ಶನಿವಾರ, ಡಿಸೆಂಬರ್ 7, 2019
24 °C
ಜಿಮ್ನಾಸ್ಟಿಕ್ಸ್‌: ಕೋಚ್‌ ವಿಶ್ವೇಶ್ವರ ನಂದಿ ಹೇಳಿಕೆ

‘ದೀಪಾ ಒಲಿಂಪಿಕ್ಸ್‌ ಹಾದಿ ಇನ್ನೂ ಮುಚ್ಚಿಲ್ಲ’

Published:
Updated:
Prajavani

ನವದೆಹಲಿ (ಪಿಟಿಐ): ‘ಜಿಮ್ನಾಸ್ಟಿಕ್ಸ್‌ ಪಟು ದೀಪಾ ಕರ್ಮಾಕರ್‌ ಅವರು 2020ರ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸುವ ಆಸೆಯನ್ನು ಇನ್ನೂ ಕೈಬಿಟ್ಟಿಲ್ಲ’ ಎಂದು ಕೋಚ್‌ ವಿಶ್ವೇಶ್ವರ ನಂದಿ ತಿಳಿಸಿದ್ದಾರೆ.

ಬಲ ಮಂಡಿಯ ನೋವಿನಿಂದ ಬಳಲುತ್ತಿರುವ ದೀಪಾ, ಮುಂಬರುವ ವಿಶ್ವ ಆರ್ಟಿಸ್ಟಿಕ್‌ ಜಿಮ್ನಾಸ್ಟಿಕ್ಸ್‌ ಚಾಂಪಿಯನ್‌ಷಿಪ್‌ಗೆ ಅಲಭ್ಯರಾಗಿದ್ದಾರೆ. ಒಲಿಂಪಿಕ್ಸ್‌ ಅರ್ಹತೆಗೆ ವೇದಿಕೆಯಾಗಿರುವ ಈ ಚಾಂಪಿಯನ್‌ಷಿಪ್‌ ಅಕ್ಟೋಬರ್‌ 4ರಿಂದ 13ರವರೆಗೆ ಜರ್ಮನಿಯ ಸ್ಟಟ್‌ಗರ್ಟ್‌ನಲ್ಲಿ ನಡೆಯಲಿದೆ.

‘ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಲು ಸಾಧ್ಯವಾಗದ್ದರಿಂದ ದೀಪಾ, ತುಂಬಾ ನೊಂದುಕೊಂಡಿದ್ದಾರೆ. ಆದರೆ ಮಾನಸಿಕವಾಗಿ ಅವರು ಎಳ್ಳಷ್ಟೂ ಕುಗ್ಗಿಲ್ಲ. ಗಾಯದಿಂದ ಗುಣಮುಖವಾದ ಬಳಿಕ ಅಂತರರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಮತ್ತೆ ಮಿಂಚುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ದೀಪಾ, ಈಗ ಪುನಶ್ಚೇತನಾ ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ಅವರು ಸಂಪೂರ್ಣವಾಗಿ ಗುಣಮುಖವಾಗಿರುವ ಬಗ್ಗೆ ವೈದ್ಯರು ಮತ್ತು ಫಿಸಿಯೊ ದೃಢೀಕರಣ ಪತ್ರ ನೀಡಿದ ಬಳಿಕವಷ್ಟೇ ತರಬೇತಿ ಶುರುಮಾಡುತ್ತೇನೆ’ ಎಂದಿದ್ದಾರೆ.

‘ಒಲಿಂಪಿಕ್ಸ್‌ಗೂ ಮುನ್ನ ಮೂರು ವಿಶ್ವಕಪ್‌ಗಳು ನಡೆಯಲಿವೆ. ಮೂರರಲ್ಲೂ ಚಿನ್ನ ಅಥವಾ ಬೆಳ್ಳಿಯ ಪದಕ ಗೆದ್ದರೆ ದೀಪಾಗೆ ‘ಟೋಕಿಯೊ ಟಿಕೆಟ್‌’ ಸಿಗಲಿದೆ. ಇದು ತುಸು ಕಷ್ಟದ ಹಾದಿ. ಹಾಗಂತ ದೀಪಾ ಸುಮ್ಮನೆ ಕೂರುವುದಿಲ್ಲ. ಗುರಿ ಸಾಧನೆಗಾಗಿ ಶಕ್ತಿಮೀರಿ ಪ್ರಯತ್ನಿಸಲಿದ್ದಾರೆ’ ಎಂದೂ ನುಡಿದಿದ್ದಾರೆ.

2018ರ ಏಷ್ಯನ್‌ ಕ್ರೀಡಾಕೂಟದ ವೇಳೆ ಗಾಯಗೊಂಡಿದ್ದ ದೀಪಾ, ಬಳಿಕ ಟರ್ಕಿಯಲ್ಲಿ ನಡೆದಿದ್ದ ವಿಶ್ವ ಚಾಲೆಂಜ್‌ ಕಪ್‌ನಲ್ಲಿ ಚಿನ್ನದ ಸಾಧನೆ ಮಾಡಿದ್ದರು. ಈ ವರ್ಷದ ಮಾರ್ಚ್‌ನಲ್ಲಿ ಬಾಕುದಲ್ಲಿ ನಡೆದಿದ್ದ ವಿಶ್ವಕಪ್‌ನ ವಾಲ್ಟ್‌ ವಿಭಾಗದ ಫೈನಲ್‌ ವೇಳೆ ಮತ್ತೆ ಗಾಯಗೊಂಡಿದ್ದರು. ಹೀಗಾಗಿ ದೋಹಾದಲ್ಲಿ ನಿಗದಿಯಾಗಿದ್ದ ವಿಶ್ವಕಪ್‌ನಿಂದ ಹಿಂದೆ ಸರಿಯಬೇಕಾಗಿತ್ತು. 

ಪ್ರತಿಕ್ರಿಯಿಸಿ (+)