ಮಂಗಳವಾರ, ಮಾರ್ಚ್ 21, 2023
29 °C
ವಿದೇಶದ ವ್ಯಕ್ತಿ: ಕ್ರೀಡಾಪಟು ಅಲ್ಲ ಎಂದು ಸ್ಪಷ್ಟನೆ ನೀಡಿದ ಆಯೋಜಕರು

ಟೋಕಿಯೊ ಒಲಿಂಪಿಕ್ಸ್‌: ಕ್ರೀಡಾ ಗ್ರಾಮದಲ್ಲೂ ಕೋವಿಡ್‌!

ಎಪಿ/ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ: ಒಲಿಂಪಿಕ್ಸ್‌ ಆರಂಭವಾಗಲು ಕೇವಲ ಒಂದು ವಾರ ಬಾಕಿ ಇರುವಾಗ ಕ್ರೀಡಾಗ್ರಾಮದಲ್ಲಿ ಕೋವಿಡ್ ಪ್ರಕರಣ ಪತ್ತೆಯಾಗಿದೆ. ಕ್ರೀಡಾಪಟು ಅಲ್ಲದ ವ್ಯಕ್ತಿಯೊಬ್ಬರಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಅವರು ಜಪಾನ್ ಪ್ರಜೆ ಅಲ್ಲ ಎಂದು ಆಯೋಜಕರು ಶನಿವಾರ ತಿಳಿಸಿದ್ದಾರೆ. 

ಆಯೋಜನಾ ಸಮಿತಿಯ ಅಧ್ಯಕ್ಷ ಸೀಕೊ ಹಾಶಿಮೊಟೊ ಸೇರಿದಂತೆ ಒಲಿಂಪಿಕ್ಸ್‌ಗೆ ಸಂಬಂಧಿಸಿದ ಎಲ್ಲ ಅಧಿಕಾರಿಗಳು ಸೋಂಕು ಪತ್ತೆಯಾದ ವಿಷಯವನ್ನು ದೃಢಪಡಿಸಿದ್ದಾರೆ. ಆದರೆ ಎಲ್ಲ ಮಾಹಿತಿಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದಿದ್ದಾರೆ. 

ಸೋಂಕು ಇರುವ ವ್ಯಕ್ತಿಯನ್ನು ಕ್ರೀಡಾಕೂಟಕ್ಕೆ ಸಂಬಂಧಪಟ್ಟವರು ಎಂದಷ್ಟೇ ಸದ್ಯ ಗುರುತಿಸಬಹುದಾಗಿದ್ದು ಅವರನ್ನು 14 ದಿನಗಳ ಪ್ರತ್ಯೇಕವಾಸಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಲಾಗಿದೆ. ಜಪಾನಿಯರಿಂದ ಅಥವಾ ಹೊರಗಿನ ಯಾವುದೇ ವ್ಯಕ್ತಿಯಿಂದ ಕ್ರೀಡಾಗ್ರಾಮಕ್ಕೆ ವೈರಸ್ ಬರಲು ಸಾಧ್ಯವಿಲ್ಲ ಎಂದು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಧ್ಯಕ್ಷ ಥಾಮಸ್ ಬಾಕ್ ಅಭಯ ನೀಡಿದ ಕೆಲವೇ ದಿನಗಳಲ್ಲಿ ಈ ಆತಂಕಕಾರಿ ವಿಷಯ ಬಹಿರಂಗಗೊಂಡಿದೆ.

ಟೋಕಿಯೊ ನಗರಕ್ಕೆ ಹೊಂದಿಕೊಂಡಿರುವ ಜಾಗದಲ್ಲಿ ನಿರ್ಮಿಸಿರುವ ಕ್ರೀಡಾಗ್ರಾನದಲ್ಲಿ ಒಲಿಂಪಿಕ್ಸ್ ಸಂದರ್ಭದಲ್ಲಿ 11 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ವಾಸಿಸಲಿದ್ದಾರೆ. 

ಜುಲೈ ಒಂದರಿಂದ ಶನಿವಾರದ ವರೆಗೆ ಒಲಿಂಪಿಕ್ಸ್‌ಗೆ ಸಂಬಂಧಿಸಿದ 45 ಮಂದಿಯಲ್ಲಿ ಕೋವಿಡ್ ಕಾಣಿಸಿಕೊಂಡಿದೆ. ಆದರೆ ಕ್ರೀಡಾಗ್ರಾಮದಲ್ಲಿ ಇದು ಮೊದಲ ಪ್ರಕರಣವಾಗಿದ್ದು ಅವರು ಗುತ್ತಿಗೆ ಪಡೆದ ವ್ಯಕ್ತಿಯೊಬ್ಬರ ಕಡೆಯವರು ಎಂದು ಆಯೋಜಕರು ಹೇಳಿದ್ದಾರೆ. ಸೋಂಕು ಪತ್ತೆಯಾದವರಲ್ಲಿ ಒಬ್ಬರು ಅಥ್ಲೀಟ್ ಮತ್ತು ಮೂವರು ಮಾಧ್ಯಮದವರು. 45 ಮಂದಿಯಲ್ಲಿ 12 ಮಂದಿ ವಿದೇಶಿಯರು ಎಂದು ವಿವರಿಸಿದ್ದಾರೆ. 

ಒಲಿಂಪಿಕ್ಸ್‌ಗೆ ಬೆಂಬಲ ನೀಡಿ: ಬಾಕ್

ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದು ಜನರು ಆತಂಕದಲ್ಲಿದ್ದರೂ ಒಲಿಂಪಿಕ್ಸ್‌ಗೆ ಬೆಂಬಲ ನೀಡುವಂತೆ ಥಾಮಸ್ ಬಾಕ್ ಜಪಾನ್ ಪ್ರಜೆಗಳನ್ನು ಕೋರಿದ್ದಾರೆ.

ನಾಲ್ಕು ದಿನಗಳ ಹಿಂದೆ ಇಲ್ಲಿಗೆ ಬಂದ ನಂತರ ಸ್ಥಳೀಯರಿಂದ ಪ್ರತಿಭಟನೆಯ ಬಿಸಿ ಎದುರಿಸುತ್ತಿರುವ ಬಾಕ್ ‘ಪರಿಸ್ಥಿತಿಯ ಗಾಂಭೀರ್ಯವನ್ನು ಅರ್ಥ ಮಾಡಿಕೊಂಡಿದ್ದೇನೆ. ಆದರೂ ಕ್ರೀಡಾಪಟುಗಳನ್ನು ಆತ್ಮೀಯವಾಗಿ ಸ್ವಾಗತಿಸಿ ಒಲಿಂಪಿಕ್ಸ್ ಸುಸೂತ್ರವಾಗಿ ನಡೆಯುವಂತೆ ಮಾಡಲು ಮುಂದಾಗಬೇಕು’ ಎಂದು ಮನವಿ ಮಾಡಿಕೊಂಡಿದ್ದಾರೆ.

ಜಪಾನ್ ವಿರೋಧಿ ಫಲಕ ತೆರವು

ಕ್ರೀಡಾಗ್ರಾಮದ ತಮ್ಮ ವಾಸ ಸ್ಥಳದ ಆವರಣದಲ್ಲಿ ಹಾಕಿದ್ದ ಜಪಾನ್ ವಿರೋಧಿ ಫಲಕವನ್ನು ದಕ್ಷಿಣ ಕೊರಿಯಾ ತೆರವುಗೊಳಿಸಿದೆ. ಫಲಕ ಹಾಕುವ ಮೂಲಕ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿದೆ ಎಂದು ಕೊರಿಯಾ ತಂಡದ ಮೇಲೆ ಆರೋಪ ಎದ್ದಿತ್ತು.

ಕ್ರೀಡಾಪಟುಗಳ ಕೊಠಡಿಯ ಎದುರು ನೇತು ಹಾಕಲಾಗಿದ್ದ ಫಲಕಗಳಲ್ಲಿ ’50 ಮಿಲಿಯ ಕೊರಿಯನ್ ಜನರಿಂದ ನನಗೆ ಬೆಂಬಲ ಇದೆ’ ಎಂದು ಕೊರಿಯಾ ಭಾಷೆಯಲ್ಲಿ ಬರೆಯಲಾಗಿತ್ತು. 1592ರಿಂದ 1598ರ ಅವಧಿಯಲ್ಲಿ ಕೊರಿಯಾ ಮೇಲೆ ಜಪಾನ್‌ ಆಕ್ರಮಣ ನಡೆಸಿದ ಸಂದರ್ಭದಲ್ಲಿ ನಡೆದ ನೌಕಾಪಡೆಗಳ ನಡುವಿನ ಯುದ್ಧದ ಸಂದರ್ಭವನ್ನು ಈ ಘೋಷಣೆ ಮೂಲಕ ನೆನಪಿಸಲಾಗಿತ್ತು. ದ್ವೀಪವೊಂದಕ್ಕೆ ಸಂಬಂಧಿಸಿ ಉಭಯ ರಾಷ್ಟ್ರಗಳ ನಡುವೆ ಈಗಲೂ ವಿವಾದ ಇದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು