ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡುಬ್ಕಿ ಕಿಂಗ್; ರೇಡಿಂಗ್‌ ರಾಜ

Last Updated 25 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಪ್ರೊ ಕಬಡ್ಡಿ ಎಂದಾಕ್ಷಣ ನೆನಪಾಗುವ ಅಪೂರ್ವ ಹೆಸರುಗಳ ಪಟ್ಟಿಯಲ್ಲಿ ಪ್ರದೀಪ್ ನರ್ವಾಲ್ ಸ್ಥಾನ ಗಳಿಸದೇ ಇರಲು ಸಾಧ್ಯವೇ ಇಲ್ಲ. ಪ್ರತಿ ಬಾರಿಯೂ ಅವರು ಲೀಗ್ ಮೇಲೆ ಬೀರಿರುವ ಪ್ರಭಾವ ಅಂಥಾದ್ದು. ಪವನ್ ಶೆರಾವತ್, ಸಿದ್ಧಾರ್ಥ್ ದೇಸಾಯಿ, ರಾಹುಲ್ ಚೌಧರಿ, ದೀಪಕ್ ನಿವಾಸ್ ಹೂಡಾ, ನವೀನ್ ಕುಮಾರ್ ಅವರಂಥ ಘಟಾನುಘಟಿಗಳ ಪ್ರಾಬಲ್ಯದ ನಡುವೆಯೂ ಈ ಕೂಲ್ ಕೂಲ್ ಆಟಗಾರ ತನ್ನ ಛಾಪನ್ನು ಉಳಿಸುತ್ತಲೇ ಮುನ್ನುಗ್ಗುತ್ತಿದ್ದಾರೆ.

ಆಗಸ್ಟ್ ಏಳರಂದು ಪಟ್ನಾದ ಪಾಟಲಿಪುತ್ರ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆದಿದ್ದ ಪಟ್ನಾ ಪೈರೇಟ್ಸ್ ಮತ್ತು ಹರಿಯಾಣ ಸ್ಟೀಲರ್ಸ್ ನಡುವಿನ ಪ್ರೊ ಕಬಡ್ಡಿ ಪಂದ್ಯದ ಆರಂಭಕ್ಕೂ ಮೊದಲು ಸೋಲು-ಗೆಲುವಿನ ಲೆಕ್ಕಾಚಾರ ನಗಣ್ಯವಾಗಿತ್ತು. ಅಲ್ಲಿದ್ದ ಎಲ್ಲರ ಗಮನ ಇದ್ದದ್ದು ‘ಡುಬ್ಕಿ ಕಿಂಗ್’ ಪ್ರದೀಪ್ ನರ್ವಾಲ್ ಮೇಲೆ. ಈ ಪಂದ್ಯದಲ್ಲಿ ಅವರು ಮೈಲುಗಲ್ಲೊಂದನ್ನು ದಾಟುವ ಗುರಿಯೊಂದಿಗೆ ಕಣಕ್ಕೆ ಇಳಿದಿದ್ದರು.

ಪಂದ್ಯದಲ್ಲಿ ಪಟ್ನಾ 26-35ರಲ್ಲಿ ಸೋತಿತು. ಆದರೆ ಇದರಿಂದ ತವರಿನ ಅಭಿಮಾನಿಗಳು ನಿರಾಶರಾಗಲಿಲ್ಲ. ಯಾಕೆಂದರೆ ಅವರು ಯಾವ ಸಂಭ್ರಮಕ್ಕಾಗಿ ಕಾಯುತ್ತಿದ್ದರೋ ಆ ಕ್ಷಣಕ್ಕೆ ಪಂದ್ಯದ 34ನೇ ನಿಮಿಷದಲ್ಲಿ ಅವರು ಸಾಕ್ಷಿಯಾದರು. ಹೌದು, ಪ್ರದೀಪ್ ನರ್ವಾಲ್ 900 ರೇಡ್ ಪಾಯಿಂಟ್ ಗಳ ಒಡೆಯ ಎನಿಸಿಕೊಂಡರು. ಕುಲದೀಪ್ ಸಿಂಗ್ ಅವರನ್ನು ಔಟ್ ಮಾಡಿ ಒಂದು ಪಾಯಿಂಟ್ ಗಳಿಸುವ ಮೂಲಕ ಅವರು ಈ ಸಾಧನೆ ಮಾಡಿದರು. ಪಂದ್ಯದಲ್ಲಿ ಒಟ್ಟು 14 ಪಾಯಿಂಟ್‌ಗಳನ್ನು ಕಲೆ ಹಾಕಿ ‘ಸೂಪರ್’ ರೇಡರ್ ಆಗಿಯೂ ಮೆರೆದರು.

ಅಸಾಧಾರಣ ಸಾಧನೆ ಮಾಡಿಯೂ ಹರಿಯಾಣದ ಈ ಆಟಗಾರ ಹೆಚ್ಚು ಮೆರೆಯಲಿಲ್ಲ. ಎಂದಿನ ಸಹಜ, ಮುಗ್ದ ನಗುವಿನೊಂದಿಗೆ ತಂಡದ ಸಹ ಆಟಗಾರರ ಜೊತೆ ಸಂಭ್ರಮವನ್ನು ‘ಸರಳವಾಗಿ’ ಆಚರಿಸಿಕೊಂಡರು.

ಹರಿಯಾಣದ ಸೋನೆಪತ್ ಜಿಲ್ಲೆಯ ರಿಂಧಾನ ಗ್ರಾಮದಲ್ಲಿ, ಹಿಂದುಳಿದ ಕುಟುಂಬವೊಂದರಲ್ಲಿ ಜನಿಸಿದ ಪ್ರದೀಪ್ ಪ್ರೊ ಕಬಡ್ಡಿಯಲ್ಲಿ ಬಹಳ ವೇಗವಾಗಿ ಖ್ಯಾತಿ ಗಳಿಸಿದವರು. ಆರಂಭದ ಆವೃತ್ತಿಯಲ್ಲಿ ಆಡದಿದ್ದ ಅವರು ಎರಡನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್ ಮೂಲಕ ಪದಾರ್ಪಣೆ ಮಾಡಿದ್ದರು.

ಹೆಸರು ತಂದುಕೊಟ್ಟ ಪೈರೇಟ್ಸ್

ಪ್ರದೀಪ್ ನರ್ವಾಲ್ ಅವರಿಗೆ ಪ್ರೊ ಕಬಡ್ಡಿಯಲ್ಲಿ ಹೆಸರು ತಂದುಕೊಟ್ಟದ್ದು ಪಟ್ನಾ ಪೈರೇಟ್ಸ್ ತಂಡ. ಎರಡನೇ ಆವೃತ್ತಿಯಲ್ಲಿ ಅವರು ಪೈರೇಟ್ಸ್ ಪರ ಕಣಕ್ಕೆ ಇಳಿದಿದ್ದರು. ಈ ತಂಡದಲ್ಲಿ ಅವರು ಸತತ ಸಾಧನೆ ಮಾಡುತ್ತ ಬಂದರು. ಹೀಗಾಗಿ ದಾಖಲೆಗಳು ಒಂದೊಂದಾಗಿ ಅವರ ಖಾತೆಗೆ ಸೇರಿದವು. ಐದನೇ ಆವೃತ್ತಿಯಲ್ಲಿ ಹರಿಯಾಣ ಸ್ಟೀಲರ್ಸ್ ಎದುರಿನ ಪಂದ್ಯದ ಒಂದೇ ರೇಡ್‌ನಲ್ಲಿ ಎಂಟು ಪಾಯಿಂಟ್ ಗಳಿಸಿ ಅವರು ಎದುರಾಳಿ ತಂಡವನ್ನು ಮತ್ತು ಪ್ರೇಕ್ಷಕರನ್ನು ಸ್ಥಬ್ದರಾಗಿಸಿದ್ದರು. ಪಟ್ನಾಗೆ ದಾಖಲೆಯ ಹ್ಯಾಟ್ರಿಕ್ ಜಯ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪ್ರದೀಪ್ ನಂತರ ‘ದಾಖಲೆ ವೀರ’ ಎಂದೇ ಹೆಸರು ಗಳಿಸಿದ್ದರು.

ಗಳಿಕೆಯಲ್ಲೂ ಏರಿಕೆ

ಆರಂಭದ ಆವೃತ್ತಿಗಳಲ್ಲಿ ₹ 20 ಲಕ್ಷ ಪಡೆದುಕೊಳ್ಳುತ್ತಿದ್ದ ಪ್ರದೀಪ್ ನರ್ವಾಲ್ ಹೆಸರು ಗಳಿಸುತ್ತ ಸಾಗಿದಂತೆ ಗಳಿಕೆಯೂ ಹೆಚ್ಚಿತು. ಕಳೆದ ಎರಡು ಆವೃತ್ತಿಗಳಲ್ಲಿ ಅವರ ಗಳಿಕೆ ತಲಾ ₹ 65 ಲಕ್ಷಕ್ಕೆ ಏರಿದೆ. ಪ್ರೊ ಕಬಡ್ಡಿ ಲೀಗ್ ಅವರಿಗೆ ಈವರೆಗೆ ತಂದುಕೊಟ್ಟಿರುವ ಆದಾಯ ₹ 2 ಕೋಟಿಯ ಸಮೀಪವಿದ್ದು ಲೀಗ್‌ನಲ್ಲಿ ಹೆಚ್ಚು ಆದಾಯ ಗಳಿಸಿದವರ ಪಟ್ಟಿಯಲ್ಲಿ 13ನೇ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT