ಗುರುವಾರ , ಅಕ್ಟೋಬರ್ 24, 2019
21 °C
ಸದಾಶಿವ ‘ದಸರಾ ಕೇಸರಿ’

ದಸರಾ ಕುಸ್ತಿಗೆ ತೆರೆ: ದಾವಣಗೆರೆಯ ಕಿರಣ್‌ ‘ದಸರಾ ಕಂಠೀರವ’

Published:
Updated:
Prajavani

ಮೈಸೂರು: ಕುಸ್ತಿ ಪ್ರೇಮಿಗಳ ಚಪ್ಪಾಳೆಯ ನಡುವೆ ಬಿಗಿಪಟ್ಟುಗಳನ್ನು ಹಾಕಿದ ದಾವಣಗೆರೆಯ ಕಿರಣ್‌ ಅವರು ದಸರಾ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ  ‘ದಸರಾ ಕಂಠೀರವ’ ಪ್ರಶಸ್ತಿ ಗಳಿಸಿದರು.

ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದ ಅಖಾಡದಲ್ಲಿ ಶುಕ್ರ ವಾರ ನಡೆದ ಪೈಪೋಟಿಯಲ್ಲಿ ಕಿರಣ್ ಅವರು ಬೆಳಗಾವಿಯ ಶಿವಯ್ಯ ಪೂಜಾರಿ ವಿರುದ್ಧ ಗೆದ್ದರು. 30 ನಿಮಿಷಗಳ ಹಣಾಹಣಿಯಲ್ಲಿ ಕಿರಣ್‌ 11–0 ಪಾಯಿಂಟ್‌ಗಳಿಂದ ಮೇಲುಗೈ ಸಾಧಿಸಿದರು. ಅವರಿಗೆ ಒಂದೂಕಾಲು ಕೆ.ಜಿ.ತೂಕದ ಬೆಳ್ಳಿ ಗದೆಯನ್ನು ಕಾಣಿಕೆಯಾಗಿ ಬಹುಮಾನವಾಗಿ ನೀಡಲಾಯಿತು.

‘ದಸರಾ ಕೇಸರಿ’ ಪ್ರಶಸ್ತಿಗೆ ನಡೆದ 30 ನಿಮಿಷಗಳ ಹೋರಾಟದಲ್ಲಿ ಧಾರವಾಡದ ಸದಾಶಿವ ನಲವಡೆ ಅವರು ತಮ್ಮದೇ ಊರಿನವರಾದ  ಅನಿಲ್‌ ದಳವಾಯಿ ವಿರುದ್ಧ 10–3 ಪಾಯಿಂಟ್‌ಗಳಿಂದ ಜಯ ಸಾಧಿಸಿದರು.

‘ದಸರಾ ಕುಮಾರ’ ಪ್ರಶಸ್ತಿಗೆ ನಡೆದ ಸೆಣಸಾಟದಲ್ಲಿ ಮೈಸೂರಿನ ಪ್ರವೀಣ್‌ ಎಂ. ಚಿಕ್ಕಹಳ್ಳಿ ಅವರು ಕೆ.ಕುಮಾರ್‌ ವಿರುದ್ಧ ಗೆದ್ದರು. ಈ ಪ್ರಶಸ್ತಿಗೆ 20 ನಿಮಿಷಗಳ ಕಾದಾಟ ನಿಗದಿಪಡಿಸಲಾಗಿತ್ತು. ಪ್ರವೀಣ್‌ ಅವರು 13ನೇ ನಿಮಿಷದಲ್ಲಿ ಎದುರಾಳಿಯನ್ನು ಚಿತ್‌ ಮಾಡಿದರು. ‘ದಸರಾ ಕೇಸರಿ’, ‘ದಸರಾ ಕುಮಾರ’ ಮತ್ತು ‘ದಸರಾ ಕಿಶೋರಿ’ ಗೆದ್ದವರು ತಲಾ ಒಂದು ಕೆ.ಜಿ, ಮುಕ್ಕಾಲು ಕೆ.ಜಿ. ಮತ್ತು ಅರ್ಧ ಕೆ.ಜಿ. ತೂಕದ ಗದೆಯನ್ನು ಪಡೆದುಕೊಂಡರು.

ಲೀನಾ ಸಿದ್ದಿ ಸಾಧನೆ

‘ದಸರಾ ಕಿಶೋರಿ’ ಪ್ರಶಸ್ತಿಗೆ ನಡೆದ ಮಹಿಳೆಯರ ಕುಸ್ತಿಯಲ್ಲಿ ಹಳಿಯಾಳದ ಲೀನಾ ಸಿದ್ದಿ ಅವರು ಗದುಗಿನ ಎಚ್‌. ಪ್ರೇಮಾ ಅವರನ್ನು ಮಣಿಸಿದರು. ಈ ಮೂಲಕ ‘ದಸರಾ ಕಿಶೋರಿ’ ಪ್ರಶಸ್ತಿ ಪಡೆದ ಸಿದ್ದಿ ಜನಾಂಗದ ಮೊದಲ ಕುಸ್ತಿಪಟು ಎಂಬ ಗೌರವ ಪಡೆದರು.

‘ಈ ಹಿಂದೆ ಎರಡು ವರ್ಷ ದಸರಾ ಕುಸ್ತಿಯಲ್ಲಿ ಪಾಲ್ಗೊಂಡಿದ್ದೆ. ಆದರೆ ದಸರಾ ಕಿಶೋರಿ ಪ್ರಶಸ್ತಿಗೆ ಸ್ಪರ್ಧಿಸಲು ಅವಕಾಶ ಸಿಕ್ಕಿರಲಿಲ್ಲ. ಈ ಬಾರಿ ಸಿಕ್ಕ ಅವಕಾಶವನ್ನು ಬಳಸಿಕೊಂಡು ಗೆದ್ದೆ. ಈ ಸಾಧನೆ ಸಂತಸ ನೀಡಿದೆ’ ಎಂದು ಲೀನಾ ಪ್ರತಿಕ್ರಿಯಿಸಿದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)