ಫಿಟ್‌ನೆಸ್‌ ಮಂತ್ರಕ್ಕೆ ‘ಯೋಗ’ ಬಲ

7

ಫಿಟ್‌ನೆಸ್‌ ಮಂತ್ರಕ್ಕೆ ‘ಯೋಗ’ ಬಲ

Published:
Updated:
Deccan Herald

ಐದಾರು ವರ್ಷಗಳಲ್ಲಿ ಕಬಡ್ಡಿ ಪಡೆದುಕೊಂಡ ಖ್ಯಾತಿ ಎಷ್ಟೆಂಬುದು ಎಲ್ಲರಿಗೂ ಗೊತ್ತೇ ಇದೆ. ರೈಡಿಂಗ್‌ ಮತ್ತು ರಕ್ಷಣಾ ವಿಭಾಗದಲ್ಲಿ ಆಟಗಾರರು ತೋರುವ ಚುರುಕುತನವನ್ನು ವಾಹಿನಿಗಳಲ್ಲಿ ಆಕರ್ಷಕವಾಗಿ ಪ್ರಸಾರ ಮಾಡಲಾಗುತ್ತಿದೆ. ಇದರಿಂದ ಕಬಡ್ಡಿಗೆ ವೃತ್ತಿಪರತೆಯ ಹೊಳಪು ಬಂದಿದ್ದು ಈಗ ಇತಿಹಾಸ. 2016ರ ಒಂದೇ ವರ್ಷದಲ್ಲಿ ಆಟಗಾರರು ಎರಡೆರೆಡು ಬಾರಿ ಪ್ರೊ ಕಬಡ್ಡಿ ಟೂರ್ನಿಗಳಲ್ಲಿ ಆಡಿದರು. ಸುಮಾರು ಆರು ತಿಂಗಳು ‘ಕಬಡ್ಡಿ.... ಕಬಡ್ಡಿ...’ ಅಂದರು.

ದೈಹಿಕವಾಗಿ ಸಾಕಷ್ಟು ಶ್ರಮ ಬೇಕಾಗುವ ಕಬಡ್ಡಿಯಲ್ಲಿ ಗ್ರಾಮೀಣ ಪ್ರದೇಶದಿಂದ ಬಂದ ಅನೇಕ ಆಟಗಾರರು ಯಶಸ್ಸು ಕಂಡಿದ್ದಾರೆ. ಒಂದು ಪಂದ್ಯ ಆಡಿದರೆ ನಯಾಪೈಸೆಯೂ ಲಭಿಸದ ಕಾಲದಲ್ಲಿಯೂ ಅನೇಕರು ಗೌರವಕ್ಕಾಗಿ ಕಬಡ್ಡಿ ಆಡಿದ್ದಾರೆ. ಆದರೆ, ಈಗ ವೃತ್ತಿಪರ ಕ್ರೀಡೆಯಾಗಿ ಬದಲಾದ ಬಳಿಕ ಆಟಗಾರರನಿಗೆ ಲಕ್ಷಾಂತರ ರೂಪಾಯಿ ಸಂಭಾವನೆ ಲಭಿಸುತ್ತಿದೆ. ಪಂಚತಾರಾ ಹೋಟೆಲ್‌ಗಳಲ್ಲಿ ವಾಸ್ತವ್ಯ, ವಿಮಾನಗಳಲ್ಲಿ ಪ್ರಯಾಣ, ಸೆಲೆಬ್ರೆಟಿಗಳ ಪಟ್ಟ ಲಭಿಸಿದೆ. ಆಟಗಾರರು ನಿರಂತರವಾಗಿ ಫಿಟ್‌ನೆಸ್‌ ಉಳಿಸಿಕೊಂಡಿದ್ದೇ ಇದಕ್ಕೆಲ್ಲ ಕಾರಣ.

ಮಹಾರಾಷ್ಟ್ರದ ಸಾಂಗ್ಲಿಯ ಕಾಶಿಲಿಂಗ ಅಡಕೆ ಈಗ ಕಬಡ್ಡಿ ಪ್ರಿಯರ ಕಣ್ಮಣಿ. ಐದು ಅಡಿ ಎಂಟು ಇಂಚು ಉದ್ದದ ಆಜಾನುಭಾಹು ದೇಹ ಹೊಂದಿರುವ ಅಡಕೆ ರೈಡಿಂಗ್‌ಗೆ ಹೋದರೆ ಎದುರಾಳಿ ತಂಡದ ಆಟಗಾರರಲ್ಲಿ ನಡುಕ. ಇದಕ್ಕೆಲ್ಲ ಯೋಗ ಮತ್ತು ಆಹಾರ ಶೈಲಿಯೇ ಕಾರಣ ಎಂದು ಅಡಕೆ ಹೇಳುತ್ತಾರೆ.

ಪ್ರತಿ ಕಬಡ್ಡಿ ತಂಡಗಳಲ್ಲಿರುವ ಕೋಚ್‌ ಮತ್ತು ಫಿಸಿಯೊಗಳು ಕೂಡ ಫಿಟ್‌ನೆಸ್‌ ಮಂತ್ರ ಪಠಿಸುತ್ತಿದ್ದಾರೆ. ತರಬೇತಿ ನೀಡುವ ವಿಧಾನದಲ್ಲಿ ಕೋಚ್‌ ಬಳಸುವ ಕೌಶಲ, ಈಜು, ಜಿಮ್‌ ಮತ್ತು ಯೋಗದಿಂದ ಫಿಟ್‌ನೆಸ್‌ ಗಳಿಸಿಕೊಳ್ಳಲು ಆಟಗಾರರಿಗೆ ಸಾಧ್ಯವಾಗುತ್ತಿದೆ. ಟೂರ್ನಿ ಮುಗಿದ ಬಳಿಕವೂ ಕಾಶಿಲಿಂಗ ಅಡಕೆ ವಾರದಲ್ಲಿ ಐದು ದಿನ ದೈಹಿಕ ಕಸರತ್ತು ಮಾಡುತ್ತಾರೆ.

ಬೆಳಿಗ್ಗೆ 6.30ರಿಂದ ಫಿಟ್‌ನೆಸ್‌ಗಾಗಿ ಕೆಲಸ ಆರಂಭಿಸುವ ಅಡಕೆ ನಿತ್ಯ ಆರೇಳು ಗಂಟೆ ಇದಕ್ಕಾಗಿ ಸಮಯ ಮೀಸಲಿಡುತ್ತಾರೆ. ಬೆಳಿಗ್ಗೆ ಕನಿಷ್ಠ ನಾಲ್ಕರಿಂದ ಐದು ಕಿ.ಮೀ. ತನಕ ಓಡಿ ದೇಹದ ಭಾಗಗಳನ್ನು ಸಡಿಲಿಸಿಕೊಳ್ಳುತ್ತಾರೆ. ನಂತರ ವ್ಯಾಯಾಮ ಮಾಡುತ್ತಾರೆ. ವ್ಯಾಯಾಮದಷ್ಟೇ ಮಹತ್ವವನ್ನು ಆಹಾರಕ್ಕೂ ನೀಡುತ್ತಾರೆ. ಪೌಷ್ಟಿಕ ಆಹಾರ ನಿಯಮಿತವಾಗಿ ನೀಡಲು ಪ್ರತಿ ತಂಡದಲ್ಲಿ ತಜ್ಞರಿದ್ದಾರೆ. ತಜ್ಞರು ನೀಡುವ ಸಲಹೆಯಂತೆ ಮಾತ್ರ ಆಟಗಾರರು ಆಹಾರ ಸೇವಿಸುತ್ತಾರೆ.

ಸಿಹಿತಿಂಡಿಯಿಂದ ದೂರ

ಫಿಟ್‌ನೆಸ್‌ ಕಾಪಾಡಿಕೊಳ್ಳಲು ಸಿಹಿತಿಂಡಿಯಿಂದ ದೂರ ಉಳಿದಿದ್ದೇ ನನ್ನ ಯಶಸ್ಸಿನ ಮಂತ್ರ ಎನ್ನುತ್ತಾರೆ ಅಡಕೆ.

‘ಸಾಧ್ಯವಾದಷ್ಟು ಸಿಹಿತಿಂಡಿಯಿಂದ ದೂರ ಇರುತ್ತೇನೆ. ತಿನ್ನಲೇಬೇಕು ಎನಿಸಿದರೆ ಟೂರ್ನಿ ಮುಗಿದ ಬಳಿಕ ಒಂದೇ ಸಲ ಎಷ್ಟು ಬೇಕು ಅಷ್ಟು ತಿನ್ನುತ್ತೇನೆ. ಸೌತೇಕಾಯಿ, ಮೂಲಂಗಿ, ಕ್ಯಾರೆಟ್‌, ಟಮೊಟೊ, ಮೊಟ್ಟೆ ಹೆಚ್ಚಾಗಿ ತಿನ್ನುತ್ತೇನೆ. ಬೇಯಿಸಿದ ತರಕಾರಿಗೂ ಆದ್ಯತೆ ಕೊಡುತ್ತೇನೆ’ ಎನ್ನುತ್ತಾರೆ ಅಡಕೆ.

25 ವರ್ಷದ ಕಾಶಿಲಿಂಗ ಅಡಕೆ ವೃತ್ತಿಪರ ಕಬಡ್ಡಿ ಆಟಗಾರನಾಗಿ ಬದಲಾಗಿ ಆರು ವರ್ಷಗಳು ಕಳೆದಿವೆ. ನಿರಂತರವಾಗಿ ಫಿಟ್‌ನೆಸ್‌ಗೆ ಒತ್ತು ಕೊಡುವುದರಿಂದ ಇದುವರೆಗೆ ಅವರು ಪದೇ ಪದೇ ಗಾಯದ ಸಮಸ್ಯೆ ಎದುರಿಸಿಲ್ಲ. ಅವರ ದೇಹಸೌಂದರ್ಯ ಆಟದ ಅಂದವನ್ನೂ ಹೆಚ್ಚಿಸಿದೆ.

ರೈಡಿಂಗ್‌ ಪ್ರಿಯರ ನೆಚ್ಚಿನ ಆಟಗಾರ

ಕಾಶಿಲಿಂಗ ಅಡಕೆ ರೈಡಿಂಗ್‌ ವೇಳೆ ಲೆಫ್ಟ್‌ವಿಂಗ್ ಮತ್ತು ರೈಟ್‌ವಿಂಗ್‌ ಎರಡೂ ಬದಿಯಿಂದ ಸುಲಭವಾಗಿ ನುಗ್ಗಿ ಅಂಕ ಗಳಿಸುವ ಚಾಣಾಕ್ಷತನ ಮತ್ತು ಪಾದರಸದ ವೇಗ ಹೊಂದಿದ್ದಾರೆ.

ಇದರಿಂದ ಅಡಕೆ ಪಂದ್ಯದ ಮೊದಲರ್ಧದಲ್ಲಿ ರೈಡಿಂಗ್‌ ಮೂಲಕವೇ 15 ಅಂಕಗಳನ್ನು ಗಳಿಸಿದ ಮೊದಲ ಆಟಗಾರ ಎನ್ನುವ ಹೆಗ್ಗಳಿಕೆ ಪಡೆದುಕೊಂಡಿದ್ದಾರೆ. ದಬಾಂಗ್‌ ಡೆಲ್ಲಿ ತಂಡದಲ್ಲಿ ಮೊದಲ ನಾಲ್ಕು ಆವೃತ್ತಿಗಳಲ್ಲಿ ಆಡಿದ್ದರು. ಐದನೇ ಆವೃತ್ತಿಯಲ್ಲಿ ಯು ಮುಂಬಾ ತಂಡದಲ್ಲಿದ್ದರು. ಆರನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್ ತಂಡದಲ್ಲಿದ್ದಾರೆ.

ರೈಡಿಂಗ್‌ನಲ್ಲಿ ಗಳಿಸಿದ ಖ್ಯಾತಿ ಬೇರೆ ವಿಭಾಗಕ್ಕೂ ವಿಸ್ತರಿಸಬೇಕು ಎನ್ನುವುದು ಅಡಕೆ ಅವರ ಸದ್ಯದ ಗುರಿ.

‘ರೈಡಿಂಗ್‌ ವೇಳೆ ಬೋನಸ್‌ ಅಂಕ ಗಳಿಸುವುದು, ಕೈ ಹಾಗೂ ಪಾದದ ಬೆರಳು ಮುಟ್ಟುವುದು ಹೀಗೆ ಹಲವು ತಂತ್ರಗಳನ್ನು ಅನುಸರಿಸಿ ಅಂಕ ಕಲೆಹಾಕಲು ಯೋಜಿಸುತ್ತೇನೆ. ಆದ್ದರಿಂದ ಈ ಬಾರಿ ರಕ್ಷಣಾ ವಿಭಾಗದ ಕೌಶಲಗಳನ್ನು ಕಲಿಯುವ ಆಸಕ್ತಿ ಹೊಂದಿದ್ದೇನೆ. ಇದಕ್ಕಾಗಿ ಕಠಿಣ ಅಭ್ಯಾಸದಲ್ಲಿ ತೊಡಗಿದ್ದೇನೆ’ ಎಂದು ಬೆಂಗಳೂರು ಬುಲ್ಸ್ ತಂಡದ ಸ್ಟಾರ್‌ ಆಟಗಾರ ಅಡಕೆ ಹೇಳುತ್ತಾರೆ.‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !