ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೇವಿಸ್‌ ಕಪ್‌ ಕ್ವಾಲಿಫೈಯರ್ಸ್‌ ಟೂರ್ನಿ: ಕ್ರೊವೇಷ್ಯಾಗೆ ಆಘಾತ ನೀಡಲು ಭಾರತ ಕಾತರ

ಇಂದಿನಿಂದ ಪಂದ್ಯ
Last Updated 5 ಮಾರ್ಚ್ 2020, 18:49 IST
ಅಕ್ಷರ ಗಾತ್ರ

ಜಾಗ್ರೆಬ್‌: ಭಾರತ ಪುರುಷರ ತಂಡ ಶುಕ್ರವಾರದಿಂದ ಆರಂಭವಾಗುವ ಡೇವಿಸ್‌ ಕಪ್‌ ಕ್ವಾಲಿಫೈಯರ್ಸ್‌ ಟೆನಿಸ್‌ ಟೂರ್ನಿಯಲ್ಲಿ ಬಲಿಷ್ಠ ಕ್ರೊವೇಷ್ಯಾ ತಂಡಕ್ಕೆ ಆಘಾತ ನೀಡಲು ಕಾತರವಾಗಿದೆ.

ಸುಮಿತ್‌ ನಗಾಲ್‌, ಪ್ರಜ್ಞೇಶ್‌ ಗುಣೇಶ್ವರನ್‌ ಹಾಗೂ ರಾಮಕುಮಾರ್‌ ರಾಮನಾಥನ್‌ ಅವರನ್ನು ಹೊಂದಿರುವ ಭಾರತ ತಂಡ ಎದುರಾಳಿಗಳಿಗೆ ಪ್ರಬಲ ಪೈಪೋಟಿ ಒಡ್ಡುವ ಸಾಮರ್ಥ್ಯ ಹೊಂದಿದೆ.

ಸುಮಿತ್‌ ಮತ್ತು ಪ್ರಜ್ಞೇಶ್, ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಕ್ರಮವಾಗಿ 127 ಮತ್ತು 132ನೇ ಸ್ಥಾನಗಳಲ್ಲಿದ್ದಾರೆ. ಇವರು ಸಿಂಗಲ್ಸ್‌ನಲ್ಲಿ ಭಾರತದ ಶಕ್ತಿಯಾಗಿದ್ದಾರೆ.

ವಿಶ್ವ ರ‍್ಯಾಂಕಿಂಗ್‌ನಲ್ಲಿ 37ನೇ ಸ್ಥಾನದಲ್ಲಿರುವ ಮರಿನ್‌ ಸಿಲಿಕ್‌ ಅವರು ಆತಿಥೇಯರ ಆಧಾರಸ್ಥಂಭವಾಗಿದ್ದಾರೆ. 2014ರ ಅಮೆರಿಕ ಓಪನ್‌ನಲ್ಲಿ ಪ್ರಶಸ್ತಿ ಜಯಿಸಿದ್ದ ಮರಿನ್‌ ಅವರನ್ನು ಮಣಿಸುವ ಸವಾಲು ಸುಮಿತ್‌ ಮತ್ತು ಪ್ರಜ್ಞೇಶ್‌ ಅವರ ಎದುರಿಗಿದೆ.

ರ‍್ಯಾಂಕಿಂಗ್‌ನಲ್ಲಿ 33ನೇ ಸ್ಥಾನದಲ್ಲಿರುವ ಬೋರ್ನಾ ಕೊರಿಕ್‌, ಈ ಪಂದ್ಯದಲ್ಲಿ ಆಡುತ್ತಿಲ್ಲ. ಇದರಿಂದ ಕ್ರೊವೇಷ್ಯಾ ತಂಡಕ್ಕೆ ಅಲ್ಪ ಹಿನ್ನಡೆ ಎದುರಾಗಿದೆ. ಅವರ ಅನುಪಸ್ಥಿತಿಯಲ್ಲಿ ಬೋರ್ನಾ ಗೋಜೊ ಕಣಕ್ಕಿಳಿಯಲಿದ್ದಾರೆ. ರ‍್ಯಾಂಕಿಂಗ್‌ನಲ್ಲಿ 277ನೇ ಸ್ಥಾನದಲ್ಲಿರುವ ಗೋಜೊ ಅವರನ್ನು ಸೋಲಿಸುವುದು ಭಾರತದ ಆಟಗಾರರಿಗೆ ಕಷ್ಟವಾಗಲಾರದು.

ಡಬಲ್ಸ್‌ ವಿಭಾಗದಲ್ಲಿ ಲಿಯಾಂಡರ್‌ ಪೇಸ್‌ ಮತ್ತು ರೋಹನ್‌ ಬೋಪಣ್ಣ ಕಣಕ್ಕಿಳಿಯುವ ನಿರೀಕ್ಷೆ ಇದೆ. 46 ವರ್ಷ ವಯಸ್ಸಿನ ಪೇಸ್‌ ಪಾಲಿಗೆ ಇದು ಕೊನೆಯ ಡೇವಿಸ್‌ ಕಪ್‌ ‍ಪಂದ್ಯವೆನಿಸಿದೆ. ಈ ಹಣಾಹಣಿಯಲ್ಲಿ ಗೆದ್ದು ಮೂರು ದಶಕಗಳ ಟೆನಿಸ್‌ ಪಯಣಕ್ಕೆ ವಿದಾಯ ಹೇಳುವ ಆಲೋಚನೆಯಲ್ಲಿ ಅವರಿದ್ದಾರೆ.

‘ಬೋರ್ನಾ ಕೊರಿಕ್‌ ಅನುಪಸ್ಥಿತಿಯಲ್ಲಿ ಕ್ರೊವೇಷ್ಯಾ ತಂಡ ಅಲ್ಪ ಸೊರಗಿದಂತೆ ಕಾಣುತ್ತಿದೆ. ಆ ತಂಡವನ್ನು ಮಣಿಸಲು ಈಗ ಉತ್ತಮ ಅವಕಾಶ ಸಿಕ್ಕಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಲು ಪ್ರಯತ್ನಿಸುತ್ತೇವೆ’ ಎಂದು ಪ್ರಜ್ಞೇಶ್‌ ಗುಣೇಶ್ವರನ್‌ ತಿಳಿಸಿದ್ದಾರೆ.

1995ರಲ್ಲಿ ಉಭಯ ತಂಡಗಳು ಕೊನೆಯ ಬಾರಿ ಮುಖಾಮುಖಿಯಾಗಿದ್ದವು. ನವದೆಹಲಿಯಲ್ಲಿ ಆಯೋಜನೆಯಾಗಿದ್ದ ಪಂದ್ಯದಲ್ಲಿ ಭಾರತ 3–2ಯಿಂದ ಗೆದ್ದಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಭಾರತ ತಂಡವು ತವರಿನ ಹೊರಗೆ ಆಡಿದ ಪಂದ್ಯಗಳಲ್ಲಿ ಬಲಿಷ್ಠ ತಂಡಗಳ ವಿರುದ್ಧ ಜಯಿಸಿಲ್ಲ. ಕ್ರೊವೇಷ್ಯಾ ವಿರುದ್ಧ ಅಮೋಘ ಸಾಮರ್ಥ್ಯದೊಂದಿಗೆ ಹೋರಾಡಿದರೆ ಈ ಕೊರಗು ದೂರವಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT