ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌ಐಎಚ್‌ ಮಹಿಳಾ ಹಾಕಿ ಸಿರೀಸ್‌ ಫೈನಲ್ಸ್‌| ಗುರ್ಜಿತ್‌ 4 ಗೋಲು, ಸೆಮಿಗೆ ಭಾರತ

ಫಿಜಿ ತಂಡದ ವಿರುದ್ಧ 11–0 ಜಯಭೇರಿ
Last Updated 18 ಜೂನ್ 2019, 19:10 IST
ಅಕ್ಷರ ಗಾತ್ರ

ಹೀರೋಶಿಮಾ: ಗೋಲುಗಳ ಮಳೆ ಸುರಿಸಿದ ಭಾರತ ತಂಡ ಎಫ್‌ಐಎಚ್‌ ಮಹಿಳಾ ಹಾಕಿ ಸಿರೀಸ್‌ ಫೈನಲ್ಸ್‌ ಟೂರ್ನಿಯ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದೆ. ಗುರ್ಜಿತ್‌ ಕೌರ್‌ ಬಾರಿಸಿದ ನಾಲ್ಕು ಗೋಲುಗಳ ಬಲದಿಂದ ಮಂಗಳವಾರ ಫಿಜಿ ತಂಡವನ್ನು 11–0ಯಿಂದ ರಾಣಿ ರಾಂಪಾಲ್‌ ಪಡೆ ಮಣಿಸಿತು.

ತಂಡದ ಪರ ಗುರ್ಜಿತ್‌ ಕೌರ್‌, 15, 19, 21, 22ನೇ ನಿಮಿಷಗಳಲ್ಲಿ ಚೆಂಡನ್ನು ಗೋಲುಪೆಟ್ಟಿಗೆಗೆ ಸೇರಿಸಿದರು. ಮೋನಿಕಾ ದಾಖಲಿಸಿದ ಅವಳಿ ಗೋಲು (11, 33ನೇ ನಿಮಿಷ) ಭಾರತದ ಜಯವನ್ನು ಸುಲಭವಾಗಿಸಿದವು. ಲಾಲ್‌ ರೆಮ್ಸಿಯಾಮಿ (4ನೇ ನಿಮಿಷ), ರಾಣಿ (10ನೇ ನಿಮಿಷ), ವಂದನಾ ಕಟಾರಿಯಾ (12ನೇ ನಿಮಿಷ), ಲಿಲಿಮಾ ಮಿಂಜ್‌ (51ನೇ ನಿಮಿಷ) ಹಾಗೂ ನವನೀತ್‌ ಕೌರ್‌ (57ನೇ ನಿಮಿಷ) ಗೆಲುವಿನಲ್ಲಿ ಕೊಡುಗೆ ನೀಡಿದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ 9ನೇ ಸ್ಥಾನದಲ್ಲಿರುವ ಭಾರತ, ತನಗಿಂತ ಕೆಳ ಕ್ರಮಾಂಕದ ತಂಡದ ವಿರುದ್ಧ ಸಂಪೂರ್ಣ ಪ್ರಾಬಲ್ಯ ಮೆರೆಯಿತು. 60 ನಿಮಿಷಗಳ ಆಟದಲ್ಲಿ ಕೇವಲ ಒಂದು ಬಾರಿ ಎದುರಾಳಿಗೆ ತನ್ನ ವೃತ್ತ ಪ್ರವೇಶಿಸಲು ಅವಕಾಶ ನೀಡಿತು. 74 ಬಾರಿ ಫಿಜಿಯ ವೃತ್ತಕ್ಕೆ ಭಾರತ ನುಗ್ಗಿದ್ದು ಆಕ್ರಮಣಕಾರಿ ಆಟದ ವೈಖರಿಗೆ ಸಾಕ್ಷಿಯಾಗಿತ್ತು.

ನಾಲ್ಕನೇ ನಿಮಿಷದಲ್ಲೇ ಲಾಲ್‌ರೆಮ್ಸಿಯಾಮಿ ಮೂಲಕ ಫೀಲ್ಡ್‌ ಗೋಲು ದಾಖಲಾಯಿತು. ಆ ಬಳಿಕ ರಾಣಿ ಅವರು ಪೆನಾಲ್ಟಿ ಕಾರ್ನರ್‌ ಅವಕಾಶವನ್ನು ಗೋಲಾಗಿ ಪರಿವರ್ತಿಸಿದರು. ಮರು ನಿಮಿಷದಲ್ಲಿ ನೇಹಾ ಗೋಯಲ್‌ ಸಹಕಾರದೊಂದಿಗೆ ಮೋನಿಕಾ ಗೋಲು ಬಾರಿಸಿ 3–0 ಮುನ್ನಡೆ ತಂದರು. ವಂದನಾ
ಕಟಾರಿಯಾ 12ನೇ ನಿಮಿಷದಲ್ಲಿ ಗೋಲು ದಾಖಲಿಸುವಲ್ಲಿ ಯಶಸ್ವಿಯಾದರು.

ಪ್ರಥಮ ಕ್ವಾರ್ಟರ್‌ನ ಕೊನೆಯ ನಿಮಿಷದಲ್ಲಿ ಗುರ್ಜಿತ್‌ ಕೌರ್‌ ಪೆನಾಲ್ಟಿ ಕಾರ್ನರ್‌ ಮೂಲಕ ತಮ್ಮ ಮೊದಲ ಗೋಲು ದಾಖಲಿಸಿದರು. ಎರಡನೇ ಬಾರಿಯೂ ಪೆನಾಲ್ಟಿ ಕಾರ್ನರ್‌ನಲ್ಲಿಯೇ ಅವರಿಗೆ ಗೋಲು ಒಲಿಯಿತು. ಈ ವೇಳೆ ಭಾರತ 6–0 ಮುನ್ನಡೆಯಲ್ಲಿತ್ತು.

ಇದಾದ ಮೂರು ನಿಮಷದ ಅಂತರದಲ್ಲಿ ಗುರ್ಜಿತ್‌ ತಮ್ಮ ಹ್ಯಾಟ್ರಿಕ್‌ ಪೂರ್ಣಗೊಳಿಸಿದರು. 22ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ನಲ್ಲಿ ಮತ್ತೊಂದು ಬಾರಿ ಚೆಂಡು ಗುರಿ ಸೇರಿಸಿ ಭಾರತದ ಪಾಳಯದಲ್ಲಿ ಸಂತದ ಅಲೆ ಎಬ್ಬಿಸಿದರು.

ಮೂರನೇ ಕ್ವಾರ್ಟರ್‌ನ ಆರಂಭದಲ್ಲಿ ಮೋನಿಕಾ ಮೂಲಕ ಭಾರತ ಖಾತೆಗೆ 9ನೇ ಗೋಲು ಒಲಿದುಬಂತು. ಆ ಬಳಿಕ ಲಿಲಿಮಾ ಹಾಗೂ ನವನೀತ್‌ ಕೌರ್‌ ಕೂಡ ಗೋಲು ಖಾತೆಯಲ್ಲಿ ತಮ್ಮ ಹೆಸರು ಬರೆಸಿಕೊಂಡರು.

ಭಾರತ ಸೆಮಿಫೈನಲ್‌ ಪಂದ್ಯವನ್ನು ಶನಿವಾರ ಆಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT