ಕೋಚ್‌ಗಳ ಬರ; ಅಭ್ಯಾಸಕ್ಕೆ ಗರ

ಭಾನುವಾರ, ಜೂಲೈ 21, 2019
25 °C
ರಾಜ್ಯ ಕ್ರೀಡಾ ಪ್ರಾಧಿಕಾರದಲ್ಲಿ ಮೂರು ತಿಂಗಳಿಂದ ಕೋಚ್‌ಗಳಿಲ್ಲ; ತರಬೇತಿಗೆ ಸಮಸ್ಯೆ

ಕೋಚ್‌ಗಳ ಬರ; ಅಭ್ಯಾಸಕ್ಕೆ ಗರ

Published:
Updated:
Prajavani

ಬೆಂಗಳೂರು: ಆಗಸ್ಟ್‌ ತಿಂಗಳಲ್ಲಿ ನಡೆಯ ಲಿರುವ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ಗೆ ಎಲ್ಲ ರಾಜ್ಯಗಳಲ್ಲಿ ಅಭ್ಯಾಸ ಜೋರಾಗಿ ನಡೆಯುತ್ತಿದೆ. ಆದರೆ ರಾಜ್ಯದ ಅಥ್ಲೀಟ್‌ಗಳು ನಿರಾಸೆಯಲ್ಲಿದ್ದಾರೆ. ಕರ್ನಾಟಕ ಕ್ರೀಡಾ ಪ್ರಾಧಿಕಾರದಲ್ಲಿ (ಸ್ಯಾಕ್) ಕೋಚ್‌ಗಳ ಕೊರತೆಯಿಂದಾಗಿ ಮೂರು ತಿಂಗಳಿಂದ ರಾಜ್ಯದಲ್ಲಿ ಕ್ರೀಡಾ ಚಟುವಟಿಕೆಯ ಮೇಲೆ ಕಾರ್ಮೋಡ ಕವಿದಿದೆ.

ಫಿಜಿಯೊಥೆರಪಿಸ್ಟ್‌, ಫಿಟ್‌ನೆಸ್‌ ಟ್ರೇನರ್ಸ್ ಸೇರಿದಂತೆ ಒಟ್ಟು 68 ಮಂದಿಯನ್ನು ಒಂದು ವರ್ಷದ ಅವಧಿಗೆ ಕಳೆದ ಬಾರಿ ನೇಮಕ ಮಾಡಲಾಗಿತ್ತು. ಈ ವರ್ಷದ ಮಾರ್ಚ್ 18ರಂದು ಇವರ ಅವಧಿ ಮುಗಿದಿತ್ತು. ಅದೇ ದಿನ ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡಲಾಗಿತ್ತು. ಅಂದಿನಿಂದ ಹುದ್ದೆಗಳು ಖಾಲಿ ಇವೆ.

ಸೇವೆಯಿಂದ ‘ಬಿಡುಗಡೆ’ಯಾದ ಕೋಚ್‌ಗಳು ತಮ್ಮನ್ನು ಮುಂದು ವರಿಸುವಂತೆ ಅನೇಕ ಬಾರಿ ಸರ್ಕಾರಕ್ಕೆ ಮನವಿ ಮಾಡಿದರು. ಹೊಸ
ನೇಮಕಾತಿಯನ್ನಾದರೂ ಮಾಡಿ ಎಂದು ಗೋಗರೆದರು. ಆದರೆ ಚುನಾವಣೆ ನೀತಿ ಸಂಹಿತೆ ಅಡ್ಡಿಯಾಗುತ್ತದೆ ಎಂದು ಸರ್ಕಾರ ಸಮಯ ಕಳೆಯಿತು. ಚುನಾವಣೆ ಮುಗಿದ ನಂತರವೂ ಸಬೂಬುಗಳನ್ನು ಹೇಳಿ ನೇಮಕಾತಿಯನ್ನು ಮುಂದೂಡಿದೆ.

‘ನಮ್ಮಲ್ಲಿ ಬಹುತೇಕರು ರಾಷ್ಟ್ರೀಯ ಕ್ರೀಡಾ ಸಂಸ್ಥೆ (ಎನ್‌ಐಎಸ್‌)ಯಲ್ಲಿ ತರಬೇತಿ ಪಡೆದವರು. ಉಳಿ ದವರು ರಾಷ್ಟ್ರೀಯ ಕ್ರೀಡಾಕೂ
ಟದಲ್ಲಿ ಭಾಗವಹಿಸಿದ ಪ್ರಮಾಣಪತ್ರ ಹೊಂದಿರುವವರು. ಈ ಹಿಂದೆ, 2002 ಮತ್ತು 1984ರಲ್ಲಿ ಹೀಗೆ ನೇಮಕಗೊಂಡ ಅನೇಕ ಕೋಚ್‌ಗಳನ್ನು ಈಗಲೂ ಮುಂದುವರಿಸಿಕೊಂಡು ಬರಲಾಗಿದೆ. ನಮ್ಮನ್ನೂ ಇದೇ ರೀತಿ ಮುಂದುವರಿಸುತ್ತಾರೆ ಎಂಬ ನಿರೀಕ್ಷೆ ಇತ್ತು. ಆ ಕನಸು ನನಸಾಗಲಿಲ್ಲ. ಹೊಸ ನೇಮಕಾತಿ ಮಾಡುವುದಕ್ಕೂ ಸರ್ಕಾರ ಮುಂದಾಗಿಲ್ಲ’ ಎಂದು ಕೋಚ್ ಒಬ್ಬರು ಅಳಲು ತೋಡಿಕೊಂಡರು.

‘ಸೀಮಿತ ಅವಧಿಯಲ್ಲಿ ಕೋಚ್‌ಗಳು ತಮ್ಮ ಸಾಮರ್ಥ್ಯ ಸಾಬೀತು ಮಾಡಿದ್ದು, ವಿವಿಧ ವಿಭಾಗಗಳ ಸ್ಪರ್ಧೆಗಳಲ್ಲಿ ರಾಜ್ಯಕ್ಕೆ ಪದಕಗಳನ್ನು ಗಳಿಸಿಕೊಟ್ಟಿ
ದ್ದಾರೆ. ಈ ಪೈಕಿ ಸೈಕ್ಲಿಂಗ್‌ನಲ್ಲಿ ಗಮ ನಾರ್ಹ ಸಾಧನೆಯಾಗಿದೆ. ಉತ್ತರ ಕರ್ನಾಟಕದ ಬಾಗಲಕೋಟೆ, ವಿಜಯ ಪುರ ಮತ್ತು ಗದಗದಲ್ಲಿ ಸೈಕ್ಲಿಂಗ್ ಕ್ರೀಡಾನಿಲಯಗಳಿದ್ದು ಅಲ್ಲಿನ ಸೈಕ್ಲಿಸ್ಟ್‌ಗಳು ಒಂದೇ ವರ್ಷದಲ್ಲಿ ಒಟ್ಟು 21 ಪದಕಗಳನ್ನು ರಾಜ್ಯಕ್ಕೆ ತಂದುಕೊಟ್ಟಿದ್ದಾರೆ. ಇದಕ್ಕೆ ಕಾರಣರಾದ ಕೋಚ್‌ಗಳು ಈಗ ಬೀದಿಪಾಲಾಗಿದ್ದಾರೆ’ ಎಂದು ಕ್ರೀಡಾ ಸಂಘಟಕರೊಬ್ಬರು ಹೇಳಿದರು.

‌‘ಸೇವೆಯಿಂದ ಬಿಡುಗಡೆಯಾದ ಕೋಚ್‌ಗಳ ಪೈಕಿ 15 ಮಂದಿ ಅಥ್ಲೆಟಿಕ್ಸ್‌ ವಿಭಾಗದಲ್ಲಿದ್ದವರು. 12 ಮಂದಿ ಫಿಟ್‌ನೆಸ್‌ ಟ್ರೇನರ್‌ಗಳು. ಇವರು ಇಲ್ಲದೆ ರಾಜ್ಯದ ವಿವಿಧ ಕ್ರೀಡಾನಿಲಯಗಳಲ್ಲಿ ಅಭ್ಯಾಸಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಬೇರೆ ಯಾವ ರಾಜ್ಯದಲ್ಲೂ ಕ್ರೀಡೆಯ ಬಗ್ಗೆ ಇಷ್ಟು ಉದಾಸೀನ ಕಂಡುಬರಲು ಸಾಧ್ಯವಿಲ್ಲ’ ಎಂದು ಅನುಭವಿ ಅಥ್ಲೆಟಿಕ್ ಕೋಚ್‌ ಒಬ್ಬರು ನುಡಿದರು.

‘ಇಲಾಖೆ ಅನುಮತಿಗೂ ಅಲೆದಾಡಿದೆವು’

‘ಚುನಾವಣೆ ನೀತಿ ಸಂಹಿತೆ ಮುಕ್ತಾಯಗೊಂಡ ನಂತರ ಮತ್ತೆ ಅಧಿಕಾರಿಗಳನ್ನು ಭೇಟಿಯಾದೆವು. ನಮ್ಮ ಮನವಿಯನ್ನು ಗಂಭೀರವಾಗಿ ಪರಿಗಣಿಸದ ಅವರು ಆರ್ಥಿಕ ಇಲಾಖೆಯ ಅನುಮತಿ ಇದ್ದರೆ ಮಾತ್ರ ಕೋಚ್‌ಗಳನ್ನು ಮುಂದುವರಿಸಲು ಸಾಧ್ಯ. ತುರ್ತಾಗಿ ಆಗಬೇಕು ಎಂದಾದರೆ ನೀವೇ ಹೋಗಿ ಅನುಮತಿ ಪಡೆದುಕೊಂಡು ಬನ್ನಿ ಎಂದು ಹೇಳಿದರು. ಹೀಗಾಗಿ ಸಚಿವರ ಬಳಿಗೆ ಅಲೆದಾಡಿ ಒತ್ತಡ ತಂದು ಆರ್ಥಿಕ ಇಲಾಖೆಯ ಅನುಮತಿ ಪಡೆಯುವಲ್ಲಿ ಯಶಸ್ವಿಯಾಗಿದ್ದೇವೆ’ ಎಂದು ನೇಮಕಾತಿಗಾಗಿ ಹೋರಾಡುತ್ತಿರುವ ಕೋಚ್‌ಗಳು ಹೇಳಿದರು.

ಕೋಚ್‌ ಹುದ್ದೆ ತುಂಬುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಸರ್ಕಾರದಿಂದ ಅನುಮತಿ ಪಡೆಯಲಾಗಿದ್ದು ಕೆಲವೇ ದಿನಗಳಲ್ಲಿ ಈ ಸಂಬಂಧ ಪ್ರಕಟಣೆ ಹೊರ ಬೀಳಲಿದೆ. 82 ಕೋಚ್‌ಗಳು ಒಳಗೊಂಡಂತೆ 100 ಸಿಬ್ಬಂದಿ ನೇಮಕವಾಗಲಿದ್ದಾರೆ. ಈಗಾಗಲೇ ಒಂದು ವರ್ಷ ಸೇವೆ ಸಲ್ಲಿಸಿದವರೂ ಅರ್ಜಿ ಸಲ್ಲಿಸಲು ಅವಕಾಶವಿದೆ.

- ರಮೇಶ್‌ ಎಂ.ಎಸ್‌, ಕ್ರೀಡಾ ಇಲಾಖೆ ಜಂಟಿ ನಿರ್ದೇಶಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !