ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಗಾರು ಬೇಸಾಯಕ್ಕೆ ಸಿದ್ಧತೆ

Last Updated 20 ಮೇ 2018, 14:02 IST
ಅಕ್ಷರ ಗಾತ್ರ

ಚಳ್ಳಕೆರೆ: ತಾಲ್ಲೂಕಿನಲ್ಲಿ  ಉತ್ತಮ ಮಳೆಯಾದ ಕಾರಣ ರೈತರು ಕೃಷಿ ಚಟುವಟಿಕೆ ಸಿದ್ಧತೆಯಲ್ಲಿ ತೊಡಗಿದ್ದಾರೆ.

ತಾಲ್ಲೂಕಿನ ಹುಲಿಕುಂಟೆ, ಕಾಪರಹಳ್ಳಿ, ಜಡೆಕುಂಟೆ, ಸಾಣಿಕೆರೆ ಸೇರಿದಂತೆ ಹಲವು ಗ್ರಾಮಗಳ ಜಮೀನುಗಳಲ್ಲಿ ಶನಿವಾರ ರೈತರು ಜಮೀನುಗಳನ್ನು ಉಳುಮೆ ಮಾಡುತ್ತಿರುವುದು ಕಂಡು ಬಂದಿತು.

ತಾಲ್ಲೂಕಿನಲ್ಲಿ1.85 ಲಕ್ಷ ಹೆಕ್ಟೇರ್ ಬಿತ್ತನೆ ಪ್ರದೇಶವಿದೆ. ಉತ್ತಮ ಮಳೆಯಾದ ಕಾರಣ ರೈತರು  ಬಿತ್ತನೆಗೆ ತೊಡಗಿದ್ದಾರೆ. ಮುಂಗಾರಿನ ನಂತರ ಶೇ 60ಕ್ಕೂ ಹೆಚ್ಚು ಕೃಷಿ ಭೂಮಿಯಲ್ಲಿ ಬಿತ್ತನೆ ಮಾಡಲಾಗುತ್ತದೆ.

ಮಳೆ ಆಧಾರಿತ ಕೃಷಿ ಭೂಮಿಯಲ್ಲಿ 85 ಸಾವಿರ ಹೆಕ್ಟೇರ್ ಶೇಂಗಾ ಬಿತ್ತನೆ ಪ್ರದೇಶವಿದೆ. ತೊಗರಿ 6 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. 6 ಸಾವಿರ ಹೆಕ್ಟೇರ್‌ನಲ್ಲಿ ಜೋಳ, ಉಳಿದ ಕೃಷಿ ಭೂಮಿಯಲ್ಲಿ ಸಜ್ಜೆ, ಹುರುಳಿ, ಅಲಸಂದೆ, ಹೆಸರು ಗಿಡ, ನವಣೆ, ಕೊರ್ಲೆ, ಸಾವೆ ಸೇರಿದಂತೆ ಹಲವು ದ್ವಿದಳ ಧಾನ್ಯಗಳನ್ನು ಬೆಳೆಯಲಾಗುತ್ತದೆ.

‘ಈಗಾಗಲೇ ಶೇಂಗಾ, ಹೆಸರು, ನವಣೆ, ಕೊರ್ಲೆ, ರಾಗಿ, ಸಜ್ಜೆ ಸೇರಿ ಹಲವು ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಲಾಗಿದ್ದು, ರೈತರಿಗೆ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಮಾರುತಿ ತಿಳಿಸಿದ್ದಾರೆ.

‘ತಾಲ್ಲೂಕಿನ ಸಾಣಿಕೆರೆ, ಪರಶುರಾಂಪುರ, ತಳಕು ಕೃಷಿ ಇಲಾಖೆ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳ ದಾಸ್ತಾನು ಸಂಗ್ರಹಿಸಲಾಗಿದೆ. ಹದ ಮಳೆಯ ನಂತರ ಬಿತ್ತನೆ ಬೀಜಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಈಗಾಗಲೇ ಹಲವು ಗ್ರಾಮಗಳಲ್ಲಿ ಹದ ಮಳೆಯಾಗಿದೆ’ ಎಂದು ಅವರು ಹೇಳಿದರು.

‘ಇತ್ತೀಚಿನ ವರ್ಷಗಳಲ್ಲಿ ಸರಿಯಾದ ಮಳೆಯಾಗದ ಕಾರಣ ರೈತರು ಪರದಾಡುವಂತಾಗಿದೆ. ರೈತರಿಗೆ ಅನುಕೂಲ ಕಲ್ಪಿಸಲು ಸರ್ಕಾರ ಉತ್ತಮ ಯೋಜನೆಗಳನ್ನು ಜಾರಿ ಮಾಡಬೇಕು’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಘಟಕ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಒತ್ತಾಯಿಸುತ್ತಾರೆ.

**
ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಲಘು ಮಳೆಯಾಗಿದ್ದು, ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೃಷಿ ಇಲಾಖೆ ಅಗತ್ಯ ಸಹಕಾರ ನೀಡುತ್ತದೆ
ಡಾ.ಮಾರುತಿ, ಸಹಾಯಕ ನಿರ್ದೇಶಕ, ಕೃಷಿ ಇಲಾಖೆ

**
ತಾಲ್ಲೂಕಿನಲ್ಲಿ ಬಹುತೇಕ ಕುಟುಂಬಗಳು ಕೃಷಿಯನ್ನೇ ಅವಲಂಬಿಸಿದ್ದು, ಈಗ ಆಗಿರುವ ಮಳೆಯಲ್ಲಿಯೇ ಕೃಷಿ ಭೂಮಿಯನ್ನು ಹಸನು ಮಾಡಲಾಗಿದೆ. ಸರ್ಕಾರ ರೈತರ ರಕ್ಷಣೆಗಾಗಿ ವಿಶೇಷ ಯೋಜೆನ ಜಾರಿ ಮಾಡಬೇಕು
ನಾಗಣ್ಣ, ರೈತ, ಹುಲಿಕುಂಟೆ

–ರಾಜಾ ಪರಶುರಾಮ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT