ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಿನಿ ಒಲಿಂಪಿಯನ್ನರ’ ಫಿಟ್‌ನೆಸ್‌ ಗುಟ್ಟು...

Last Updated 16 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಬೆಂಗಳೂರಿನಲ್ಲಿ ಇತ್ತೀಚಿಗೆ ನಡೆದ 14 ವರ್ಷದ ಒಳಗಿನವರ ಮಿನಿ ಒಲಿಂಪಿಕ್ಸ್‌ನ ಜಿಮ್ನಾಸ್ಟಿಕ್ಸ್‌ನಲ್ಲಿ ಹೆಚ್ಚು ಪದಕಗಳನ್ನು ಜಯಿಸಿ ಸಮಗ್ರ ಪ್ರಶಸ್ತಿ ಬಾಚಿಕೊಂಡ ಧಾರವಾಡದ ಬಾಲಮಾರುತಿ ಜಿಮ್ನಾಸ್ಟಿಕ್ಸ್ ತರಬೇತಿ ಕೇಂದ್ರದ ಜಿಮ್ನಾಸ್ಟ್‌ಗಳ ದೊಡ್ಡ ಸಾಧನೆಯ ಹಿಂದೆ ಫಿಟ್‌ನೆಸ್‌ ಎಂಬ ಮಂತ್ರವಿದೆ.

ಈ ಕೇಂದ್ರದಲ್ಲಿ ನಿತ್ಯ 75 ಮಕ್ಕಳು ಜಿಮ್ನಾಸ್ಟಿಕ್ಸ್‌ ತರಬೇತಿ ಪಡೆಯುತ್ತಾರೆ. ಅದರಲ್ಲಿ ಬಹುತೇಕರು 14 ವರ್ಷದ ಒಳಗಿನವರು. ಸಣ್ಣ ವಯಸ್ಸಿನಲ್ಲಿದ್ದಾಗಲೇ ಸಾಹಸ ಕ್ರೀಡೆಯ ಅಭ್ಯಾಸ ಆರಂಭಿಸಿದರೆ ದೇಹ ಸಮತೋಲನದಿಂದ ಕೂಡಿರುತ್ತದೆ. ಸ್ಪರ್ಧೆಗೆ ತಕ್ಕಂತೆ ಬಾಗುತ್ತದೆ. ಆದ್ದರಿಂದ ಫಿಟ್‌ನೆಸ್‌ನಲ್ಲಿ ಯಶಸ್ಸು ಸಾಧಿಸಿದರೆ ಉತ್ತಮ ಜಿಮ್ನಾಸ್ಟ್‌ ಆಗಬಹುದು. ಅದಕ್ಕೆ ಮಿನಿ ಒಲಿಂಪಿಕ್ಸ್‌ನಲ್ಲಿ ಬಾಲಮಾರುತಿ ಕೇಂದ್ರದ ಮಕ್ಕಳ ಸಾಧನೆಯೇ ಸಾಕ್ಷಿ.

ಈ ಕೇಂದ್ರದ 16 ಜನ ಜಿಮ್ನಾಸ್ಟ್‌ಗಳಷ್ಟೇ ಮಿನಿ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದರೂ, ಒಟ್ಟು 44 ಪದಕಗಳನ್ನು ಗೆದ್ದುಕೊಂಡು ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ. ಆರ್ಟಿಸ್ಟಿಕ್‌ ವಿಭಾಗದಲ್ಲಿಯೇ ಹೆಚ್ಚು ಪದಕಗಳು ಬಂದಿದ್ದು ವಿಶೇಷ. ಇದಕ್ಕೆ ಫಿಟ್‌ನೆಸ್‌ ಕಾರಣ.

ಜಿಮ್ನಾಸ್ಟಿಕ್ಸ್‌ ಕಲಿಯಲು ಬರುವ ಮಕ್ಕಳಿಗೆ ಮೊದಲು ತಲೆ ಕೆಳಗೆ ಮಾಡಿ ಕಾಲು ಎತ್ತುವುದನ್ನು, ಪಲ್ಟಿ ಹೊಡೆಯುವುದನ್ನು, ಲಘು ವ್ಯಾಯಾಮ ಮಾಡುವುದನ್ನು ಕಲಿಸಲಾಗುತ್ತದೆ. ಭುಜ, ಬೆನ್ನು, ಕೈ ಕಾಲುಗಳ ಸ್ನಾಯು ಶಕ್ತಿ ಹೆಚ್ಚಿಸಲು ವ್ಯಾಯಾಮ ಮಾಡಿಸಲಾಗುತ್ತದೆ. ಪದ್ಮಾಸನ ಸೇರಿದಂತೆ ಯೋಗದ ಕೆಲ ಆಸನಗಳು ಫಿಟ್‌ನೆಸ್‌ಗೆ ಅನುಕೂಲವಾಗುತ್ತವೆ. ಈ ಎಲ್ಲ ದೈಹಿಕ ಚಟುವಟಿಕೆಗಳನ್ನು ನಿರಂತರವಾಗಿ ಮಾಡುವುದರಿಂದ ಎಳವೆಯಲ್ಲಿಯೇ ಮಕ್ಕಳ ಸ್ನಾಯುಗಳು ಬಲಿಷ್ಠಗೊಳ್ಳುತ್ತವೆ.

ಫಿಟ್‌ನೆಸ್‌ಗಾಗಿ ಮಾಡುವ ವ್ಯಾಯಾಮಗಳ ಜೊತೆ ನಿಶ್ಚಿತ ಆಹಾರ ಪದ್ಧತಿ ರೂಢಿಸಿಕೊಳ್ಳಬೇಕು ಎಂದು ಬಾಲಮಾರುತಿ ಜಿಮ್ನಾಸ್ಟಿಕ್ಸ್ ತರಬೇತಿ ಕೇಂದ್ರದ ಹಿರಿಯ ಜಿಮ್ನಾಸ್ಟ್‌ ವಿಠ್ಠಲ ಮುರ್ತಗುಡ್ಡೆ ಹೇಳುತ್ತಾರೆ.

‘ಈಗಿನ ಮಕ್ಕಳು ಜಂಕ್‌ ಫುಡ್‌ ತಿನ್ನುವುದು ಸಾಮಾನ್ಯವಾಗಿದೆ. ಇದು ಅನಾರೋಗ್ಯಕ್ಕೆ ದೊಡ್ಡ ಕಾರಣವಾಗುತ್ತಿದೆ. ಆದ್ದರಿಂದ ಜೋಳದ ರೊಟ್ಟಿ, ಕಾಳು ಪಲ್ಲೆ, ಹಣ್ಣುಗಳನ್ನು ತಿಂದು, ಹಾಲು ಕುಡಿದರೆ ಸಾಕು. ಆಯಾ ಭಾಗದಲ್ಲಿ ರೂಢಿಯಾಗಿರುವ ಆಹಾರವನ್ನು ಜಿಮ್ನಾಸ್ಟ್‌ಗಳು ಸೇವಿಸಬಹುದು. ಜಂಕ್‌ ಫುಡ್‌ನಿಂದ ದೂರವಿದ್ದರೆ ಅಷ್ಟೇ ಸಾಕು. ಆಗ ಅತ್ಯಂತ ಕಷ್ಟ ಎನಿಸುವ ಜಿಮ್ನಾಸ್ಟಿಕ್ಸ್‌ ಕೂಡ ‌ಸುಲಭವಾಗುತ್ತದೆ’ ಎನ್ನುತ್ತಾರೆ ವಿಠ್ಠಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT