ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಈ ಬಾರಿ ಪಕ್ಷಾಧಾರಿತ ಚುನಾವಣೆ

ಚುನಾವಣಾಪೂರ್ವ ಸಮೀಕ್ಷೆಗಳೆಲ್ಲ ತಲೆಕೆಳಗೆ: ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜಿ.ನಾಯ್ಕ ವಿಶ್ವಾಸ
Last Updated 25 ಏಪ್ರಿಲ್ 2018, 9:47 IST
ಅಕ್ಷರ ಗಾತ್ರ

ಕಾರವಾರ: ‘ಈ ಬಾರಿ ರಾಜ್ಯದಲ್ಲಿ ಬಹುಮತ ಪಡೆದು ಸರ್ಕಾರ ರಚನೆ ಮಾಡೇ ಮಾಡುತ್ತೇವೆ. ಇದರಲ್ಲಿ ಅನುಮಾನವೇ ಇಲ್ಲ. ಈಗಿನ ಸಮೀಕ್ಷೆಗಳೆಲ್ಲ ತಲೆಕೆಳಗಾಗಲಿವೆ’ ಎನ್ನುವುದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜಿ.ನಾಯ್ಕ ಅವರ ದೃಢ ವಿಶ್ವಾಸ. ಹಾಗಿದ್ದರೆ ಪಕ್ಷವು ಚುನಾವಣೆಗಾಗಿ ಏನೇನು ಸಿದ್ಧತೆ ಮಾಡಿಕೊಂಡಿದೆ ಎಂಬ ಬಗ್ಗೆ ‘ಪ್ರಜಾವಾಣಿ’ ಜತೆ ಮಾತನಾಡಿದರು.

ಜಿಲ್ಲೆಯ ಮಟ್ಟಿಗೆ ಹೇಳುವುದಾದರೆ ಈ ಬಾರಿ ಚುನಾವಣೆ ಯಾವ ಆಧಾರದಲ್ಲಿ ನಡೆಯುತ್ತಿದೆ?

ಈ ಬಾರಿ ಅಭ್ಯರ್ಥಿಗಳ ವ್ಯಕ್ತಿತ್ವ ಒಂದು ಅಂಶವಾದರೂ ಪಕ್ಷಾಧಾರಿತವಾಗಿ ಚುನಾವಣೆ ನಡೆಯುತ್ತಿರುವುದು ಸ್ಪಷ್ಟ. ಬಿಜೆಪಿಯ ತತ್ವ ಸಿದ್ಧಾಂತ, ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆ ಕೂಡ ಮುಖ್ಯ ವಿಚಾರಗಳಲ್ಲಿ ಒಂದಾಗುತ್ತದೆ. ಆದರೆ, ಪಕ್ಷದ ಗೆಲುವೇ ತಮ್ಮ ಗೆಲುವು ಎಂದೇ ಅಭ್ಯರ್ಥಿಗಳು ಭಾವಿಸಿದ್ದಾರೆ.

ಬಿಜೆಪಿಗೆ ಚುನಾವಣಾ ವಿಚಾರ ಯಾವುದು?

ನರೇಂದ್ರ ಮೋದಿ ಅವರ ನಾಯಕತ್ವ, ಅವರು ಮಾಡುತ್ತಿರುವ ಅಭಿವೃದ್ಧಿ ಕೆಲಸಗಳು, ಹಿಂದೆ ರಾಜ್ಯದಲ್ಲಿ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದ ಗೌಡ ಹಾಗೂ ಜಗದೀಶ್ ಶೆಟ್ಟರ್ ಅವರ ಅವಧಿಯಲ್ಲಿ ಜಾರಿಯಾದ ಯೋಜನೆಗಳೇ ನಮ್ಮ ಪ್ರಚಾರ ವಿಚಾರಗಳು. ನಮ್ಮ ಜಿಲ್ಲೆಯಲ್ಲಿ ಈ ಹಿಂದೆ ಆರರಲ್ಲಿ ಐದು ಕ್ಷೇತ್ರಗಳನ್ನು ಗೆದ್ದಿದ್ದೆವು. ಹಳಿಯಾಳದಲ್ಲಿ ಕೂಡ ಬಿಜೆಪಿಯೇ ಅಧಿಕಾರ ಪಡೆದಿತ್ತು. ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಅಭಿವೃದ್ಧಿ ಕಾಮಗಾರಿಗಳನ್ನೇ ಜನರ ಮುಂದಿಡುತ್ತೇವೆ.

‘ನರೇಂದ್ರ ಮೋದಿ ಅಲೆ’ ಇನ್ನೂ ಇದೆಯಾ?

ಖಂಡಿತಾ ಇದೆ. ಪ್ರಧಾನಿಯವರು ರಾಜ್ಯದ ವಿವಿಧೆಡೆ ರ‍್ಯಾಲಿಗಳಲ್ಲಿ ಭಾಗವಹಿಸಲಿದ್ದಾರೆ. ಅವರು ಆಗಮಿಸಿದ ಬಳಿಕ ಮತ್ತಷ್ಟು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವು ಸಾಧ್ಯವಾಗಲಿದೆ. ಇದಕ್ಕೆ ಉತ್ತರ ಪ್ರದೇಶದ ಚುನಾವಣೆಯೇ ಸಾಕ್ಷಿ. ಅಲ್ಲಿ ಬಿಜೆಪಿ ಸಂಪೂರ್ಣ ಬಹುಮತ ಪಡೆಯುತ್ತದೆ ಎಂದು ಯಾವ ಸಮೀಕ್ಷೆಗಳೂ ಹೇಳಿರಲಿಲ್ಲ. ಆದರೆ, ಫಲಿತಾಂಶ ಈಗ ಎಲ್ಲರಿಗೂ ತಿಳಿದಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಅನ್ನು ಮೂಲೆಗೆ ತಳ್ಳುವ ಮಟ್ಟದಲ್ಲಿ ಬಿಜೆಪಿ ಈಗಾಗಲೇ ಬೆಳೆದಿದೆ. ಗೆಲುವ ಖಂಡಿತ ನಮ್ಮದಾಗಲಿದೆ.

ಬೇರೆ ಪಕ್ಷಗಳಿಂದ ಕರೆದುಕೊಂಡು ಬಂದವರಿಗೆ ಟಿಕೆಟ್ ಭರವಸೆ ನೀಡಿ ನಿರಾಸೆ ಮೂಡಿಸಿದಿರಲ್ಲ?

ನಮ್ಮ ಪಕ್ಷಕ್ಕೆ ಬೇರೆ ಪಕ್ಷಗಳಿಂದ ಬಂದವರನ್ನು ಪ್ರತ್ಯೇಕವಾಗಿ ನೋಡಿಲ್ಲ. ಎಲ್ಲರ ಜತೆಯಾಗಿ ಸಾಗುತ್ತಿದ್ದೇವೆ. ಅಲ್ಲದೇ ಯಾರಿಗೂ ಟಿಕೆಟ್ ನೀಡುತ್ತೇವೆ ಎಂದು ಭರವಸೆ ನೀಡಿರಲಿಲ್ಲ. ಪಕ್ಷಕ್ಕಾಗಿ ಕೆಲಸ ಮಾಡಿ ಎಂದು ಹೇಳಿದ್ದೆವು.

ಅಲ್ಲಲ್ಲಿ ಇರುವ ಅತೃಪ್ತಿ ಶಮನ ಹೇಗೆ?

ಟಿಕೆಟ್ ನಿರೀಕ್ಷೆ ಮಾಡಿದ್ದವರಿಗೆ ಸಿಗದಿದ್ದಾಗ ಅಸಮಾಧಾನ ವ್ಯಕ್ತವಾಗುವುದು ಸಹಜ. ಆದರೆ, ಪಕ್ಷದ ಆಂತರಿಕ ಸಮೀಕ್ಷೆ ನಡೆಸಿದಾಗ ಹೆಚ್ಚು ಗಮನ ಸೆಳೆದ ಆಕಾಂಕ್ಷಿಗೆ ಟಿಕೆಟ್ ನೀಡಲಾಗುತ್ತದೆ. ಈ ಅತೃಪ್ತಿ ಕೆಲವು ದಿನಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಇದರಿಂದ ಪಕ್ಷದ ವರ್ಚಸ್ಸಿನ ಮೇಲೆ, ಗಳಿಸುವ ಮತಗಳ ಮೇಲೆ ಪರಿಣಾಮವಾಗುವುದಿಲ್ಲ. ಟಿಕೆಟ್ ಘೋಷಣೆಯಾದ ಆರಂಭದಲ್ಲಿ ಕಾರವಾರ, ಭಟ್ಕಳ ಕ್ಷೇತ್ರಗಳಲ್ಲಿ ಇದ್ದ ಭಿನ್ನಾಭಿಪ್ರಾಯಗಳು ಈಗಿಲ್ಲ. ಶಿರಸಿ, ಯಲ್ಲಾಪುರದಲ್ಲೂ ಎಲ್ಲರೂ ಜತೆಯಾಗಿದ್ದಾರೆ. ಯಲ್ಲಾಪುರ, ಕುಮಟಾ ಕ್ಷೇತ್ರದಲ್ಲೂ ಸರಿ ಹೋಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT