ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಿಬಾ ಮಹಿಳಾ ಏಷ್ಯಾಕಪ್ ಬ್ಯಾಸ್ಕೆಟ್‌ಬಾಲ್: ಜಪಾನ್ ಮತ್ತೆ ಏಷ್ಯನ್‌ ಚಾಂಪಿಯನ್‌

ಚೀನಾ ರನ್ನರ್ ಅಪ್‌
Last Updated 29 ಸೆಪ್ಟೆಂಬರ್ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ಜಪಾನ್ ಮತ್ತು ಚೀನಾ ತಂಡಗಳು ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಈ ವರೆಗೆ ಒಟ್ಟು 16 ಬಾರಿ ಮುಖಾಮುಖಿಯಾಗಿವೆ. ಚೀನಾ 10 ಬಾರಿ ಗೆದ್ದಿತ್ತು. ಆದರೆ 2013ರಿಂದ ಕಳೆದ ಬಾರಿಯ ವರೆಗೆ ಆಡಿದ ನಾಲ್ಕು ಪಂದ್ಯಗಳಲ್ಲಿ ಜಪಾನ್ ಆಧಿಪತ್ಯ ಸ್ಥಾಪಿಸಿತ್ತು. ಕಳೆದ ಬಾರಿ ಇದೇ ಅಂಗಣದಲ್ಲಿ ನಡೆದಿದ್ದ ಸೆಮಿಫೈನಲ್‌ನಲ್ಲಿ ಕೇವಲ ಮೂರು ಪಾಯಿಂಟ್‌ಗಳ ಅಂತರದಲ್ಲಿ (74–71) ಚೀನಾವನ್ನು ಜಪಾನ್ಮಣಿಸಿತ್ತು.

ಭಾನುವಾರದ ಪಂದ್ಯದ ಆರಂಭದ ಎರಡು ನಿಮಿಷಗಳು ಉಭಯ ತಂಡಗಳ ರಕ್ಷಣಾ ವಿಭಾಗದ ಸಾಮರ್ಥ್ಯ ಪ್ರದರ್ಶನಕ್ಕೆ ಸಾಕ್ಷಿಯಾದವು. ಮೂರನೇ ನಿಮಿಷದ ಆರಂಭದಲ್ಲಿ ಮಕಿ ತಕಾಡ ಅವರು ಜಂಪ್ ಶಾಟ್ ಮೂಲಕ ಜಪಾನ್‌ನ ಖಾತೆ ತೆರೆದರು. ಯೇರು ಲೀ ಮೂಲಕ ಮರುಕ್ಷಣದಲ್ಲೇ ಚೀನಾ ತಿರುಗೇಟು ನೀಡಿದರು. ಸ್ಕೋರು 2–2, 4–4ರಲ್ಲಿ ಸಮ ಆಗುತ್ತ ಸಾಗಿದಂತೆ ಎರಡೂ ತಂಡಗಳ ಅಭಿಮಾನಿಗಳು ಉಲ್ಲಾಸದ ಅಲೆ ಎಬ್ಬಿಸಿದರು. ಮೂರನೇ ನಿಮಿಷದಲ್ಲಿ ಟಿಂಗ್ ಶೋ ಮತ್ತು ಮಿಂಗ್ಲಿಂಗ್ ಚೆನ್ ಗಳಿಸಿದ 3 ಪಾಯಿಂಟ್‌ಗಳ ಬಲದಿಂದ ಚೀನಾ 10–4ರ ಮುನ್ನಡೆ ಸಾಧಿಸಿತು. ಜಪಾನ್ ತಿರುಗೇಟು ನೀಡಿದರೂ ಮುನ್ನಡೆ ಬಿಟ್ಟುಕೊಡಲು ಚೀನಾ ಸಿದ್ಧವಿರಲಿಲ್ಲ.

ಮುಂದುವರಿದ ಆಧಿಪತ್ಯ: ಎರಡನೇ ಕ್ವಾರ್ಟರ್‌ನ ಆರಂಭದಲ್ಲಿ ಚೀನಾ ಆಧಿಪತ್ಯ ಸ್ಥಾಪಿಸಿತು. ಆದರೆ 10 ಪಾಯಿಂಟ್‌ಗಳ ಹಿನ್ನಡೆಯಲ್ಲಿದ್ದ ಸಂದರ್ಭದಲ್ಲಿ ಸಾಕಿ ಹಯಾಶಿ ಮೂರು ಬಾರಿ 3 ಪಾಯಿಂಟ್ ಜಪಾನ್‌ಗೆ ಬಲ ತುಂಬಿದರು. ಚೀನಾದ ಮಿಂಗ್ಲಿಂಗ್ ಚೆನ್ 3 ಪಾಯಿಂಟ್ ಗಳಿಸಿ ತಿರುಗೇಟು ನೀಡಿದರು. ಕೊನೆಯ ಗಳಿಗೆಯಲ್ಲಿ ಯೂಕಿ ಮಿಯಜವ 3 ಪಾಯಿಂಟ್‌ ಗಳಿಸಿ ಜಪಾನ್ ಹಿನ್ನಡೆಯನ್ನು ಕೇವಲ ಒಂದು ಪಾಯಿಂಟ್‌ಗೆ ಇಳಿಸಿದರು.

ಮಕಿ, ಯೂಕಿ ಮಿಂಚಿನ ಆಟ: ದ್ವಿತೀಯಾರ್ಧದಲ್ಲಿ ಒಂದು ಪಾಯಿಂಟ್ ಹಿನ್ನಡೆಯಲ್ಲಿದ್ದಾಗ (41–42) ಜಪಾನ್‌ ಅಟಗಾರ್ತಿಯರು ಕೆಚ್ಚೆದೆಯ ಪ್ರದರ್ಶನದ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಮಕಿ ತಕಾಡ ತಂದುಕೊಟ್ಟ 3 ಪಾಯಿಂಟ್‌ಗಳ ಮೂಲಕ ಪಂದ್ಯದಲ್ಲಿ ಮೊದಲ ಬಾರಿ ಮುನ್ನಡೆ ಗಳಿಸಿದ ಜಪಾನ್ ತಂಡ ರಮು ಟೊಕಸಕಿ, ಯೂಕಿ ಮಿಯೊ ಮತ್ತು ನಕೊ ಮೊಟೊಹಶಿ ಅವರ ಅಮೋಘ ಆಟದ ಮೂಲಕ ಪಾಯಿಂಟ್‌ಗಳನ್ನು 50ರ ಗಡಿ ದಾಟಿತು. ಚೀನಾ ಕೂಡ ಅರ್ಧಶತಕ ದಾಟಿದರೂ ಮುನ್ನಡೆ ಸಾಧಿಸಲು ಆಗಲಿಲ್ಲ. ಕೊನೆಯ ಕ್ವಾರ್ಟರ್‌ ರೋಮಾಂಚಕಾರಿ ಸೆಣಸಾಟಕ್ಕೆ ಸಾಕ್ಷಿಯಾಯಿತು. ಆದರೆ ಜಪಾನ್‌ನ ಆಲ್‌ರೌಂಡ್ ಆಟಕ್ಕೆ ಚೀನಾ ಬಳಿ ಉತ್ತರವಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT