ದೂಳು.. ಅಬ್ಬರ... ರೋಮಾಂಚನದ ’ದಸರಾ ಗ್ರಾವೆಲ್‌ ಫೆಸ್ಟ್ ಆಟೊಕ್ರಾಸ್‌ ರೇಸ್‌’

7

ದೂಳು.. ಅಬ್ಬರ... ರೋಮಾಂಚನದ ’ದಸರಾ ಗ್ರಾವೆಲ್‌ ಫೆಸ್ಟ್ ಆಟೊಕ್ರಾಸ್‌ ರೇಸ್‌’

Published:
Updated:
Deccan Herald

ಮೈಸೂರು: ಕಾರುಗಳು ರೊಂಯ್‌... ರೊಂಯ್‌... ಎಂದು ದೂಳೆಬ್ಬಿಸುತ್ತಾ ಸಾಗುತ್ತಿದ್ದರೆ, ರೇಸ್‌‌ಪ್ರಿಯರು ಆ ದೂಳನ್ನು ಲೆಕ್ಕಿಸದೆ ಚಪ್ಪಾಳೆ, ಕೇಕೆಯ ಮೂಲಕ ಸಂಭ್ರಮಿಸುತ್ತಿದ್ದರು.

ಆಟೊಮೋಟಿವ್ ಸ್ಪೋರ್ಟ್ಸ್‌ ಕ್ಲಬ್‌ ಆಫ್‌ ಮೈಸೂರು ವತಿಯಿಂದ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ಸಹಯೋಗದೊಂದಿಗೆ ದಸರಾ ಉತ್ಸವದ ಅಂಗವಾಗಿ ಭಾನುವಾರ ಆಯೋಜಿಸಿದ್ದ ‘ಸರ್ವೊ ಮೈಸೂರು ದಸರಾ ಗ್ರಾವೆಲ್‌ ಫೆಸ್ಟ್ ಆಟೊಕ್ರಾಸ್‌ ರೇಸ್‌’ನಲ್ಲಿ ಕಂಡುಬಂದ ದೃಶ್ಯವಿದು.

ಚಾಮುಂಡಿಬೆಟ್ಟದ ತಪ್ಪಲ್ಲಿರುವ ಲಲಿತ್‌ಮಹಲ್‌ ಹೆಲಿಪ್ಯಾಡ್‌ ಮೈದಾನದಲ್ಲಿ ನಡೆದ ರೇಸ್‌ನಲ್ಲಿ ಅದ್ಭುತ ಚಾಲನಾ ಕೌಶಲ ಮೆರೆದ ಸ್ಪರ್ಧಿಗಳು ರೇಸ್‌ಪ್ರಿಯರ ಮನಗೆದ್ದರು. ಭಾನುವಾರವಾದ್ದರಿಂದ ಮಕ್ಕಳು, ಯುವಕ ಯುವತಿಯರು ಹಾಗೂ ಹಿರಿಯರು ಭಾರಿ ಸಂಖ್ಯೆಯಲ್ಲಿ ನೆರೆದಿದ್ದರು.

ಬೆಂಗಳೂರಿನ ಧ್ರುವ ಚಂದ್ರಶೇಖರ್ ಅವರು ‘ವೇಗದ ಚಾಲಕ’ ಗೌರವ ತಮ್ಮದಾಗಿಸಿಕೊಂಡರು. ಅವರು ‘ಅನ್‌ರಿಸ್ಟ್ರಿಕ್ಟೆಡ್‌ ಕ್ಲಾಸ್‌’ ವಿಭಾಗ ಮತ್ತು ಇಂಡಿಯನ್‌ ಓಪನ್‌ ವಿಭಾಗದಲ್ಲಿ ಅಗ್ರಸ್ಥಾನ ಪಡೆದುಕೊಂಡರು. ಅನ್‌ರಿಸ್ಟ್ರಿಕ್ಟೆಡ್‌ ವಿಭಾಗದಲ್ಲಿ 2 ನಿಮಿಷ 5.53 ಸೆಕೆಂಡುಗಳಲ್ಲಿ ಸ್ಪರ್ಧೆ ಪೂರೈಸಿದ್ದು ಅವರಿಗೆ ‘ವೇಗದ ಚಾಲಕ’ ಗೌರವ ತಂದುಕೊಟ್ಟಿತು.

ಡೆನ್‌ ತಿಮ್ಮಯ್ಯ, ಗಗನ್‌ ಕರುಂಬಯ್ಯ, ಎಂ.ಪಿ.ಮಂದಣ್ಣ ಮತ್ತು ರೋಹಿತ್‌ ಅಯ್ಯರ್‌ ಅವರು ವಿವಿಧ ವಿಭಾಗಗಳಲ್ಲಿ ಅಗ್ರಸ್ಥಾನದ ಪಡೆದ ಗಮನ ಸೆಳೆದರು.

ಕರ್ನಾಟಕ ಅಲ್ಲದೆ ಕೇರಳ, ಗೋವಾ, ತಮಿಳುನಾಡು ಮತ್ತು ಮಹಾರಾಷ್ಟ್ರದ 168 ಸ್ಪರ್ಧಿಗಳು ರೇಸ್‌ನಲ್ಲಿ ಪಾಲ್ಗೊಂಡರು. ಮಹಿಳೆಯರ ವಿಭಾಗದಲ್ಲಿ ಬೆಂಗಳೂರು, ಹಾಸನ ಮತ್ತು ಮೈಸೂರಿನ 14 ಮಂದಿ ಭಾಗವಹಿಸಿದ್ದರು.

1,100 ಸಿ.ಸಿ, 1,400 ಸಿಸಿ, ಇಂಡಿಯನ್‌ ಓಪನ್‌ ಕ್ಲಾಸ್‌, ಮೈಸೂರು ಲೋಕಲ್‌ ನೇವಿಸ್ ಓಪನ್, ಎಸ್‌ಯುವಿ ಕ್ಲಾಸ್, ಅನ್‌ರಿಸ್ಟ್ರಿಕ್ಟೆಡ್‌ ಕ್ಲಾಸ್, ಲೇಡಿಸ್‌ ಕ್ಲಾಸ್‌ ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಸ್ಪರ್ಧೆಗಾಗಿ 1.8 ಕಿ.ಮೀ ಅಂತರದ ಎರಡು ಟ್ರ್ಯಾಕ್‌ಗಳನ್ನು ನಿರ್ಮಿಸಲಾಗಿತ್ತು. ಒಂದು ಬಾರಿಗೆ ಎರಡು ಕಾರುಗಳನ್ನು ಮಾತ್ರ ಸ್ಪರ್ಧೆಗೆ ಬಿಡಲಾಗುತ್ತಿತ್ತು. ಪ್ರತಿ ವಿಭಾಗಗಳಲ್ಲಿ ಎರಡು ಲ್ಯಾಪ್‌ಗಳನ್ನು ಪೂರೈಸಲು ಅತಿಕಡಿಮೆ ಸಮಯ ತೆಗೆದುಕೊಂಡ ಸ್ಪರ್ಧಿಗಳನ್ನು ವಿಜೇತರು ಎಂದು ನಿರ್ಣಯಿಸಲಾಯಿತು.

ಆಟೊಮೋಟಿವ್ ಸ್ಪೋರ್ಟ್ಸ್‌ ಕ್ಲಬ್‌ ಆಫ್‌ ಮೈಸೂರು ವತಿಯಿಂದ ಕಳೆದ ಬಾರಿಯೂ ಆಟೊಕ್ರಾಸ್‌ ರೇಸ್‌ ನಡೆಸಲಾಗಿತ್ತು. ಆದರೆ ದಸರಾ ಉತ್ಸವದ ಅಂಗವಾಗಿ ಈ ರೇಸ್‌ ಆಯೋಜಿಸಿದ್ದು ಇದೇ ಮೊದಲು.

‘ಕಳೆದ ಬಾರಿ ಸಂಸ್ಥೆಯು ಸ್ವತಂತ್ರವಾಗಿ ರೇಸ್‌ ಆಯೋಜಿಸಿತ್ತು. ಈ ಬಾರಿ ಪ್ರವಾಸೋದ್ಯಮ ಇಲಾಖೆ ಮತ್ತು ಜಿಲ್ಲಾಡಳಿತದ ಸಹಯೋಗದೊಂದಿಗೆ ದಸರಾ ಅಂಗವಾಗಿ ನಡೆಸಲಾಗಿದೆ’ ಎಂದು ಸಂಸ್ಥೆಯ ಅಧ್ಯಕ್ಷರು ತಿಳಿಸಿದರು.

ರೇಸ್‌ನಿಂದ ದರ್ಶನ್ ದೂರ: ನಟ ದರ್ಶನ ಅವರು ಗ್ರಾವಲ್ ಫೆಸ್ಟ್‌ನಲ್ಲಿ ಸ್ಪರ್ಧಿಸಲು ಬಯಸಿದ್ದರು. ರೇಸ್‌ಗಾಗಿಯೇ ಕಾರನ್ನು ಸಿದ್ಧಪಡಿಸಿದ್ದ ಅವರು ಬೋಗಾದಿಯಲ್ಲಿರುವ ರೇಸ್‌ ಟ್ರ್ಯಾಕ್‌ನಲ್ಲಿ ಅಭ್ಯಾಸವನ್ನೂ ಮಾಡಿದ್ದರು. ಆದರೆ ಇತ್ತೀಚೆಗೆ ಅಪಘಾತದಲ್ಲಿ ಗಾಯಗೊಂಡಿರುವುದರಿಂದ ಅವರು ಸ್ಪರ್ಧೆಯಿಂದ ದೂರ ಉಳಿದರು. ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಸಹ ಚಾಲಕರಾಗಿ ರೇಸ್‌ನಲ್ಲಿ ಪಾಲ್ಗೊಂಡಿದ್ದರು.

ಬೆಳಿಗ್ಗೆ ನಡೆದ ಸಮಾರಂಭದಲ್ಲಿ ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಬಿ.ರಾಮು ಅವರು ಅವರು ರೇಸ್‌ಗೆ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಜನಾರ್ದನ್ ಹಾಜರಿದ್ದರು.

‘ರೇಸ್ ಖುಷಿ ನೀಡಿದೆ’

‘ದಸಾರ ಗ್ರಾವೆಲ್ ಫೆಸ್ಟ್ ಕಾರ್ ರೇಸ್‌ನಲ್ಲಿ ಪಾಲ್ಗೊಂಡದ್ದು ತುಂಬಾ ಖುಷಿ ನೀಡಿದೆ. ಮೈಸೂರಿನಲ್ಲಿ ನನಗೆ ಇದು ಎರಡನೇ ರೇಸ್‌’ ಎಂದು ಮಹಿಳೆಯರ ವಿಭಾಗದಲ್ಲಿ ಗೆದ್ದ ಬೆಂಗಳೂರಿನ ಹರ್ಷಿತಾ ರಾಜ್‌ ಗೌಡ ಹೇಳಿದ್ದಾರೆ.

‘12ರ ಹರೆಯದಲ್ಲೇ ಕಾರು ರೇಸ್‌ ಮೇಲೆ ಆಸಕ್ತಿ ತೋರಿ ಅಭ್ಯಾಸ ನಡೆಸತೊಡಗಿದ್ದೆ. ರಾಷ್ಟ್ರಮಟ್ಟದ ಹಲವು ರೇಸ್‌ಗಳಲ್ಲಿ ಪಾಲ್ಗೊಂಡಿದ್ದೇನೆ’ ಎಂದರು.

ಒಟ್ಟು ಎಂಟು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದಿದ್ದು ಫಲಿತಾಂಶ ಹೀಗಿದೆ:

1,100 ಸಿಸಿವರೆಗಿನ ವಿಭಾಗ: ಎಂ.ಪಿ.ಮಂದಣ್ಣ (ವಿರಾಜಪೇಟೆ)–1, ಹರ್ಷಿತಾ ರಾಜ್‌ ಗೌಡ (ಬೆಂಗಳೂರು)–2, ಎ.ವಿವೇಕ್ (ಮೂಡಿಗೆರೆ)–3. ಕಾಲ: 2 ನಿ. 26.31 ಸೆ.

1,100 ರಿಂದ 1,400 ಸಿಸಿ: ಡೆನ್‌ ತಿಮ್ಮಯ್ಯ (ಮೈಸೂರು)–1, ಅಸದ್‌ ಪಾಷಾ (ಚಿಕ್ಕಮಗಳೂರು)–2, ಅಚಿಂತ್ಯಾ ಮಲ್ಹೋತ್ರಾ (ನವದೆಹಲಿ)–3. ಕಾಲ: 2 ನಿ. 12.07 ಸೆ.

1,400 ರಿಂದ 1,650 ಸಿಸಿ: ಡೀನ್‌ ಮಸ್ಕರೇನಸ್ (ಮಂಗಳೂರು)–1, ಬೋಪಯ್ಯ ಕೊಂಗೇಟಿರ (ಕೊಡಗು)–2, ಸುಹೇಮ್‌ ಕಬೀರ್ (ಅಮ್ಮತ್ತಿ)–3. ಕಾಲ: 2 ನಿ. 7.84 ಸೆ.

ಎಸ್‌ಯುವಿ ಓಪನ್ ಕ್ಲಾಸ್: ಗಗನ್‌ ಕರುಂಬಯ್ಯ (ಅಮ್ಮತ್ತಿ)–1, ಲೋಕೇಶ್‌ ಗೌಡ (ಬೆಂಗಳೂರು)–2, ವಮ್ಸಿ ಮಿರ್ಲಾ (ವಿಜಯನಗರ)–3. ಕಾಲ: 2 ನಿ. 17.75 ಸೆ.

ಲೇಡೀಸ್‌ ಕ್ಲಾಸ್‌: ಹರ್ಷಿತಾ ರಾಜ್‌ ಗೌಡ (ಬೆಂಗಳೂರು)–1, ಕೀರ್ತನಾ ಗಣಪತಿ (ಬೆಂಗಳೂರು)–2, ಸಂಜನಾ ತಿಮ್ಮಯ್ಯ (ಮೈಸೂರು)–3. ಕಾಲ: 2 ನಿ. 22.38 ಸೆ.

ಮೈಸೂರು ಲೋಕಲ್‌ ನೋವಿಸ್ ಓಪನ್: ರೋಹಿತ್‌ ಅಯ್ಯರ್–1, ಜೆನು ಕೆ ಜಾನ್ಸನ್–2, ಗುಲ್ಶನ್‌ ಮೊಣ್ಣಪ್ಪ–3 (ಎಲ್ಲರೂ ಮೈಸೂರು), ಕಾಲ: 2 ನಿ. 11.44 ಸೆ.

ಅನ್‌ರಿಸ್ಟ್ರಿಕ್ಟೆಡ್‌ ಕ್ಲಾಸ್‌: ಧ್ರುವ ಚಂದ್ರಶೇಖರ್ (ಬೆಂಗಳೂರು)–1, ಯೂನುಸ್ ಇಲ್ಯಾಸ್ (ಬೆಂಗಳೂರು)–2, ಅಚಿಂತ್ಯಾ ಮಲ್ಹೋತ್ರ (ನವದೆಹಲಿ)–3. ಕಾಲ: 2 ನಿ. 05.53 ಸೆ.

ಇಂಡಿಯನ್‌ ಓಪನ್‌ ಕ್ಲಾಸ್: ಧ್ರುವ ಚಂದ್ರಶೇಖರ್ (ಬೆಂಗಳೂರು)–1, ಆದಿತ್ಯ ಠಾಕೂರ್‌ (ಸೋಲನ್)–2, ಡೆನ್‌ ತಿಮ್ಮಯ್ಯ (ಮೈಸೂರು)–3. ಕಾಲ: ಕಾಲ: 2 ನಿ. 05.75 ಸೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !