ಭಾನುವಾರ, ನವೆಂಬರ್ 27, 2022
26 °C

ದಸರಾ ಕ್ರೀಡಾಕೂಟ: ವೇಟ್‌ಲಿಫ್ಟಿಂಗ್‌ನಲ್ಲಿ ಅವಕಾಶ ಸಿಗದೆ ನಿರಾಶೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ದಸರಾ ಕ್ರೀಡಾಕೂಟದಲ್ಲಿ ಕಲಬುರಗಿ ವಲಯಮಟ್ಟದ ಅಧಿಕಾರಿಗಳು ಮಾಡಿದ ತಪ್ಪಿನಿಂದಾಗಿ ಕ್ರೀಡಾ ಪಟುವೊಬ್ಬರು ಸ್ಪರ್ಧೆಯಲ್ಲಿ ಭಾಗವಹಿಸದೇ ನಿರಾಸೆ ಅನುಭವಿಸಬೇಕಾಯಿತು. 

ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಶುಕ್ರವಾರ ನಡೆದ ವೇಟ್‌ಲಿಫ್ಟಿಂಗ್‌ ಸ್ಪರ್ಧೆಯಲ್ಲಿ ಬಳ್ಳಾರಿಯ ನಂದೀಶ್‌ ಭಾಗವಹಿಸಲು ಉತ್ಸಾಹದಿಂದ ಆಗಮಿಸಿದ್ದರು. ವಲಯ ಮಟ್ಟದಲ್ಲಿ 75 ಕೆ.ಜಿ ವಿಭಾಗದಲ್ಲಿ ಮೊದಲ ಸ್ಥಾನ ಪಡೆದಿದ್ದ ಅವರನ್ನು 73 ಕೆ.ಜಿ ಒಳಗಿನ ವಿಭಾಗಕ್ಕೆ ಕಲಬುರಗಿ ಅಧಿಕಾರಿಗಳು ಪರಿಗಣಿಸಿ ಪಟ್ಟಿ ಕಳುಹಿಸಿದ್ದರಿಂದ ಅವಕಾಶ ತಪ್ಪಿತು. 

‘ಮೊದಲೇ ಹೇಳಿದ್ದರೆ ಡಯಟ್‌ ಮಾಡಿ ತೂಕ ಇಳಿಸಿಕೊಳ್ಳುತ್ತಿದ್ದೆ. ಆದರೆ, 75 ಕೆ.ಜಿ ಸ್ಪರ್ಧೆ ನಡೆಸಿ 73 ಕೆ.ಜಿ ಎಂದು ನಮೂದಿಸಿ ಕಳುಹಿಸಿದ್ದು ನನಗೆ ಗೊತ್ತಿರಲಿಲ್ಲ’ ಎಂದು ನಂದೀಶ್‌ ಹೇಳಿದರು. 

‘ವಲಯಮಟ್ಟದಲ್ಲಿಯೇ 73 ಕೆ.ಜಿ ವಿಭಾಗಕ್ಕೆ ಕಳುಹಿಸಿದ್ದಾರೆ. ನಂದೀಶ್‌ ಅವರನ್ನು 81 ಕೆ.ಜಿ ವಿಭಾಗಕ್ಕೆ ಪರಿಗಣಿಸಲು ಕ್ರೀಡಾ ಸ್ಪರ್ಧೆ ನಿಯಮದಂತೆ ಅವಕಾಶವಿಲ್ಲ. ಪ್ರತಿ ಸ್ಪರ್ಧೆಯಲ್ಲೂ ವಲಯದ ಇಬ್ಬರಿಗೆ ಮಾತ್ರ ಅವಕಾಶವಿದೆ. ಮೂರನೆಯವರಿಗೆ ಇಲ್ಲ’ ಎಂದು ವೇಟ್‌ಲಿಫ್ಟಿಂಗ್‌ ಸ್ಪರ್ಧೆಗಳ ಸಂಯೋಜಕ ಸದಾನಂದ್‌ ಪ್ರತಿಕ್ರಿಯಿಸಿದರು.  

ಬೇರೇ ಸ್ಪರ್ಧಿಗೆ ಅವಕಾಶ, ಆಕ್ಷೇಪ: ವೇಟ್‌ಲಿಫ್ಟಿಂಗ್‌ ಸ್ಪರ್ಧೆಯ 55 ಕೆ.ಜಿ ಒಳಗಿನವರ ವಿಭಾಗದಲ್ಲಿ ಭಾಗವಹಿಸಬೇಕಿದ್ದ ಕಲಬುರಗಿ ವಲಯದ ಸುಮನ್‌ ಬದಲು ಅಭಿಷೇಕ್‌ ಎಂಬುವರು ಸ್ಪರ್ಧಿಸಿದ್ದರು. ತೂಕ ಪರೀಕ್ಷೆಗೆ ತಡವಾಗಿ ಆಗಮಿಸಿದ್ದ ಸುಮನ್‌, ತಮ್ಮ ಬದಲು ಬೇರೊಬ್ಬರು ಸ್ಪರ್ಧಿಸಿದ್ದನ್ನು ನೋಡಿ ಕಂಗಾಲಾದರು. ಸಂಯೋಜಕರಿಗೆ ಈ ಬಗ್ಗೆ ತಿಳಿಸುತ್ತಿದ್ದಂತೆ ಅಭಿಷೇಕ್‌ ಅವರನ್ನು ಸ್ಪರ್ಧಾ ಪಟ್ಟಿಯಿಂದ ಕೈಬಿಡಲಾಯಿತು. 100 ಗ್ರಾಂ. ತೂಕ ಹೆಚ್ಚಿದ್ದರಿಂದ ಸುಮನ್‌ ಅವರಿಗೂ ಅವಕಾಶ ಸಿಗಲಿಲ್ಲ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು