ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಕಾ ವಿರುದ್ಧದ ಟಿ20 ಸರಣಿ ಗೆದ್ದ ಇಂಗ್ಲೆಂಡ್

Last Updated 25 ಜೂನ್ 2021, 15:47 IST
ಅಕ್ಷರ ಗಾತ್ರ

ಕಾರ್ಡಿಫ್‌: ಅಗ್ರ ಕ್ರಮಾಂಕದ ಮೂವರು ಬೇಗನೇ ಮರಳಿದರೂ ಸ್ಯಾಮ್ ಬಿಲಿಂಗ್ಸ್‌ ಮತ್ತು ಲಿಯಾಮ್ ಲಿವಿಂಗ್‌ಸ್ಟನ್ ತಂಡದ ಕೈ ಹಿಡಿದರು. ಇವರಿಬ್ಬರ ದಿಟ್ಟ ಆಟದ ನೆರವಿನಿಂದ ಇಂಗ್ಲೆಂಡ್‌ ತಂಡ ಶ್ರೀಲಂಕಾ ಎದುರಿನ ಎರಡನೇ ಟಿ20 ಪಂದ್ಯದಲ್ಲಿ ಸುಲಭ ಜಯ ಸಾಧಿಸಿತು. ಈ ಮೂಲಕ ಸರಣಿಯನ್ನು ಗೆದ್ದುಕೊಂಡಿತು.

ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ ಪ್ರವಾಸಿ ತಂಡವನ್ನು ಆತಿಥೇಯರು ಐದು ವಿಕೆಟ್‌ಗಳಿಂದ ಮಣಿಸಿದರು. ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ತಂಡ ಎಂಟು ವಿಕೆಟ್‌ಗಳ ಜಯ ಸಾಧಿಸಿತ್ತು.

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಮೊದಲ ಪಂದ್ಯದಂತೆಯೇ ಕುಸಿತ ಕಂಡಿತು. ಏಳು ವಿಕೆಟ್‌ಗಳಿಗೆ 111 ರನ್ ಗಳಿಸಲಷ್ಟೇ ತಂಡಕ್ಕೆ ಸಾಧ್ಯವಾಯಿತು. ಮಳೆ ಕಾಡಿದ ಕಾರಣ ಗುರಿಯನ್ನು 18 ಓವರ್‌ಗಳಲ್ಲಿ 103 ರನ್‌ಗಳಿಗೆ ನಿಗದಿ ಮಾಡಲಾಗಿತ್ತು.

ಏಯಾನ್ ಮಾರ್ಗನ್ ಬಳಗ 36 ರನ್ ಗಳಿಸುವಷ್ಟರಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಸಂದರ್ಭದಲ್ಲಿ ಜೊತೆಗೂಡಿದ ಬಿಲಿಂಗ್ಸ್‌ ಮತ್ತು ಲಿಯಾಮ್ 48 ಎಸೆತಗಳಲ್ಲಿ 54 ರನ್ ಸೇರಿಸಿದರು. ಗೆಲುವಿಗೆ 13 ರನ್ ಬೇಕಾಗಿದ್ದಾಗ ಬಿಲಿಂಗ್ಸ್ ಔಟಾದರು. ಆದರೆ ಸ್ಯಾಮ್ ಕರನ್ ಜೊತೆಗೆ ಲಿವಿಂಗ್‌ಸ್ಟನ್ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಇನ್ನೂ 11 ಎಸೆತಗಳು ಉಳಿದಿರುವಾಗ ತಂಡ ಗೆಲುವಿನ ದಡ ಸೇರಿತು.

ಮಧ್ಯಮ ವೇಗಿ ಮಾರ್ಕ್‌ ವುಡ್ ಮತ್ತು ಸ್ಪಿನ್ನರ್ ಆದಿಲ್ ರಶೀದ್ ಅವರ ಉತ್ತಮ ದಾಳಿಯ ಪರಿಣಾಮ ಇಂಗ್ಲೆಂಡ್ ಎದುರಾಳಿಗಳನ್ನು ನಿಯಂತ್ರಿಸಿತು. ಇದು, ಪೂರ್ಣ 20 ಓವರ್ ಬೌಲಿಂಗ್ ಮಾಡಿದ ‍ಇನಿಂಗ್ಸ್‌ವೊಂದರಲ್ಲಿ ಇಂಗ್ಲೆಂಡ್‌ ಬಿಟ್ಟುಕೊಟ್ಟ ಕನಿಷ್ಠ ಮೊತ್ತವಾಗಿದೆ.

ನಾಯಕ ಕುಶಲ್ ಪೆರೇರ ಮತ್ತು ಮಧ್ಯಮ ಕ್ರಮಾಂಕದ ಕುಶಲ್ ಮೆಂಡಿಸ್ ಅವರನ್ನು ಹೊರತುಪಡಿಸಿದರೆ ಇತರ ಯಾರಿಗೂ ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ಉಳಿಯಲು ಆಗಲಿಲ್ಲ.

ಸಂಕ್ಷಿಪ್ತ ಸ್ಕೋರು: ಶ್ರೀಲಂಕಾ: 20 ಓವರ್‌ಗಳಲ್ಲಿ 7ಕ್ಕೆ 111 (ಕುಶಲ್ ಪೆರೇರ 21, ಕುಶಲ್ ಮೆಂಡಿಸ್ 39, ಇಸುರು ಉಡಾನ ಔಟಾಗದೆ 19; ಸ್ಯಾಮ್ ಕರನ್ 8ಕ್ಕೆ1, ಕ್ರಿಸ್ ಜೋರ್ಡಾನ್ 31ಕ್ಕೆ1, ಮಾರ್ಕ್ ವುಡ್‌ 18ಕ್ಕೆ2, ಆದಿಲ್ ರಶೀದ್ 24ಕ್ಕೆ2); ಇಂಗ್ಲೆಂಡ್‌ (ಪರಿಷ್ಕೃತ ಗುರಿ–18 ಓವರ್‌ಗಳಲ್ಲಿ 103): 16.1 ಓವರ್‌ಗಳಲ್ಲಿ 5ಕ್ಕೆ 108 (ಜೇಸನ್ ರಾಯ್ 17, ಏಯಾನ್ ಮಾರ್ಗನ್ 11, ಸ್ಯಾಮ್ ಬಿಲಿಂಗ್ಸ್‌ 24, ಲಿಯಾಮ್ ಲಿವಿಂಗ್‌ಸ್ಟನ್ ಔಟಾಗದೆ 29, ಸ್ಯಾಮ್ ಕರನ್ ಔಟಾಗದೆ 16; ದುಷ್ಮಂತ ಚಮೀರ 29ಕ್ಕೆ1, ಬಿನೂರ ಫೆರ್ನಾಂಡೊ 17ಕ್ಕೆ1, ಇಸುರು ಉಡಾನ 25ಕ್ಕೆ1, ವನಿಂದು ಹಸರಂಗ 20ಕ್ಕೆ2). ಫಲಿತಾಂಶ: ಇಂಗ್ಲೆಂಡ್‌ಗೆ 5 ವಿಕೆಟ್‌ಗಳ ಜಯ. 3 ಪಂದ್ಯಗಳ ಸರಣಿಯಲ್ಲಿ 2–0 ಮುನ್ನಡೆ.

ಏಕದಿನ ಸರಣಿಗೆ ಬಟ್ಲರ್‌ ಅಲಭ್ಯ

ಲಂಡನ್‌ (ಎಎಫ್‌ಪಿ): ಬಲಗಾಲಿನ ಮೀನಖಂಡದ ನೋವಿನಿಂದ ಬಳಲುತ್ತಿರುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಶನಿವಾರ ನಡೆಯಲಿರುವ ಮೂರನೇ ಏಕದಿನ ಪಂದ್ಯಕ್ಕೆ ಮತ್ತು ಮುಂದಿನ ವಾರ ಆರಂಭವಾಗಲಿರುವ ಮೂರು ಪಂದ್ಯಗಳ ಏಕದಿನ ಸರಣಿಗೆ ಅಲಭ್ಯರಾಗಿದ್ದಾರೆ.

30 ವರ್ಷದ ಬಟ್ಲರ್ ಮೊದಲ ಟಿ20 ಪಂದ್ಯದಲ್ಲಿ ಔಟಾಗದೆ 68 ರನ್ ಗಳಿಸಿ ಇಂಗ್ಲೆಂಡ್‌ಗೆ ಸುಲಭ ಜಯ ತಂದುಕೊಟ್ಟಿದ್ದರು. ಮುಂದಿನ ದಿನ ಅವರನ್ನು ಎಂಆರ್‌ಐ ಸ್ಕ್ಯಾನ್‌ಗೆ ಒಳಪಡಿಸಲಾಗಿತ್ತು. ಅದರಲ್ಲಿ, ಗಾಯ ಆಗಿರುವುದು ಪತ್ತೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT