ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್ ಚೆಸ್ ಒಲಿಂಪಿಯಾಡ್‌: ಭಾರತ ತಂಡಕ್ಕೆ ವಿದಿತ್ ಸಂತೋಷ್ ನಾಯಕ

Last Updated 23 ಜುಲೈ 2020, 14:46 IST
ಅಕ್ಷರ ಗಾತ್ರ

ಚೆನ್ನೈ: ವಿಶ್ವದ ಶ್ರೇಷ್ಠ ಆಟಗಾರರು ಪಾಲ್ಗೊಳ್ಳುವ ಆನ್‌ಲೈನ್ ಚೆಸ್ ಒಲಿಂಪಿಯಾಡ್ ಜುಲೈ 25ರಿಂದ ಆಗಸ್ಟ್ 30ರ ವರೆಗೆ ನಡೆಯಲಿದೆ. ಫಿಡೆ ಆಯೋಜಿಸುತ್ತಿರುವ ಈ ಟೂರ್ನಿಯಲ್ಲಿ ವಿಶ್ವ ಕ್ರಮಾಂಕದಲ್ಲಿ ಮೂರನೇ ಸ್ಥಾನದಲ್ಲಿರುವ ಚೀನಾದ ದಿಂಗ್ ಲಿರೇನ್‌, ಮಾಜಿ ವಿಶ್ವ ಚಾಂಪಿಯನ್ ಭಾರತದ ವಿಶ್ವನಾಥನ್ ಆನಂದ್‌ ಮತ್ತಿತರರು ಭಾಗವಹಿಸಲಿದ್ದಾರೆ.

ಇದೇ ಮೊದಲ ಬಾರಿ ನಡೆಯುತ್ತಿರುವ ಆನ್‌ಲೈನ್ ಒಲಿಂಪಿಯಾಡ್‌ನಲ್ಲಿ 163 ದೇಶಗಳ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ರ‍್ಯಾಂಕಿಂಗ್‌ನಲ್ಲಿ ರಷ್ಯಾ ಅಗ್ರ ಸ್ಥಾನದಲ್ಲಿದ್ದು ಚೀನಾ ಎರಡನೇ ಸ್ಥಾನದಲ್ಲೂ ಅಮೆರಿಕ, ಅರ್ಮೇನಿಯಾ ಮತ್ತು ಉಕ್ರೇನ್ ಕ್ರಮವಾಗಿ ಮೂರು, ನಾಲ್ಕು ಮತ್ತು ಐದನೇ ಸ್ಥಾನದಲ್ಲೂ ಇವೆ.

ವಿದಿತ್ ಸಂತೋಷ್ ಗುಜರಾತಿ ಮುನ್ನಡೆಸಲಿರುವ ಭಾರತ ತಂಡ ಏಳನೇ ಶ್ರೇಯಾಂಕ ಹೊಂದಿದ್ದು ಮೊದಲ ಡಿವಿಷನ್‌ನಲ್ಲಿ ಸ್ಥಾನ ಪಡೆದಿದೆ. ರಷ್ಯಾ, ಚೀನಾ, ಅಮೆರಿಕ, ಉಕ್ರೇನ್ ಮತ್ತಿತರ ತಂಡಗಳು ಇದೇ ಡಿವಿಷನ್‌ನಲ್ಲಿವೆ. ಮೊದಲ ಡಿವಿಷನ್‌ನಲ್ಲಿ ಅಗ್ರ ಎಂಟು ಸ್ಥಾನ ಗಳಿಸುವ ತಂಡಗಳು ಎರಡನೇ ಸುತ್ತಿನಲ್ಲಿ ಆಡಲು ಅರ್ಹತೆ ಗಳಿಸಲಿವೆ.

ವಿಶ್ವದ ಒಂದನೇ ಕ್ರಮಾಂಕದ ಆಟಗಾರ ಮಾಗ್ನಸ್ ಕಾರ್ಲ್‌ಸನ್ ಟೂರ್ನಿಯಲ್ಲಿ ಆಡುತ್ತಿಲ್ಲ. ವಿಶ್ವನಾಥನ್ ಆನಂದ್ ಮತ್ತು ದಿಂಗ್ ಲಿರೇನ್‌ ಅವರೊಂದಿಗೆ ಇಯಾನ್ ನೆಪೊನಿಯಾಚಿ, ಅಲೆಕ್ಸಾಂಡರ್ ಗ್ರಿಶುಕ್, ಲೆವಾನ್ ಅರಾನಿಯನ್, ಅನೀಶ್ ಗಿರಿ ಮತ್ತು ವೆಸ್ಲಿ ಸೊ ಅವರು ಟೂರ್ನಿಯಲ್ಲಿ ಆಡುತ್ತಿರುವ ಪ್ರಮುಖರು. ಮಹಿಳಾ ವಿಭಾಗದಲ್ಲಿ ಹೌ ಯಿಫಾನ್, ಕೊನೆರು ಹಂಪಿ, ಹರಿಕಾ ದ್ರೋಣವಲ್ಲಿ, ಕ್ಯಾಥರಿನ್ ಲ್ಯಾನೊ ಪ್ರಮುಖರು.

ಪ್ರತಿ ತಂಡದಲ್ಲಿ ಆರು ಮಂದಿ ಆಟಗಾರರು ಇರುವರು. ಕನಿಷ್ಠ ಮೂವರು ಮಹಿಳೆಯರು ಮತ್ತು ಇಬ್ಬರು ಜೂನಿಯರ್ ವಿಭಾಗದವರಿಗೆ ಕಡ್ಡಾಯವಾಗಿ ಅವಕಾಶ ನಿಡಬೇಕು. ಪಂದ್ಯಗಳು ಚೆಸ್ ಡಾಟ್ ಕಾಮ್‌ನಲ್ಲಿ ನಡೆಯಲಿವೆ. ಡಿವಿಷನಲ್ ಮತ್ತು ಪ್ಲೇ ಆಫ್ ಹಂತಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. 2018ರಲ್ಲಿ ನಡೆದಿದ್ದ ಮುಕ್ತ ಮತ್ತು ಮಹಿಳಾ ವಿಭಾಗದ ಒಲಿಂಪಿಯಾಡ್‌ನಲ್ಲಿ ಚೀನಾ ಪ್ರಶಸ್ತಿ ಗೆದ್ದುಕೊಂಡಿತ್ತು. ಈ ವರ್ಷದ ಮೇಯಲ್ಲಿ ನಡೆದಿದ್ದ ಆನ್‌ಲೈನ್‌ ನೇಷನ್ಸ್‌ ಕಪ್ ಟೂರ್ನಿಯಲ್ಲೂ ಚೀನಾ ಪ್ರಶಸ್ತಿ ಗಳಿಸಿತ್ತು.

ಭಾರತ ತಂಡ: ವಿಶ್ವನಾಥನ್ ಆನಂದ್‌, ಕೊನೆರು ಹಂಪಿ, ಹರಿಕಾ ದ್ರೋಣವಲ್ಲಿ, ವಿದಿತ್ ಸಂತೋಷ್ ಗುಜರಾತಿ (ನಾಯಕ), ಪಿ.ಹರಿಕೃಷ್ಣ, ಅರವಿಂದ್ ಚಿದಂಬರಂ, ಭಕ್ತಿ ಕುಲಕರ್ಣಿ, ಆರ್‌.ವೈಶಾಲಿ, ನಿಹಾಲ್ ಸರೀನ್‌, ಆರ್‌. ಪ್ರಜ್ಞಾನಂದ, ದಿವ್ಯಾ ದೇಶಮುಖ್‌, ವಂತಿಕಾ ಅಗರವಾಲ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT