ಬುಧವಾರ, ಏಪ್ರಿಲ್ 1, 2020
19 °C

ಸೈಕ್ಲಿಂಗ್‌: ಕರ್ನಾಟಕ ತಂಡಕ್ಕೆ ಸಮಗ್ರ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಕರ್ನಾಟಕ ತಂಡದವರು ಉತ್ತರಖಾಂಡದ ಹಲ್ದಾಣಿಯಲ್ಲಿ ನಡೆದ 16ನೇ ರಾಷ್ಟ್ರೀಯ ಮೌಂಟೇನ್ ಬೈಕ್ ಸೈಕ್ಲಿಂಗ್ ಚಾಂಪಿಯನ್‍ಷಿಪ್‌ನಲ್ಲಿ ಶನಿವಾರ ಸಮಗ್ರ ಪ್ರಶಸ್ತಿ ಜಯಿಸಿದ್ದಾರೆ.

ರಾಜ್ಯ ತಂಡ ಐದನೇ ಬಾರಿಗೆ ಈ ಸಾಧನೆ ಮಾಡಿದೆ. ಹಿಂದೆ 2012, 2015ರಲ್ಲಿ ಎರಡು ಬಾರಿ ಮತ್ತು 2018ರಲ್ಲಿಯೂ ಸಮಗ್ರ ಪ್ರಶಸ್ತಿ ಪಡೆದುಕೊಂಡಿತ್ತು. ಸಬ್‌ ಜೂನಿಯರ್‌, ಜೂನಿಯರ್‌ ವಿಭಾಗದಲ್ಲಿ ಕರ್ನಾಟಕ ಅಗ್ರಸ್ಥಾನ ಪಡೆಯಿತು. ಒಟ್ಟಾರೆಯಾಗಿ 14 ಪದಕಗಳಿಂದ 48 ಅಂಕಗಳನ್ನು ಗಳಿಸಿದರೆ, ಕೇರಳ ಎಂಟು ಪದಕಗಳಿಂದ 30 ಅಂಕಗಳನ್ನು ಕಲೆಹಾಕಿ ರನ್ನರ್ಸ್ ಅಪ್‌ ಆಯಿತು.

ಸ್ಪರ್ಧೆಯ ಕೊನೆಯ ದಿನ 14 ವರ್ಷದೊಳಗಿನ ಬಾಲಕರ ವಿಭಾಗದ ಎರಡು ಲ್ಯಾಪ್ ಮಾಸ್ಡ್‌ ಸ್ಟಾರ್ಟ್‌ನಲ್ಲಿ ವಿಜಯಪುರ ಸೈಕ್ಲಿಂಗ್ ಕ್ರೀಡಾ ನಿಲಯದ ರಾಘವೇಂದ್ರ ವಂದಾಲ ಚಿನ್ನ ಪಡೆದರೆ, 16 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಮೈಸೂರಿನ ಚರಿತಗೌಡ ಚಿನ್ನ,  ಮೈಸೂರಿನ ಲಕ್ಷ್ಮೀಶ ಬೆಳ್ಳಿ ಪದಕ ಜಯಿಸಿದರು.

18 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಮೈಸೂರಿನ ಆಡೊನೀಸ್ ಟಂಗ್ಟು ಮೂರು ಲ್ಯಾಪ್ ವೈಯಕ್ತಿಕ ಟೈಮ್‌ ಟ್ರಯಲ್ಸ್‌ನಲ್ಲಿ 32:41.190 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದರೆ, ಚರಿತಗೌಡ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು.

18 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ವಿಜಯಪುರ ಸೈಕ್ಲಿಂಗ್‌ ಕ್ರೀಡಾ ನಿಲಯದ ದಾನಮ್ಮ ಗುರವ ಎರಡು ಲ್ಯಾಪ್ಸ್‌ ವೈಯಕ್ತಿಕ ಟೈಮ್‌ ಟ್ರಯಲ್ಸ್‌ನಲ್ಲಿ ‌45ನಿಮಿಷ 47.592 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ ಬೆಳ್ಳಿ ಜಯಿಸಿದದರು. ಐದು ಲ್ಯಾಪ್ಸ್‌ ಮಾಸ್ಡ್‌ ಸ್ಟಾರ್ಟ್‌ನಲ್ಲಿಯೂ ದಾನಮ್ಮ ಬೆಳ್ಳಿ ಪಡೆದರು.

ಇದೇ ವಿಭಾಗದಲ್ಲಿ ಬಾಗಲಕೋಟೆ ಸೈಕ್ಲಿಂಗ್ ಕ್ರೀಡಾ ನಿಲಯದ ಅಕ್ಷತಾ ಬಿರಾದಾರ ಕಂಚು, ಪುರುಷರ ವಿಭಾಗದ 7 ಲ್ಯಾಪ್‌ ಮಾಸ್ಡ್‌ ಸ್ಟಾರ್ಟ್‌ನಲ್ಲಿ ಬೆಂಗಳೂರಿನ ಕೆ. ಕಿರಣಕುಮಾರ ರಾಜು ಕಂಚು ಜಯಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು