ಸೋಮವಾರ, ಜೂನ್ 14, 2021
26 °C
ಐಒಸಿ ಅಧ್ಯಕ್ಷ ಥಾಮಸ್ ಬಾಕ್ ಭೇಟಿ ಮುಂದೂಡಿಕೆ; ಜನರ ಜೀವ–ಆರೋಗ್ಯಕ್ಕೆ ಆದ್ಯತೆ: ಪ್ರಧಾನಿ

ಕೋವಿಡ್ ಕಾಲದ ಒಲಿಂಪಿಕ್ಸ್: ಖಾಲಿ ಕುರ್ಚಿ, ಕೃತಕ ಚಪ್ಪಾಳೆ!

ಎಎಫ್‌ಪಿ/ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ: ಕೋವಿಡ್ ಕಾಲದಲ್ಲಿ ನಿರ್ಬಂಧಗಳೊಂದಿಗೆ ಒಲಿಂಪಿಕ್ಸ್ ಕೂಟ ನಡೆದರೆ ಹೇಗಿದ್ದೀತು? ಕುರ್ಚಿಗಳೆಲ್ಲ ಖಾಲಿ, ಖಾಲಿ; ಕ್ರೀಡಾಪಟುಗಳನ್ನು ಹುರಿದುಂಬಿಸಲು ಕೃತಕ ಚಪ್ಪಾಳೆಯಿಂದ ಕೂಡಿದ ವಾತಾವರಣ, ಸಂಭ್ರಮವಿಲ್ಲದ ಕ್ರೀಡಾಂಗಣ..

ಒಲಿಂಪಿಕ್ಸ್‌ ಅಂಗವಾಗಿ ಇಲ್ಲಿ ನಡೆಯುತ್ತಿರುವ ಪ್ರಾಯೋಗಿಕ ಸ್ಪರ್ಧೆಗಳ ಪೈಕಿ ಒಂದರ ನಡುವೆ ಭಾನುವಾರ ಕೋವಿಡ್ ಕಾಲದ ಒಲಿಂಪಿಕ್ಸ್‌ನ ಅಣಕು ಪ್ರದರ್ಶನ ನಡೆದಿದ್ದು ಈ ಬಾರಿಯ ಕೂಟ ಹೇಗೆ ಇರಲಿದೆ ಎಂಬುದನ್ನು ಜಪಾನ್ ಕ್ರೀಡಾಪ್ರಿಯರಿಗೆ ತೋರಿಸಿಕೊಡಲಾಗಿದೆ.

68 ಸಾವಿರ ಪ್ರೇಕ್ಷಕರಿಗೆ ಅವಕಾಶ ಇರುವ ಒಲಿಂಪಿಕ್ ಕ್ರೀಡಾಂಗಣದಲ್ಲಿ ನಡೆದ ಟ್ರ್ಯಾಕ್ ಸ್ಪರ್ಧೆಯಲ್ಲಿ ಕ್ರೀಡಾಪಟುಗಳ ಶೂಗಳ ಸದ್ದು ಬಿಟ್ಟರೆ ಬೇರೇನೂ ಇರಲಿಲ್ಲ. ಆದರೆ ಅವರು ಅಂತಿಮ ಗೆರೆಯ ಬಳಿ ತಲುಪಿದಾಗ ಮೊದಲೇ ಮುದ್ರಿತ ಧನಿಯ ಚಪ್ಪಾಳೆ ಮತ್ತು ಜಯಘೋಷ ಕೇಳಿಸಿತು. ಮೋಹಕ ಸಂಗೀತವೂ ಕೇಳಿಬಂತು.

ಪುರುಷರ 100 ಮೀಟರ್ಸ್ ಓಟದಲ್ಲಿ ಮೊದಲಿಗರಾದ ಅಮೆರಿಕದ ಜಸ್ಟಿನ್ ಗ್ಯಾಟ್ಲಿನ್ ‘ಪ್ರೇಕ್ಷಕರಿಲ್ಲದ, ಖಾಲಿ ಅಂಗಣದ ಟ್ರ್ಯಾಕ್‌ನಲ್ಲಿ ಓಡುವಾಗ ವಿಚಿತ್ರ ಅನುಭವವಾಯಿತು. ಇದು ಅಭ್ಯಾಸ ಸಂದರ್ಭದ ವಾತಾವರಣದಂತಿತ್ತು’ ಎಂದರು. 

ಪ್ರಾಯೋಗಿಕ ಸ್ಪರ್ಧೆಗಳ ಪೈಕಿ ಅಥ್ಲೆಟಿಕ್ಸ್‌ಗೆ ಆದ್ಯತೆ ನೀಡಲಾಗಿದೆ. ಇದರಲ್ಲಿ ಒಟ್ಟು 400 ಮಂದಿ ಪಾಲ್ಗೊಂಡಿದ್ದಾರೆ. ಆದರೆ ವಿದೇಶಿಯರು ಒಂಬತ್ತು ಮಂದಿ ಮಾತ್ರ.

ಐಒಸಿ ಅಧ್ಯಕ್ಷರ ಭೇಟಿ ಮುಂದೂಡಿಕೆ

ಈ ನಡುವೆ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಧ್ಯಕ್ಷ ಥಾಮಸ್ ಬಾಕ್ ಅವರ ಜಪಾನ್ ಭೇಟಿಯನ್ನು ಸೋಮವಾರ ಮುಂದೂಡಲಾಗಿದೆ. ಈ ತಿಂಗಳಲ್ಲಿ ಅವರು ಇಲ್ಲಿಗೆ ಬರಬೇಕಾಗಿತ್ತು. ಆದರೆ ಜೂನ್ ತಿಂಗಳಲ್ಲಿ ಬರುವುದಾಗಿ ಅವರು ತಿಳಿಸಿದ್ದಾರೆ. 

ಕೋವಿಡ್ ಕಾಲದಲ್ಲಿ ಒಲಿಂಪಿಕ್ಸ್‌ಗೆ ಆದ್ಯತೆ ನೀಡಲಿಲ್ಲ ಎಂದು ಹೇಳುವ ಮೂಲಕ ಜಪಾನ್ ಪ್ರಧಾನಮಂತ್ರಿ ಯೊಶಿಹಿಡೆ ಸುಗಾ ಸೋಮವಾರ ಆತಂಕ ಹೆಚ್ಚಿಸಿದ್ದಾರೆ.

‘ಜಪಾನ್ ಜನತೆಯ ಜೀವ ಮತ್ತು ಆರೋಗ್ಯವೇ ಮುಖ್ಯ. ಒಲಿಂಪಿಕ್ಸ್‌ ನಮಗೆ ಅದಕ್ಕಿಂತಲೂ ಹೆಚ್ಚು ಮುಖ್ಯವಲ್ಲ’ ಎಂದು ಅವರು ಹೇಳಿದ್ದಾರೆ.

ಒಲಿಂಪಿಕ್ಸ್ ರದ್ದತಿಗೆ ಒಲವು

ಒಲಿಂಪಿಕ್ಸ್ ನಡೆಸಬೇಕೇ ಬೇಡವೇ ಎಂಬುದಕ್ಕೆ ಸಂಬಂಧಿಸಿ ಮಾಧ್ಯಮ ಸಂಸ್ಥೆಯೊಂದು ನಡೆಸಿರುವ ಸಮೀಕ್ಷೆಯಲ್ಲಿ 60 ಶೇಕಡಾ ಮಂದಿ ಕೂಟವನ್ನು ರದ್ದುಗೊಳಿಸಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಒಲಿಂಪಿಕ್ಸ್ ಆರಂಭವಾಗಲು ಎರಡೂವರೆ ತಿಂಗಳು ಬಾಕಿ ಇರುವಾಗ ಜನರಿಂದ ಈ ಅಭಿಪ್ರಾಯ ವ್ಯಕ್ತವಾಗಿದೆ.

ಯೊಮಿಯುರಿ ಶಿಂಬನ್ ಪತ್ರಿಕೆ ಈ ತಿಂಗಳ ಏಳರಿಂದ ಒಂಬತ್ತರ ವರೆಗೆ ಸಮೀಕ್ಷೆ ನಡೆಸಿತ್ತು. ಕೂಟ ನಡೆಸಬೇಕು ಎಂದು ಬಯಸಿದವರಲ್ಲಿ 23 ಶೇಕಡಾ ಮಂದಿ ಪ್ರೇಕ್ಷಕರಿಗೆ ಅನುಮತಿ ನೀಡಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಟಿಬಿಎಸ್ ನ್ಯೂಸ್‌ನವರು ನಡೆಸಿದ ಸಮೀಕ್ಷೆಯಲ್ಲಿ 65 ಶೇಕಡಾ ಮಂದಿ ಕೂಟವನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿದ್ದಾರೆ. 28 ಶೇಕಡಾ ಮಂದಿ ಸ್ವಲ್ಪ ಕಾಲ ಮುಂದೂಡಬೇಕು ಎಂದು ಬಯಸಿದ್ದಾರೆ. ಏಪ್ರಿಲ್‌ನಲ್ಲಿ ಕ್ಯೊಡೊ ನ್ಯೂಸ್‌ನವರು ನಡೆಸಿದ ಸಮೀಕ್ಷೆಯಲ್ಲಿ ಒಲಿಂಪಿಕ್ಸ್ ರದ್ದು ಮಾಡಬೇಕು ಎಂದು 70 ಶೇಕಡಾ ಮಂದಿ ಬಯಸಿದ್ದರು.

ಕಳೆದ ವರ್ಷ ನಡೆಯಬೇಕಾಗಿದ್ದ ಒಲಿಂಪಿಕ್ಸ್‌ ಕೂಟವನ್ನು ಈ ವರ್ಷಕ್ಕೆ ಮುಂದೂಡಲಾಗಿದೆ. ಜುಲೈ 23ರಂದು ಉದ್ಘಾಟನೆಯಾಗಲಿರುವ ಕೂಟಕ್ಕೆ ವಿದೇಶಿ ಪ್ರೇಕ್ಷಕರ ಮೇಲೆ ಈಗಾಗಲೇ ನಿರ್ಬಂಧ ಹೇರಲಾಗಿದೆ. ಸ್ಥಳೀಯ ಪ್ರೇಕ್ಷಕರ ವಿಷಯದಲ್ಲಿ ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು