ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಗೂಂಡಾಗಿರಿ ಬಗ್ಗೆ ರಾಹುಲ್‌ ಮಾತನಾಡಲಿ: ಶೋಭಾ

Last Updated 24 ಫೆಬ್ರುವರಿ 2018, 20:32 IST
ಅಕ್ಷರ ಗಾತ್ರ

ಬೆಂಗಳೂರು: ಜನಾಶೀರ್ವಾದ ಯಾತ್ರೆ ನಡೆಸುತ್ತಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ಶಾಸಕ ಹ್ಯಾರಿಸ್ ಪುತ್ರ ಮೊಹಮದ್ ನಲಪಾಡ್ ಮತ್ತು ಕಾಂಗ್ರೆಸ್‌ ಕಾರ್ಯಕರ್ತರ ಗೂಂಡಾಗಿರಿ ಬಗ್ಗೆ ಮಾತನಾಡಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದರು.

‘ಅಮಾಯಕ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿರುವ ಸರ್ಕಾರ, ಪೊಲೀಸರಿಗೆ ಧಮಕಿ ಹಾಕಿದ ಶಾಸಕ ಹ್ಯಾರಿಸ್ ರಾಜೀನಾಮೆಯನ್ನು ಏಕೆ ಪಡೆದಿಲ್ಲ. ಗೃಹ ಸಚಿವ ರಾಮಲಿಂಗಾ ರೆಡ್ಡಿ ಪ್ರಕರಣ ಕುರಿತು ಪೊಲೀಸ್ ಕಮಿಷನರ್ ಜೊತೆ ಸಭೆ ನಡೆಸುವಾಗ ಹ್ಯಾರಿಸ್‌ ಅವರನ್ನೂ ಪಕ್ಕದಲ್ಲೆ ಕೂರಿಸಿಕೊಳ್ಳುತ್ತಾರೆ ಎಂದರೆ ಏನರ್ಥ’ ಎಂದು ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಪ್ರಶ್ನಿಸಿದರು.

ಕಾಂಗ್ರೆಸ್‌ನ ಕೆ.ಆರ್.ಪುರ ಬ್ಲಾಕ್‌ನ ಮಾಜಿ ಅಧ್ಯಕ್ಷ ನಾರಾಯಣಸ್ವಾಮಿ ಬಿಬಿಎಂಪಿ ಕಚೇರಿಗೆ ನುಗ್ಗಿ ದಾಂದಲೆ ಮಾಡಿದ್ದಾರೆ. ದಾಸರಹಳ್ಳಿ ರಸ್ತೆಯಲ್ಲಿ ಬಿಜೆಪಿ ಕಾರ್ಯಕರ್ತನನ್ನು ಅಟ್ಟಾಡಿಸಿಕೊಂಡು ಹಲ್ಲೆ ಮಾಡಲಾಗಿದೆ. ಆಡಳಿತ ಪಕ್ಷದ ಶಾಸಕರ ಬೆಂಬಲಿಗರ ಉಪಟಳದಿಂದ ಜನ ರೋಸಿ ಹೋಗಿದ್ದಾರೆ ಎಂದರು.

ಪಾಲಿಕೆ ಮಹಿಳಾ ಸದಸ್ಯರ ಮೇಲೆ ರಾಜರಾಜೇಶ್ವರಿ ಕ್ಷೇತ್ರದ ಶಾಸಕ ಮುನಿರತ್ನ ದಬ್ಬಾಳಿಕೆ ನಡೆಸಿದ್ದರು. ಬೆಂಬಲಕ್ಕೆ ಸರ್ಕಾರ ಇದೆ ಎಂಬ ಕಾರಣಕ್ಕೆ ಶಾಸಕರು ದರ್ಪ ತೋರಿಸುತ್ತಿದ್ದಾರೆ ಎಂದು ಆರೋಪಿಸಿದರು.

ಕಳೆದ ಐದು ವರ್ಷದಲ್ಲಿ 358 ದಲಿತರ ಕೊಲೆಯಾಗಿದೆ. 9,058 ಮಹಿಳೆಯರ ಮೇಲೆ ದೌರ್ಜನ್ಯ ನಡೆದಿದ್ದು, 801 ದಲಿತ ಮಹಿಳೆಯರ ಮೇಲೆ ಅತ್ಯಾಚಾರ ಆಗಿದೆ. ಇದನ್ನು ಗೃಹ ಸಚಿವರೇ ಸದನದಲ್ಲಿ ವಿವರಿಸಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇಲ್ಲ ಎಂಬುದಕ್ಕೆ ಇದು ಸಾಕ್ಷಿ ಎಂದರು.

ರಾಜ್ಯ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಈ ಬಗ್ಗೆ ಮಾತನಾಡಬೇಕು. ಮುಖ್ಯಮಂತ್ರಿ ಮತ್ತು ಗೃಹ ಮಂತ್ರಿಯ ಕಿವಿ ಹಿಂಡಬೇಕು ಎಂದು ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT