ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರ್ಮನ್‌ಪ್ರೀತ್‌ ಮೋಡಿ: ಸೆಮಿಫೈನಲ್‌ ಪ್ರವೇಶಿಸಿದ ಪುರುಷರ ತಂಡ

Last Updated 10 ಏಪ್ರಿಲ್ 2018, 20:18 IST
ಅಕ್ಷರ ಗಾತ್ರ

ಗೋಲ್ಡ್‌ ಕೋಸ್ಟ್‌: ಪೆನಾಲ್ಟಿ ಕಾರ್ನರ್‌ ಅವಕಾಶಗಳನ್ನು ಗೋಲಾಗಿ ಪರಿವರ್ತಿಸಿದ ಡ್ರ್ಯಾಗ್‌ ಫ್ಲಿಕ್‌ ಪರಿಣತ ಆಟಗಾರ ಹರ್ಮನ್‌ಪ್ರೀತ್‌ ಸಿಂಗ್, ಭಾರತ ತಂಡ ಸಂಭ್ರಮದ ಹೊಳೆಯಲ್ಲಿ ಮಿಂದೇಳುವಂತೆ ಮಾಡಿದರು.

ಗೋಲ್ಡ್‌ ಕೋಸ್ಟ್‌ ಹಾಕಿ ಕೇಂದ್ರದಲ್ಲಿ ಮಂಗಳವಾರ ನಡೆದ ಪುರುಷರ ‘ಬಿ’ ಗುಂಪಿನ ಪಂದ್ಯದಲ್ಲಿ ಭಾರತ 2–1 ಗೋಲುಗಳಿಂದ ಮಲೇಷ್ಯಾವನ್ನು ಸೋಲಿಸಿತು.

ಈ ಗೆಲುವಿನೊಂದಿಗೆ ಮನ್‌ಪ್ರೀತ್‌ ಸಿಂಗ್ ಪಡೆ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತು. ಈ ಪಂದ್ಯದಲ್ಲಿ ಭಾರತ ಒಟ್ಟು ಒಂಬತ್ತು ಪೆನಾಲ್ಟಿ ಕಾರ್ನರ್‌ ಗಳಿಸಿತ್ತು.

ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಭಾರತ ತಂಡ ಮೂರನೆ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ ಸೃಷ್ಟಿಸಿಕೊಂಡಿತ್ತು.

ಈ ಅವಕಾಶದಲ್ಲಿ ಚೆಂಡನ್ನು ಗುರಿ ಸೇರಿಸಿದ ಹರ್ಮನ್‌ಪ್ರೀತ್‌ ತಂಡಕ್ಕೆ 1–0ರ ಮುನ್ನಡೆ ತಂದುಕೊಟ್ಟರು.

ಆರನೆ ನಿಮಿಷದಲ್ಲಿ ಮಲೇಷ್ಯಾ ತಂಡಕ್ಕೆ ಸಮಬಲದ ಗೋಲು ದಾಖಲಿಸುವ ಅವಕಾಶ ಸಿಕ್ಕಿತ್ತು. ಈ ತಂಡದ ರೆಜಿ ರಹೀಮ್‌ ಬಾರಿಸಿದ ಚೆಂಡನ್ನು ಭಾರತದ ಗೋಲ್‌ಕೀಪರ್‌ ಪಿ.ಆರ್‌.ಶ್ರೀಜೇಶ್‌ ತಡೆದರು.

ಇದರಿಂದ ವಿಶ್ವಾಸ ಕಳೆದುಕೊಳ್ಳದ ಮಲೇಷ್ಯಾ ತಂಡ ಬಳಿಕ ವೇಗದ ಆಟಕ್ಕೆ ಅಣಿಯಾಯಿತು. 16ನೇ ನಿಮಿಷದಲ್ಲಿ ಫೈಜಲ್‌ ಸಾರಿ, ಫೀಲ್ಡ್‌ ಗೋಲು ದಾಖಲಿಸಿ ಮಲೇಷ್ಯಾ ತಂಡದ ಖುಷಿಗೆ ಕಾರಣರಾದರು.

18ನೇ ನಿಮಿಷದಲ್ಲಿ ಭಾರತಕ್ಕೆ ಮುನ್ನಡೆ ಗೋಲು ದಾಖಲಿಸುವ ಅವಕಾಶ ಸಿಕ್ಕಿತ್ತು. ಆದರೆ ವರುಣ್‌ ಕುಮಾರ್‌ ಪೆನಾಲ್ಟಿ ಕಾರ್ನರ್‌ನಲ್ಲಿ ಚೆಂಡನ್ನು ಗುರಿ ಸೇರಿಸಲು ವಿಫಲರಾದರು.

22ನೇ ನಿಮಿಷದಲ್ಲಿ ಮನದೀಪ್ ಸಿಂಗ್‌ ಚೆಂಡನ್ನು ಡ್ರಿಬಲ್‌ ಮಾಡುತ್ತಾ ಎದುರಾಳಿ ಆವರಣ ಪ್ರವೇಶಿಸಿದರು. ಅವರು ಬಾರಿಸಿದ ಚೆಂಡನ್ನು ಮಲೇಷ್ಯಾದ ಗೋಲ್‌ಕೀಪರ್‌ ಹೈರಿ ಅಬ್ದುಲ್‌ ರೆಹಮಾನ್‌ ಅಮೋಘ ರೀತಿಯಲ್ಲಿ ತಡೆದರು. ಹೀಗಾಗಿ ಮುನ್ನಡೆ ಗಳಿಸುವ ಭಾರತದ ಕನಸು ಕೈಗೂಡಲಿಲ್ಲ.

ಎರಡನೆ ಕ್ವಾರ್ಟರ್‌ನಲ್ಲಿ ಮಲೇಷ್ಯಾ ತಂಡ ಪ್ರಾಬಲ್ಯ ಮೆರೆಯಿತು. ಈ ತಂಡ ಗೋಲು ಗಳಿಸುವ ಹಲವು ಅವಕಾಶಗಳನ್ನು ಸೃಷ್ಟಿಸಿಕೊಂಡಿತ್ತು. ಆದರೆ ಭಾರತದ ಗೋಲ್‌ಕೀಪರ್‌ ಶ್ರೀಜೇಶ್‌ ಗೋಡೆಯಂತೆ ನಿಂತು ಎದುರಾಳಿಗಳ ಎಲ್ಲಾ ಪ್ರಯತ್ನಗಳನ್ನು ವಿಫಲಗೊಳಿಸಿದರು.44ನೇ ನಿಮಿಷದಲ್ಲಿ ಹರ್ಮನ್‌ ಪ್ರೀತ್‌ ಮತ್ತೊಮ್ಮೆ ಕೈಚಳಕ ತೋರಿದರು. ಸಹ ಆಟಗಾರ ತಮ್ಮತ್ತ ತಳ್ಳಿದ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿದ ಅವರು  ಅದನ್ನು ಕಣ್ಣೆವೆ ಮುಚ್ಚಿ ತೆರೆಯುವುದರೊಳಗೆ ಗುರಿ ತಲುಪಿಸಿದರು.

58ನೇ  ನಿಮಿಷದಲ್ಲಿ ಹರ್ಮನ್‌ಪ್ರೀತ್‌ ಗೋಲು ದಾಖಲಿಸುವ ಮತ್ತೊಂದು ಅವಕಾಶ ಸೃಷ್ಟಿಸಿಕೊಂಡಿದ್ದರು. ಪೆನಾಲ್ಟಿ ಕಾರ್ನರ್‌ನಲ್ಲಿ ಅವರು ಬಾರಿಸಿದ ಚೆಂಡನ್ನು ಮಲೇಷ್ಯಾದ ರೆಹಮಾನ್‌ ತಡೆದರು. ಹೀಗಾಗಿ ಭಾರತದ ಆಟಗಾರನ ‘ಹ್ಯಾಟ್ರಿಕ್‌’ ಗೋಲು ಗಳಿಕೆಯ ಕನಸು ಕೈಗೂಡಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT