ಕ್ರೀಡಾಕೂಟದ ಬಹುಮಾನ ಮೊತ್ತ ಹೆಚ್ಚಳ

7
ಅ.10ರಿಂದ 16ರವರೆಗೆ ದಸರಾ ಸಿ.ಎಂ ಕಪ್‌: 4,500 ಅಥ್ಲೀಟ್‌ಗಳು ನಿರೀಕ್ಷೆ

ಕ್ರೀಡಾಕೂಟದ ಬಹುಮಾನ ಮೊತ್ತ ಹೆಚ್ಚಳ

Published:
Updated:
Deccan Herald

ಮೈಸೂರು: ಕ್ರೀಡಾಪಟುಗಳು, ಕೋಚ್‌ಗಳು ಹಾಗೂ ಕ್ರೀಡಾ ಪ್ರೇಮಿಗಳ ಒತ್ತಾಸೆಯಿಂದಾಗಿ ದಸರಾ ಕ್ರೀಡಾಕೂಟದ ಬಹುಮಾನ ಮೊತ್ತದಲ್ಲಿ ಈ ಬಾರಿ ಹೆಚ್ಚಳ ಮಾಡಲಾಗಿದೆ.

ಸಾಂಸ್ಕೃತಿಕ ನಗರದಲ್ಲಿ ಬುಧವಾರ ಆರಂಭವಾಗಲಿರುವ ‘ದಸರಾ ಸಿ.ಎಂ ಕಪ್‌’ ಕ್ರೀಡಾಕೂಟದಿಂದಲೇ ಇದು ಜಾರಿಗೆ ಬರಲಿದೆ.

‘ವೈಯಕ್ತಿಕ ಕ್ರೀಡಾ ಸ್ಪರ್ಧೆಗಳಲ್ಲಿ ಪದಕ ಗೆದ್ದವರಿಗೆ ₹ 12,000 (ಚಿನ್ನ), ₹ 6,000 (ಬೆಳ್ಳಿ), ₹ 3,000 (ಕಂಚು) ಬಹು
ಮಾನ ನೀಡಲು ನಿರ್ಧರಿಸಲಾಗಿದೆ’ ಎಂದು ಕ್ರೀಡಾ ಇಲಾಖೆಯ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ. ಈ ಹಿಂದೆ ಕ್ರಮವಾಗಿ ₹ 5,000, ₹ 3,000, ₹ 1,500 ನೀಡಲಾಗುತಿತ್ತು.

ಗುಂಪು ಕ್ರೀಡಾ ಸ್ಪರ್ಧೆಗಳಲ್ಲಿ ಪದಕ ಗೆದ್ದ ತಂಡಗಳಿಗೆ ₹ 40,000 (ಚಿನ್ನ), ₹ 20,000 (ಬೆಳ್ಳಿ), ₹ 10,000 (ಕಂಚು) ಬಹುಮಾನ ಲಭಿಸಲಿದೆ.

ಅ.10ರಿಂದ 16ರವರೆಗೆ ಅಥ್ಲೆಟಿಕ್ಸ್‌ ಸೇರಿದಂತೆ 31 ಕ್ರೀಡಾ ವಿಭಾಗಗಳಲ್ಲಿ ಸುಮಾರು 4,500 ಸ್ಪರ್ಧಿಗಳು ಪೈಪೋಟಿ ನಡೆಸಲಿದ್ದಾರೆ. ಸ್ಥಳೀಯ ಕ್ರೀಡಾಸಕ್ತರ ಒತ್ತಡದಿಂದಾಗಿ ಬಾಲ್‌ಬ್ಯಾಡ್ಮಿಂಟನ್‌, ಚೆಸ್‌, ಕರಾಟೆ, ಥ್ರೋಬಾಲ್‌, ಹಾಫ್‌ ಮ್ಯಾರಥಾನ್‌, ಸೈಕಲ್‌ ಪೋಲೊ, ದೇಹದಾರ್ಢ್ಯ ಸ್ಪರ್ಧೆಗಳಿಗೆ ಕೊನೆ ಸಮಯದಲ್ಲಿ ಅವಕಾಶ ಮಾಡಿಕೊಡಲಾಗಿದೆ. ಇದೇ ಮೊದಲ ಬಾರಿ ಕ್ರೀಡಾಪಟುಗಳ ವಾಸ್ತವ್ಯಕ್ಕೆ ಹೋಟೆಲ್‌ ವ್ಯವಸ್ಥೆ ಮಾಡಲಾಗಿದೆ. ಅದಕ್ಕಾಗಿ 24 ಹೋಟೆಲ್‌ಗಳನ್ನು ಗುರುತಿಸಲಾಗಿದೆ. ಕ್ರೀಡಾ ಸಮವಸ್ತ್ರ, ಷೂ ಹಾಗೂ ಆಹಾರವನ್ನು ಉಚಿತವಾಗಿ ಕಲ್ಪಿಸಲಾಗುತ್ತಿದೆ. ಈ ಹಿಂದೆ ಚೌಲ್ಟ್ರಿ, ಹಾಸ್ಟೆಲ್‌, ಶಾಲಾ ಕಾಲೇಜುಗಳ ಕೊಠಡಿಗಳಲ್ಲಿ ಉಳಿದುಕೊಳ್ಳುತ್ತಿದ್ದರು.

ಕ್ರೀಡಾಕೂಟವನ್ನು ಈ ಬಾರಿ ‘ದಸರಾ ಸಿ.ಎಂ ಕಪ್‌’ ಎಂಬುದಾಗಿ ನಾಮಕರಣ ಮಾಡಲಾಗಿದೆ. ಈ ಮೂಲಕ ಪ್ರಮಾಣಪತ್ರಕ್ಕೆ ಮಾನ್ಯತೆ ಕಲ್ಪಿಸಲಾಗಿದೆ. ಪ್ರತಿ ಕ್ರೀಡಾ ವಿಭಾಗದಿಂದ ಅಗ್ರ ಎಂಟು ತಂಡಗಳು ಪೈಪೋಟಿ ನಡೆಸಲಿವೆ. ‘ಕ್ರೀಡಾಕೂಟದ ಸ್ವರೂಪ ಬದಲಿಸಿರುವುದರಿಂದ ಈ ಬಾರಿ ದಸರೆಯಲ್ಲಿ ಭಾಗವಹಿಸಲು ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ಲಭಿಸಿಲ್ಲ’ ಎಂಬ ಆಕ್ರೋಶವೂ ಸ್ಥಳೀಯ ಕ್ರೀಡಾಪಟುಗಳು, ಕ್ರೀಡಾ ಪೋಷಕರಿಂದ ವ್ಯಕ್ತವಾಗಿದೆ.

ಪೂವಮ್ಮಗೆ ಕ್ರೀಡಾಕೂಟ ಉದ್ಘಾಟನೆ ಭಾಗ್ಯ
ಮೈಸೂರು:
ಅಂತರರಾಷ್ಟ್ರೀಯ ಅಥ್ಲೀಟ್‌ ಎಂ.ಆರ್.ಪೂವಮ್ಮ ಅವರಿಗೆ ಈ ಬಾರಿಯ ದಸರಾ ಸಿ.ಎಂ ಕಪ್‌ ಕ್ರೀಡಾಕೂಟ ಉದ್ಘಾಟಿಸುವ ಭಾಗ್ಯ ಲಭಿಸಿದೆ.

ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ಬುಧವಾರ ಸಂಜೆ 4 ಗಂಟೆಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸಮ್ಮುಖದಲ್ಲಿ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ. ಮಂಗಳೂರಿನಲ್ಲಿ ನೆಲೆಸಿರುವ ಕೊಡಗು ಜಿಲ್ಲೆಯ ಪೂವಮ್ಮ, ಇಂಡೊನೇಷ್ಯಾದ ಜಕಾರ್ತದಲ್ಲಿ ಈಚೆಗೆ ನಡೆದ ಏಷ್ಯನ್‌ ಕ್ರೀಡಾಕೂಟದ 4x400 ಮೀಟರ್ಸ್‌ ರಿಲೇನಲ್ಲಿ ಚಿನ್ನ ಹಾಗೂ ಮಿಶ್ರ ರಿಲೇನಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ.

‘ಹಲವಾರು ಪ್ರತಿಭಾವಂತ ಅಥ್ಲೀಟ್‌ಗಳನ್ನು ಬೆಳಕಿಗೆ ತಂದಿರುವ ಕ್ರೀಡಾಕೂಟ ಉದ್ಘಾಟಿಸಲು ಸಹಜವಾಗಿಯೇ ಖುಷಿ ಆಗುತ್ತಿದೆ. ಈ ಕ್ರೀಡಾಕೂಟದಲ್ಲಿ ನಾನೆಂದೂ ಭಾಗವಹಿಸಿಲ್ಲ. ಆದರೆ, ಈಗ ಉದ್ಘಾಟನೆಗೆ ಅವಕಾಶ ಸಿಕ್ಕಿದೆ’ ಎಂದು ಪೂವಮ್ಮ ‘ಪ್ರಜಾವಾಣಿ’ಗೆ ಪ‍್ರತಿಕ್ರಿಯಿಸಿದರು.

ಕ್ರೀಡಾಕೂಟದಲ್ಲಿರುವ ಸ್ಪರ್ಧೆಗಳು
ಅಥ್ಲೆಟಿಕ್ಸ್‌, ಆರ್ಚರಿ, ಬ್ಯಾಡ್ಮಿಂಟನ್, ಬ್ಯಾಸ್ಕೆಟ್‌ಬಾಲ್‌, ಬಾಕ್ಸಿಂಗ್‌, ಸೈಕ್ಲಿಂಗ್‌, ಫುಟ್‌ಬಾಲ್‌, ಫೆನ್ಸಿಂಗ್‌, ಜಿಮ್ನಾಸ್ಟಿಕ್ಸ್‌, ಹ್ಯಾಂಡ್‌ಬಾಲ್‌
ಹಾಕಿ, ಜುಡೊ, ಕಬಡ್ಡಿ, ಕೊಕ್ಕೊ, ನೆಟ್‌ಬಾಲ್‌, ಈಜು, ಟೆಕ್ವಾಂಡೊ, ಟೇಬಲ್‌ ಟೆನಿಸ್‌, ವಾಲಿಬಾಲ್‌, ವೇಟ್‌ಲಿಫ್ಟಿಂಗ್‌, ಕುಸ್ತಿ, ವುಶು
ಶೂಟಿಂಗ್‌, ಬಾಲ್‌ಬ್ಯಾಡ್ಮಿಂಟನ್‌, ಚೆಸ್‌, ಕರಾಟೆ, ಥ್ರೋಬಾಲ್‌, ಹಾಫ್‌ ಮ್ಯಾರಥಾನ್‌‌, ಸೈಕಲ್‌ ಪೋಲೊ‌, ದೇಹದಾರ್ಢ್ಯ

 

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !