ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೊ ಕಬಡ್ಡಿ- ಡಿಫೆಂಡರ್‌ಗಳ ‘ಸೂಪರ್’ ಶೋ

Last Updated 8 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ಪ್ರೊ ಕಬಡ್ಡಿ ಲೀಗ್‌ನ ಬೆಂಗಳೂರು ಆವೃತ್ತಿಯ ಮೊದಲ ದಿನ. ಆತಿಥೇಯ ಬೆಂಗಳೂರು ಬುಲ್ಸ್ ಮತ್ತು ಗುಜರಾತ್ ಫಾರ್ಚೂನ್ ಜೈಂಟ್ಸ್ ನಡುವಿನ ಪಂದ್ಯದಲ್ಲಿ ಪವನ್ ಶೆರಾವತ್, ರೋಹಿತ್ ಶರ್ಮಾ, ಸಚಿನ್ ಮತ್ತು ಜಿ.ಬಿ ಮೋರೆ ಅವರಂಥ ಸ್ಟಾರ್ ರೇಡರ್‌ಗಳ ಮೇಲೆಯೇ ಎಲ್ಲರ ಕಣ್ಣು ಇತ್ತು. ಆದರೆ ಪಂದ್ಯದಲ್ಲಿ ಮಿಂಚಿದ್ದು ಪರ್ವೇಶ್ ಬೈನ್ಸ್‌ವಾಲ್, ಸುನಿಲ್ ಕುಮಾರ್, ಸೌರಭ್ ನಂದಾಲ್, ಮಹೇಂದರ್ ಸಿಂಗ್ ಮುಂತಾದವರು. ಇವರು ಟ್ಯಾಕ್ಲಿಂಗ್ ಸಾಮರ್ಥ್ಯದಿಂದ ಪಂದ್ಯವನ್ನು ಕ್ಷಣ-ಕ್ಷಣವೂ ರೋಮಾಂಚಕವಾಗಿಸಿದ್ದರು. ಎರಡೂ ತಂಡಗಳ ಡಿಫೆಂಡರ್‌ಗಳು ಒಟ್ಟು ತಲಾ 13 ಟ್ಯಾಕ್ಲಿಂಗ್ ಪಾಯಿಂಟ್ ಗಳಿಸಿದ್ದರು.

ಆಗಸ್ಟ್ 24ರಂದು ನಡೆದ ದೆಹಲಿ ಆವೃತ್ತಿಯ ಮೊದಲ ಪಂದ್ಯದಲ್ಲೂ ಹೀಗೆಯೇ ಆಗಿತ್ತು. ರೋಹಿತ್, ಪವನ್, ನವೀನ್ ಮುಂತಾದವರು ರೇಡಿಂಗ್‌ನಲ್ಲಿ ಅಮೋಘ ಸಾಮರ್ಥ್ಯ ತೋರಿದರೂ ಡಿಫೆಂಡರ್‌ಗಳಾದಅಮಿತ್ ಶೆರಾನ್, ರವಿಂದರ್ ಪೆಹಲ್, ವಿಶಾಲ್ ಮಾನೆ ಮುಂತಾದವರು ಮಿಂಚಿದ್ದರು. ರೋಹಿತ್ ಕುಮಾರ್‌ಗೆ ಒಂದು ಪಾಯಿಂಟ್ ಕೂಡ ಬಿಟ್ಟುಕೊಡದೆ ದಬಂಗ್ ಡೆಲ್ಲಿಯ ಡಿಫೆಂಡರ್‌ಗಳು ತಂಡದ ಗೆಲುವಿನಲ್ಲಿ ಮುಖ್ಯ ಪಾತ್ರ ವಹಿಸಿದ್ದರು. ಡಿಫೆಂಡರ್‌ಗಳು ಮ್ಯಾಟ್‌ನಲ್ಲಿ ನಿರ್ಣಾಯಕ ಪಾತ್ರ ವಹಿಸಿದ, ಅಪ್ರತಿಮ ಕ್ಯಾಚಿಂಗ್ ಸಾಮರ್ಥ್ಯದ ಮೂಲಕ ರಂಜಿಸಿದ ಇಂಥ ಅನೇಕ ಪಂದ್ಯಗಳಿಗೆ ಪ್ರೊ ಕಬಡ್ಡಿ ಲೀಗ್‌ನ ಏಳನೇ ಆವೃತ್ತಿ ಸಾಕ್ಷಿಯಾಗಿದೆ.

ರೇಡರ್‌ಗಳ ಆಟ ಎಂದೇ ಪರಿಗಣಿಸಲಾಗಿರುವ ಕಬಡ್ಡಿಯಲ್ಲಿ ಈಗ ಡಿಫೆಂಡರ್‌ಗಳೂ ತಮ್ಮ ಅಸ್ತಿತ್ವ ತೋರಿಸುತ್ತಿದ್ದಾರೆ. ಆಟಗಾರರ ಟ್ಯಾಕ್ಲಿಂಗ್ ತಂತ್ರಗಳು, ಶೈಲಿ ಸಾಕಷ್ಟು ಮೊನಚು ಪಡೆದುಕೊಂಡಿರುವುದರಿಂದ ರೇಡಿಂಗ್‌ನಷ್ಟೇ ಟ್ಯಾಕ್ಲಿಂಗ್ ಕೂಡ ಪಂದ್ಯಗಳ ಆಕರ್ಷಣೆಯಾಗುತ್ತಿದೆ. ಮೂವರು ಅಥವಾ ಅದಕ್ಕಿಂತ ಕಡಿಮೆ ಆಟಗಾರರು ಇದ್ದಾಗ ರೇಡರ್‌ನನ್ನು ಹಿಡಿದರೆ ಸಿಗುವ ‘ಸೂಪರ್ ಟ್ಯಾಕಲ್‌’ನ ಲಾಭ, ವೈಯಕ್ತಿವಾಗಿ ಐದು ಅಥವಾ ಅದಕ್ಕಿಂತ ಹೆಚ್ಚು ಟ್ಯಾಕ್ಲಿಂಗ್ ಪಾಯಿಂಟ್ ಗಳಿಸಿದರೆ ಸಿಗುವ ‘ಹೈ ಫೈವ್‌’ ಮಾನ್ಯತೆ ಮುಂತಾದವು ಪ್ರೊ ಕಬಡ್ಡಿಯಲ್ಲಿ ಟ್ಯಾಕ್ಲಿಂಗ್‌ಗೆ ಹೊಳಪು ತುಂಬಿದೆ.

ಹಿಂದಿನ ಆವೃತ್ತಿಗಳಿಗೆ ಹೋಲಿಸಿದರೆ ಈ ಬಾರಿ ಲೀಗ್‌ನ ಅರ್ಧದಷ್ಟು ಪಂದ್ಯಗಳು ಮುಕ್ತಾಯಗೊಂಡಾಗಲೇ ಡಿಫೆಂಡರ್‌ಗಳು ವೈಯಕ್ತಿಕವಾಗಿ ಮತ್ತು ತಂಡಗಳು ಡಿಫೆನ್ಸ್‌ನಲ್ಲಿ ಗಳಿಸಿರುವ ಪಾಯಿಂಟ್‌ಗಳ ಸಂಖ್ಯೆ ಗಣನೀಯವಾಗಿವೆ.ಮೊದಲ ಆವೃತ್ತಿಯಲ್ಲಿ ಅತಿ ಹೆಚ್ಚು ಟ್ಯಾಕಲ್ ಮಾಡಿದ ಜೈಪುರ ಪಿಂಕ್ ಪ್ಯಾಂಥರ್ಸ್ ಬಗಲಲ್ಲಿ ಇದ್ದದ್ದು 170 ಪಾಯಿಂಟ್ಸ್ ಮಾತ್ರ. ಸರಾಸರಿ 120.63. ಎರಡನೇ ಆವೃತ್ತಿಯಲ್ಲಿ ಟ್ಯಾಕ್ಲಿಂಗ್ ಸ್ವಲ್ಪ ಸುಧಾರಿಸಿತ್ತು. ಹೆಚ್ಚು ಪಾಯಿಂಟ್ ಗಳಿಸಿದ ಯು ಮುಂಬಾ ಬಗಲಲ್ಲಿ ಒಟ್ಟು 196 ಪಾಯಿಂಟ್‌ಗಳು ಇದ್ದವು. ಸರಾಸರಿ 12.25 ಆಗಿತ್ತು. ಮೂರನೇ ಆವೃತ್ತಿಯಲ್ಲಿ 11.69ರ ಸರಾಸರಿಯಲ್ಲಿ ಪುಣೇರಿ ಪಲ್ಟನ್ 187 ಪಾಯಿಂಟ್ ಗಳಿಸಿದ್ದರೆ ನಂತರದ ಆವೃತ್ತಿಯಲ್ಲಿ ಅದೇ ತಂಡ 18.63ರ ಸರಾಸರಿಯಲ್ಲಿ 290 ಟ್ಯಾಕ್ಲಿಂಗ್ ಪಾಯಿಂಟ್ ಗಳಿಸಿತ್ತು. ಆ ವರ್ಷ ಎಲ್ಲ ತಂಡಗಳೂ 200ರ ಗಡಿ ದಾಟಿದ್ದು ವಿಶೇಷ. ಟ್ಯಾಕ್ಲಿಂಗ್‌ನಲ್ಲಿ ಕೊನೆಯ ಸ್ಥಾನದಲ್ಲಿದ್ದ ಬೆಂಗಳೂರು ಬುಲ್ಸ್ 201 ಪಾಯಿಂಟ್ ಕಲೆ ಹಾಕಿತ್ತು. ಎರಡನೇ ಸ್ಥಾನದಲ್ಲಿದ್ದ ಜೈಪುರ ಪಿಂಕ್ ಪ್ಯಾಂಥರ್ಸ್ 270, ಮೂರನೇ ಸ್ಥಾನದಲ್ಲಿದ್ದ ತೆಲುಗು ಟೈಟನ್ಸ್ 267 ಮತ್ತು ನಂತರದ ಸ್ಥಾನದಲ್ಲಿದ್ದ ಪಟ್ನಾ ಪೈರೇಟ್ಸ್ 264 ಪಾಯಿಂಟ್ ಗಳಿಸಿತ್ತು. ಮುಂದಿನ ಎರಡು ಆವೃತ್ತಿಗಳಲ್ಲೂ ಟ್ಯಾಕ್ಲಿಂಗ್‌ನಲ್ಲಿ 200ಕ್ಕೂ ಅಧಿಕ ಪಾಯಿಂಟ್‌ಗಳನ್ನು ಗಳಿಸಲು ಕೆಲವು ತಂಡಗಳಿಗೆ ಸಾಧ್ಯವಾಗಿದೆ. ಐದನೇ ಆವೃತ್ತಿಯಲ್ಲಿ ಪುಣೇರಿ ಪಲ್ಟನ್, ಗುಜರಾತ್ ಫಾರ್ಚೂನ್‌ಜೈಂಟ್ಸ್ ಮತ್ತು ಪಟ್ನಾ ಪೈರೇಟ್ಸ್ 250ಕ್ಕೂ ಹೆಚ್ಚು ಟ್ಯಾಕ್ಲಿಂಗ್ ಪಾಯಿಂಟ್ ಗಳಿಸಿವೆ. ಪುಣೇರಿ 11.29ರ ಸರಾಸರಿ ಹೊಂದಿದ್ದರೆ ಗುಜರಾತ್ 10.28ರ ಸರಾಸರಿ ಗಳಿಸಿತ್ತು. ಆರನೇ ಆವೃತ್ತಿಯಲ್ಲಿ ಮೂರು ತಂಡಗಳು 250ರ ಗಡಿ ದಾಟಿದ್ದವು. ಯು ಮುಂಬಾ 289 (12.57), ಗುಜರಾತ್ 274 (10.96) ಮತ್ತು ಯು.ಪಿ ಯೋಧಾ 265 (10.6) ಪಾಯಿಂಟ್ ಸಂಗ್ರಹಿಸಿದ್ದವು.

ಈ ಬಾರಿ ಈಗಾಗಲೇ ಲೀಗ್ ಅರ್ಧ ಹಾದಿ ಸವೆದಿದೆಯಷ್ಟೆ. ಅಷ್ಟರಲ್ಲೇ ಎಲ್ಲ 10 ತಂಡಗಳು ಟ್ಯಾಕ್ಲಿಂಗ್ ಪಾಯಿಂಟ್ ಗಳಿಕೆಯಲ್ಲಿ 100ರ ಗಡಿ ದಾಟಿವೆ. ಮೊದಲ ಸ್ಥಾನದಲ್ಲಿರುವ ಬೆಂಗಳೂರು ಬುಲ್ಸ್ 10.71ರ ಸರಾಸರಿಯಲ್ಲಿ 150 ಪಾಯಿಂಟ್‌ಗಳನ್ನು ದಾಟಿದೆ.ಲೀಗ್‌ನಲ್ಲಿ ಇನ್ನೂ 60ಕ್ಕೂ ಹೆಚ್ಚು ಪಂದ್ಯಗಳು ಉಳಿದಿದ್ದು ಡಿಫೆಂಡರ್‌ಗಳು ಇನ್ನಷ್ಟು ರೋಮಾಂಚಕ ಕ್ಷಣಗಳನ್ನು ಪ್ರೇಕ್ಷಕರಿಗೆ ಕಾಣಿಕೆಯಾಗಿ ನೀಡುವ ಭರವಸೆ ಮೂಡಿದೆ.

ಕಳೆದ ಆರು ಆವೃತ್ತಿಗಳಲ್ಲೂ ರೈಡರ್‌ಗಳೇ ಪಾರಮ್ಯ ಮೆರೆದಿದ್ದರು. ಆದರೆ ಈ ಬಾರಿ ಪ್ರತಿ ತಂಡವೂ ಟ್ಯಾಕ್ಲಿಂಗ್‌ನಲ್ಲಿ ಸಾಧನೆ ಮಾಡಿದೆ. ಇದು ಕಬಡ್ಡಿಗೆ ಹೊಸ ಆಯಾಮ ತಂದುಕೊಡಲು ನೆರವಾಗಲಿದೆ.
ರಣಧೀರ್ ಸಿಂಗ್, ಬೆಂಗಳೂರು ಬುಲ್ಸ್ ಕೋಚ್

ಈ ಬಾರಿ ಪ್ರೊ ಕಬಡ್ಡಿಯಲ್ಲಿ ಡಿಫೆಂಡರ್ ಗಳದ್ದೇ ಆಟ.ಸೂಪರ್ ಟ್ಯಾಕಲ್ ಗಳು ಹೆಚ್ಚು ಗಮನ ಸೆಳೆಯುತ್ತಿದ್ದು ಅನೇಕ ಪಂದ್ಯಗಳಲ್ಲಿ ಇವು ಪಂದ್ಯದ ಗತಿಯನ್ನೇ ಬದಲಿಸಲು ನೆರವಾಗಿವೆ. ಕೇವಲ ರೈಡರ್ ಗಳೇ ಮೆರೆಯುತ್ತಿದ್ದ ಕಬಡ್ಡಿ ಈಗ ರೈಡಿಂಗ್-ಟ್ಯಾಕ್ಲಿಂಗ್ ಸಮ್ಮಿಲನದಿಂದ ರೊಚಕಅನುಭವ ನೀಡುತ್ತಿದೆ.
ಶ್ರೀನಿವಾಸ ರೆಡ್ಡಿ, ಜೈಪುರ ಪಿಂಕ್ ಪ್ಯಾಂಥರ್ಸ್ ಕೋಚ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT