ಗುರುವಾರ , ಅಕ್ಟೋಬರ್ 22, 2020
21 °C

ಕೆಬಿಎ ಮಾಜಿ ಅಧ್ಯಕ್ಷ ರಮೇಶ್ ಮೂಲಾ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ (ಕೆಬಿಎ) ಮಾಜಿ ಅಧ್ಯಕ್ಷ ಡಾ. ರಮೇಶ್ ಮೂಲಾ (81) ಗುರುವಾರ ಸಂಜೆ ನಿಧನರಾದರು.

1990ರ ದಶಕದಲ್ಲಿ ಅಧ್ಯಕ್ಷರಾಗಿದ್ದ ಮೂಲಾ ಮತ್ತು ಕಾರ್ಯದರ್ಶಿಯಾಗಿದ್ದ ಎಸ್‌.ಎಸ್‌. ಮಣಿ ಅವರು ಕೆಬಿಎ ಮೂಲ ಸೌಲಭ್ಯಗಳ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

‘ಆ ಸಂದರ್ಭದಲ್ಲಿ ಕೆಬಿಎ ಕ್ರೀಡಾಂಗಣ ನಿರ್ಮಾಣಕ್ಕೆ ನಾನು ರೂಪುರೇಷೆ ನಿರ್ಮಿಸಿದ್ದೆ. ಅದರೊಂದಿಗೆ ಕ್ಲಬ್‌ ಹೌಸ್, 32 ಕೋಣೆಗಳಿರುವ ಡಾರ್ಮೆಟ್ರಿ,  ಸೌನಾ ಮತ್ತು ಮಸಾಜ್ ಸೌಲಭ್ಯವಿರುವ ಜಿಮ್ನಾಷಿಯಂ ನಿರ್ಮಾಣವಾಗಲು ಮೂಲಾ ಮತ್ತು ನಾನು ಪ್ರಮುಖವಾಗಿ ಕೆಲಸ ಮಾಡಿದ್ದೆವು’ ಎಂದು ಮಣಿ ನೆನಪಿಸಿಕೊಂಡರು.

‘ಕೆಬಿಎಗೆ ಬಹಳ ಖ್ಯಾತ ವ್ಯಕ್ತಿಗಳು ಅಧ್ಯಕ್ಷರಾಗಿ ಹೋಗಿದ್ದರು. ಆದರೆ ಯಾರೂ ಕ್ರೀಡಾಂಗಣ ನಿರ್ಮಾಣ ಮಾಡಿರಲಿಲ್ಲ. ರಮೇಶ್ ಅಧ್ಯಕ್ಷರಾದ ನಂತರ ಅವರ ಆಸಕ್ತಿಯಿಂದಲೇ ಇದು ಸಾಧ್ಯವಾಯಿತು. ಆಟ ಮತ್ತು ಆಟಗಾರರ ಬೆಳವಣಿಗೆಗೆ ಅವರು ಬಹಳಷ್ಟು ನೆರವು ನೀಡಿದರು. ಟೂರ್ನಿಯಲ್ಲಿ ಸ್ಪರ್ಧಿಸುವ ಆಟಗಾರರ ಪ್ರವೇಶ ಶುಲ್ಕವನ್ನು ಅವರು ರದ್ದು ಮಾಡಿದ್ದರು. ಬೇರೆ ಊರುಗಳ ಕೋಚ್‌ಗಳನ್ನು ಇಲ್ಲಿಗೆ ಕರೆಸಿ ಮಕ್ಕಳಿಗೆ ತರಬೇತಿ ಕೊಡಿಸುತ್ತಿದ್ದರು.  ಅದರಿಂದಾಗಿ ಇಲ್ಲಿಯ ಬ್ಯಾಡ್ಮಿಂಟನ್ ಕ್ರೀಡೆಯು ಬಹಳ ಎತ್ತರಕ್ಕೆ ಬೆಳೆಯಲು ಕಾರಣವಾಯಿತು’ ಎಂದು ಮಣಿ ಸ್ಮರಿಸಿದರು.

ಅವರೂ ಸೇರಿದಂತೆ ಪದಾಧಿಕಾರಿಗಳು ತಮ್ಮ ಸ್ವಂತ ಹಣ ವಿನಿಯೋಗಿಸಿ  ಆಟಗಾರರನ್ನು ರಾಷ್ಟ್ರಮಟ್ಟದ ಟೂರ್ನಿಗಳಿಗೆ ಕಳಿಸುತ್ತಿದ್ದರು ಎಂದೂ ಹೇಳಲಾಗುತ್ತದೆ.

ಮೂಲ ಅವರು ಭಾರತ ಬ್ಯಾಡ್ಮಿಂಟನ್ ಸಂಸ್ಥೆಯ ಹಿರಿಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ರಮೇಶ್ ಅವರು ಸಂಸ್ಥೆಯ ಅಭಿವೃದ್ದಿ ಮತ್ತು ಚಟುವಟಿಕೆಗಳ ಹೊಣೆಯನ್ನು ನಿಭಾಯಿಸಲು ಸದಾ ಸಿದ್ಧರಾಗಿರುತ್ತಿದ್ದರು. ಅವರಿಗೆ ಬ್ಯಾಡ್ಮಿಂಟನ್, ಬಿಲಿಯರ್ಡ್ಸ್‌ ಮತ್ತು ಸ್ನೂಕರ್‌  ಆಟಗಳು ಪ್ರಿಯವಾಗಿದ್ದವು. 1983–84ರಲ್ಲಿ ರಮೇಶ್ ಅವರು ಬೆಂಗಳೂರು ಕ್ಲಬ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು.

ರಮೇಶ್ ಅವರು ವೃತ್ತಿಯಿಂದ ವೈದ್ಯರಾಗಿದ್ದರು. 1964ರಲ್ಲಿ ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಪದವಿ ಗಳಿಸಿದರು. 1967 ರಿಂದ 1976ರವರೆಗೆ ಇಂಗ್ಲೆಂಡ್‌ನ ವೆಸ್ಟ್‌ ಕೆಂಟ್ ಜನರಲ್ ಆಸ್ಪತ್ರೆಯಲ್ಲಿ ಸೀನಿಯರ್ ರಜಿಸ್ಟ್ರಾರ್‌ ಆಗಿ ಕಾರ್ಯನಿರ್ವಹಿಸಿದ್ದರು. ಸ್ವದೇಶಕ್ಕೆ ಮರಳಿದ ನಂತರ ಬೆಂಗಳೂರಿನ ಶಾಂತಿನಗರದಲ್ಲಿ ಬಡವರಿಗಾಗಿ ಉಚಿತ ಕ್ಲಿನಿಕ್ ಆರಂಭಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು