ಗುರುವಾರ , ಅಕ್ಟೋಬರ್ 24, 2019
21 °C
ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌

ಬ್ರಿಟನ್‌ಗೆ ಸ್ಪ್ರಿಂಟ್ ಚಿನ್ನದ ಬರ ನೀಗಿಸಿದ ಡೀನಾ

Published:
Updated:

ದೋಹಾ: ಡೀನಾ ಆಶರ್‌ ಸ್ಮಿತ್‌, ಸ್ಪ್ರಿಂಟ್‌ ಓಟದಲ್ಲಿ ಬ್ರಿಟನ್‌ ಎದುರಿಸುತ್ತಿದ್ದ ಚಿನ್ನದ ಬರವನ್ನು  ಅಂತ್ಯಗೊಳಿಸಿದರು. ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನಲ್ಲಿ ಬುಧವಾರ ಮಹಿಳೆಯರ 200 ಮೀಟರ್ಸ್‌ ಓಟವನ್ನು ಅವರು ಅಲ್ಪ ಪ್ರಯಾಸದಿಂದ ಗೆದ್ದುಕೊಂಡರು. ಅಮೆರಿಕದ ಗ್ರ್ಯಾಂಟ್‌ ಹಾಲೊವೆ ಅವರು ಪುರುಷರ 100 ಮೀ. ಹರ್ಡಲ್ಸ್‌ ಚಿನ್ನ ಗೆದ್ದುಕೊಂಡರು.

100 ಮೀ. ಓಟದಲ್ಲಿ ರಜತ ಪದಕ ಗೆದ್ದುಕೊಂಡಿದ್ದ ಡೀನಾ, ಖಲೀಫಾ ಕ್ರೀಡಾಂಗಣದಲ್ಲಿ 200 ಮೀ. ಓಟವನ್ನು 21.88 ಸೆಕೆಂಡುಗಳಲ್ಲಿ ಕ್ರಮಿಸಿದರು. ಪ್ರಮುಖ ಅಥ್ಲೀಟುಗಳು ಗಾಯಾಳಾಗಿ ಹಿಂದೆಸರಿದ ಕಾರಣ ಈ ಓಟದಲ್ಲಿ, 23 ವರ್ಷದ ಡೀನಾ ಪ್ರಾಬಲ್ಯ ಮೆರೆದರು. ವಿಶ್ವ ಚಾಂಪಿಯನ್‌ಷಿಪ್‌ ಇತಿಹಾಸದಲ್ಲಿ 100 ಅಥವಾ 200 ಮೀ. ಓಟದಲ್ಲಿ ಚಿನ್ನ ಗೆದ್ದ ಬ್ರಿಟನ್‌ನ ಮೊದಲ ಮಹಿಳೆ ಎನಿಸಿದರು. ‘ಏನು ಹೇಳಬೇಕೊ ಗೊತ್ತಾಗುತ್ತಿಲ್ಲ. ನಾನು ಕನಸು ಕಂಡಿದ್ದೆ. ಈಗ ಸಾಕಾರಗೊಂಡಿದೆ’ ಎಂದು ಸಂಭ್ರಮದಲ್ಲಿದ್ದ ಅವರು ಪ್ರತಿಕ್ರಿಯಿಸಿದರು.

22.22 ಸೆಕೆಂಡು ತೆಗೆದುಕೊಂಡ ಬ್ರಿಟಾನಿ ಬ್ರೌನ್‌ (ಅಮೆರಿಕ) ಎರಡನೇ ಸ್ಥಾನವನ್ನು ಪಡೆದರೆ, 22.51 ಸೆ. ಗಳ ಅವಧಿಯೊಡನೆ ಮುಜಿಂಗಾ (ಸ್ವಿಜರ್ಲೆಂಡ್‌) ಮೂರನೇ ಸ್ಥಾನ ಪಡೆದರು.

ನಾಟಕೀಯ ತಿರುವು ಕಂಡ 110 ಮೀ. ಹರ್ಡಲ್ಸ್‌ನಲ್ಲಿ ಹಾಲೊವೆ ಆರಂಭದಿಂದ ಅಂತ್ಯದವರೆಗೂ ಮುಂದಿದ್ದು 13.10 ಸೆ.ಗಳಲ್ಲಿ ಗುರಿತಲುಪಿದರು. ಒಲಿಂಪಿಕ್‌ ಮತ್ತು ಹಾಲಿ ಚಾಂಪಿಯನ್‌ ಒಮರ್‌ ಮೆಕ್‌ಲೊಡ್‌ ತೀವ್ರ ಪೈಪೋಟಿ ನೀಡಿದರೂ, ಅಂತಿಮ ತಡೆಯಲ್ಲಿ ಜೋರಾಗಿ ಎಡವಿಬಿದ್ದರು. 2015ರ ವಿಶ್ವ ಚಾಂಪಿಯನ್‌ ಸೆರ್ಗಿ ಶುಬೆನ್‌ಕೊವ್‌ (13.15ಸೆ) ಎರಡನೇ, ಫ್ರಾನ್ಸ್‌ನ ಪಾಸ್ಕರ್‌ ಮಾರ್ಟಿನೋಟ್‌ ಲಾಗ್ರೆಡ್‌ (13.18 ಸೆ.) ಮೂರನೇ ಸ್ಥಾನ ಪಡೆದರು.

ಓಟಕ್ಕೆ ಸಂಬಂಧಿಸಿ ಇವೆರಡೇ ಸ್ಪರ್ಧೆಗಳಿದ್ದವು. ಹ್ಯಾಮರ್‌ ಥ್ರೊ ಸ್ಪರ್ಧೆಯಲ್ಲಿ ಪಾವೆಲ್‌ ಫಾಯ್ಡೆಕ್‌ (ಪೋಲೆಂಡ್‌), ನಾಲ್ಕನೇ ಯತ್ನದಲ್ಲಿ 80.0 ಮೀ. ಸಾಧನೆಯೊಡನೆ ಚಿನ್ನ ಗೆದ್ದುಕೊಂಡರು. 2017ರ  ಚಾಂಪಿಯನ್‌ಷಿಪ್‌ನಲ್ಲೂ ಅವರೇ ವಿಜೇತರಾಗಿದ್ದರು. ಫ್ರಾನ್ಸ್‌ನ ಕ್ವೆಂಟಿನ್‌ ಬಿಗೋಟ್‌ (78.19 ಮೀ.) ಎರಡನೇ ಮತ್ತು ಹಂಗೆರಿಯ ಬೆನ್ಸ್‌ ಹಲಜ್‌ (78.18ಮೀ.) ಮೂರನೇ ಸ್ಥಾನ ಪಡೆದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)