ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರ ಆರೋಗ್ಯ- ಸೆಳೆಯುವ ಮೈಮಾಟಕೆ ಶ್ರದ್ಧೆ ಬೇಕು

Last Updated 14 ಅಕ್ಟೋಬರ್ 2019, 3:16 IST
ಅಕ್ಷರ ಗಾತ್ರ

35 ದಾಟಿದ ಮಹಿಳೆಯರು, ಅದರಲ್ಲೂ ಮದುವೆ ಹಾಗೂ ತಾಯ್ತನದ ಹಂತಗಳನ್ನು ದಾಟಿದವರು ಆಕರ್ಷಕ ಮೈಮಾಟವನ್ನು ಮರಳಿ ಪಡೆಯಬೇಕೆಂದರೆ ಸಾಕಷ್ಟು ಪರಿಶ್ರಮ ಪಡಬೇಕು. ತೂಕ ಮಾಡಿ ತಿನ್ನಬೇಕು. ಮೈಚಳಿ ಬಿಟ್ಟು ಮೈದಂಡಿಸಬೇಕು, ಮನಸಿಗಾಗಿ ಯೋಗ–ಧ್ಯಾನವೂ ಇರಬೇಕು. ಅಳತೆಯಲ್ಲಿ ಬಾಳಿದಾಗಲೇ ಕಾಯ ಬಳುಕುವುದು ಎನ್ನುತ್ತಾರೆ ‘ಮಿಸೆಸ್ ಇಂಡಿಯಾ ವರ್ಲ್ಡ್‌ ವೈಡ್’ ವಿಜೇತೆ ಶ್ವೇತಾ ನಿರಂಜನ್‌.

ಜೈಪುರದಲ್ಲಿ ಈತ್ತೀಚೆಗೆ ನಡೆದ ‘ಮಿಸೆಸ್ ಇಂಡಿಯಾ ವರ್ಲ್ಡ್‌ ವೈಡ್’ ಸ್ಪರ್ಧೆಯಲ್ಲಿ ವಿಜೇತರಾಗಿರುವ ಬೆಂಗಳೂರಿನ ಶ್ವೇತಾ ನಿರಂಜನ್ ಸಿಂಗಪುರದಲ್ಲಿ ನಡೆಯಲಿರುವ ‘ಮಿಸೆಸ್ ವರ್ಲ್ಡ್‌ ವೈಡ್’ ಅಂತರರಾಷ್ಟ್ರೀಯ ಸೌಂದರ್ಯ ಸ್ಪರ್ಧೆಗೆ ಸಜ್ಜಾಗುತ್ತಿದ್ದಾರೆ. ನಡುವಯಸ್ಸಿನಲ್ಲೂ ಈ ಕಾಯ ನಳನಳಿಸಬೇಕೆಂದರೆ ಜಿಮ್‌ನಲ್ಲಿ ದಣಿಯುವುದಷ್ಟೇ ಅಲ್ಲ, ಅಡಿಅಡಿಗೂ ಎಚ್ಚರಿಕೆಯ ಹೆಜ್ಜೆಯನ್ನಿಡಬೇಕು ಎನ್ನುತ್ತಾರೆ ಶ್ವೇತಾ. ಒಂದು ಮಗುವಿನ ತಾಯಿಯಾದ ಮೇಲೂ ಫ್ಯಾಷನ್‌ ಕ್ಷೇತ್ರದಲ್ಲಿ ಕಾಲೂರಲು, ಇಂತಹ ಪ್ರತಿಷ್ಠಿತ ಸ್ಪರ್ಧೆಗೆ ಅರ್ಹತೆ ಪಡೆಯಲು ತಮ್ಮ ಕಠಿಣ ಪರಿಶ್ರಮ, ಶ್ರದ್ಧೆಯೇ ಕಾರಣ ಎನ್ನುವುದು ಅವರ ಉವಾಚ.

ಅಕ್ಟೋಬರ್‌ ಕೊನೆಯ ವಾರದಲ್ಲಿ ಸಿಂಗಪುರದಲ್ಲಿ ನಡೆಯಲಿರುವ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಶ್ವೇತಾ, 47 ದೇಶಗಳ ಸುಂದರಿಯರೊಂದಿಗೆ ಹೆಜ್ಜೆಹಾಕಲಿದ್ದಾರೆ. ಈ ಪ್ರತಿಷ್ಠಿತ ಸ್ಪರ್ಧೆಗಾಗಿ ಶ್ವೇತಾ ನಡೆಸಿರುವ ಕಸರತ್ತು ಎಂಥದ್ದು ಕೇಳಿ... ಅವರದೇ ಮಾತಿನಲ್ಲಿ...

***

ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿಯೇ. ಬಿರ್ಲಾ ಇನ್‌ಸ್ಟಿಟ್ಯೂಟ್‌ನಲ್ಲಿಎಂಬಿಎ ಮುಗಿಸಿದೆ. ಓದು ಮುಗಿಯುತ್ತಿದ್ದಂತೆ ಉದ್ಯೋಗ ಅರಸಿ ಬಂತು. ಚಿಕ್ಕಂದಿನಿಂದಲೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಒಲವಿತ್ತು. ಮೂಲತಃ ನೃತ್ಯ ಕಲಾವಿದೆಯಾದ ನನಗೆ ಬಹುಬೇಗ ಫ್ಯಾಷನ್‌ ಜಗತ್ತು ಕೈಬೀಸಿತು. ಕಾಲೇಜು ದಿನಗಳಲ್ಲೇ ಹೆಸರಾಂತ ಮಾಡೆಲ್‌ಗಳ ಜೊತೆ ರ‍್ಯಾಂಪ್‌ ಮೇಲೆ ಹೆಜ್ಜೆ ಹಾಕಿದ್ದೆ. ಎಂಎನ್‌ಸಿ ಕಂಪನಿಯೊಂದರಲ್ಲಿ ಗ್ಲೋಬಲ್ ಪ್ರೊಕ್ಯೂರ್‌ಮೆಂಟ್‌ ಮ್ಯಾನೇಜರ್ ಆಗಿ ಕೆಲಸಕ್ಕೆ ಸೇರಿದ ಮೇಲೂ ನನ್ನ ಕನಸಿಗಾಗಿ ಸಮಯ ಮೀಸಲಿಟ್ಟೆ.

ಮದುವೆ ಆದರೆ ಆಯ್ತು, ಕುಟುಂಬ–ಸಂಸಾರವೇ ಸರ್ವಸ್ವ ಎನ್ನುವ ಕಾಲ ಇದಲ್ಲ. ನಮ್ಮ ಕನಸುಗಳಿಗೆ ಮದುವೆ ಅಡ್ಡಿಯಾಗಬಾರದು. ಮದುವೆ ನಮ್ಮ ಬಾಳಿನ ಮೈಲುಗಲ್ಲು. ಅಲ್ಲಿಂದ ಮತ್ತೊಂದು ಅಧ್ಯಾಯ ತೆರೆದುಕೊಳ್ಳುತ್ತದೆ. ಎಲ್ಲವೂ ಹೊಸದಾಗಿ ಆರಂಭವಾಗಬೇಕೇ ಹೊರತು, ಬೆಳವಣಿಗೆ ಕುಂಠಿತವಾಗಬಾರದು.

ಸೌಂದರ್ಯ, ಆತ್ಮವಿಶ್ವಾಸ, ಆರೋಗ್ಯ ಎಲ್ಲದರಲ್ಲೂ ವಯಸ್ಸು ಬಹಳ ಮುಖ್ಯ ಪಾತ್ರ ವಹಿಸುತ್ತದೆ. 18–20ರ ಪ್ರಾಯದಲ್ಲಿ ಎಲ್ಲರೂ ಸುಂದರಿಯರೇ. ನಮ್ಮ ಪಾಲಿಗೆ ನಾವೇ ಮಿಸ್‌ ಇಂಡಿಯಾ, ಮಿಸ್‌ ವರ್ಲ್ಡ್‌ ಎಲ್ಲಾ ಆಗಿರುತ್ತೇವೆ. ನಡೆ–ನುಡಿಯಲ್ಲಿ ಅದೇ ಆತ್ಮವಿಶ್ವಾಸ ತುಂಬಿರುತ್ತದೆ. ಮೂವತ್ತರ ಅಂಚಿಗೆ ಬಂದಾಗ ಮನದ ಮೂಲೆಯಲ್ಲಿ ಸಣ್ಣ ಹಿಂಜರಿಕೆಯೊಂದು ಮನೆಮಾಡುತ್ತದೆ. ಮದುವೆಯಾಗಿ, ತಾಯ್ತನದ ಏರಿಳಿತದಲ್ಲಿ ಮಾಗಿ 35-40ರ ಸಮೀಪ ಬಂದು ನಿಂತಾಗ ಎದುರಾಗುವುದೇ ನಿಜವಾದ ಸವಾಲು.

ಹೌದು, ಸಿನಿಮಾ, ಫ್ಯಾಷನ್‌ ಕ್ಷೇತ್ರದಲ್ಲಿರುವ ಮಹಿಳೆಯರು ತಾರುಣ್ಯ ದಾಟಿದಂತೆ ಅಂದ–ಚೆಂದದ ಬಗೆಗೆ ತುಸು ಹೆಚ್ಚೇ ಕಾಳಜಿ ವಹಿಸಬೇಕು. ಜೊತೆಗೆ ಮುಖದ ಮೇಲೆ ಮಾಸದ ನಗೆಗೆ ಕುಂದು ತಾರದ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಇದಕ್ಕಾಗಿ ಕಠಿಣ ಹೆಜ್ಜೆಗಳನ್ನಿಡಬೇಕು. ಏನು ಉಣ್ಣುತ್ತೇವೆ, ಎಷ್ಟು ನಡೆಯುತ್ತೇವೆ, ಎಷ್ಟು ನೀರು ಕುಡಿಯುತ್ತೇವೆ, ಹೇಗೆ ನಡೆದುಕೊಳ್ಳುತ್ತೇವೆ ಎನ್ನುವುದರ ಮೇಲೆಲ್ಲಾ ಗಮನ ನೀಡಬೇಕು. ಬಾಯಿಗೆ ರುಚಿ ಎನಿಸಿದ್ದನ್ನು ತಿಂದು, ಮನಸ್ಸು ಕೇಳಿದ್ದನ್ನು ಉಂಡು, ಹಿತವೆನಿಸುವಷ್ಟು ನಿದ್ದೆ ಮಾಡಿ ಹಾಯಾಗಿರುವ ಕಾಲ ಇದಲ್ಲ.

ಅನೇಕರು ತಮ್ಮ ಜೀವನಶೈಲಿಗೆ, ತಮ್ಮ ದೇಹದ ಪ್ರಕಾರಕ್ಕೆ, ತಮ್ಮ ಅನುಕೂಲಕ್ಕೆ ಎಂತಹ ವರ್ಕೌಟ್‌ ಬೇಕು ಎನ್ನುವುದನ್ನೇ ನೋಡುವುದಿಲ್ಲ. ಇತರರನ್ನು ಮಾದರಿಯಾಗಿಟ್ಟುಕೊಂಡು ಜಿಮ್‌ನಲ್ಲಿ ಬೆವರಿಳಿಸುತ್ತಾರೆ. ಆದರೆ ಎಲ್ಲರಿಗೂ ಜಿಮ್‌ ಒಂದೇ ಪರಿಹಾರವಲ್ಲ. ಕೆಲವರಿಗೆ ವಾಕಿಂಗ್‌, ಕೆಲವರಿಗೆ ಜಾಗಿಂಗ್‌, ಕೆಲವರಿಗೆ ಏರೊಬಿಕ್ಸ್‌, ಜೊತೆಗೆ ಯೋಗ... ಹೀಗೆ ಯಾವುದು ಅನುಕೂಲ, ಯಾವುದು ಒಗ್ಗುತ್ತದೆ ನೋಡಬೇಕು.

ನನ್ನ ವರ್ಕೌಟ್‌ ಚಾರ್ಟ್‌ ವಾರವಾರವೂ ಬದಲಾಗುತ್ತದೆ. ನನ್ನ ಟ್ರೇನರ್‌ ವಾರಕ್ಕೊಂದು ಬೇರೆಯದೇ ಆದ ಚಾರ್ಟ್‌ ತಯಾರಿಸಿ ಕೊಡುತ್ತಾರೆ. ದಿನಕ್ಕೆ ಮೂರು ಹೊತ್ತು ವ್ಯಾಯಾಮ ಮಾಡುತ್ತೇನೆ. ಇದರಲ್ಲಿ ಜಿಮ್‌, ಸ್ವಿಮ್ಮಿಂಗ್‌, ರನ್ನಿಂಗ್‌, ಸೈಕ್ಲಿಂಗ್‌ ಸೇರಿದಂತೆ ಎಲ್ಲಾ ರೀತಿಯ ಚಟುವಟಿಕೆಗಳೂ ಇರುತ್ತವೆ. ಮಾನಸಿಕ ಆರೋಗ್ಯಕ್ಕೆ, ಒತ್ತಡ ನಿರ್ವಹಣೆಗೆ ಧ್ಯಾನ–ಯೋಗದ ಮೊರೆ ಹೋಗುತ್ತೇನೆ.

ಊಟದ ವಿಷಯಕ್ಕೆ ಬಂದಾಗ ನಾನು ಬಹಳ ಚೂಸಿ. ಕನಸನ್ನು ಸಾಕಾರ ಮಾಡಿಕೊಳ್ಳಲು ನನ್ನ ಪ್ರೀತಿಯ ಊಟ–ತಿಂಡಿಯನ್ನೂ ದೂರವಿಡುತ್ತೇನೆ. ಬೆಳಿಗ್ಗೆ ಬಾದಾಮಿ, ಓಟ್ಸ್‌ ಸೇವಿಸುತ್ತೇನೆ. ಮಧ್ಯಾಹ್ನ ಒಂದು ಚಪಾತಿಯ ಜೊತೆಗೆ ಒಂದಷ್ಟು ಸಲಾಡ್‌. ಸಂಜೆ ಸೂಪ್ ಅಥವಾ ಜ್ಯೂಸ್. ರಾತ್ರಿಯೂ ಅಷ್ಟೇ ಒಂದೇ ಒಂದು ರೊಟ್ಟಿ. ಕೆಲವೊಮ್ಮೆ ಬರೀ ಸಲಾಡ್‌. ಮಸಾಲೆ ದೋಸೆ ನೋಡಿದರೆ ಬಾಯಲ್ಲಿ ನೀರು ಬರುತ್ತೆ. ಆದರೂ ಅಕ್ಕಿಯ ಯಾವ ಪದಾರ್ಥವನ್ನೂ ತಿನ್ನುವುದಿಲ್ಲ.

ನನ್ನ ಕುಟುಂಬ ನನಗೆ ಮುಖ್ಯ. ಹಾಗೆಯೇ ಸ್ವಾವಲಂಬಿ ಜೀವನ ನನ್ನ ಆಯ್ಕೆ. ಫ್ಯಾಷನ್‌ ನನ್ನ ಕನಸು.ಸೌಂದರ್ಯ ಸ್ಪರ್ಧೆಗಳಲ್ಲಿ ಆಂಗಿಕ ಸೌಂದರ್ಯವಷ್ಟೇ ಮುಖ್ಯವಾಗುವುದಿಲ್ಲ, ನಮ್ಮ ಒಟ್ಟಾರೆ ವ್ಯಕ್ತಿತ್ವವನ್ನೂ ಪರಿಗಣಿಸುತ್ತಾರೆ. ನಮ್ಮ ದೃಷ್ಟಿಕೋನವನ್ನೂ ಅಳೆಯುತ್ತಾರೆ. ನನ್ನ ಕರಿಯರ್‌ ಎಷ್ಟು ಮುಖ್ಯವೊ ಕುಟುಂಬವೂ ಅಷ್ಟೇ ಮುಖ್ಯ. ಓರ್ವ ತಾಯಿಯಾಗಿ ನನ್ನ ಯಾವ ಕೆಲಸಕ್ಕೂ ನಾನು ಗೈರಾಗುವುದಿಲ್ಲ. ನನ್ನ ಮಗ, ನನ್ನ ತಂದೆ–ತಾಯಿ ನನ್ನ ಸಾಧನೆಗೆ ಬೆಂಗಾವಲಾಗಿದ್ದಾರೆ. ಅವರ ಬೆಂಬಲವಿಲ್ಲದೆ ನನ್ನಿಂದ ಇದೆಲ್ಲ ಸಾಧ್ಯವಾಗುತ್ತಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT