ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ನಮನ: ಪ್ರಯೋಗಶೀಲ ಕ್ರೀಡಾಪಟು ರತ್ನಾಕರ ಪುತ್ರನ್

ಸ್ಮರಣೆ
Last Updated 28 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ನೆಲದ ಆಟ ಕಬಡ್ಡಿಯ ಬಗ್ಗೆ ಬಾಲ್ಯದಲ್ಲೇ ಮೂಡಿದ ಆಸಕ್ತಿ ಮುಂದೊಂದು ದಿನ ಆ ಬಾಲಕನನ್ನು ಹೆಸರಾಂತ ಕ್ರೀಡಾಪಟುವಾಗಿ ಮಾರ್ಪಡಿಸಿತು. ಖ್ಯಾತಿ ಬಂದ ನಂತರ ಆಟಗಾರನಾಗಿ ಮಾತ್ರ ಉಳಿಯದೆ ಹೊಸ ಬಗೆಯ ಕಬಡ್ಡಿಯ ಮತ್ತು ಇತರ ಕ್ರೀಡೆಗಳ ರುಚಿಯನ್ನು ತಮ್ಮೂರಿನ ಜನರಿಗೆ ಪರಿಚಯಿಸಲು ಪ್ರಯತ್ನಿಸಿದರು. ಇದರ ಫಲವಾಗಿ ಬೀಚ್ ಕಬಡ್ಡಿಯಂಥ ಪ್ರಯೋಗಗಳು ಕರಾವಳಿಯಲ್ಲಿ ಹೆಸರು ಗಳಿಸಿದವು.

ಭಾನುವಾರ ನಿಧನರಾದ ಮಂಗಳೂರಿನ ರತ್ನಾಕರ ಪುತ್ರನ್ ಅವರು ಪ್ರಯೋಗಶೀಲ ಕ್ರೀಡಾಪಟುವಾಗಿಯೇ ಗುರುತಿಸಿಕೊಂಡಿದ್ದರು. ಬೊಕ್ಕಪಟ್ಣ ನಿವಾಸಿಯಾಗಿದ್ದ ಅವರು ಶಾಲೆ–ಕಾಲೇಜು ದಿನಗಳಲ್ಲೇ ಕಬಡ್ಡಿಯ ಕಡೆಗೆ ಆಕರ್ಷಿತರಾಗಿದ್ದರು. ಹೀಗಾಗಿ 1980–90ರ ಅವಧಿಯಲ್ಲಿ ಮೈಸೂರು ವಿಶ್ವವಿದ್ಯಾಲಯ, ಕರ್ನಾಟಕ ರಾಜ್ಯ ತಂಡಗಳನ್ನು ಪ್ರತಿನಿಧಿಸಲು ಸಾಧ್ಯವಾಯಿತು.

ರಾಜ್ಯ ಅಮೆಚೂರು ರಾಷ್ಟ್ರೀಯ ಕಬಡ್ಡಿ ಸಂಸ್ಥೆಯ ಉಪಾಧ್ಯಕ್ಷ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕಬಡ್ಡಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಅವರುಹಲವಾರು ಸ್ಥಳೀಯ ಕ್ರೀಡಾ ಸಂಘಟನೆಗಳ ಪದಾಧಿಕಾರಿಯಾಗಿದ್ದರು. ಫೆಡರೇಷನ್ ಕಪ್‌, ರಾಷ್ಟ್ರೀಯ ಸಬ್ ಜೂನಿಯರ್ ಕಬಡ್ಡಿ, ದಕ್ಷಿಣ ವಲಯ ಕಬಡ್ಡಿ, ಅಂತರ ಜಿಲ್ಲಾ ಮಟ್ಟದ ಪುರುಷರ ಹಾಗೂ ಮಹಿಳೆಯರ ಕಬಡ್ಡಿ ಟೂರ್ನಿಗಳನ್ನು ಕರಾವಳಿಯಲ್ಲಿ ಆಯೋಜಿಸಿದವರಲ್ಲಿ ಪ್ರಮುಖರು. ಮಂಗಳೂರು ವಿಶ್ವವಿದ್ಯಾಲಯದ ಕಬಡ್ಡಿ ತರಬೇತುದಾರರಾಗಿದ್ದ ಸಂದರ್ಭದಲ್ಲಿ ತಂಡವು ಅಖಿಲ ಭಾರತ ಮಟ್ಟದ ಟೂರ್ನಿಯಲ್ಲಿ ರನ್ನರ್ ಆಪ್ ಆಗಿತ್ತು. ಎನ್‌ಎಂಪಿಟಿ ತಂಡದ ಕೋಚ್ ಆಗಿದ್ದಾಗ ತಂಡವು ಅಖಿಲ ಭಾರತ ಮೇಜರ್ ಪೋರ್ಟ್ ಟೂರ್ನಿಯಲ್ಲಿ ಚಾಂಪಿಯನ್ ಆಗಿತ್ತು. ಅಖಿಲ ಭಾರತ ಬೀಚ್ ಕಬಡ್ಡಿ ಸಂಸ್ಥೆಯ ಸಂಸ್ಥಾಪಕ ಸದಸ್ಯ ಮತ್ತು ನಂತರ ಸಂಸ್ಥೆಯ ಪದಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ಕಬಡ್ಡಿಯೊಂದಿಗೆ ಇತರ ಕ್ರೀಡೆಗಳಲ್ಲೂ ಅವರು ತೊಡಗಿಸಿಕೊಂಡಿದ್ದರು. ಹ್ಯಾಂಡ್ ಬಾಲ್ ಸಂಸ್ಥೆಯ ಜಿಲ್ಲಾ ಘಟಕದ ಅಧ್ಯಕ್ಷ ಮತ್ತು ರಾಜ್ಯ ಘಟಕದ ಉಪಾಧ್ಯಕ್ಷರಾಗಿದ್ದರು. 2014ರಲ್ಲಿ ಮಂಗಳೂರಿನಲ್ಲಿ ದಕ್ಷಿಣ ವಲಯ ಹ್ಯಾಂಡ್‍ಬಾಲ್ ಚಾಂಪಿಯನ್‍ಷಿಪ್‌ ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕ್ರಿಕೆಟ್‌ ಕ್ರೀಡೆಯನ್ನೂ ಅವರು ಮೆಚ್ಚಿದ್ದರು.

‘ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಬಡ್ಡಿ ತಂಡದ ಆಟಗಾರ್ತಿಯರು ಸೇರಿದಂತೆ ಸ್ಥಳೀಯ ಕ್ರೀಡಾಪಟುಗಳು ರಾಷ್ಟ್ರಮಟ್ಟದ ವಿವಿಧ ಟೂರ್ನಿಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿದವರು ಅವರು. ಆಟಗಾರ ಮಾತ್ರವಲ್ಲದೆ ಉತ್ತಮ ಸಂಘಟಕ ಆಗಿದ್ದುದು ಅವರ ವೈಶಿಷ್ಟ್ಯ’ ಎಂದು ಅಖಿಲ ಭಾರತ ಸ್ಪೋರ್ಟ್ಸ್‌ ಕೌನ್ಸಿಲ್‌ ಸದಸ್ಯ ಹೊನ್ನಪ್ಪ ಗೌಡ ಹಾಗೂ ಕಬಡ್ಡಿ ಪಟು ಜಯಕರ ಶೆಟ್ಟಿ ಸ್ಮರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT