ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯ ನಾಗರಿಕರಿಗೂ ಇದೆ ವಿಶೇಷ ಜಿಮ್‌!

Last Updated 28 ಏಪ್ರಿಲ್ 2019, 19:49 IST
ಅಕ್ಷರ ಗಾತ್ರ

ಚೀನಾದಲ್ಲಿ ಕ್ರೀಡಾ ಸಂಸ್ಕೃತಿ ಹಾಸು ಹೊಕ್ಕಾಗಿದೆ. ಮಕ್ಕಳಿಂದ ವೃದ್ಧರವರೆಗೆ ಒಂದಲ್ಲಾ ಒಂದು ಕ್ರೀಡೆಯಲ್ಲಿ ತೊಡಗಿಕೊಂಡವರೇ. 60 ವಯಸ್ಸು ದಾಟಿದವರ ಜನಸಂಖ್ಯೆ ಚೀನಾದಲ್ಲಿ ಹೆಚ್ಚಿದೆ. ಇವರು ತಮ್ಮ ದೇಹವನ್ನು ಫಿಟ್‌ ಆಗಿ ಇಡಲು ಹೆಚ್ಚು ಆಸಕ್ತಿ ತೋರುತ್ತಾರೆ. ಇವರದೈಹಿಕ ಸಾಮರ್ಥ್ಯವನ್ನು ಬಲ ಪಡಿಸುವತ್ತ ಅಲ್ಲಿನ ಸಂಸ್ಥೆಗಳು ಆಸಕ್ತಿ ವಹಿಸಿವೆ.

ಇದಕ್ಕೊಂದು ಉತ್ತಮ ಉದಾಹರಣೆ ಜಿಂಗ್ಯಾನ್ ಜಿಲ್ಲೆಯ ‘ಡ್ಯಾನಿಂಗ್‌ ರೋಡ್‌ ಕಮ್ಯುನಿಟಿ’ ಸಂಸ್ಥೆ. ಇದು ವೃದ್ಧರಿಗಾಗಿಯೇ ಜಿಮ್‌ ಆರಂಭಿಸಿದೆ. ಇಲ್ಲಿ 60 ದಾಟಿದ ವೃದ್ಧರಿಗೆಂದೇ ವಿಶೇಷ ಪರಿಕರಗಳಿವೆ. ಸುಮಾರು 10 ಫಿಟ್‌ನೆಸ್‌ ಯಂತ್ರಗಳು ಇದ್ದು, ಎಲ್ಲವೂ ಸ್ವಯಂಚಾಲಿತ ಮತ್ತು ಉಪಯೋಗ ಸ್ನೇಹಿ ಗುಣವನ್ನು ಹೊಂದಿವೆ.ಈ ಕುರಿತು ‘ಶಾಂಘೈ ಡೇಲಿ’ ಬೆಳಕು ಚೆಲ್ಲಿದೆ.

ಮಸಾಜ್ ಕುರ್ಚಿ ಸ್ವಯಂಚಾಲಿತ ಕಂಪನ ಪ್ರಮಾಣವನ್ನು ವ್ಯಕ್ತಿಯ ತೂಕಕ್ಕೆ ತಕ್ಕಂತೆ ನಿರ್ಧರಿಸುತ್ತದೆ. ಜೀರ್ಣ ಕ್ರಿಯೆ, ರಕ್ತ ಪರಿಚಲನೆ ಸಮರ್ಪಕವಾಗಿ ಆಗಲು ಉತ್ತಮ ವ್ಯಾಯಾಮ ನೀಡುತ್ತದೆ. ಕೈಯನ್ನು ಬಲಪಡಿಸುವ ಮಷೀನ್‌ ಸೆನ್ಸಾರ್ ಅನ್ನು ಹೊಂದಿದ್ದು, ಸ್ವಯಂಚಾಲಿತವಾಗಿ ತೂಕದ ಪ್ರಮಾಣವನ್ನು ನಿರ್ಧರಿಸುತ್ತವೆ.

ವೃದ್ಧರಿಗೆ ಸಲಹೆ ನೀಡಲು ವೃತ್ತಿಪರ ಕೋಚ್‌ಗಳೂ ಇದ್ದಾರೆ. ಸರಿಯಾದ ತರಬೇತಿ ಮತ್ತು ಅಭ್ಯಾಸ ನಿರತರಿಗೆ ವ್ಯಾಯಾಮದ ಕುರಿತು ನಿರಂತರ ಮಾರ್ಗದರ್ಶನ ನೀಡುತ್ತಾರೆ.‘ನಾನು ಇಲ್ಲಿ ಉತ್ಸಾಹಭರಿತನಾಗುತ್ತೇನೆ. ಜಿಮ್‌ ಎರಡನೇ ಮನೆ ಇದ್ದಂತೆ. ಎಲ್ಲರೊಂದಿಗೆ ಮಾತನಾಡುತ್ತಾ ವ್ಯಾಯಾಮ ಮಾಡುತ್ತೇವೆ. ನಾನು ಈಗ ಸದೃಢನಾಗಿದ್ದೇನೆ. 100 ವರ್ಷ ಬದುಕುತ್ತೇನೆ’ ಎಂದು85 ವಯಸ್ಸಿನ ಯು ಕ್ಸಿಯುಡಿ ಹೇಳುತ್ತಾರೆ.

ಹಿಂದೆ ಯು ಮತ್ತು ಅವಳ ಸ್ನೇಹಿತರು ಸ್ಟ್ರೆಚ್ಚಿಂಗ್‌ ವ್ಯಾಯಾಮಗಳನ್ನು ಮಾಡುತ್ತಿದ್ದರು. ನಂತರ ಬೀದಿಯ ಎಲ್ಲರೂ ಜತೆಯಾದರು. ಹೀಗೆ ಚಟುವಟಿಕೆಗಳು ಮುಂದುವರಿದವು.‘ಡ್ಯಾನಿಂಗ್‌ ರೋಡ್‌ ಕಮ್ಯುನಿಟಿ’ ಸಂಸ್ಥೆಯನ್ನುಆರಂಭಿಸಿ ಒಂಬತ್ತು ತಿಂಗಳಿನಲ್ಲಿ ಜಿಮ್‌ ಸಿದ್ಧಪಡಿಸಿದೆವು ಎನ್ನುತ್ತಾರೆ ಸಂಸ್ಥೆಯ ಮುಖ್ಯಸ್ಥವಾಂಗ್‌ ಯಿಂಗ್‌.

ಶಾಂಘೈ, ಬೀಜಿಂಗ್‌ನ ಬೀದಿಗಳಲ್ಲಿ ವೃದ್ಧರು ವ್ಯಾಯಾಮ ಮಾಡು ವುದು ಸಾಮಾನ್ಯ ನೋಟ. ಸಾರ್ವಜನಿಕ ರಸ್ತೆಗಳಲ್ಲಿ ಜಾಗಿಂಗ್ ಹೋಗುವ ವೃದ್ಧರಿಗೆ ಅಪಾಯ ಹೆಚ್ಚು. ಹೇಳಿಕೇಳಿ ಇವು ಕಾಸ್ಮೋ ಪಾಲಿಟನ್‌ ನಗರಗಳು. ಹೀಗಾಗಿ ಜಿಮ್‌ ಒಂದನ್ನು ಆರಂಭಿಸಿ ತೃಪ್ತಿ ಇದೆ ಎನ್ನುತ್ತಾರೆ ಯಿಂಗ್.

ತುಂಬಾ ವಯಸ್ಸಾದವರಿಗೆ ಸಾಮಾನ್ಯ ಜಿಮ್‌ ಸಲಕರಣೆ ಬಳಸುವುದು ಅಪಾಯಕರ. ಹೀಗಾಗಿಯೇ ಹೊಸ ಅನ್ವೇಷಣೆಯಲ್ಲಿ ತೊಡಗಿ ಪರಕರಗಳಿಗೆ ತಂತ್ರಜ್ಞಾನ ಅಳವಡಿಸಿದ್ದಾರೆ. ಇದೇ ಮಾದರಿಯ ಜಿಮ್‌ಗಳು ಚೀನಾದಲ್ಲಿ ತಲೆ ಎತ್ತಲಿವೆ ಎಂಬ ಆಶಯವನ್ನು ಇಲ್ಲಿನ ಮಂದಿ ವ್ಯಕ್ತಪಡಿಸುತ್ತಾರೆ. ಈ ಜಿಮ್‌ನಲ್ಲಿ ವರ್ಕ್‌ ಔಟ್‌ ಮಾಡಿ ಫಿಟ್‌ ಆಗಲು ಯಾರೂ ಹಣ ನೀಡಬೇಕಿಲ್ಲ. ಸಂಪೂರ್ಣ ಉಚಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT