ಶನಿವಾರ, ಜನವರಿ 28, 2023
23 °C
ಇಂಡಿಯನ್‌ ಸೂಪರ್‌ ಲೀಗ್‌ ಫುಟ್‌ಬಾಲ್‌ ಟೂರ್ನಿ ಇಂದಿನಿಂದ

ಈಸ್ಟ್‌ ಬೆಂಗಾಲ್‌ಗೆ ಕೇರಳ ಬ್ಲಾಸ್ಟರ್ಸ್‌ ಸವಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಚ್ಚಿ: ದೇಶದ ಫುಟ್‌ಬಾಲ್‌ ಪ್ರಿಯರಿಗೆ ರಸದೌತಣ ಉಣಬಡಿಸಲಿರುವ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ 9ನೇ ಆವೃತ್ತಿಯ ಟೂರ್ನಿಗೆ ಶುಕ್ರವಾರ ಚಾಲನೆ ದೊರೆಯಲಿದೆ.

ಕೊಚ್ಚಿಯ ಜವಾಹರಲಾಲ್‌ ನೆಹರು ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಕಳೆದ ಬಾರಿಯ ‘ರನ್ನರ್ಸ್‌ ಅಪ್‌’ ಕೇರಳ ಬ್ಲಾಸ್ಟರ್ಸ್‌ ತಂಡ ಈಸ್ಟ್‌ ಬೆಂಗಾಲ್‌ ಎಫ್‌ಸಿ ತಂಡದ ಸವಾಲು ಎದುರಿಸಲಿದೆ.

ಕೋವಿಡ್‌ ಕಾರಣ ಕಳೆದ ಎರಡು ಋತುವಿನ ಟೂರ್ನಿಗಳು ಕೆಲವೊಂದು ನಿರ್ಬಂಧಗಳ ನಡುವೆಯೇ ಆಯೋಜನೆಯಾಗಿದ್ದವು. ಪ್ರೇಕ್ಷಕರಿಗೆ ಪಂದ್ಯ ನೋಡುವ ಅವಕಾಶ ಇರಲಿಲ್ಲ. ಪಂದ್ಯಗಳ ಸಂಖ್ಯೆಯನ್ನೂ ಕಡಿತಗೊಳಿಸಲಾಗಿತ್ತು.

ಆದರೆ ಈ ಬಾರಿ ಕೋವಿಡ್‌ಗೂ ಮುಂಚೆ ನಡೆಯುತ್ತಿದ್ದ ಮಾದರಿಯಲ್ಲೇ ನಡೆಯಲಿದ್ದು, ಅಭಿಮಾನಿಗಳ ಕುತೂಹಲ ಗರಿಗೆದರಿದೆ. ‘ಹೋಂ –ಅವೇ’ ಮಾದರಿಯಲ್ಲಿ ಪಂದ್ಯಗಳು ಆಯೋಜನೆಯಾಗಿವೆ. 11 ತಂಡಗಳು ಕೂಡ ತವರು ಅಂಗಳ ಮತ್ತು ಎಲ್ಲ ಎದುರಾಳಿಗಳ ಅಂಗಳದಲ್ಲಿ ಪಂದ್ಯಗಳನ್ನು ಆಡಲಿವೆ.

ಲೀಗ್‌ ಹಂತದಲ್ಲಿ ಮೊದಲ ಎರಡು ಸ್ಥಾನಗಳನ್ನು ಪಡೆಯುವ ತಂಡಗಳು ನೇರವಾಗಿ ಸೆಮಿಫೈನಲ್‌ ಪ್ರವೇಶಿಸಲಿವೆ. ಸೆಮಿ ಪ್ರವೇಶಿಸುವ ಇನ್ನೆರಡು ತಂಡಗಳನ್ನು ನಿರ್ಧರಿಸಲು ಪಾಯಿಂಟ್‌ ಪಟ್ಟಿಯಲ್ಲಿ 3 ರಿಂದ 6ರವರೆಗಿನ ಸ್ಥಾನಗಳನ್ನು ಪಡೆಯುವ ತಂಡಗಳ ನಡುವೆ ಪ್ಲೇ ಆಫ್‌ ಆಯೋಜಿಸಲಾಗುತ್ತದೆ.

ಪೈಪೋಟಿ ಸಾಧ್ಯತೆ: ತವರು ಪ್ರೇಕ್ಷಕರ ಬೆಂಬಲದೊಂದಿಗೆ ಆಡಲಿರುವ ಕೇರಳ ಬ್ಲಾಸ್ಟರ್ಸ್‌ಗೆ ಈಸ್ಟ್‌ ಬೆಂಗಾಲ್‌ ಪ್ರಬಲ ಪೈಪೋಟಿ ನೀಡುವ ಸಾಧ್ಯತೆಯಿದೆ. ಈಸ್ಟ್ ಬೆಂಗಾಲ್‌ ತಂಡವು ಭಾರತ ಫುಟ್‌ಬಾಲ್‌ ತಂಡದ ಮಾಜಿ ಕೋಚ್‌ ಸ್ಟೀಫನ್‌ ಕಾನ್‌ಸ್ಟಂಟೈನ್‌ ಅವರ ಮಾರ್ಗದರ್ಶನದಲ್ಲಿ ಆಡಲಿದೆ.

ಬ್ಲಾಸ್ಟರ್ಸ್‌ ತಂಡ ಹೊಸದಾಗಿ ಕೆಲವು ಆಟಗಾರರನ್ನು ಸೇರಿಸಿಕೊಂಡು ತನ್ನ ಬಲ ಹೆಚ್ಚಿಸಿದೆ. ಗಿಯಾನೊ, ಡಿಯಮಂಟಕೊಸ್, ವಿಕ್ಟರ್‌ ಮೊಂಗಿಲ್‌ ಹಾಗೂ ಸ್ಥಳೀಯ ಆಟಗಾರ ಸಹಲ್‌ ಅಬ್ದುಲ್‌ ಸಮದ್‌ ಅವರನ್ನು ನೆಚ್ಚಿಕೊಂಡಿದೆ.

ಬಿಎಫ್‌ಸಿ ನಾಳೆ ಕಣಕ್ಕೆ: ಬೆಂಗಳೂರು ಎಫ್‌ಸಿ ತಂಡ ತನ್ನ ಪ್ರಶಸ್ತಿಯೆಡೆಗಿನ ಅಭಿಯಾನ ಶನಿವಾರ ಆರಂಭಿಸಲಿದೆ. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ನಾರ್ತ್‌ಈಸ್ಟ್‌ ಯುನೈಟೆಡ್‌ ಎಫ್‌ಸಿ ತಂಡವನ್ನು ಎದುರಿಸಲಿದೆ.

ಪಂದ್ಯ ಆರಂಭ: ಸಂಜೆ 7.30

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ ನೆಟ್‌ವರ್ಕ್‌

ಪಾಲ್ಗೊಳ್ಳುವ ತಂಡಗಳು

ಎಟಿಕೆ ಮೋಹನ್ ಬಾಗನ್‌, ಬೆಂಗಳೂರು ಎಫ್‌ಸಿ, ಚೆನ್ನೈಯಿನ್‌ ಎಫ್‌ಸಿ, ಈಸ್ಟ್‌ ಬೆಂಗಾಲ್‌ ಎಫ್‌ಸಿ, ಎಫ್‌ಸಿ ಗೋವಾ, ಹೈದರಾಬಾದ್‌ ಎಫ್‌ಸಿ, ಜೆಮ್ಶೆಡ್‌ಪುರ ಎಫ್‌ಸಿ, ಕೇರಳ ಬ್ಲಾಸ್ಟರ್ಸ್‌ ಎಫ್‌ಸಿ, ಮುಂಬೈ ಸಿಟಿ ಎಫ್‌ಸಿ, ನಾರ್ತ್‌ಈಸ್ಟ್‌ ಯುನೈಟೆಡ್ ಎಫ್‌ಸಿ, ಒಡಿಶಾ ಎಫ್‌ಸಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.