ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌ಐಎಚ್‌ ವಿಶ್ವಕಪ್‌ ಹಾಕಿ: ನೆದರ್ಲೆಂಡ್ಸ್‌ ಗೆಲುವಿನ ಓಟ

ಆಸ್ಟ್ರೇಲಿಯಾ ವಿರುದ್ಧ ಡ್ರಾ ಸಾಧಿಸಿದ ಅರ್ಜೆಂಟೀನಾ
Last Updated 16 ಜನವರಿ 2023, 21:07 IST
ಅಕ್ಷರ ಗಾತ್ರ

ರೂರ್ಕೆಲಾ/ ಭುವನೇಶ್ವರ: ಚುರುಕಿನ ಆಟ ಮುಂದುವರಿಸಿದ ನೆದರ್ಲೆಂಡ್ಸ್‌ ತಂಡ ಎಫ್‌ಐಎಚ್‌ ವಿಶ್ವಕಪ್‌ ಹಾಕಿ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ಪಡೆಯಿತು.

ರೂರ್ಕೆಲಾದ ಬಿರ್ಸಾ ಮುಂಡಾ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಡಚ್ ತಂಡ 4–0 ಗೋಲುಗಳಿಂದ ನ್ಯೂಜಿಲೆಂಡ್‌ ವಿರುದ್ಧ ಗೆದ್ದಿತು. ಆರು ಪಾಯಿಂಟ್‌ಗಳೊಂದಿಗೆ ‘ಸಿ’ ಗುಂಪಿನಲ್ಲಿ ಅಗ್ರಸ್ಥಾನದಲ್ಲಿರುವ ನೆದರ್ಲೆಂಡ್ಸ್‌, ಕ್ವಾರ್ಟರ್‌ ಫೈನಲ್‌ ಸನಿಹ ತಲುಪಿತು.

ಥಿಯರಿ ಬ್ರಿಂಕ್‌ಮನ್‌ ಅವರು 2 ಹಾಗೂ 12ನೇ ನಿಮಿಷದಲ್ಲಿ ಸೊಗಸಾದ ಫೀಲ್ಡ್‌ ಗೋಲು ಗಳಿಸಿ ನೆದರ್ಲೆಂಡ್ಸ್‌ಗೆ ಮುನ್ನಡೆ ತಂದಿತ್ತರು. ಇತರ ಗೋಲುಗಳನ್ನು ಕೊಯೆನ್ ಬಿಜೆನ್ (19ನೇ ನಿ.) ಹಾಗೂ ಜೆಪ್‌ ಹೊಯೆದೆಮೇಕರ್ (54ನೇ ನಿ.) ಗಳಿಸಿದರು.

ಇದೇ ಗುಂಪಿನ ಇನ್ನೊಂದು ಪಂದ್ಯದಲ್ಲಿ ಮಲೇಷ್ಯಾ 3–2 ಗೋಲುಗಳಿಂದ ಚಿಲಿ ವಿರುದ್ಧ ಗೆದ್ದಿತು. ರಜೀ ರಹೀಂ (25ನೇ ನಿ.), ಅಶ್ರನ್‌ ಹಮ್ಸನಿ (46ನೇ ನಿ.) ಹಾಗೂ ನೊರ್ಸಿಯಾಫಿಕ್‌ ಸುಮಂತ್ರಿ (41ನೇ ನಿ.) ಅವರು ಗೋಲು ಗಳಿಸಿ ಮಲೇಷ್ಯಾ ಗೆಲುವಿಗೆ ಕಾರಣರಾದರು. ಚಿಲಿ ತಂಡದ ಪರ ಯುವಾನ್‌ ಅಮೊರೊಸೊ (19ನೇ ನಿ.) ಮತ್ತು ಮಾರ್ಟಿನ್‌ ರಾಡ್ರಿಗಸ್‌ (28ನೇ ನಿ.) ಚೆಂಡನ್ನು ಗುರಿ ಸೇರಿಸಿದರು.

ಆಸ್ಟ್ರೇಲಿಯಾ ಕಟ್ಟಿಹಾಕಿದ ಅರ್ಜೆಂಟೀನಾ: ‘ಎ’ ಗುಂಪಿನ ಪಂದ್ಯದಲ್ಲಿ ಅರ್ಜೆಂಟೀನಾ ತಂಡ ವು ಪ್ರಬಲ ಆಸ್ಟ್ರೇಲಿಯಾ ತಂಡವನ್ನು 3–3 ಗೋಲುಗಳ ಡ್ರಾದಲ್ಲಿ ಕಟ್ಟಿಹಾಕಿತು.

ಪ್ರಬಲ ಪೈಪೋಟಿ ನಡೆದ ಪಂದ್ಯದ 9ನೇ ನಿಮಿಷದಲ್ಲಿ ಜೆರೆಮಿ ಹೇವರ್ಡ್‌ ಅವರು ಆಸ್ಟ್ರೇಲಿಯಾಕ್ಕೆ ಮುನ್ನಡೆ ತಂದುಕೊಟ್ಟರು. ಡೇನಿಯಲ್‌ ಬಿಯೆಲ್‌ 29ನೇ ನಿಮಿಷದಲ್ಲಿ ಎರಡನೇ ಗೋಲು ಗಳಿಸಿದರು.

ಮರುಹೋರಾಟ ನಡೆಸಿದ ಅರ್ಜೆಂಟೀನಾ, ಥಾಮಸ್‌ ಡೊಮೆನೆ (18 ನೇ ನಿ.) ಹಾಗೂ ಮೈಸೊ ಕ್ಯಾಸೆಲ (32ನೇ ನಿ.) ಅವರ ಗೋಲುಗಳ ನೆರವಿನಿಂದ 2–2ರಲ್ಲಿ ಸಮಬಲ ಸಾಧಿಸಿತು.

48ನೇ ನಿಮಿಷದಲ್ಲಿ ಮಾರ್ಟಿನ್‌ ಫೆರೆರೊ, ಅರ್ಜೆಂಟೀನಾಕ್ಕೆ 3–2 ಮೇಲುಗೈ ತಂದಿತ್ತರು. ಪಂದ್ಯ ಕೊನೆಗೊಳ್ಳಲು ಮೂರು ನಿಮಿಷಗಳು ಇದ್ದಾಗ ಬ್ಲೇಕ್‌ ಗೋವರ್ಸ್‌ (57ನೇ ನಿ.) ಕಾಂಗರೂ ನಾಡಿನ ತಂಡಕ್ಕೆ ಸಮಬಲದ ಗೋಲು ತಂದುಕೊಟ್ಟರು.

ಇವೆರಡು ತಂಡಗಳು ತಲಾ ನಾಲ್ಕು ಪಾಯಿಂಟ್ಸ್‌ ಹೊಂದಿವೆ. ಉತ್ತಮ ಗೋಲು ಸರಾಸರಿಯಲ್ಲಿ ಆಸ್ಟ್ರೇಲಿಯಾ ಅಗ್ರಸ್ಥಾನದಲ್ಲಿದ್ದರೆ, ಅರ್ಜೆಂಟೀನಾ ನಂತರದ ಸ್ಥಾನದಲ್ಲಿದೆ.

ಇದೇ ಗುಂಪಿನ ಇನ್ನೊಂದು ಪಂದ್ಯದಲ್ಲಿ ಫ್ರಾನ್ಸ್‌ ತಂಡವು 2–1 ಗೋಲುಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT