ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಹಾಫ್‌ ಮ್ಯಾರಥಾನ್‌: ಕೂಟ ದಾಖಲೆ ನಿರ್ಮಿಸಿದ ಗೆಮೆಚು

ಬೆಲಿಹುಗೆ ಪ್ರಶಸ್ತಿ
Last Updated 21 ಅಕ್ಟೋಬರ್ 2018, 17:20 IST
ಅಕ್ಷರ ಗಾತ್ರ

ನವದೆಹಲಿ: ದೂರ ಅಂತರದ ಓಟದಲ್ಲಿ ತಮಗೆ ಯಾರೂ ಸಾಟಿಯಾಗಲಾರರು ಎಂಬುದನ್ನು ಇಥಿಯೋಪಿಯಾದ ಓಟಗಾರರು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ಭಾನುವಾರ ನಡೆದ ದೆಹಲಿ ಹಾಫ್‌ ಮ್ಯಾರಥಾನ್‌ನ ಮಹಿಳೆಯರ ಎಲೀಟ್‌ ವಿಭಾಗದಲ್ಲಿ ಸೆಹಾಯ್‌ ಗೆಮೆಚು ಕೂಟ ದಾಖಲೆ ನಿರ್ಮಿಸಿದರೆ, ಪುರುಷರ ವಿಭಾಗದಲ್ಲಿ ಆ್ಯಂಡಮಲಕ್‌ ಬೆಲಿಹು ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.

ಜವಾಹರಲಾಲ್‌ ನೆಹರೂ ಕ್ರೀಡಾಂಗಣದಲ್ಲಿ ನಡೆದ ಸ್ಪರ್ಧೆಯಲ್ಲಿ 20 ವರ್ಷ ವಯಸ್ಸಿನ ಗೆಮೆಚು 1 ಗಂಟೆ 6 ನಿಮಿಷ 50 ಸೆಕೆಂಡುಗಳಲ್ಲಿ ಗುರಿ ಕ್ರಮಿಸಿದರು.

ಈ ಮೂಲಕ ಕೀನ್ಯಾದ ಮೇರಿ ಕೀಟನಿ ಹೆಸರಿನಲ್ಲಿದ್ದ ಕೂಟ ದಾಖಲೆ ಅಳಿಸಿ ಹಾಕಿದರು. 2009ರಲ್ಲಿ ನಡೆದಿದ್ದ ಸ್ಪರ್ಧೆಯಲ್ಲಿ ಕೀಟನಿ 1 ಗಂಟೆ 6 ನಿಮಿಷ 54 ಸೆಕೆಂಡುಗಳಲ್ಲಿ ಗುರಿ ತಲುಪಿದ್ದರು.

ಜಾಯ್‌ಸಿಲಿನ್‌ ಜೆಪ್‌ಕೊಸ್‌ಗೀ ಬೆಳ್ಳಿಯ ಪದಕಕ್ಕೆ ತೃಪ್ತಿಪಟ್ಟರು. ಹಾಫ್‌ ಮ್ಯಾರಥಾನ್‌ನಲ್ಲಿ ವಿಶ್ವ ದಾಖಲೆ ನಿರ್ಮಿಸಿರುವ ಜಾಯ್‌ಸಿಲಿನ್‌ 1 ಗಂಟೆ 06.56 ಸೆಕೆಂಡುಗಳಲ್ಲಿ ಅಂತಿಮ ರೇಖೆ ಮುಟ್ಟಿದರು.

ಈ ವಿಭಾಗದ ಕಂಚಿನ ಪದಕ ಇಥಿಯೋಪಿಯಾದ ಜೆಯಿನಿಬಾ ಯೀಮರ್‌ (1:06.59ಸೆ.) ಅವರ ಪಾಲಾಯಿತು.

ಒಲಿಂಪಿಕ್ಸ್‌ನಲ್ಲಿ ಮೂರು, ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಐದು ಚಿನ್ನದ ಪದಕಗಳನ್ನು ಗೆದ್ದ ಹೆಗ್ಗಳಿಕೆ ಹೊಂದಿರುವ ತಿರುನೇಶ್‌ ದಿಬಾಬ ಆರನೇಯವರಾಗಿ ಸ್ಪರ್ಧೆ ಮುಗಿಸಿದರು.

ಪುರುಷರ ವಿಭಾಗದ ಸ್ಪರ್ಧೆಯಲ್ಲಿ ಬೆಲಿಹು 59 ನಿಮಿಷ 18 ಸೆಕೆಂಡುಗಳಲ್ಲಿ ನಿಗದಿತ ದೂರ ಕ್ರಮಿಸಿದರು.

ವಲೆಲೆಗನ್‌ (59 ನಿಮಿಷ 22ಸೆಕೆಂಡು) ಮತ್ತು ಕೀನ್ಯಾದ ಡೇನಿಯಲ್‌ ಕಿಪ್‌ಚುಂಬಾ (59:48ಸೆ.) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಪಡೆದರು.

ಭಾರತದ ಸ್ಪರ್ಧಿಗಳ ಪೈಕಿ ಪುರುಷರ ಎಲೀಟ್‌ ವಿಭಾಗದ ಚಿನ್ನದ ಪದಕವನ್ನು ಅಭಿಷೇಕ್‌ ಪಾಲ್‌ ಗೆದ್ದರು. ಅವರು 1 ಗಂಟೆ 4 ನಿಮಿಷ 14 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು.

ಮಹಾರಾಷ್ಟ್ರದ ಅವಿನಾಶ್‌ ಸಬ್ಲೆ (1:04:14ಸೆ.) ಬೆಳ್ಳಿ ಮತ್ತು ಟಿ.ಗೋಪಿ (1:04.15ಸೆ.) ಕಂಚಿನ ಪದಕ ತಮ್ಮದಾಗಿಸಿಕೊಂಡರು.

ಮಹಿಳೆಯರ ಎಲೀಟ್‌ ವಿಭಾಗದಲ್ಲಿ ಸಂಜೀವಿನಿ ಜಾಧವ್‌ (1:13:58ಸೆ.) ಚಿನ್ನದ ಪದಕಕ್ಕೆ ಕೊರಳೊಡ್ಡಿದರು.

ಪಾರುಲ್‌ ಚೌಧರಿ ಮತ್ತು ಮೋನಿಕಾ ಅಥಾರೆ ಅವರು ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT