ಮಂಗಳವಾರ, ಜುಲೈ 27, 2021
25 °C
ಫೀವರ್ ಕ್ಲಿನಿಕ್‌ ಸೇರಿದಂತೆ ಹಲವು ಸೌಲಭ್ಯ; ಗುಂ‍ಪುಗೂಡಿ ಮದ್ಯಪಾನ ಮಾಡುವುದು ನಿಷಿದ್ಧ

ಒಲಿಂಪಿಕ್ಸ್‌: ಕ್ರೀಡಾ ಗ್ರಾಮದಲ್ಲಿ ಕೋವಿಡ್ ಕಿಟ್!

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ: ಮುಂದಿನ ತಿಂಗಳ 23ರಂದು ಆರಂಭವಾಗಲಿರುವ ಒಲಿಂಪಿಕ್ಸ್‌ಗೆ ಸಿದ್ಧವಾಗಿರುವ ಕ್ರೀಡಾಗ್ರಾಮದಲ್ಲಿ ಫೀವರ್ ಕೇಂದ್ರ, ಕೋವಿಡ್ ಕಿಟ್‌. ಎಲ್ಲೆಲ್ಲೂ ಸ್ಯಾನಿಟೈಸರ್, ಊಟದ ಮನೆಯಲ್ಲಿ ವಿಶಿಷ್ಟ ಸೌಲಭ್ಯಗಳು.

ಕ್ರೀಡಾಗ್ರಾಮವನ್ನು ಭಾನುವಾರ ಪತ್ರಕರ್ತರಿಗೆ ತೋರಿಸಲಾಯಿತು. ಕ್ರೀಡಾಪಟುಗಳು ಮತ್ತು ಜಪಾನ್‌ನ ಜನತೆಗೆ ಒಲಿಂಪಿಕ್ಸ್ ಆಯೋಜನೆಯಿಂದಾಗಿ ಯಾವುದೇ ತೊಂದರೆ ಇಲ್ಲ ಎಂಬುದನ್ನು ತೋರಿಸುವ ಮತ್ತು ಭರವಸೆ ಮೂಡಿಸುವ ಸೌಕರ್ಯಗಳು ‘ಗ್ರಾಮ’ದಲ್ಲಿವೆ. 

ಕ್ರೀಡಾಗ್ರಾಮದಲ್ಲಿ ಗುಂಪುಗುಂಪಾಗಿ ಮದ್ಯಪಾನ ನಿಷೇಧಿಸಲಾಗಿದೆ. ಅತಿಥಿಗಳು ಒಟ್ಟಾಗಿ ಬೆರೆಯುವುದಕ್ಕೂ ಅವಕಾಶವಿಲ್ಲ. ವೈರಸ್‌ನಿಂದ ದೂರ ಉಳಿಯುವುದಕ್ಕೆ ಸಂಬಂಧಿಸಿದ ಫಲಕಗಳನ್ನು ಎಲ್ಲೆಡೆ ಅಳವಡಿಸಲಾಗಿದೆ. ಕೊಠಡಿಗಳಲ್ಲಿ ಸಾಕಷ್ಟು ಗಾಳಿಯಾಡುವಂತೆ ಕಿಟಕಿ ತೆಗೆದಿರಿಸುವಂತೆ ಸೂಚಿಸುವ ಫಲಕಗಳೂ ಇವೆ. ಒಲಿಂಪಿಕ್ಸ್ ಸಂದರ್ಭದಲ್ಲಿ ಕ್ರೀಡಾಗ್ರಾಮದಲ್ಲಿ 18 ಸಾವಿರ ಮಂದಿ ವಾಸವಿರುವರು. ಪ್ಯಾರಾಲಿಂಪಿಕ್ ವೇಳೆ ಎಂಟು ಸಾವಿರ ಮಂದಿ ಇರುವರು. 

ಕ್ರೀಡಾಗ್ರಾಮವು ಟೋಕಿಯೊ ನಗರದೊಳಗೆ ಮತ್ತೊಂದು ನಗರ. ಹೂವಿನ ಅಂಗಡಿಯಿಂದ ಹಿಡಿದು ಡ್ರೈ ಕ್ಲೀನಿಂಗ್‌ ವರೆಗೂ ಸೌಲಭ್ಯ ಇದೆ. ಆಟದ ಮೈದಾನದಿಂದ ಹಿಡಿದು ಐಸ್‌ ಬಾತ್ ವರೆಗಿನ ಸೌಕರ್ಯಗಳೂ ಇವೆ. ಒಟ್ಟು 44 ಹೆಕ್ಟೇರ್ ಪ್ರದೇಶದಲ್ಲಿ 21 ವಾಸದ ಕಟ್ಟಡಗಳು ಇವೆ. ಉದ್ಯಾನ, ಜಿಮ್‌, ಮೂರು ಸಾವಿರ ಮಂದಿ ಕುಳಿತುಕೊಳ್ಳಬಹುದಾದ ಕ್ಯಾಂಟೀನ್ ಮುಂತಾದ ಸೌಕರ್ಯಗಳನ್ನು ಕಲ್ಪಿಸಲಾಗಿದೆ.

ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆಗಾಗಿರುವ ಆಸ್ಪತ್ರೆಗಳ ಜೊತೆ, ಕೋವಿಡ್‌ ಹಿನ್ನೆಲೆಯಲ್ಲಿ ಫೀವರ್ ಕ್ಲಿನಿಕ್‌ಗಳನ್ನೂ ಸಿದ್ಧಪಡಿಸಲಾಗಿದೆ. ವೈರಸ್ ಸೋಂಕಿನ ಲಕ್ಷಣ ಇರುವವರನ್ನು ಇಲ್ಲಿ ತಪಾಸಣೆ ಮಾಡಿ ಅಗತ್ಯವಿದ್ದರೆ ಪ್ರತ್ಯೇಕವಾಸದಲ್ಲಿರಿಸಲಾಗುವುದು.  

‘ಗ್ರಾಮ‘ಪ್ರವೇಶಕ್ಕೆ ನಿಬಂಧನೆಗಳು

ಕ್ರೀಡಾಪಟುಗಳು ತಮ್ಮ ಸ್ಪರ್ಧೆಗಿಂತ ಕೆಲವೇ ದಿನಗಳ ಮುನ್ನ ನಿಗದಿಪಡಿಸಿದ ಅವಧಿಯಲ್ಲಿ ಇಲ್ಲಿಗೆ ಪ್ರವೇಶಿಸಬೇಕು. ಸೋತು ಹೊರಬಿದ್ದರೆ ಅಥವಾ ಗೆದ್ದು, ಮತ್ತೊಂದು ಸ್ಪರ್ಧೆ ಇಲ್ಲದೇ ಇದ್ದರೆ 48 ತಾಸುಗಳ ಒಳಗೆ ಅಲ್ಲಿಂದ ತೆರಳಬೇಕು. ಮರುಬಳಕೆ ಮಾಡಬಲ್ಲ ಕಾರ್ಡ್‌ಬೋರ್ಡ್‌ನಿಂದ ಮಂಚಗಳನ್ನು ತಯಾರಿಸಲಾಗಿದೆ. ಭಾರಿ ತೂಕ ಇರುವ ವೇಟ್‌ಲಿಫ್ಟರ್‌ಗಳು ಮತ್ತು ಎತ್ತರದ ಬ್ಯಾಸ್ಕೆಟ್‌ಬಾಲ್ ಆಟಗಾರರು ಸ್ವಲ್ಪ ಪ್ರಯಾಸದಿಂದಲೇ ಮಲಗಬೇಕಾದೀತು!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು