ಬುಧವಾರ, ಅಕ್ಟೋಬರ್ 20, 2021
25 °C

ಬಾಕ್ಸಿಂಗ್ ತಂಡಕ್ಕೆ ಮರಳಿದ ಕೋಚ್‌ ದೇವೇಂದ್ರೊ, ಸುರಂಜಯ್‌

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಪದಕಗಳನ್ನು ಗೆದ್ದುಕೊಂಡಿರುವ ಎಂ.ಸುರಂಜಯ್‌ ಸಿಂಗ್ ಮತ್ತು ಎಲ್‌.ದೇವೇಂದ್ರೊ ಸಿಂಗ್ ಅವರು ಭಾರತದ ಬಾಕ್ಸಿಂಗ್‌ ತಂಡದ ಕೋಚ್‌ಗಳಾಗಿ ನೇಮಕಗೊಂಡಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ತಂಡದಿಂದ ದೂರ ಉಳಿದಿದ್ದ ಅವರು ಈ ತಿಂಗಳಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಷಿಪ್‌ಗೆ ಪುರುಷರ ತಂಡದ ಕೋಚ್‌ಗಳಾಗಿರುವರು ಎಂದು ಭಾರತ ಬಾಕ್ಸಿಂಗ್ ಫೆಡರೇಷನ್ ತಿಳಿಸಿದೆ. 

100ಕ್ಕೂ ಹೆಚ್ಚು ರಾಷ್ಟ್ರಗಳಿಂದ 600ರಷ್ಟು ಬಾಕ್ಸರ್‌ಗಳು ಪಾಲ್ಗೊಳ್ಳುವ ವಿಶ್ವ ಚಾಂಪಿಯನ್‌ಷಿಪ್‌ ಇದೇ ತಿಂಗಳ 24ರಿಂದ ಸರ್ಬಿಯಾದ ಬಿಲ್‌ಗ್ರೇಡ್‌ನಲ್ಲಿ ಆರಂಭವಾಗಲಿದೆ. ಇದರಲ್ಲಿ ಪಾಲ್ಗೊಳ್ಳುವ ಭಾರತ ತಂಡದ ಅಭ್ಯಾಸ ಶಿಬಿರ ಪಟಿಯಾಲದಲ್ಲಿ ಈ ವಾರ ಆರಂಭವಾಗಲಿದೆ. ಇದಕ್ಕೆ ಒಟ್ಟು 14 ಮಂದಿ ಕೋಚ್‌ಗಳನ್ನು ನೇಮಕ ಮಾಡಲಾಗಿದೆ. ಇವರಲ್ಲಿ 29 ವರ್ಷದ ದೇವೇಂದ್ರೊ ಮತ್ತು 35 ವರ್ಷದ ಸುರಂಜಯ್ ಸೇರಿದ್ದಾರೆ ಎಂದು ಫೆಡರೇಷನ್ ವಿವರಿಸಿದೆ.

ಮುಖ್ಯ ಕೋಚ್‌ ನರೇಂದ್ರ ರಾಣಾ, ಜೂನಿಯರ್ ತಂಡದ ಮಾಜಿ ಕೋಚ್ ಎಂ.ಎಸ್‌.ಢಾಕಾ, ಧರ್ಮೇಂದ್ರ ಯಾದವ್‌ ಮತ್ತು ಮಾಜಿ ಬಾಕ್ಸರ್‌ಗಳಾದ ದಿವಾಕರ್ ಪ್ರಸಾದ್‌, ಟೋರಕ್‌ ಖರ್ಪನ್ ಮುಂತಾದವರು ಶಿಬಿರದಲ್ಲಿ ತರಬೇತುದಾರರಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಫೆಡರೇಷನ್‌ನ ಪ್ರಧಾನ ಕಾರ್ಯದರ್ಶಿ ಹೇಮಂತ ಕಲಿತ ತಿಳಿಸಿದ್ದಾರೆ.

ವಿಶೇಷವೆಂದರೆ, ಸುರಂಜಯ್ ಮತ್ತು ದೇವೇಂದ್ರೊ ಜೂನಿಯರ್ ಹಂತದಲ್ಲಿ ಢಾಕಾ ಅವರ ಶಿಷ್ಯರಾಗಿದ್ದರು. 2010ರ ಕಾಮನ್ವೆಲ್ತ್ ಗೇಮ್ಸ್ ಮತ್ತು 2009ರ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಸುರಂಜಯ್ ಚಿನ್ನ ಗಳಿಸಿದ್ದರು. ದೇವೇಂದ್ರೊ ಅವರು ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಗಳಿಸಿದ್ದು 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು.

ಮಣಿಪುರದ ಸುರಂಜಯ್ ಅವರನ್ನು 2017ರಲ್ಲಿ ಸಹಾಯಕ ಕೋಚ್ ಆಗಿ ನೇಮಕ ಮಾಡಲಾಗಿತ್ತು. ಆದರೆ ವೈಯಕ್ತಿಕ ಕಾರಣಗಳಿಂದಾಗಿ ಆ ಹುದ್ದೆಯನ್ನು ಅವರು ನಿರಾಕರಿಸಿದ್ದರು. 2009ರಿಂದ 2010ರ ಅವಧಿಯಲ್ಲಿ ಅವರು ಸತತ ಎಂಟು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದರು. ಆದರೆ ಮೊಣಕಾಲಿನಲ್ಲಿ ಕಾಣಿಸಿಕೊಂಡ ನೋವು ಅವರ ವೃತ್ತಿಜೀವನಕ್ಕೆ ಅಡ್ಡಿಯಾಗಿತ್ತು.

ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದ ಮತ್ತು ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದ ದೇವೇಂದ್ರೊ 2020ರಲ್ಲಿ ಪಟಿಯಾಲದ ರಾಷ್ಟ್ರೀಯ ಕ್ರೀಡಾ ಸಂಸ್ಥೆಯಲ್ಲಿ ಕೋಚಿಂಗ್ ಡಿಪ್ಲೋಮಾ ಪೂರ್ಣಗೊಳಿಸಿದ್ದರು.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದ ಅಮಿತ್ ಪಂಘಾಲ್‌, ಮನೀಷ್ ಕೌಶಿಕ್, ವಿಕಾಸ್ ಕೃಷನ್‌, ಆಶಿಷ್ ಕುಮಾರ್ ಮತ್ತು ಸತೀಶ್ ಕುಮಾರ್ ವಿಶ್ವ ಚಾಂಪಿಯನ್‌ಷಿಪ್‌ಗೆ ಲಭ್ಯವಿಲ್ಲ. ಈ ಪೈಕಿ ವಿಕಾಸ್ ಮತ್ತು ಆಶಿಶ್ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ‌.

ಮುಖ್ಯ ಕೋಚ್ ಆಗಿದ್ದ ಸಿ.ಎ.ಕುಟ್ಟಪ್ಪ ಅವರನ್ನು ಬದಲಿಸಿ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುವ ತಂಡಕ್ಕೆ ರಾಣಾ ಅವರನ್ನು ಕೋಚ್ ಆಗಿ ನೇಮಕ ಮಾಡಲು ಭಾರತ ಬಾಕ್ಸಿಂಗ್ ಫೆಡರೇಷನ್ ನಿರ್ಧರಿಸಿದೆ. ಹೈ ಪರ್ಫಾರ್ಮೆನ್ಸ್ ನಿರ್ದೇಶಕ ಸ್ಯಾಂಟಿಯಾಗೊ ನೀವಾ ಅವರನ್ನು ಕೂಡ ಇದೇ ಸಂದರ್ಭದಲ್ಲಿ ಬದಲಿಸಲಾಗಿತ್ತು. 49 ವರ್ಷದ ರಾಣಾ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು