ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಣಿಜ್ಯ ನಗರಿಯಲ್ಲಿ ಚದುರಂಗದ ಹಬ್ಬ...

Last Updated 16 ಅಕ್ಟೋಬರ್ 2018, 20:00 IST
ಅಕ್ಷರ ಗಾತ್ರ

ಗ್ರ್ಯಾಂಡ್‌ಮಾಸ್ಟರ್‌ಗಳು, ಇಂಟರ್‌ನ್ಯಾಷನಲ್‌ ಮಾಸ್ಟರ್‌ಗಳು, ಭಾರತದ ಹೆಸರಾಂತ ಚೆಸ್‌ ಆಟಗಾರರನ್ನು ಹುಬ್ಬಳ್ಳಿಯಲ್ಲಿ ಒಂದೇ ವೇದಿಕೆಯಲ್ಲಿ ನೋಡಲು ಸಿಕ್ಕರೆ ಖುಷಿಯಾಗುತ್ತದೆಯಲ್ಲವೇ?

ಹೌದು, ಅನ್ನುತ್ತದೆ ಚೆಸ್‌ ಪ್ರಿಯರ ಮನಸ್ಸು. ಆದರೆ, ಅದು ಹೇಗೆ ಸಾಧ್ಯ ಎನ್ನುವ ಪ್ರಶ್ನೆಯೂ ಉದ್ಭವಿಸುತ್ತದೆ. ಇದಕ್ಕೆ ಧಾರವಾಡ ಜಿಲ್ಲಾ ಚೆಸ್‌ ಸಂಸ್ಥೆ , ರೋಟರಿ ಕ್ಲಬ್‌, ಹುಬ್ಬಳ್ಳಿ ಉತ್ತರ ಮತ್ತು ಕೆಎಲ್‌ಇ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಕಾಲೇಜು ವೇದಿಕೆ ಒದಗಿಸಿವೆ.

ಜಿಲ್ಲಾ ಚೆಸ್‌ ಸಂಸ್ಥೆ ಆರಂಭವಾಗಿ 25 ವರ್ಷಗಳು ಕಳೆದಿದ್ದು, ಈಗ ಬೆಳ್ಳಿ ಹಬ್ಬದ ಸಂಭ್ರಮದಲ್ಲಿವೆ. ಸದಾ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿರುವ ರೋಟರಿ ಸಂಸ್ಥೆ ಅಖಿಲ ಭಾರತ ಕ್ಲಾಸಿಕ್‌ ಚೆಸ್‌ ಓಪನ್‌ ಟೂರ್ನಿಗೆ ಮೊದಲ ಬಾರಿಗೆ ಆತಿಥ್ಯ ವಹಿಸುತ್ತಿವೆ. ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಕರ್ನಾಟಕ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಕಾಲೇಜಿನಲ್ಲಿ ಅ. 27ರಿಂದ 31ರ ತನಕ ಈ ಟೂರ್ನಿ ಜರುಗಲಿದೆ.

ಕರ್ನಾಟಕದ ಮೊದಲ ಗ್ರ್ಯಾಂಡ್‌ ಮಾಸ್ಟರ್‌ ತೇಜ ಕುಮಾರ, ಅಂತರರಾಷ್ಟ್ರೀಯ ಮಾಸ್ಟರ್‌ ಸ್ಟ್ಯಾನಿ, ಬೆಂಗಳೂರಿನ ಯಶಸ್‌, ಗಹನ್‌, ಸ್ಥಳೀಯ ಪ್ರತಿಭೆಗಳಾದ ಆದಿತ್ಯ ಕಲ್ಯಾಣಿ, ವಾಣಿ ಇಂದ್ರಾಳಿ, ಶಾಶ್ವತ ಮುದೇನಗುಡಿ, ಅಬೀದ್‌ ಅಲಿ, ಆದಿತ್ಯ ಕಲ್ಯಾಣಿ, ಅಕ್ಷಯ ಹನಗನ್ನನವರ ಭಾಗವಹಿಸಲಿದ್ದಾರೆ.

ಒಂದೇ ಬಾರಿಗೆ 200 ಬೋರ್ಡ್‌ಗಳ ಮೇಲೆ 400 ಸ್ಪರ್ಧಿಗಳು ಪಂದ್ಯಗಳನ್ನಾಡಬಹುದು. ಅಂತರರಾಷ್ಟ್ರೀಯ ಆರ್ಬಿರೇಟರ್‌ಗಳಾದ ಬೆಂಗಳೂರಿನ ವಸಂತ ಬಿ. ಎಚ್‌., ಸಲೀಂ ಬೇಗ್‌, ಶಿವಮೊಗ್ಗದಿಂದ ಮಂಜುನಾಥ ಪಾಲ್ಗೊಳ್ಳಲಿದ್ದಾರೆ. ಒಟ್ಟು 83 ಟ್ರೋಫಿಗಳನ್ನು ನೀಡಲಾಗುತ್ತದೆ. ಒಂಬತ್ತು ಸುತ್ತುಗಳ ಪಂದ್ಯ ನಡೆಯುತ್ತವೆ.

‘ಸ್ಥಳೀಯ ಪ್ರತಿಭೆಗಳಿಗೆ ಉತ್ತಮ ಪಂದ್ಯಗಳನ್ನು ನೋಡಲು ಈ ಟೂರ್ನಿಗಿಂತ ಒಳ್ಳೆಯ ಅವಕಾಶ ಇನ್ನೊಂದಿಲ್ಲ. ಇದರಿಂದ ವಿದ್ಯಾರ್ಥಿಗಳಿಗೂ ಅನುಕೂಲವಾಗುತ್ತದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಆಟಗಾರರ ಚಾಣಾಕ್ಷ ನಡೆಗಳನ್ನು ನೋಡಲು ಟೂರ್ನಿ ವೇದಿಕೆ’ ಎಂದು ಯುನೈಟೆಡ್‌ ಕರ್ನಾಟಕ ಚೆಸ್‌ ಸಂಸ್ಥೆ (ಯುಕೆಸಿಎ) ಉಪಾಧ್ಯಕ್ಷ ಕೃಷ್ಣ ಉಡುಪ ಹೇಳುತ್ತಾರೆ. ಇದಕ್ಕೆ ದನಿಗೂಡಿಸಿದ್ದು ರೋಟರಿಯ ಅಸಿಸ್ಟೆಂಟ್‌ ಗವರ್ನರ್‌ ನರೇಂದ್ರ ಬರ್ವಾಲ ಮತ್ತು ಯುಕೆಸಿಎ ಕಾರ್ಯದರ್ಶಿ ಆರ್‌. ಹನುಮಂತ.

ಬೆಳ್ಳಿ ಹೆಜ್ಜೆಯ ಗುರುತುಗಳು

ಹವ್ಯಾಸಿ ಆಟಗಾರರಿಂದ 1993ರಲ್ಲಿ ಆರಂಭವಾದ ಧಾರವಾಡ ಜಿಲ್ಲಾ ಚೆಸ್‌ ಈವರೆಗೂ ಅನೇಕ ಪ್ರತಿಭೆಗಳ ಬೆಳವಣಿಗೆಗೆ ವೇದಿಕೆ ಕಲ್ಪಿಸಿಕೊಟ್ಟಿದೆ.

ಸಂಸ್ಥೆ ಆರಂಭವಾದ ವರ್ಷಗಳಲ್ಲಿ ಈ ಭಾಗದಲ್ಲಿ ಚೆಸ್‌ ಚಟುವಟಿಕೆಗಳು ಹೆಚ್ಚು ನಡೆಯುತ್ತಿರಲಿಲ್ಲ. ಶಿವಮೊಗ್ಗದ ಶ್ರೀಕೃಷ್ಣ ಉಡುಪ ಇಲ್ಲಿ ಬಂದು ತರಬೇತಿ ನೀಡಲು ಆರಂಭಿಸಿದ ಬಳಿಕ ಚೆಸ್‌ ಬೆಳವಣಿಗೆ ವೇಗ ಹೆಚ್ಚಾಯಿತು. ಬೆರಳೆಣಿಕೆ ಸಂಖ್ಯೆಯಷ್ಟಿದ್ದ ರೇಟಿಂಗ್‌ ಆಟಗಾರರ ಸಂಖ್ಯೆಯೂ ವೃದ್ಧಿಯಾಯಿತು. ಸ್ಥಳೀಯವಾಗಿರುವ ಕ್ಲಬ್‌ಗಳೂ ಆಗಾಗ್ಗೆ ಟೂರ್ನಿಗಳನ್ನು ಸಂಘಟಿಸುತ್ತಿವೆ.

ಇಂದ್ರಾಳಿ ಸ್ಕೂಲ್‌ ಆಫ್‌ ಲೈಫ್‌ ಸ್ಕಿಲ್‌, ಶಂಕರ ಮುದೇನಗುಡಿ, ದೇವದಾನಂ, ಹುಬ್ಬಳ್ಳಿ ಚೆಸ್‌ ಅಕಾಡೆಮಿ, ಚೆಸ್‌ ರೈಡರ್ಸ್‌ ಧಾರವಾಡ ಹೀಗೆ ಹಲವು ಕ್ಲಬ್‌ಗಳು ಸಕ್ರಿಯವಾಗಿ ಚೆಸ್‌ ಟೂರ್ನಿಗಳನ್ನು ನಡೆಸುತ್ತಿವೆ.

‘ಧಾರವಾಡ ಜಿಲ್ಲಾ ಚೆಸ್‌ ಸಂಸ್ಥೆ ಅಸ್ತಿತ್ವಕ್ಕೆ ಬಂದ ಬಳಿಕ ಗದಗ, ಹಾವೇರಿ, ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಚೆಸ್‌ ಚಟುವಟಿಕೆ ಆರಂಭವಾಗಿವೆ. ಕೊಪ್ಪಳದಲ್ಲಿಯೂ ಸಂಸ್ಥೆ ಆರಂಭಿಸುವ ಯೋಜನೆ ಹೊಂದಿದ್ದೇವೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಚೆಸ್‌ ಟೂರ್ನಿಗಳು ನಡೆದರೆ ಪರಿಕರಗಳನ್ನು ಇಲ್ಲಿಂದಲೇ ಕಳುಹಿಸಿಕೊಡಲಾಗುತ್ತದೆ’ ಎಂದು ರಾಜ್ಯ ಚೆಸ್‌ ಸಂಸ್ಥೆ ಉಪಾಧ್ಯಕ್ಷ ಕೂಡ ಆಗಿರುವ ವಿನಯ ಹೇಳುತ್ತಾರೆ. ಯುಕೆಸಿಎ ಸಿಇಒ ಅರವಿಂದ ಶಾಸ್ತ್ರಿ ‘ಗ್ರಾಮೀಣ ಪ್ರತಿಭೆಗಳನ್ನು ಗಮನದಲ್ಲಿಟ್ಟುಕೊಂಡು ಪ್ರತಿ ಭಾನುವಾರ ಉಚಿತವಾಗಿ ತರಬೇತಿ ನೀಡುವ ಯೋಜನೆ ಹಮ್ಮಿಕೊಂಡಿದ್ದೇವೆ’ ಎಂದರು.

ಹುಬ್ಬಳ್ಳಿಯಲ್ಲಿ 2015ರಲ್ಲಿ ಅಖಿಲ ಭಾರತ ಓಪನ್‌ ಫಿಡೆ ರೇಟಿಂಗ್‌ ರ‍್ಯಾಂಕಿಂಗ್‌ ಚೆಸ್‌ ಟೂರ್ನಿ ನಡೆದಿತ್ತು. ಆಗ 347 ಸ್ಪರ್ಧಿಗಳು ಭಾಗವಹಿಸಿದ್ದರು. ಮೊದಲ ಬಾರಿಗೆ ಕ್ಲಾಸಿಕ್‌ ಮಾದರಿಯಲ್ಲಿ ನಡೆಯುವ ಟೂರ್ನಿಯಲ್ಲಿ 400ಕ್ಕಿಂತಲೂ ಹೆಚ್ಚು ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆಯಿದೆ ಎನ್ನುತ್ತಾರೆ ಸಂಘಟಕರು. 2011 ಮತ್ತು 2012ರಲ್ಲಿ ರೇಟಿಂಗ್‌ ಟೂರ್ನಿಗಳು ನಡೆದಿದ್ದವು.

₹ 3 ಲಕ್ಷ ಬಹುಮಾನ ಮೊತ್ತ

ಅಖಿಲ ಭಾರತ ಓಪನ್‌ ಫಿಡೆ ರೇಟಿಂಗ್‌ ಚೆಸ್‌ ಟೂರ್ನಿಯು ಒಟ್ಟು ₹ 3 ಲಕ್ಷ ಬಹುಮಾನ ಮೊತ್ತ ಒಳಗೊಂಡಿದೆ. ಮೊದಲ ಸ್ಥಾನ ಪಡೆದವರಿಗೆ ₹ 50 ಸಾವಿರ ಲಭಿಸಲಿದೆ. ಬಾಲಕರ ಮತ್ತು ಬಾಲಕಿಯರ 8, 10, 12, 14 ಮತ್ತು 16 ವರ್ಷದ ಒಳಗಿನವರಿಗೆ ಪ್ರತ್ಯೇಕ ಸ್ಪರ್ಧೆಗಳು ಜರುಗಲಿವೆ. ಸ್ಥಳೀಯ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಎಲ್ಲ ವಯೋಮಾನದ ಸ್ಪರ್ಧಿಗಳಿಗೆ ಜಿಲ್ಲೆಯ ಉತ್ತಮ ಸ್ಪರ್ಧಿ ಪ್ರಶಸ್ತಿ ನೀಡಲಾಗುತ್ತದೆ.

ಚಿಂತನೆಶೀಲತೆ, ಗ್ರಹಣ ಶಕ್ತಿ ಹೆಚ್ಚಳ...

ನಮ್ಮ ಸಂಸ್ಥೆಯಲ್ಲಿ ಚೆಸ್‌ ಟೂರ್ನಿ ನಡೆಸುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ನಮ್ಮಲ್ಲಿಯೂ ಆಟಗಾರರನ್ನು ತಯಾರು ಮಾಡುವ ಕಾರಣದಿಂದ 2015ರಲ್ಲಿ ಚೆಸ್‌ ಕ್ಲಬ್‌ ಆರಂಭಿಸಲಾಗಿದೆ. ಬುದ್ಧಿಗೆ ಹೆಚ್ಚು ಕೆಲಸ ಕೊಡುವುದರಿಂದ ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೂ ನೆರವಾಗುತ್ತದೆ. ಕಂಪ್ಯೂಟರ್‌ ಸೈನ್ಸ್‌, ಇನ್‌ಫಾರ್ಮೇಷನ್‌ ವಿಭಾಗ, ಎಲೆಕ್ಟ್ರಿಕಲ್‌ ವಿದ್ಯಾರ್ಥಿಗಳಲ್ಲಿ ಚಿಂತನಶೀಲತೆ ಮತ್ತು ಗ್ರಹಣ ಶಕ್ತಿ ಚೆಸ್‌ ಆಟದಿಂದ ಹೆಚ್ಚಾಗುತ್ತದೆ.

ಡಾ. ಬಸವರಾಜ ಅನಾಮಿ,ಕೆಎಲ್‌ಇ ಇನ್‌ಸ್ಟಿಟ್ಯೂಟ್ ಆಫ್‌ ಟೆಕ್ನಾಲಜಿ ಕಾಲೇಜಿನ ಪ್ರಾಚಾರ್ಯ

ಪ್ರಾಯೋಜಕರ ಬೆಂಬಲ ಅಗತ್ಯ

ಪ್ರಾಯೋಜಕರ ನೆರವು ಇದ್ದರೆ ಮಾತ್ರ ಅಖಿಲ ಭಾರತ ಮಟ್ಟದಲ್ಲಿ ಚೆಸ್‌ ಟೂರ್ನಿಗಳನ್ನು ನಡೆಸಲು ಸಾಧ್ಯವಾಗುತ್ತದೆ. ಈಗ ರೋಟರಿ ಮತ್ತು ಕೆಎಲ್‌ಇ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಸಹಯೋಗದಲ್ಲಿ ಟೂರ್ನಿ ಹಮ್ಮಿಕೊಳ್ಳಲಾಗಿದೆ. ಕ್ಲಾಸಿಕ್‌ ಮಾದರಿಯಲ್ಲಿ ಮೊದಲ ಬಾರಿಗೆ ಟೂರ್ನಿ ನಡೆಸುತ್ತಿರುವುದರಿಂದ ಸ್ಥಳೀಯ ಚೆಸ್‌ ಪ್ರೇಮಿಗಳಿಗೆ ಹೆಸರಾಂತ ಆಟಗಾರರ ಪಂದ್ಯಗಳನ್ನು ನೋಡಲು ಅವಕಾಶ ಸಿಗುತ್ತದೆ. ಉತ್ತರ ಕರ್ನಾಟಕ ಭಾಗದಲ್ಲಿ ಈ ಕ್ರೀಡೆ ಬೆಳವಣಿಗೆಯ ವೇಗ ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ.

ವಿನಯ ಕುರ್ತಕೋಟಿ, ಧಾರವಾಡ ಜಿಲ್ಲಾ ಚೆಸ್‌ ಸಂಸ್ಥೆ ಕಾರ್ಯದರ್ಶಿ

ಉತ್ತಮ ಪಂದ್ಯ ವೀಕ್ಷಣೆಗೆ ಅವಕಾಶ

ಹುಬ್ಬಳ್ಳಿಯಲ್ಲಿ ನಡೆಯುವ ಟೂರ್ನಿಯಲ್ಲಿ ಮುಖ್ಯಸುತ್ತಿನಲ್ಲಿ ಆಡುವ ಅವಕಾಶ ಸಿಗುತ್ತದೆ. ಅನುಭವಿ ಆಟಗಾರನಾಗಿರುವ ಕಾರಣ ಸಹಜವಾಗಿ ನನ್ನ ಮೇಲೆ ಸಾಕಷ್ಟು ನಿರೀಕ್ಷೆ ಕೂಡ ಇರುತ್ತದೆ. ಆದ್ದರಿಂದ ಅದಕ್ಕೆ ತಕ್ಕಂತೆ ನಾನೂ ಸಿದ್ಧತೆ ಮಾಡಿಕೊಂಡಿದ್ದೇನೆ. ಸ್ಥಳೀಯ ಆಟಗಾರರಿಗೆ ಉತ್ತಮ ಪಂದ್ಯಗಳನ್ನು ನೋಡಲು ಅವಕಾಶ ಲಭಿಸುತ್ತದೆ.

ಎಂ.ಎಸ್. ತೇಜಕುಮಾರ,ಕರ್ನಾಟಕ ಮೊದಲ ಗ್ರ್ಯಾಂಡ್‌ ಮಾಸ್ಟರ್

ಚೆಸ್‌ ಬೆಳವಣಿಗೆಗೆ ಟೂರ್ನಿ ಪೂರಕ

ಇತ್ತೀಚಿನ ವರ್ಷಗಳಲ್ಲಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಸದಾ ಒಂದಿಲ್ಲೊಂದು ಚೆಸ್‌ ಟೂರ್ನಿಗಳು ನಡೆಯುತ್ತಲೇ ಇರುತ್ತವೆ. ಇದರಿಂದ ಸಾಕಷ್ಟು ಯುವ ಆಟಗಾರರು ಬರುತ್ತಿದ್ದಾರೆ. ಮೊದಲ ಬಾರಿಗೆ ಕ್ಲಾಸಿಕ್‌ ಮಾದರಿಯಲ್ಲಿ ಟೂರ್ನಿ ನಡೆಸುತ್ತಿದ್ದೇವೆ. ಈ ಭಾಗದಲ್ಲಿ ಚೆಸ್‌ ಇನ್ನಷ್ಟು ಅಭಿವೃದ್ಧಿಯಾಗಲು ಟೂರ್ನಿ ವೇದಿಕೆಯಾಗುತ್ತದೆ ಎಂದು ಭಾವಿಸಿದ್ದೇನೆ.

ನಾಗರಾಜ ಪಿ. ಶೆಟ್ಟಿ,ರೋಟರಿ ಕ್ಲಬ್‌, ಹುಬ್ಬಳ್ಳಿ ಉತ್ತರದ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT