ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್‌ಗೆ ದೀಪಿಕಾ ಕುಮಾರಿ

Last Updated 28 ನವೆಂಬರ್ 2019, 19:05 IST
ಅಕ್ಷರ ಗಾತ್ರ

ಬ್ಯಾಂಕಾಕ್‌ : ಅನುಭವಿ ದೀಪಿಕಾ ಕುಮಾರಿ 21ನೇ ಏಷ್ಯನ್‌ ಆರ್ಚರಿ ಚಾಂಪಿಯನ್‌ಷಿಪ್‌ನಲ್ಲಿ ಗುರುವಾರ ಚಿನ್ನದ ಪದಕ ಗೆದ್ದುಕೊಂಡರೆ, ಅಂಕಿತಾ ಭಕತ್‌ ಬೆಳ್ಳಿಯ ಪದಕ ಕೊರಳಿಗೆ ಹಾಕಿಕೊಂಡರು. ಆ ಸಾಧನೆಯ ಮೂಲಕ 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸುವ ಅರ್ಹತೆಯನ್ನೂ ಪಡೆದರು.

ಮಹಿಳೆಯರ ಇಂಡಿವಿಜುವಲ್‌ ರಿಕರ್ವ್‌ ಸ್ಪರ್ಧೆಯ ಫೈನಲ್‌ನಲ್ಲಿ ದೀಪಿಕಾ 6–0 ಯಿಂದ ಅಂಕಿತಾ ವಿರುದ್ಧ ಜಯಗಳಿಸಿದರು.

‌ಈ ಚಾಂಪಿಯನ್‌ಷಿಪ್‌ನಲ್ಲಿಕಾಂಟಿನೆಂಟಲ್‌ ಕ್ವಾಲಿಫಿಕೇಷನ್‌ ಅಡಿ ವೈಯಕ್ತಿಕ ವಿಭಾಗದಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಮೂರು ಕೋಟಾಗಳಿದ್ದವು.

ಅಗ್ರ ಶ್ರೇಯಾಂಕದ ದೀಪಿಕಾ ಕಳಂಕರಹಿತ ಪ್ರದರ್ಶನ ನೀಡಿ 7–2 ರಿಂದ ಮಲೇಷಿಯಾದ ನೂರ್‌ ಅಫೀಸಾ ಅಬ್ದುಲ್‌ ಹಲೀಲ್‌ ಅವರನ್ನು, 6–4 ರಿಂದ ಇರಾನ್‌ ಜಹ್ರಾ ನೆಮತಿ ಅವರನ್ನು, 6–2 ರಿಂದ ಸ್ಥಳೀಯ ಸ್ಪರ್ಧಿ ನರಿಸರ ಕುನ್ಹಿರಾಂಚೆಯೊ ಅವರನ್ನು ಸೋಲಿಸಿ ನಾಲ್ಕರ ಘಟ್ಟ ತಲುಪಿದ್ದರು. ಆ ಮೂಲಕ ಒಲಿಂಪಿಕ್ಸ್‌ಗೆ ಅರ್ಹತೆ ಖಚಿಯಪಡಿಸಿಕೊಂಡರು.

ಅಂಕಿತಾ ಇನ್ನೊಂದೆಡೆ 7–1 ರಿಂದ ಹಾಂಗ್‌ಕಾಂಗ್‌ನ ಲಾಮ್‌ ಶುಕ್‌ ಚುಣಗ್‌ ಅಢಾ ವಿರುದ್ಧ, 6–0 ಯಿಂದ ಗುಯೆನ್‌ ಥಿ ಫುಯೊಂಗ್‌ ವಿರುದ್ಧ, 6–4 ರಿಂದ ಕಜಕಸ್ತಾನದ ಅನಸ್ತೇಸಿಯಾ ಬನ್ನೋವ ವಿರುದ್ಧ, 6–2 ರಿಂದ ಭೂತಾನ್‌ನ ಕರ್ಮಾ ವಿರುದ್ಧ ಜಯಗಳಿಸಿ ಫೈನಲ್‌ ಪ್ರವೇಶಿಸಿದರು.

ದೀಪಿಕಾ, ಅಂಕಿತಾ, ಲೈಶ್ರಾಮ್‌ ಬೊಂಬಯಲಾ ದೇವಿ, ತಟಸ್ಥ ಧ್ವಜದಡಿ ಪಾಲ್ಗೊಳ್ಳುತ್ತಿದ್ದಾರೆ. ಆಡಳಿತಾತ್ಮಕ ಬಿಕ್ಕಟ್ಟಿನ ಕಾರಣ ಭಾರತ ಆರ್ಚರಿ ಫೆಡರೇಷನ್‌ ಅನ್ನು ಅಮಾನತಿನಲ್ಲಿಡಲಾಗಿದೆ.

ಭಾರತ ಆರ್ಚರಿ ಫೆಡರೇಷನ್‌ (ಎಎಐ) ಅನ್ನು ಅಮಾನತಿನಲ್ಲಿಟ್ಟಿರುವ ಕಾರಣ ಭಾರತದ ಬಿಲ್ಗಾರರು ಯಾವುದೇ ಧ್ವಜವಿಲ್ಲದೇ ಸ್ಪರ್ಧಿಸುತ್ತಿದ್ದಾರೆ.

ಪುರುಷರ ರಿಕರ್ವ್‌ ಟೀಮ್‌ ವಿಭಾಗದಲ್ಲಿ (ತರುಣದೀಪ್‌ ರಾಯ್‌, ಆತನು ದಾಸ್‌ ಮತ್ತು ಪ್ರವೀಣ್ ಜಾಧವ್‌) ಭಾರತ ತಂಡ ಈಗಾಗಲೇ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದೆ. ಈ ವರ್ಷದ ಆರಂಭದಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಭಾರತ ಅರ್ಹತೆ ಪಡೆದಿತ್ತು.ಬರ್ಲಿನ್‌ನಲ್ಲಿ 2020ರಲ್ಲಿ ನಡೆಯಲಿರುವ ವಿಶ್ವಕಪ್‌, ಒಲಿಂಪಿಕ್ಸ್‌ಗೆ ಅರ್ಹತೆಗೆ ಪಡೆಯಲು ಬಿಲ್ಗಾರರಿಗೆ ಇರುವ ಕೊನೆಯ ಅವಕಾಶವಾಗಿದೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT