ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್‌: ಹಂಟರ್ಸ್‌ ಬೇಟೆಯಾಡಿದ ಡ್ಯಾಷರ್ಸ್‌

ಕೇವಲ ಎರಡು ಗೆಲುವು ಸಾಧಿಸಿದ ಹೈದರಾಬಾದ್‌ ತಂಡ
Last Updated 9 ಜನವರಿ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ಪಾಯಿಂಟ್‌ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಹೈದರಾಬಾದ್ ಹಂಟರ್ಸ್ ತಂಡವನ್ನು ಬೇಟೆಯಾಡಿದ ಡೆಲ್ಲಿ ಡ್ಯಾಷರ್ಸ್‌, ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್‌ (ಪಿಬಿಎಲ್‌)ನಲ್ಲಿ ಅಮೋಘ ಜಯ ಸಾಧಿಸಿತು.

ಕಂಠೀರವ ಕ್ರೀಡಾಂಗಣದಲ್ಲಿ ಬುಧವಾರ ಸಂಜೆ ನಡೆದ ಹಣಾಹಣಿಯಲ್ಲಿ ಎಚ್.ಎಸ್‌.ಪ್ರಣಯ್‌ ಅವರ ಮೂಲಕ ಗೆಲುವಿನ ಓಟ ಆರಂಭಿಸಿದ ಡ್ಯಾಷರ್ಸ್‌ ಮೂರು ಪಂದ್ಯಗಳನ್ನು ಗೆದ್ದು ನಾಲ್ಕು ಪಾಯಿಂಟ್ ಕಲೆ ಹಾಕಿತು. ಟ್ರಂಪ್‌ ಪಂದ್ಯದಲ್ಲಿ ಪಿ.ವಿ.ಸಿಂಧು ಮತ್ತು ಮಿಶ್ರ ಡಬಲ್ಸ್‌ನಲ್ಲಿ ಕಿಮ್ ಸಾ ರಂಗ್‌–ವಾನ್ ಇಯಾಮ್ ಹೀ ಅವರ ಸಾಧನೆ ಹೈದರಾಬಾದ್ ತಂಡದ ಸೋಲಿನ ಅಂತರ ಕಡಿಮೆ ಮಾಡಿತು.

ಈ ಬಾರಿಯ ಲೀಗ್‌ನಲ್ಲಿ ಡೆಲ್ಲಿ ಡ್ಯಾಷರ್ಸ್‌ ಸತತ ಸೋಲಿನ ಕಹಿಯುಂಡು ಬೆಂಗಳೂರಿಗೆ ಬಂದಿತ್ತು. 25 ಪಂದ್ಯಗಳಲ್ಲಿ ಏಳನ್ನು ಮಾತ್ರ ಗೆದ್ದಿದ್ದ ತಂಡದ ಬಗಲಲ್ಲಿ ಕೇವಲ ಎರಡು ಪಾಯಿಂಟ್‌ಗಳಿದ್ದವು. ಬುಧವಾರದ ಜಯದೊಂದಿಗೆ ತಂಡದ ಪಾಯಿಂಟ್‌ಗಳ ಸಂಖ್ಯೆ ಆರಕ್ಕೆ ಏರಿತು. ಆದರೆ ಕೊನೆಯ ಸ್ಥಾನದಿಂದ ಮೇಲೇಳಲು ಸಾಧ್ಯವಾಗಲಿಲ್ಲ.

ಪ್ರಣಯ್‌ ಶುಭಾರಂಭ: ಮೊದಲ ಪಂದ್ಯದಲ್ಲಿ (ಪುರುಷರ ಸಿಂಗಲ್ಸ್‌) ರಾಹುಲ್ ಚಿತ್ತಬೊಯ್ನ ಅವರ ಸವಾಲು ಮೀರಿದ ಎಚ್‌.ಎಚ್‌.ಪ್ರಣಯ್‌, ಡೆಲ್ಲಿ ಡ್ಯಾಷರ್ಸ್‌ ಪರ ಶುಭಾರಂಭ ಮಾಡಿದರು. ಮೂರು ಗೇಮ್‌ಗಳ ವರೆಗೆ ಸಾಗಿದ ಪಂದ್ಯದ ಎರಡನೇ ಗೇಮ್‌ನಲ್ಲಿ ಮುಗ್ಗರಿಸಿದರೂ ಛಲ ಬಿಡದ ಪ್ರಣಯ್ ಪಂದ್ಯ ಗೆದ್ದರು. ಮುಂದಿನದು (ಪುರುಷರ ಡಬಲ್ಸ್‌) ಡ್ಯಾಷರ್ಸ್‌ಗೆ ಟ್ರಂಪ್ ಪಂದ್ಯ ಆಗಿತ್ತು. ಅರುಣ್‌ ಜಾರ್ಜ್‌– ಬೋದಿನ್ ಇಸಾರ ಜೋಡಿಯನ್ನು 2–1ರಿಂದ ಸೋಲಿಸಿದ ಬಿಯಾವೊ ಚಾಯ್‌ – ಮಣಿಪಾಂಗ್ ಜಾಂಗ್‌ಜಿತ್‌ ಡ್ಯಾಷರ್ಸ್‌ನ ಮುನ್ನಡೆಯನ್ನು 3–0ಗೆ ಏರಿಸಿದರು.

ಮೋಡಿ ಮಾಡಿದ ಸಿಂಧು: ತಂಡ ನಿರಾಸೆಗೆ ಒಳಗಾಗಿದ್ದಾಗ ಕಣಕ್ಕೆ ಇಳಿದ ಪಿ.ವಿ.ಸಿಂಧು ಸುಲಭ ಜಯದ ಮೂಲಕ ಹಂಟರ್ಸ್‌ ಪಾಳಯದಲ್ಲಿ ಭರವಸೆ ಮೂಡಿಸಿದರು. ಎವ್ಜೀನಿಯಾ ಕೊಸೆಟೆಸ್ಕಿಯಾ ಅವರನ್ನು ಎರಡೇ ಗೇಮ್‌ಗಳಲ್ಲಿ ಮಣಿಸಿದ ಸಿಂಧು ಉದ್ಯಾನನಗರಿಯ ಬ್ಯಾಡ್ಮಿಂಟನ್ ಪ್ರಿಯರನ್ನು ರಂಜಿಸಿದರು.

ಮೊದಲ ಸರ್ವ್‌ನಲ್ಲೇ ಪಾಯಿಂಟ್ ಗಳಿಸಿದ ಹೈದರಾಬಾದ್ ಆಟಗಾರ್ತಿ ನಂತರ ಸ್ವಯಂ ತಪ್ಪುಗಳಿಂದ ಎರಡು ಪಾಯಿಂಟ್‌ಗಳನ್ನು ಬಿಟ್ಟುಕೊಟ್ಟರು. ಆ ಬಳಿಕ ನೆಟ್ ಬಳಿ ಬಲಶಾಲಿ ಸ್ಮ್ಯಾಷ್ ಸಿಡಿಸಿ ಆಕ್ರಮಣಕಾರಿ ಆಟ ಆರಂಭಿಸಿದ ಸಿಂಧು ಸತತ ಪಾಯಿಂಟ್‌ಗಳನ್ನು ಕಲೆ ಹಾಕಿದರು. ಆದರೂ ಎವ್ಜೀನಿಯಾ ಎದೆಗುಂದಲಿಲ್ಲ. ತಾಳ್ಮೆಯಿಂದ ಆಡಿ 5–5, 7–7ರ ಸಮಬಲ ಸಾಧಿಸಿದರು. ಈ ಹಂತದಲ್ಲಿ ಭರ್ಜರಿ ಸ್ಮ್ಯಾಷ್ ಮೂಲಕ ಪಾಯಿಂಟ್ ಗಳಿಸಿದ ಸಿಂಧು 8–7ರ ಮುನ್ನಡೆಯೊಂದಿಗೆ ವಿರಾಮಕ್ಕೆ ತೆರಳಿದರು.

ದ್ವಿತೀಯಾರ್ಧದಲ್ಲಿ ಸಿಂಧು ಮತ್ತಷ್ಟು ಆಕ್ರಮಣಕಾರಿ ಆಟವಾಡಿದರು. ರಕ್ಷಣಾತ್ಮಕ ಆಟಕ್ಕೆ ಮುಂದಾದ ಎವ್ಜೀನಿಯಾ ಎದುರಾಳಿಗೆ ತಿರುಗೇಟು ನೀಡಲು ನಡೆಸಿದ ಪ್ರಯತ್ನ ವಿಫಲವಾಯಿತು.

ಎರಡನೇ ಗೇಮ್‌ನಲ್ಲಿ ಸಿಂಧು ಆಟ ರಂಗೇರಿತು. ಮೊದಲ ಸರ್ವ್‌ನಲ್ಲಿ ಪಾಯಿಂಟ್ ಬಿಟ್ಟುಕೊಟ್ಟರೂ ನಿರಾಳವಾಗಿ ಆಡಿದ ಅವರು 8–5ರ ಮುನ್ನಡೆ ಗಳಿಸಿ ವಿರಾಮಕ್ಕೆ ಹೋದರು. ನಂತರ ಬೇಸ್‌ಲೈನ್‌ ಆಟಕ್ಕೆ ಮೊರೆ ಹೋಗಿ ಸುಲಭವಾಗಿ ಪಾಯಿಂಟ್ ಹೆಕ್ಕಿ ಗೆದ್ದು ಸಂಭ್ರಮಿಸಿದರು.

ಅವಧ್‌ ವಾರಿಯರ್ಸ್‌ ತಂಡಕ್ಕೆ ಭರ್ಜರಿ ಗೆಲುವು
ಎರಡನೇ ಹಣಾಹಣಿಯಲ್ಲಿ ಅವಧ್ ವಾರಿಯರ್ಸ್‌, ನಾರ್ತ್ ಈಸ್ಟರ್ನ್ ವಾರಿಯರ್ಸ್ ಎದುರು 5–0ಯಿಂದ ಗೆದ್ದಿತು. ಮೊದಲ ಪಂದ್ಯದಲ್ಲಿ ಕ್ಯೋನ್‌, ಹವೊಯ್ ಎದುರು ಗೆದ್ದರು. ನಂತರದ ಟ್ರಂಪ್ ಪಂದ್ಯದಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಕ್ರಿಸ್ಟಿಯನ್‌ಸೆನ್‌ ಜೋಡಿ ಚಾನ್ ಮತ್ತು ನಾ ಜೋಡಿಯನ್ನು ಮಣಿಸಿದರು. ನಾರ್ತ್ ಈಸ್ಟರ್ನ್ ವಾರಿಯರ್ಸ್‌ನ ಟ್ರಂಪ್ ಪಂದ್ಯದಲ್ಲಿ ಸೈನಾ ನೆಹ್ವಾಲ್‌ ಅವರು ಬಿವೆನ್ ಜಾಂಗ್ ವಿರುದ್ಧ ಸೋತರು. ಸೆನ್ಸೊಬುನ್ಸುಕ್‌ ಅವರು ಹೋ ಎದುರು ಗೆದ್ದು ನಾರ್ತ್ ಈಸ್ಟರ್ನ್‌ಗೆ ಏಕೈಕ ಜಯ ತಂದುಕೊಟ್ಟರು. ಕೊನೆಗೆ ಲೀ ಮತ್ತು ಅರ್ಜುನ್‌ ಜೋಡಿ ಧ್ರುವ್ ಕಪಿಲ ಮತ್ತು ಯೂ ಯಾನ್ ಸ್ಯಾಂಗ್ ವಿರುದ್ಧ ಗೆದ್ದರು.

ಪಂದ್ಯ ವೀಕ್ಷಿಸಿದ ಸಾನಿಯಾ ಮಿರ್ಜಾ
ಹೈದರಾಬಾದ್ ಹಂಟರ್ಸ್‌ ತಂಡಕ್ಕೆ ಬೆಂಬಲ ನೀಡಲು ಬಂದ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಕೆಲಕಾಲ ಕ್ರೀಡಾಭಿಮಾನಿಗಳಿಗೆ ಮುದ ನೀಡಿದರು. ಅವರನ್ನು ನಿರೂಪಕಿ ಅಂಗಣಕ್ಕೆ ಕರೆದುಕೊಂಡ ಬಂದರು. ನಂತರ ಗಣ್ಯರ ಸ್ಟ್ಯಾಂಡ್‌ನಲ್ಲಿ ಕುಳಿತು ಸಾನಿಯಾ ಪಂದ್ಯಗಳನ್ನು ವೀಕ್ಷಿಸಿದರು.

***
ಇಂದಿನ ಪಂದ್ಯ
ಬೆಂಗಳೂರು ರ‍್ಯಾಪ್ಟರ್ಸ್‌ ಚೆನ್ನೈ ಸ್ಮಾಷರ್ಸ್‌
ಆರಂಭ: ಸಂಜೆ 7.00
ಸ್ಥಳ: ಕಂಠೀರವ ಕ್ರೀಡಾಂಗಣ, ಬೆಂಗಳೂರು
ನೇರ ಪ್ರಸಾರ: ಸ್ಟಾರ್ ನೆಟ್‌ವರ್ಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT