ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲೆಂಡ್ ಕ್ರೀಡಾಂಗಣಗಳಲ್ಲಿ ಮುಂದಿನ ವಾರ ಪ್ರೇಕ್ಷಕರ ಪ್ರವೇಶಕ್ಕೆ ಅವಕಾಶ

Last Updated 17 ಜುಲೈ 2020, 14:32 IST
ಅಕ್ಷರ ಗಾತ್ರ

ಲಂಡನ್: ನಾಲ್ಕು ತಿಂಗಳ ನಿರ್ಬಂಧದ ನಂತರ ಇಂಗ್ಲೆಂಡ್‌ನ ಕ್ರೀಡಾ ಪ್ರಿಯರಿಗೆ ಸಂತಸದ ಸುದ್ದಿ. ಕೆಲವು ಕ್ರೀಡೆಗಳ ವೀಕ್ಷಣೆಗೆ ಮುಂದಿನ ವಾರದಿಂದ ಪ್ರೇಕ್ಷಕರನ್ನು ಅಂಗಣದ ಒಳಗೆ ಬಿಡಲು ಸರ್ಕಾರ ನಿರ್ಧರಿಸಿದೆ.

ಮುಚ್ಚಿರುವ ಕ್ರೀಡಾಂಗಣಳನ್ನು ಅಕ್ಟೋಬರ್‌ನಲ್ಲಿ ತೆರೆಯುವ ಯೋಜನೆ ಹಾಕಿಕೊಳ್ಳಲಾಗಿದೆ. ಇದರ ಅಂಗವಾಗಿ ವೈರಾಣು ಸೋಂಕು ನಿಯಂತ್ರಣಕ್ಕಾಗಿ ಕೈಗೊಂಡಿರುವ ಕ್ರಮಗಳ ಪರಿಶೀಲನೆ ನಡೆದಿದೆ. ನಿರ್ದಿಷ್ಟ ಕ್ರೀಡೆಗಳ ವೀಕ್ಷಣೆಗೆ ಅನುವು ನೀಡಬಹುದು ಎಂದು ಪರಿಶಿಲನೆಯ ನಂತರ ನಿರ್ಧರಿಸಲಾಗಿದೆ.

ಇದೇ ತಿಂಗಳ 26 ಮತ್ತು 27ರಂದು ನಡೆಯಲಿರುವ ದೇಶಿ ಕ್ರಿಕೆಟ್ ಟೂರ್ನಿಗೆ ಪ್ರೇಕ್ಷಕರನ್ನು ಕ್ರೀಡಾಂಗಣದ ಒಳಗೆ ಬಿಡಲಾಗುವುದು. ಕೊರೊನಾ ಹಾವಳಿಯ ನಂತರ ಪ್ರೇಕ್ಷಕರ ಉಪಸ್ಥಿತಿಯಲ್ಲಿ ನಡೆಯಲಿರುವ ಮೊದಲ ಟೂರ್ನಿ ಇದಾಗಲಿದೆ.

ಈ ತಿಂಗಳ 31ರಂದು ಶೆಫೀಲ್ಡ್‌ನಲ್ಲಿ ನಡೆಯಲಿರುವ ವಿಶ್ವ ಸ್ನೂಕರ್ ಚಾಂಪಿಯನ್‌ಷಿಪ್‌ನ ಪಂದ್ಯಗಳ ವೀಕ್ಷಣೆಗೂ ಪ್ರೇಕ್ಷಕರಿಗೆ ಅವಕಾಶ ಸಿಗಲಿದೆ. ಆಗಸ್ಟ್ ಒಂದರಂದು ನಡೆಯುವ ಗ್ಲೋರಿಯಸ್ ಗುಡ್‌ವುಡ್ ಕುದುರೆ ರೇಸ್‌ ಸಂದರ್ಭದಲ್ಲೂ ಪ್ರೇಕ್ಷಕರು ಇರುತ್ತಾರೆ. ಇದೆಲ್ಲವೂ ಪ್ರೇಕ್ಷಕರನ್ನು ಕ್ರೀಡಾಂಗಣದೊಳಗೆ ಬಿಡುವ ಸರ್ಕಾರದ ಯೋಜನೆಯ ಮೊದಲ ಹಂತ.

'ಈ ತಿಂಗಳಲ್ಲಿ ಮತ್ತು ಮುಂದಿನ ತಿಂಗಳಲ್ಲಿ ನಡೆಯಲಿರುವ ಪ್ರಯೋಗಗಳ ಫಲಿತಾಂಶದ ಆಧಾರದಲ್ಲಿ ಅಕ್ಟೋಬರ್‌ನಲ್ಲಿ ಪ್ರೇಕ್ಷಕರನ್ನು ಒಳಗೆ ಬಿಡಬಹುದೇ ಬೇಡವೇ ಎಂಬುದನ್ನು ನಿರ್ಧರಿಸಲಾಗುವುದು‘ ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಶುಕ್ರವಾರ ತಿಳಿಸಿದರು.

'ಪ್ರೇಕ್ಷಕರನ್ನು ಒಳಗೆ ಬಿಟ್ಟರೂ ನಿರ್ಬಂಧಗಳು ಮುಂದುವರಿಯಲಿವೆ. ನಿರ್ದಿಷ್ಟ ಸಂಖ್ಯೆಯ ಜನರಿಗೆ ಮಾತ್ರ ಒಳಗೆ ಹೋಗಲು ಅವಕಾಶವಿರುತ್ತದೆ. ಪ್ರವೇಶಕ್ಕೆ ಸಮಯವನ್ನು ನಿಗದಿ ಮಾಡಲಾಗುವುದು. ಅಂತರ ಕಾಯ್ದುಕೊಳ್ಳುವುದು, ಪ್ರವೇಶಕ್ಕೆ ಮತ್ತು ಹೊರಹೋಗುವುದಕ್ಕೆ ಪ್ರತ್ಯೇಕ ಬಾಗಿಲುಗಳನ್ನು ಬಳಸುವುದು ಇತ್ಯಾದಿ ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ಅಂತರ ಕಾಯ್ದುಕೊಳ್ಳಲು ಸಾಧ್ಯವಿಲ್ಲದ ಪ್ರದೇಶಗಳಲ್ಲಿ ಅಡ್ಡಗೋಡೆ ಅಥವಾ ಪರದೆಗಳನ್ನು ಬಳಸಲು ನಿರ್ಧರಿಸಲಾಗಿದೆ. ಆಹಾರ ಪದಾರ್ಥ ಮಾರಾಟ, ಬೆಟ್ಟಿಂಗ್ ಮುಂತಾದ ಸ್ಥಳಗಳಲ್ಲಿ ಇಂಥ ಕ್ರಮಗಳು ಅಗತ್ಯ‘ ಎಂದು ಕ್ರೀಡಾ ಸಚಿವ ನಿಗೆಲ್ ಹಡಲ್‌ಸ್ಟನ್ ತಿಳಿಸಿದ್ದಾರೆ.

'ಕ್ರೀಡಾಂಗಣದ ಸಾಮರ್ಥ್ಯವೆಷ್ಟಿದೆಯೋ ಅಷ್ಟೂ ಪ್ರೇಕ್ಷಕರನ್ನು ಒಳಬಿಡಲು ಇನ್ನೂ ಕೆಲವು ತಿಂಗಳು ಕಾಯಬೇಕಾದೀತು. ಪ್ರೀಮಿಯರ್ ಲೀಗ್‌ನ ಈ ಋತುವಿನ ಉಳಿದ ಪಂದ್ಯಗಳು ಕೂಡ ಪ್ರೇಕ್ಷಕರಿಲ್ಲದೇ ಮುಂದುವರಿಯಲಿವೆ. ಈ ವಾರಾಂತ್ಯದಲ್ಲಿ ನಡೆಯಲಿರುವ ಎಫ್‌ಎ ಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯಗಳು 90 ಸಾವಿರ ಆಸನಗಳ ವೆಂಬ್ಲಿ ಕ್ರೀಡಾಂಗಣದಲ್ಲಿ ಪ್ರೇಕ್ಷಕರಿಲ್ಲದೇ ನಡೆಯಲಿವೆ. ತಿಂಗಳುಗಳ ಕಾಲ ಕ್ರೀಡಾಂಗಣಕ್ಕೆ ಹೋಗಲು ಆಗದ ಪ್ರೇಕ್ಷಕರು ತಮ್ಮ ನೆಚ್ಚಿನ ತಂಡಗಳನ್ನು ಬೆಂಬಲಿಸಲಾಗದ್ದಕ್ಕೆ ಬೇಸರಪಟ್ಟುಕೊಂಡಿದ್ದಾರೆ. ಇನ್ನೇನು ಸ್ವಲ್ಪ ಸಮಯದಲ್ಲಿ ಎಲ್ಲವೂ ಸರಿಹೋಗಲಿದೆ‘ ಎಂದು ಹಡಲ್‌ಸ್ಟನ್ ಭರವಸೆ ನೀಡಿದ್ದಾರೆ.

ಇಂಗ್ಲೆಂಡ್‌ನಲ್ಲಿ ಸದ್ಯ ನಡೆಯುತ್ತಿರುವ ವೆಸ್ಟ್ ಇಂಡೀಸ್ ಎದುರಿನ ಟೆಸ್ಟ್ ಕ್ರಿಕೆಟ್ ಸರಣಿಗೂ ಪ್ರೇಕ್ಷಕರನ್ನು ಒಳಬಿಡಲಾಗುತ್ತಿಲ್ಲ. ಮುಂದಿನ ತಿಂಗಳಲ್ಲಿ ನಡೆಯಲಿರುವ ಪಾಕಿಸ್ತಾನ ಎದುರಿನ ಟೆಸ್ಟ್ ಸರಣಿಯೂ ಪ್ರೇಕ್ಷಕರಿಲ್ಲದೇ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT