುತ್ತಿದ್ದಾರೆ. 

ರಾಷ್ಟ್ರೀಯ ಟೂರ್ನಿಯಲ್ಲಿ ಭಾಗವಹಿಸಲು ಅನುಪಮಾಗೆ ಬೇರೆ ಸೈಕ್ಲಿಸ್ಟ್‌ನಿಂದ ಬೋರ್ಜಿ ಅವರು ₹ 30 ಸಾವಿರ ಮೌಲ್ಯದ ಸೈಕಲ್‌ ವೀಲ್‌ ಕೊಡಿಸಿದ್ದರು.

ಸಾಧನೆಯ ಹೊಳಪು
ಒಂದು ವರ್ಷದ ಹಿಂದೆಯಷ್ಟೇ ವೃತ್ತಿಪರ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಆರಂಭಿಸಿದ ಅನುಪಮಾ ರಾಜ್ಯಮಟ್ಟದ ಅನೇಕ ಟೂರ್ನಿಗಳಲ್ಲಿ ಪದಕಗಳನ್ನು ಜಯಿಸಿದ್ದಾರೆ. 2018ರಲ್ಲಿ ಮೈಸೂರಿನಲ್ಲಿ ನಡೆದ 14ನೇ ರಾಜ್ಯಮಟ್ಟದ ಮೌಂಟೇನ್‌ ಬೈಕ್‌ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ನ 14 ಮತ್ತು 16 ವರ್ಷದ ಒಳಗಿನವರ ವಿವಿಧ ವಿಭಾಗಗಳಲ್ಲಿ ಮೂರು ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದಾರೆ. ಮೈಸೂರು ದಸರಾ ಸಿ.ಎಂ. ಕಪ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು.

2017ರಲ್ಲಿ ಜಮಖಂಡಿಯಲ್ಲಿ ನಡೆದ ರಾಷ್ಟ್ರೀಯ ಸೈಕ್ಲಿಂಗ್ ಟೂರ್ನಿಯ ಸ್ಪರ್ಧೆ ನೋಡಿದ್ದ ಅನುಪಮಾಗೆ ತಾನೂ ಇದೇ ಕ್ರೀಡೆಯಲ್ಲಿ ಎತ್ತರದ ಸಾಧನೆ ಮಾಡಬೇಕು ಎನ್ನುವ ಆಸೆ ಹುಟ್ಟಿತು. ಆಗಿನಿಂದಲೇ ವೃತ್ತಿಪರ ತರಬೇತಿ ಆರಂಭಿಸಿ ಒಂದೇ ವರ್ಷದಲ್ಲಿ ಸ್ಪರ್ಧೆಗಳಲ್ಲಿ ಭಾಗವಹಿಸಲು ಆರಂಭಿಸಿದಳು.

‘ಜಮಖಂಡಿಯಲ್ಲಿ ನಡೆದ ಸ್ಪರ್ಧೆಗಳನ್ನು ನೋಡಿದ ಬಳಿಕ ನನಗೂ ಅವರಂತೆ ಸಾಧನೆ ಮಾಡಬೇಕು ಎನ್ನುವ ಆಸೆ ಮೂಡಿತು. ರಾಷ್ಟ್ರೀಯ ಟೂರ್ನಿಯಲ್ಲಿ ಪದಕ ಗೆಲ್ಲುವ ನನ್ನ ಕನಸನ್ನು ನನಸು ಮಾಡಿಕೊಂಡಿದ್ದೇನೆ. ಮುಂದೆ ಅಂತರರಾಷ್ಟ್ರೀಯ ಮಟ್ಟದ ಟೂರ್ನಿಯಲ್ಲಿಯೂ ಪದಕ ಗೆಲ್ಲುವ ಹೆಗ್ಗುರಿಯಿದೆ’ ಎಂದು ಅನುಪಮಾ ಹೇಳಿದರು.

‘ಮುಂದೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ಎಷ್ಟೇ ಪದಕಗಳನ್ನು ಜಯಿಸಿದರೂ ಬಿಕಾನೇರ್‌ನಲ್ಲಿ ಗೆದ್ದ ಚೊಚ್ಚಲ ಚಿನ್ನದ ಪದಕ ಸದಾ ಕಾಲ ನೆನಪಿನಲ್ಲಿ ಉಳಿಯುತ್ತದೆ. ಅಷ್ಟೇನೂ ಗುಣಮಟ್ಟವಲ್ಲದ ಸೈಕಲ್‌ನಿಂದ ಕಠಿಣ ಪೈಪೋಟಿ ಎದುರಿಸಿ ಚಿನ್ನ ಜಯಿಸಿದ್ದೇನೆ ಎಂಬುದೇ ನನ್ನ ಆತ್ಮವಿಶ್ವಾಸವನ್ನು ಇಮ್ಮಡಿಸಿದೆ. ಮುಂದಿನ ಇನ್ನಷ್ಟು ಸಾಧನೆಗೆ ಇದು ಪ್ರೇರಣೆಯೂ ಆಗಿದೆ’ ಎಂದಳು. 

***
‘ಮುಂದಿನ ವರ್ಷ ಅಂತರರಾಷ್ಟ್ರೀಯ ಮಟ್ಟಕ್ಕೆ’
2017ರ ನವೆಂಬರ್‌ನಲ್ಲಿ ಜಮಖಂಡಿಯಲ್ಲಿ ನಡೆದ ರಾಷ್ಟ್ರೀಯ ಸೈಕ್ಲಿಂಗ್‌ ಸ್ಪರ್ಧೆಗಳನ್ನು ನೋಡಿ ಪ್ರೇರಣೆ ಪಡೆದು ಡಿಸೆಂಬರ್‌ನಲ್ಲಿ ಅನುಪಮಾ ಸೈಕ್ಲಿಂಗ್‌ ತರಬೇತಿ ಆರಂಭಿಸಿದಳು. ಒಂದೂವರೆ ವರ್ಷದಲ್ಲಿ ರಾಷ್ಟ್ರೀಯ ಟೂರ್ನಿಯಲ್ಲಿ ಚಿನ್ನ ಜಯಿಸಿದ್ದಾಳೆ. ಕಡಿಮೆ ಅವಧಿಯಲ್ಲಿ ದೊಡ್ಡ ಸಾಧನೆ ಮಾಡಿದ್ದಕ್ಕೆ ಹೆಮ್ಮೆ ಎನಿಸುತ್ತಿದೆ. ಮುಂದಿನ ವರ್ಷ ಅಂತರರಾಷ್ಟ್ರೀಯ ಮಟ್ಟದ ಟೂರ್ನಿಗೆ ಆಯ್ಕೆಯಾಗುವ ವಿಶ್ವಾಸವಿದೆ.
-ವಿಠ್ಠಲ ಬೋರ್ಜಿ, ಸೈಕ್ಲಿಂಗ್‌ ಕೋಚ್‌

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು