ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹದಿಹರೆಯದ ಸಮಸ್ಯೆ ಪಿಸಿಓಡಿ

Last Updated 23 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಇತ್ತೀಚೆಗೆ ಹರೆಯದ ಹೆಣ್ಣುಮಕ್ಕಳನ್ನು ಕಾಡುತ್ತಿರುವ ಸಮಸ್ಯೆಗಳಲ್ಲಿ ಪಿಸಿಓಡಿ ಸಮಸ್ಯೆ (ಪಾಲಿಸಿಸ್ಟಿಕ್ ಒವೇರಿಯನ್ ಡಿಸೀಸ್) ಕೂಡ ಒಂದು. ಶೇ 15ರಿಂದ 25ರಷ್ಟು ಹೆಣ್ಣುಮಕ್ಕಳಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹಲವು ರೋಗಲಕ್ಷಣಗಳುಳ್ಳ ಪಿಸಿಓಡಿ ವೈದ್ಯಲೋಕಕ್ಕೆ ಅಚ್ಚರಿಯೂ ಹೌದು. ಇದು  ಹೆಣ್ತನವನ್ನು ಕಸಿಯುವ ಘೋರ ಕಾಯಿಲೆ. ಇದರಿಂದ ಮಧುಮೇಹ, ರಕ್ತದೊತ್ತಡ, ಹೃದೋಗ, ಎಂಡೋಮೆಟ್ರಿಯಲ್, ಕ್ಯಾನ್ಸರ್ ಸಮಸ್ಯೆಗಳು ಉದ್ಭವಿಸಬಹುದು.

ಪಿಸಿಓಡಿಗೆ ಕಾರಣಗಳೇನು?

ಇದಕ್ಕೆ ನಿರ್ದಿಷ್ಟ ಕಾರಣವನ್ನು ಹೇಳಲು ಸಾಧ್ಯವಾಗದಿದ್ದರೂ ಆನುವಂಶಿಯ, ಕೌಟುಂಬಿಕ ಕಾರಣಗಳಿಂದ ಹಿಡಿದು ಬದಲಾಗುತ್ತಿರುವ ಜೀವನಶೈಲಿ, ಆಹಾರಕ್ರಮ, ಹೆಚ್ಚುತ್ತಿರುವ ಒತ್ತಡ, ಕಡಿಮೆಯಾಗುತ್ತಿರುವ ದೈಹಿಕಶ್ರಮ, ರಾಸಾಯನಿಕಗಳ ಬಳಕೆ, ಧೂಮಪಾನ, ಮದ್ಯಪಾನ – ಇವೆಲ್ಲವೂ ಕಾರಣವಾಗಬಹುದು. ಇನ್ನು ದೇಹದಲ್ಲಿ ಶೇಖರಣೆಯಾಗುವ ಅತಿಯಾದ ಬೊಜ್ಜು ಕೂಡ ಇದಕ್ಕೆ ದಾರಿ ಮಾಡಕೊಡಬಹುದು.

ಪಿಸಿಓಡಿಯಲ್ಲಿ ಆಗುವ ಬದಲಾವಣೆಗಳೇನು?

ಆರೋಗ್ಯವಂತಹ ಮಹಿಳೆಯರಲ್ಲಿ ಋತುಚಕ್ರ ಆರಂಭವಾದಾಗಿನಿಂದ ಋತುಬಂಧವಾಗುವವರೆಗೂ ಪ್ರತಿತಿಂಗಳು ಅಂಡಾಶಯದಲ್ಲಿರುವ ಫಾಲಿಕಲ್(ಕೋಶಿಕೆ)ಗಳಲ್ಲಿ ಒಂದೇ ಒಂದು ಪಕ್ವವಾಗಿ ಅದರಿಂದ ಅಂಡಾಣು ಬಿಡುಗಡೆಯಾಗುತ್ತದೆ.

ಆದರೆ ಹಾರ್ಮೋನುಗಳ ಅಸಮತೋಲನದಿಂದಾಗಿ ಒಮ್ಮೆಲೆ 10-12 ಫಾಲಿಕಲ್‍ಗಳು ಬೆಳೆದು ಒಂದೂ ಸರಿಯಾಗಿ ಪಕ್ವವಾಗದೇ ಅಂಡಾಣು ಬಿಡುಗಡೆಯಾಗುವುದೇ ಇಲ್ಲ ಮತ್ತು ಅವುಗಳು ನೀರುಗುಳ್ಳೆಗಳ ರೂಪದಲ್ಲಿ ಅಂಡಾಶಯಗಳು ಬೆಳೆದು ನಿಲ್ಲುತ್ತದೆ ಇದನ್ನೇ ಪಾಲಿಸಿಸ್ಟಿಕ್ ಒವೇರಿಯನ್ ಡಿಸೀಸ್ ಎಂದು ಕರೆಯುತ್ತೇವೆ. ಮತ್ತು ಇವುಗಳಿಂದ ಹೆಚ್ಚು ಆಂಡ್ರೋಜನ್ ಹಾರ್ಮೋನು (ಪುರುಷರ ಹಾರ್ಮೋನು) ಬಿಡುಗಡೆಯಾಗುತ್ತದೆ.

ಜೊತೆಗೆ ಇಸ್ಟ್ರೋಜನ್ ಹಾರ್ಮೋನು ಸಾಕಷ್ಟಿದ್ದರೂ ಅದಕ್ಕೆ ಬೇಕಾದ ಪ್ರೊಜೆಸ್ಟಿರಾನ್ ಹಾರ್ಮೋನು ಮಟ್ಟ ಕಡಿಮೆಯಾಗುವುದರಿಂದ ಗರ್ಭಕೋಶದ ಒಳಪದರ (ಎಂಡೋಮೆಟ್ರಿಯಮ್) ಹೆಚ್ಚಾಗಿ ಬೆಳೆದು ಅದೇ ಋತುಚಕ್ರದಲ್ಲಿ ಹೆಚ್ಚು ರಕ್ತಸ್ರಾವವಾಗಲು ಕಾರಣವಾಗುತ್ತದೆ.

ಇನ್ಸುಲಿನ್ ನಿರೋಧತೆಯು ಹೆಚ್ಚಿ ಅಧಿಕ ಬೊಜ್ಜುಳ್ಳವರಲ್ಲಿ ಮೊಡವೆ, ಹರ್ಸುಟಿಸಮ್, ಟೈಪ್-2 ಮಧುಮೇಹ, ಇತ್ಯಾದಿಗಳೊಂದಿಗೆ ಸೇರಿಕೊಂಡಾಗ ಇದು ಪಾಲಿಸಿಸ್ಟಿಕ್ ಓವೇರಿಯನ್ ಸಿಂಡ್ರೋಮ್ (ಪಿಸಿಓಎಸ್) ಎನಿಸಿಕೊಳ್ಳುತ್ತದೆ.

ತೊಂದರೆಗಳು?

ಪಿಸಿಓಡಿ ಸಮಸ್ಯೆ ಇರುವವರಲ್ಲಿ ಬೇಗನೆ ಋತುಚಕ್ರ ಆರಂಭವಾಗಬಹುದು.

ಈ ಸಮಸ್ಯೆ ಇರುವ ಶೇ 87ರಷ್ಟು ಹುಡುಗಿಯರಲ್ಲಿ ಕಡಿಮೆ ಮುಟ್ಟು ಕಾಣಿಸಿಕೊಂಡರೆ, ಶೇ 26ರಷ್ಟು ಹುಡುಗಿಯರಲ್ಲಿ 2-3 ತಿಂಗಳಿಗೊಮ್ಮೆ ಮುಟ್ಟು ಕಾಣಿಸಿಕೊಳ್ಳುತ್ತದೆ.

ಒಮ್ಮೆಲೆ ಅತಿಯಾದ ರಕ್ತಸ್ರಾವ ಕಾಣಿಸಿಕೊಳ್ಳಬಹುದು.

ಶೇ 30ರಷ್ಟು ಹುಡುಗಿಯರಲ್ಲಿ ಅತಿಯಾದ ಮೊಡವೆಗಳ ಸಮಸ್ಯೆ ಕಾಣಿಸಿಕೊಳ್ಳಬಹುದು.

ಶೇ 20ರಿಂದ 30 ಮಹಿಳೆಯರಲ್ಲಿ ಬಂಜೆತನ ಕಾಣಿಸಿಕೊಳ್ಳಬಹುದು.

ಹೆಚ್ಚಿರುವ ಆಂಡ್ರೋಜನ್ ಅಥವಾ ಪುರುಷರ ಹಾರ್ಮೋನ್‌ ಕಾರಣದಿಂದಾಗಿ ಹರ್ಸುಟಿಸಮ್ ಅಥವಾ ಮೇಲ್ದುಟಿ, ಗಡ್ಡ, ಸ್ತನದ ಕೆಳಗೆ ಹೊಟ್ಟೆ ಹಾಗೂ ಕಾಲಿನ ಭಾಗದಲ್ಲಿ ಕೂದಲುಗಳು ಹೆಚ್ಚಾಗಿ ಕಾಣಿಸಬಹುದು. ಚರ್ಮ ಒಣಗಿ ದಪ್ಪಗಾಗಿ ಬೂದು ಬಣ್ಣದಾಗಿ ದಪ್ಪನಾದ ವೆಲ್ವೆಟ್ ಅನುಭವದ ಚರ್ಮವು ಕಂಕುಳಲ್ಲಿ, ಮೊಣಕೈ ಹಾಗೂ ಬೆರಳಿನ ಸಂಧಿಗಳಲ್ಲಿ ಜಾಗದಲ್ಲಿ ಕಂಡುಬರುತ್ತದೆ.

ತಲೆಕೂದಲು ಉದುರಲು ಪ್ರಾರಂಭವಾಗಬಹುದು. ಕೆಲವರಿಗೆ ನಿದ್ರಾತೊಂದರೆ (ಸ್ಲೀಪ್ ಆಪ್ನೀಯಾ) ಉಂಟಾಗುತ್ತದೆ. ಮೊಡವೆಯ ಸಮಸ್ಯೆ, ಬೊಜ್ಜು, ಅನಗತ್ಯ ಕೂದಲ, ಮುಟ್ಟಿನ ಏರು-ಪೇರಿನ ಜೊತೆಯಲ್ಲಿ ಖಿನ್ನತೆ ಮತ್ತು ಆತಂಕಗಳೂ ಕಾಣಿಸಿಕೊಳ್ಳುತ್ತವೆ.

ಪತ್ತೆಹಚ್ಚುವುದು ಹೇಗೆ?

ಪಿಸಿಓಡಿ ಸಮಸ್ಯೆಯನ್ನು ಹದಿವಯಸ್ಸಿನಲ್ಲಿ ಪತ್ತೆಹಚ್ಚುವಾಗ ದ್ವಂಧ್ವ ಉಂಟಾಗುವುದು ಸಹಜ.

ರೊಟರ್‍ಡ್ಯಾಮ್‍ಕ್ರೈಟೀರಿಯಾ ಅಂದರೆ ಈ ಕೆಳಗಿನ ಮೂರರಲ್ಲಿ ಎರಡಾದರೂ ಇರಬೇಕು. ಅಂದರೆ ಅಂಡಾಶಯದಲ್ಲಿ 10-12 ಫಾಲಿಕಲ್ ಅಥವಾ ಕೋಶಿಕೆಗಳು ಅಂಡಾಶಯದ ಹೊರಭಾಗದಲ್ಲಿರುವುದು ಅಥವಾ ಅಂಡಾಶಯವು 10ಕ್ಯುಬಿಕ್ ಸೆಂ.ಮೀ. ಗಿಂತ ದೊಡ್ಡದಾಗಿರುವುದು. (ಇದು ಅಲ್ಟ್ರಾಸೌಂಡ್ ಸ್ಕ್ಯಾನಿಂಗ್‍ನಲ್ಲಿ ಪತ್ತೆಯಾಗುತ್ತದೆ)

ಅಂಡಾಣು ಬಿಡುಗಡೆಯಾಗದೇ ಇರುವುದು/ ಕಡಿಮೆ ಬಿಡುಗಡೆಯಾಗುವುದು - ಇದರಿಂದಾಗುವ ಮುಟ್ಟಿನ ದೋಷಗಳು (ಕಡಿಮೆ ಮುಟ್ಟಾಗುವುದು, ಮುಟ್ಟಿನ ಏರುಪೇರು ಇತ್ಯಾದಿ)

ಹೆಚ್ಚಿರುವ ಆಂಡ್ರೋಜನ್‍ನ ಲಕ್ಷಣಗಳು-ಮೊಡವೆ, ಹರ್ಸುಟಿಸಮ್ ಅಥವಾ ಅಸಹಜ ಕೂದಲು.

ಆದರೆ ಹದಿವಯಸ್ಸಿನಲ್ಲಿ ಮೊದಲ ಎರಡು ವರ್ಷದಲ್ಲಿ ಮುಟ್ಟಿನ ಏರುಪೇರುಗಳಾಗುವುದು ಸಹಜ. (ಯಾಕೆಂದರೆ ಅಪಕ್ವವಾದ ಹೈಪಾಥಲಾಮೋ, ಪಿಟ್ಯೂಟರಿ, ಅಂಡಾಶಯದ ಅಕ್ಷೆಯಿಂದ) ಹಾಗಾಗಿ ಆರಂಭದಲ್ಲಿಯೇ ಪಿಸಿಓಡಿ ಪತ್ತೆಹಚ್ಚುವುದು ಕಷ್ಟವಾಗಬಹುದು. ಜೊತೆಗೆ ಹದಿವಯಸ್ಸಿನಲ್ಲಿ ಮೊಡವೆಗಳು ಕೂಡ ಸಹಜವಾಗಿಯೇ ಹೆಚ್ಚಾಗಿರುತ್ತದೆ. ಮತ್ತು ಅಂಡಾಶಯದಲ್ಲೂ ಕೂಡ ಕೆಲವೊಮ್ಮೆ ಸಿಸ್ಟ್‍ಗಳು ಸಹಜವಾಗಿಯೇ ಇರಬಹುದು. ಆದ್ದರಿಂದ ಈ ವಯಸ್ಸಿನಲ್ಲಿ ಬಹಳ ಎಚ್ಚರಿಕೆಯಿಂದ ಪಿಸಿಓಡಿ ಸಮಸ್ಯೆಯನ್ನು ಪತ್ತೆಹಚ್ಚಬೇಕು.

ಥೈರಾಯಿಡ್ ಹಾರ್ಮೋನು ಮಟ್ಟವನ್ನು ಕೂಡ ಪರೀಕ್ಷಿಸಬೇಕು. ಶೇ 30ರಷ್ಟು ಜನರಲ್ಲಿ ಪಿಸಿಓಡಿ ಸಮಸ್ಯೆಯಲ್ಲಿ ಥೈರಾಯಿಡ್ ಸಮಸ್ಯೆಯು ಇರುತ್ತದೆ.

ಚಿಕಿತ್ಸೆ: ಚಿಕಿತ್ಸೆಯ ಮುಖ್ಯಗುರಿ ಮುಟ್ಟಿನ ತೊಂದರೆಯನ್ನು ಸರಿಪಡಿಸಿ ಹೆಚ್ಚುವ ಆಂಡ್ರೋಜನ್ ಮಟ್ಟವನ್ನು ಕಡಿಮೆ ಮಾಡುವುದು. ಮುಖ್ಯವಾಗಿ ಚಯಾಪಚಯ ಕ್ರಿಯೆಯನ್ನು ಸರಿಪಡಿಸಲು ಜೀವನಶೈಲಿ ಸುಧಾರಣೆ ಎಲ್ಲಕ್ಕಿಂತ ಮುಖ್ಯ.

ಜೀವನಶೈಲಿ ಬದಲಾವಣೆ ಅಂದರೆ ಆಹಾರ ಕ್ರಮ ಹಾಗೂ ನಿಯಮಿತವಾದ ಉತ್ತಮ ದೈಹಿಕ ಚಟುವಟಿಕೆ.

ಸಾಧ್ಯವಾದರೆ ಆಹಾರ ತಜ್ಞರನ್ನು ಸಂಪರ್ಕಿಸಿ ನೀವು ಸೇವಿಸಬೇಕಾದ ಆಹಾರಪಟ್ಟಿಯನ್ನು ತಯಾರಿಸಿಕೊಂಡರೆ ಉತ್ತಮ.

ಹೆಚ್ಚು ಸೇವಿಸ ಬೇಕಾದ ಆಹಾರಗಳು:

ಹಸಿರು ಸೊಪ್ಪು ತರಕಾರಿಗಳು ಅದರಲ್ಲೂ ಮುಖ್ಯವಾಗಿ ಕ್ಯಾಬೇಜ್, ಕಾಲೀಪ್ಲವರ್, ಬ್ರಾಕೋಲಿ, ಬಸಲೆ, ಪಾಲಕ್‍ಸೊಪ್ಪು, ಮೂಲಂಗಿ, ಸೌತೆಕಾಯಿ ಹಾಗೂ ಹಸಿರು ಸೊಪ್ಪು–ತರಕಾರಿಗಳನ್ನು ಹೆಚ್ಚಿಗೆ ಉಪಯೋಗಿಸಬೇಕು. ದ್ವಿದಳ ಧಾನ್ಯಗಳು (ಲೆಗ್ಯುಮ್) ಬೀನ್ಸ್, ಕಿಡ್ನಿ ಬೀನ್ಸ್‌ , ಸೋಯಾ ಬೀನ್ಸ್‌ಗಳಲ್ಲಿ ಸಿಗುವ ಇನೊಸಿಟಾಲ್ ಎಂಬ ವಿಟಮಿನ್‍ನಂತಹ ಅಂಶದಿಂದ ಇನ್ಸುಲಿನ್ ಹೆಚ್ಚಳವಾಗಿ, ಪ್ರತಿರೋಧದ ನಿಯಂತ್ರಣವಾಗಿ ಅಂಡ್ರೊಜನ್ ಹೆಚ್ಚಳವನ್ನು ತಡೆಗಟ್ಟುವುದು ಸಾಬಿತಾಗಿದೆ. ಈ ಅಂಶವು ಒಣಹಣ್ಣುಗಳು ಹಾಗೂ ತಾಜಾ ಹಣ್ಣುಗಳಾದ ದ್ರಾಕ್ಷಿ, ಸೇಬು, ಚೆರ್ರಿ, ಸ್ಟ್ರಾಬೇರಿ, ಪ್ಲಮ್, ಅವಾಕೇಡೋ (ಬೆಣ್ಣೆಹಣ್ಣು), ಕಿತ್ತಳೆ, ಕಿವಿಹಣ್ಣುಗಳಲ್ಲಿರುತ್ತವೆ; ತೆಂಗಿನ ಕಾಯಿಯಲ್ಲೂ ಇರುತ್ತದೆ.

ಒಮೇಗಾ–3 ಅಂಶ ಹೆಚ್ಚಿರುವ ವಾಲ್‌ನಟ್‌, ಆಲೀವ್‍ಎಣ್ಣೆ, ಸಾಲ್ಮನ್‍ಮೀನು, ಅಗಸೆಬೀಜ ಮುಂತಾದುವನ್ನು ಸೇವಿಸಿದಾಗ ಇನ್ಸುಲಿನ್‌ನ ಪ್ರತಿರೋಧವು ಕಡಿಮೆಯಾಗುತ್ತದೆ. ಕೆಂಪಕ್ಕಿಯ ಜೊತೆ ಹೆಚ್ಚು ನಾರಿನ ಅಂಶವುಳ್ಳ ಆಹಾರವನ್ನು ಸೇವಿಸಬೇಕು. ಯಾವುದೇ ಕಾರಣಕ್ಕೂ ಒಂದೇ ಒಂದು ದಿನ ಕೂಡ ಉಪಾಹಾರವನ್ನು ನಿಲ್ಲಿಸಬೇಡಿ.

ಅಗತ್ಯವಾದ ವಿಟಮಿನ್‌–ಡಿ ಸಮುದ್ರ ಪದಾರ್ಥಗಳು ಹಾಗೂ ಕೆನೆ ತೆಗೆದ ಹಾಲಿನಿಂದ ಸಿಗುತ್ತದೆ. ಸೂರ್ಯನ ಬೆಳಕಿನಲ್ಲಿ ಕನಿಷ್ಠ 30 ನಿಮಿಷ ಕೆಲಸ ಮಾಡುವುದರಿಂದಲೂ ಅಥವಾ ಮೈಯೊಡ್ಡುವುದರಿಂದಲೂ ಈ ವಿಟಮಿನ್‌ ಸಿಗುತ್ತದೆ.

ಒಂದು ದಿನದಲ್ಲಿ ಕನಿಷ್ಠ 8-10 ಗ್ಲಾಸ್ ನೀರನ್ನು ಕುಡಿಯಬೇಕು. ಕಾಫಿ–ಟೀ ಸೇವನೆಯನ್ನು ಕಡಿಮೆ ಮಾಡಬೇಕು. ಕೃತಕ ಪಾನೀಯ ಸೇವನೆಯನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಬೇಕು.

ಪ್ರತಿ ದಿನವೂ ಒಂದು ಗಂಟೆ ಕಾಲ ಬಿರುಸಿನ ನಡಿಗೆ ಅಥವಾ ಏರೋಬಿಕ್ಸ್, ಸ್ವಿಮಿಂಗ್, ಸೈಕ್ಲಿಂಗ್, ಯೋಗ-ಪ್ರಾಣಾಯಾಮಗಳನ್ನು ತಜ್ಞರಿಂದ ಕಲಿತು ಮಾಡಬೇಕು. ಇಂಥ ವ್ಯಾಯಾಮಗಳನ್ನು ಕನಿಷ್ಠ 6-8 ತಿಂಗಳು ಬಿಡದೆ ಮಾಡಿದಾಗ ಹಾರ್ಮನ್‌ನ ಅಸಮತೋಲನ ಕಡಿಮೆಯಾಗುತ್ತದೆ; ಆಗ ಇನ್ಸುಲಿನ್ ಪ್ರತಿರೋಧ ಕಡಿಮೆಯಾಗಿ ಅಂಡಾಣುವಿನ ಬಿಡುಗಡೆಗೆ ಸಹಾಯವಾಗುತ್ತದೆ. ಜೀವನಶೈಲಿಯ ಸುಧಾರಣೆಯ ಜೊತೆಗೆ ಎರಡನೇ ಹಂತದ ಚಿಕಿತ್ಸೆಯಾಗಿ ವೈದ್ಯಕೀಯ ಔಷಧೋಪಚಾರಗಳನ್ನು ಮಾಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT