ಶನಿವಾರ, ಜೂನ್ 6, 2020
27 °C

ನಿಗದಿತ ಗುರಿ; ಫಿಟ್‌ನೆಸ್‌ ಸಲೀಸು

ಬಸವರಾಜ ದಳವಾಯಿ Updated:

ಅಕ್ಷರ ಗಾತ್ರ : | |

Prajavani

ಇದು ಕ್ರೀಡಾಪಟುಗಳು, ಜನಸಾಮಾನ್ಯರ ಫಿಟ್‌ನೆಸ್‌ಗೆ ಪರೀಕ್ಷೆಯ ಕಾಲ. ಕೊರೊನಾ ಸೋಂಕು ಮಾಹಾಮಾರಿಯ ಕಾರಣ ಜಾರಿಯಲ್ಲಿರುವ ಲಾಕ್‌ಡೌನ್‌, ಅವರ ದೈಹಿಕ ಹಾಗೂ ಮಾನಸಿಕ ಫಿಟ್‌ನೆಸ್‌ಗಳ ಮೇಲೆ ಪರಿಣಾಮ ಬೀರಿದೆ. ಈ ವೇಳೆ ‘ಗೃಹಬಂಧನ’ದಲ್ಲಿದ್ದರೂ ದೇಹವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳುವುದು ಹೇಗೆ? ಮಾನಸಿಕ ಸ್ಥಿಮಿತ ಕಾಪಾಡಿಕೊಳ್ಳುವುದು ಹೇಗೆ... ಎಂಬಿತ್ಯಾದಿ ಸಂದೇಹಗಳಿಗೆ ಡಾ. ಹರೀಶ್‌ ಪುರಾಣಿಕ್‌ ಉತ್ತರ ನೀಡಿದ್ದಾರೆ.

ಇಂಗ್ಲೆಂಡ್‌ನ ಸೌತ್‌ ವೇಲ್ಸ್‌ ವಿಶ್ವವಿದ್ಯಾನಿಲಯದಿಂದ ‘ಸ್ಪೋರ್ಟ್ಸ್‌ ಆ್ಯಂಡ್‌ ಎಕ್ಸರ್‌ಸೈಜ್‌ ಮೆಡಿಸಿನ್‌’ ವಿಷಯದ ಮೇಲೆ ಎಂ.ಎಸ್ಸಿ ಡಿಪ್ಲೊಮಾ ಪದವಿ ಪಡೆದಿರುವ ಅವರು, ಸದ್ಯ ಬೆಂಗಳೂರಿನ ಸ್ಪರ್ಷ್‌ ಆಸ್ಪತ್ರೆಯಲ್ಲಿ ‘ಕ್ರೀಡಾಪಟುಗಳಿಗೆ ಆಗುವ ಗಾಯಗಳು ಹಾಗೂ ಆರ್ಥೋಸ್ಕೋಪಿಕ್‌ ಸರ್ಜರಿ ನಿರ್ವಹಿಸುವ ‘ಸ್ಪೋರ್ಥೊ’ ಸೆಂಟರ್‌ನಲ್ಲಿ ಮುಖ್ಯ ಸರ್ಜನ್‌ ಆಗಿದ್ದಾರೆ.

ಲಾಕ್‌ಡೌನ್‌ ಕಾರಣ ಕ್ರೀಡಾಪಟುಗಳು ಬಹಳ ದಿನಗಳಿಂದ ಕ್ರೀಡೆ ಮತ್ತು ಜಿಮ್‌ನಿಂದ ಹೊರಗುಳಿದಿದ್ದಾರೆ. ಫಿಟ್‌ನೆಸ್‌ಗಾಗಿ ಅವರು ಯಾವ ರೀತಿಯ ವ್ಯಾಯಾಮಗಳನ್ನು ಆರಿಸಿಕೊಳ್ಳಬಹುದು?

ವ್ಯಾಯಾಮದಲ್ಲಿ ಒಂದು ನಿಗದಿತ ಗುರಿ ಇದೆ. ಒಂದು ವಾರದಲ್ಲಿ ಐದು ದಿನ 30 ನಿಮಿಷ (ಪ್ರತಿ ದಿನ) ವಾಕಿಂಗ್‌ ಮಾಡಬೇಕು. ಅದಾಗದಿದ್ದರೆ ಮನೆಯಲ್ಲೇ ಇದ್ದು ಅಷ್ಟೇ ಹೊತ್ತು ಸ್ಕಿಪ್ಪಿಂಗ್‌ ಮಾಡಬಹುದು. ನಮ್ಮ ದೇಹವನ್ನೇ ತೂಕ ಅಂದುಕೊಂಡು ಪುಷ್‌ ಅಪ್‌ ಅಥವಾ ಪುಲ್‌ ಅಪ್‌ ಮಾಡಬಹುದು. ಥೆರಾ ಬ್ಯಾಂಡ್‌ನಿಂದ ಸ್ನಾಯುಗಳಿಗೆ ಬಲ ಸಿಗುತ್ತದೆ. ಕ್ರಿಕೆಟ್‌ನಲ್ಲಿ ಬೌಲರ್‌ಗಳ ಕೈಗೆ ಹೆಚ್ಚು ಬಲ ಬೇಕಾಗುತ್ತದೆ. ಅವರು ರನ್ನಿಂಗ್‌ಗೆ ಒತ್ತು ಕೊಡಬೇಕು. ಬೇರೆ ಬೇರೆ ಕ್ರೀಡೆಗೆ ವಿಧಾನ ಸ್ವಲ್ಪ ಬೇರೆ ಇದ್ದರೂ‌ ಅಂತಿಮವಾಗಿ ವ್ಯಾಯಾಮದ ಗುರಿ ಮುಟ್ಟಲು ಪ್ರಯತ್ನಿಸುವುದು ಮುಖ್ಯವಾಗುತ್ತದೆ.

ಜನಸಾಮಾನ್ಯರು ಈಗ ದೈಹಿಕ ಕಸರತ್ತಿನಿಂದ ದೂರವಿದ್ದಾರೆ. ಅವರು ಬೊಜ್ಜು ಬೆಳೆಸಿಕೊಳ್ಳುವ ಅಪಾಯವಿದೆ. ಅವರಿಗೆ ನಿಮ್ಮ ಸಲಹೆಗಳೇನು?

ಇದಕ್ಕೊಂದು ಮಾನದಂಡವಿದೆ. ಸಾಮಾನ್ಯವಾಗಿ ಎರಡು ತರಹದ ವ್ಯಾಯಾಮಗಳನ್ನು ನಾವು ಸೂಚಿಸುತ್ತೇವೆ. ಹೃದಯ ಮತ್ತು ರಕ್ತನಾಳಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕಾದ ವ್ಯಾಯಾಮಗಳು. ಹೊರಗಡೆ ಹೋಗಿ ನಿರ್ವಹಿಸಲು ಅವಕಾಶವಿದ್ದ ಸಂದರ್ಭದಲ್ಲಿ ಜಾಗಿಂಗ್‌, ವಾಕಿಂಗ್‌ ಮತ್ತು ಸ್ವಿಮ್ಮಿಂಗ್‌‌ ಮೂಲಕ ಸಾಧ್ಯವಾಗಿಸಬಹುದು. ಲಾಕ್‌ಡೌನ್‌ ಕಾರಣ ಅದಕ್ಕೆ ಸಮನಾದ ಎರಡು ರೀತಿಯ ವ್ಯಾಯಾಮಗಳಿಗೆ ಮೊರೆ ಹೋಗಬಹುದು. ಸ್ಕಿಪ್ಪಿಂಗ್‌‌ ಅಥವಾ ಏರೊಬಿಕ್ಸ್‌. ದೇಹದಲ್ಲಿ ಕೊಬ್ಬು ಶೇಖರಣೆಯಾಗುತ್ತಿರುವಂತೆ ಮಾಂಸ ಖಂಡಗಳು ಶಕ್ತಹೀನವಾಗುತ್ತ ಸಾಗುತ್ತವೆ. ಭಾರ ಎತ್ತುವ ವ್ಯಾಯಾಮಗಳಾದ ಪುಷ್‌ ಅಪ್‌, ಪುಲ್‌ ಅಪ್, ಥೆರಾ ಬ್ಯಾಂಡ್‌ ಮೂಲಕ ಅವುಗಳಿಗೆ ಬಲ ಕೊಡಬಹುದು. ಇವುಗಳನ್ನು ಒಂದು ವಾರದಲ್ಲಿ ಕನಿಷ್ಠ ಮೂರು ದಿನಗಳ ಕಾಲವಾದರೂ ಮಾಡಬೇಕು.

ಹಠಾತ್ತಾಗಿ ವ್ಯಾಯಾಮ ನಿಲ್ಲಿಸಿದಾಗ ದೇಹದಲ್ಲಾಗುವ ತೊಂದರೆಗಳೇನು?

ಯುವಕರಿಗೆ ಅಷ್ಟೇನೂ ತೊಂದರೆ ಆಗದಿರಬಹುದು. ಆದರೆ ಕ್ರೀಡಾಪಟುಗಳು ಆಟಕ್ಕೆ ಮರಳಿದಾಗ ಗಾಯಗೊಳ್ಳುವ ಸಾಧ್ಯತೆ ಹೆಚ್ಚು. ಮಧ್ಯ ವಯಸ್ಕರಿಗೆ ಕೊಬ್ಬು ಶೇಖರಣೆ, ಮಧುಮೇಹ, ಅಧಿಕ ರಕ್ತದೊತ್ತಡ, ಖಿನ್ನತೆ ಕಾಡುತ್ತವೆ. ರೋಗನಿರೋಧಕ ಶಕ್ತಿಯೂ ಕುಂಠಿತಗೊಳ್ಳಬಹುದು. ವ್ಯಾಯಾಮದ ಮೂಲಕ ನಿಯಂತ್ರಣದಲ್ಲಿದ್ದ ಇವು ಈ ವೇಳೆ ಹೆಚ್ಚಾಗಿ ಕಾಡಬಹುದು.

ಮಧುಮೇಹಿಗಳು, ರಕ್ತದೊತ್ತಡ ಇರುವವರು ಇಂಥ ಸಂದರ್ಭಗಳಲ್ಲಿ ಉದ್ಯಾನ, ಮೈದಾನಗಳಿಗೆ ಹೋಗಿ ಲಘು ವ್ಯಾಯಾಮ ನಿರ್ವಹಿಸುವುದು ಕಷ್ಟ. ಅವರಿಗೆ ನಿಮ್ಮ ಸಲಹೆಗಳೇನು?

ಅವರು ತೆಗೆದುಕೊಳ್ಳುವ ಆಹಾರದಲ್ಲಿ ಅಲ್ಪ ಬದಲಾವಣೆ ಮಾಡಿಕೊಳ್ಳಬಹುದು. ಕಾಯಿಲೆಯಿದ್ದವರು, ಲಾಕ್‌ಡೌನ್‌ನಿಂದ ಮುಂಚೆ ಮಾಡುತ್ತಿದ್ದ ವ್ಯಾಯಾಮಗಳನ್ನು (ಸ್ಕಿಪ್ಪಿಂಗ್‌, ಏರೊಬಿಕ್‌, ಸೈಕ್ಲಿಂಗ್‌) ಮನೆಯಲ್ಲೇ ಮಾಡಬಹುದು.

ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ರೋಗ ನಿರೋಧಕ ಶಕ್ತಿ ಹೆಚ್ಚು ಅವಶ್ಯಕ ಎನ್ನಲಾಗುತ್ತದೆ. ಇದರ ಬಗ್ಗೆ ನಿಮ್ಮ ಅನಿಸಿಕೆ?

ರೋಗನಿರೋಧಕ ಶಕ್ತಿ ವಂಶವಾಹಿನಿಗಳ ಮೂಲಕ ಬರಬಹುದು. ಇದು ಹೆಚ್ಚಾಗಿ ಮನುಷ್ಯನ ನಿಯಂತ್ರಣದಲ್ಲಿರುವುದಿಲ್ಲ. ನಾವು ತೆಗೆದುಕೊಳ್ಳುವ ಆಹಾರ, ಎಣ್ಣೆ ಅಂಶ, ಜಂಕ್‌ ಫುಡ್‌ಗಳು ರೋಗನಿರೋಧಕ ಶಕ್ತಿಯನ್ನು ನಿರ್ಧರಿಸುತ್ತವೆ. ಹಸಿರು ತರಕಾರಿಗಳು, ನೈರ್ಮಲ್ಯ ಕಾಪಾಡುವ  ಮೂಲಕ ಈ ಶಕ್ತಿ ಹೆಚ್ಚಿಸಿಕೊಳ್ಳಬಹುದು. ಸೋಂಕು ಪ್ರವೇಶ ತಡೆಯಲು ಮುಖಗವಸು ಧರಿಸುವುದು, ಆಗಾಗ ಕೈ ತೊಳೆಯುವುದೂ ಅವಶ್ಯಕ. ಸೂಕ್ತ ನಿದ್ದೆ ಹಾಗೂ ವ್ಯಾಯಾಮಗಳ ಮೂಲಕವೂ ರೋಗ ನಿರೋಧಕ ಹೆಚ್ಚಿಸಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು