ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಿಬಾ ಮಹಿಳೆಯರ ಏಷ್ಯಾಕಪ್: ರಂಗೇರಿದ ಚಾಂಪಿಯನ್ನರ ಆಟ

ಆಸ್ಟ್ರೇಲಿಯಾ ಎದುರು ಜಪಾನ್‌ಗೆ ಜಯ
Last Updated 28 ಸೆಪ್ಟೆಂಬರ್ 2019, 20:26 IST
ಅಕ್ಷರ ಗಾತ್ರ

ಬೆಂಗಳೂರು: ಎಲ್ಲಿ ನೋಡಿದರೂ ಜಪಾನ್ ಧ್ವಜಗಳ ಹಾರಾಟ. ನಿಪಾನ್‌ (ಜಪಾನ್)...ನಿಪಾನ್ ಕೂಗಿನ ಮೇಲಾಟ. ಕಂಠೀರವ ಕ್ರೀಡಾಂಗಣ ಶನಿವಾರ ಸಂಜೆ ಅಕ್ಷರಶ: ಜಪಾನ್ ತಂಡದ ತವರು ನೆಲದಂತಾಗಿತ್ತು. ಇಂಥ ವಾತಾವರಣ ಸೃಷ್ಟಿಸಿದ ಬೆಂಬಲಿಗರನ್ನು ಜಪಾನ್ ಆಟಗಾರ್ತಿಯರು ನಿರಾಸೆಗೊಳಿಸಲಿಲ್ಲ.

ಫಿಬಾ ಮಹಿಳಾ ಏಷ್ಯಾಕಪ್ ಬ್ಯಾಸ್ಕೆಟ್‌ಬಾಲ್ ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ ಹಿನ್ನಡೆಯ ಆತಂಕವನ್ನು ಹಿಮ್ಮೆಟ್ಟಿ ಛಲದಿಂದ ಕಾದಾಡಿದ ಜಪಾನ್ 76–64ರಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿತು. ಹ್ಯಾಟ್ರಿಕ್ ಪ್ರಶಸ್ತಿ ಗಳಿಸಿರುವ ಹಾಲಿ ಚಾಂಪಿಯನ್‌ ಜಪಾನ್ ಭಾನುವಾರ ನಡೆಯಲಿರುವ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಚೀನಾವನ್ನು ಎದುರಿಸಲಿದೆ.

ಕಳೆದ ಬಾರಿ ಇದೇ ಅಂಗಣದಲ್ಲಿ ನಡೆದ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಮತ್ತು ಜಪಾನ್ ಎರಡು ಬಾರಿ ಮುಖಾಮುಖಿಯಾಗಿದ್ದವು. ಎರಡೂ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಕಡಿಮೆ ಅಂತರದಲ್ಲಿ (73–74; 74–83) ಸೋತಿತ್ತು. ಶನಿವಾರದ ಪಂದ್ಯದಲ್ಲೂ ಪ್ರಬಲ ಪೈಪೋಟಿ ನೀಡಿ ಬ್ಯಾಸ್ಕೆಟ್‌ಬಾಲ್ ಪ್ರಿಯರ ಮನ ಗೆದ್ದಿತು.

ರೂಯಿ ಮಾಚಿಡಾ ಅವರ ಮೂಲಕ ಪಂದ್ಯದ ಮೊದಲ ಪಾಯಿಂಟ್ ಗಳಿಸಿದ್ದು ಜಪಾನ್. ಆದರೆ ಮೊದಲ ಕ್ವಾರ್ಟರ್‌ನಲ್ಲಿ ಆಸ್ಟ್ರೇಲಿಯಾ ಸಂಪೂರ್ಣ ಆಧಿಪತ್ಯ ಸ್ಥಾ‍ಪಿಸಿತು. ಬೆಕ್ ಅಲೆನ್ ಗಳಿಸಿಕೊಟ್ಟ 3 ಪಾಯಿಂಟ್‌ಗಳ ಮೂಲಕ ಮುನ್ನಡೆ ಗಳಿಸಿದ ಆಸ್ಟ್ರೇಲಿಯಾ ತಂಡ ನಾಯಕಿ ಜೆನಾ ಓಹಿ, ಎಜಿ ಮ್ಯಾಗ್ಬೆಜರ್ ಮತ್ತು ಕಾಯ್ಲ ಜಾರ್ಜ್ ಅವರ ಆಟದ ಬಲದಿಂದ ಸತತ ಪಾಯಿಂಟ್‌ಗಳನ್ನು ಕಲೆ ಹಾಕಿತು. 4ನೇ ನಿಮಿಷದಲ್ಲಿ ತಂಡದ ಮುನ್ನಡೆ 11–2ಕ್ಕೆ ಏರಿತು. ರಕ್ಷಣಾತ್ಮಕ ಆಟಕ್ಕೂ ಒತ್ತು ನೀಡಿ, ಮೋಹಕ ಪಾಸಿಂಗ್‌ ಮೂಲಕ ಪ್ರೇಕ್ಷಕರನ್ನು ರಂಜಿಸಿತು. ಕ್ವಾರ್ಟರ್‌ನ ಕೊನೆಯಲ್ಲಿ ಫ್ರೀ ಥ್ರೋಗಳ ಮೂಲಕ ಪಾಯಿಂಟ್‌ಗಳನ್ನು ಕಲೆ ಹಾಕಿದ ಜಪಾನ್ ಹಿನ್ನಡೆಯ ಅಂತರ ಕಡಿಮೆ ಮಾಡುವಲ್ಲಿ ಯಶಸ್ವಿಯಾಯಿತು.

ನಕೊ ಮೊಟೊಹಶಿ ಮಿಂಚಿನ ಆಟ: ಎರಡನೇ ಕ್ವಾರ್ಟರ್‌ನ ಆರಂಭದಲ್ಲಿ ಉಭಯ ತಂಡಗಳು ಪಾಯಿಂಟ್ ಗಳಿಸಲು ಪರದಾಡಿದವು. ಆದರೆ 5 ನಿಮಿಷಗಳ ನಂತರ ಜಪಾನ್ ನೈಜ ಸಾಮರ್ಥ್ಯ ಪ್ರದರ್ಶಿಸಿತು. ಆಕ್ರಮಣಕಾರಿ ಆಟದ ಮೂಲಕ ಹಿನ್ನಡೆಯನ್ನು 24–28ಕ್ಕೆ ಇಳಿಸಿದ ಆ ತಂಡವು ನಕೊ ಮೊಟೊಹಶಿ ಅವರ ಸತತ 3 ಪಾಯಿಂಟ್‌ಗಳ ಮೂಲಕ ಕ್ವಾರ್ಟರ್‌ನ ಮುಕ್ತಾಯಕ್ಕೆ ಒಂದು ನಿಮಿಷ ಬಾಕಿ ಇದ್ದಾಗ ಮೊದಲ ಬಾರಿ ಮುನ್ನಡೆ ಸಾಧಿಸಿತು. 3ನೇ ಕ್ವಾರ್ಟರ್‌ ರೋಮಾಂಚಕಾರಿ ರಕ್ಷಣಾತ್ಮಕ ಆಟಕ್ಕೆ ಸಾಕ್ಷಿಯಾಯಿತು. ಎರಡೂ ತಂಡಗಳು ಎದುರಾಳಿಗಳಿಗೆ ಪಾಯಿಂಟ್‌ಗಳನ್ನು ಬಿಟ್ಟುಕೊಡಲು ನಿರಾಕರಿಸಿದವು. ಲಭಿಸಿದ ಅವಕಾಶಗಳನ್ನೂ ಕೈಚೆಲ್ಲಿದವು. ಜಪಾನ್ ತನ್ನ ಸ್ಕೋರ್ 52ಕ್ಕೆ ಏರಿಸಿದರೆ, ಆಸ್ಟ್ರೇಲಿಯಾ 48ರಲ್ಲೇ ಉಳಿಯಿತು.

ಕೊನೆಯ ಕ್ವಾರ್ಟರ್‌ನ ಆರಂಭದಲ್ಲೇ ಯೂಕಿ ಮಿಯಾಜವಾ ಮತ್ತು ಹಿಮವಾರಿ ಅಕಾಹೊ ಸತತ 3 ಪಾಯಿಂಟ್‌ಗಳನ್ನು ಗಳಿಸಿ ಜಪಾನ್‌ನ ಮುನ್ನಡೆಗೆ ಇನ್ನಷ್ಟು ಕಳೆ ತುಂಬಿದರು. ಇದರಿಂದ ಕಕ್ಕಾಬಿಕ್ಕಿಯಾದ ಆಸ್ಟ್ರೇಲಿಯಾದ ಪ್ರಯತ್ನಗಳಿಗೆ ಫಲ ಸಿಗಲಿಲ್ಲ.

ಜಪಾನ್‌ನ ನಕೊ ಮೊಟೊಹಶಿ 22, ಯೂಕಿ ಮಿಯಾಜವಾ 19 ಮತ್ತು ರಮು ಟೊಕಶಿಕಿ 10 ಪಾಯಿಂಟ್ ಗಳಿಸಿದರು. ಆಸ್ಟ್ರೇಲಿಯಾ ಪರ ಜೆನಾ ಒಹೀ 12, ಬೆಕ್ ಅಲೆನ್‌ 11 ಮತ್ತು ಲೇಲಾನಿ ಮಿಷೆಲ್ 10 ಪಾಯಿಂಟ್ ಕಲೆ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT