ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ರೆಂಚ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಫೈನಲ್‌ನಲ್ಲಿ ಎಡವಿದ ಸಾತ್ವಿಕ್–ಚಿರಾಗ್

ರನ್ನರ್‌ಅಪ್‌ಗೆ ತೃಪ್ತಿಪಟ್ಟ ಭಾರತದ ಜೋಡಿ
Last Updated 28 ಅಕ್ಟೋಬರ್ 2019, 11:34 IST
ಅಕ್ಷರ ಗಾತ್ರ

ಪ್ಯಾರಿಸ್‌: ಫೈನಲ್‌ ಹಣಾಹಣಿಯಲ್ಲಿ ವೀರೊಚಿತ ಸೋಲುಂಡ ಭಾರತದ ಸಾತ್ವಿಕ್‌ಸಾಯಿರಾಜ್‌ ರಣಕಿರೆಡ್ಡಿ– ಚಿರಾಗ್‌ ಶೆಟ್ಟಿ ಜೋಡಿಯು ಫ್ರೆಂಚ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ರನ್ನರ್‌ಅಪ್‌ ಆಗಿದೆ.

ಭಾನುವಾರ ನಡೆದ ಪುರುಷರ ಡಬಲ್ಸ್ ವಿಭಾಗದ ಅಂತಿಮ ಹಣಾಹಣಿಯಲ್ಲಿ ಅಗ್ರಶ್ರೇಯಾಂಕದ ಇಂಡೊನೇಷ್ಯಾದ ಮಾರ್ಕಸ್‌ ಫೆರ್ನಾಲ್ಡಿ ಗಿಡಿಯೊನ್‌–ಕೆವಿನ್‌ ಸಂಜಯ ಸುಕಮುಲ್ಜೊ ಎದುರು 18–21, 16–21 ಗೇಮ್‌ಗಳಿಂದಸಾತ್ವಿಕ್‌–ಚಿರಾಗ್‌ ಮಣಿದರು. ಇದರೊಂದಿಗೆ ವಿಶ್ವದ ಅಗ್ರ ಕ್ರಮಾಂಕದ ಡಬಲ್ಸ್‌ ಜೋಡಿಯಾ ಮಾರ್ಕಸ್‌–ಕೆವಿನ್‌, ಭಾರತದ ಶಟ್ಲರ್‌ಗಳ ವಿರುದ್ಧದ ಪಂದ್ಯಗಳ ಗೆಲುವಿನ ಸಂಖ್ಯೆಯನ್ನು 7–0ಗೆ ಹೆಚ್ಚಿಸಿಕೊಂಡರು.

ಥಾಯ್ಲೆಂಡ್‌ ಓಪನ್‌ ಗೆಲ್ಲುವುದರೊಂದಿಗೆ ಸೂಪರ್‌ 500 ಟೂರ್ನಿಯಲ್ಲಿ ಮೊದಲ ಪ್ರಶಸ್ತಿ ಜಯಿಸಿದ್ದ ಸಾತ್ವಿಕ್‌–ಚಿರಾಗ್‌ ಅವರಿಗೆ ಇಲ್ಲಿ ಅದೇ ಮಟ್ಟದ ಸಾಮರ್ಥ್ಯ ತೋರುವಲ್ಲಿ ವಿಫಲವಾದರು. 35 ನಿಮಿಷಗಳಲ್ಲಿ ಪಂದ್ಯ ಕೊನೆಗೊಂಡಿತು.ಸೋತರೂ ಭಾರತದ ಜೋಡಿಯೊಂದು ವಿಶ್ವ ಟೂರ್‌ 750 ಟೂರ್ನಿಯ ಫೈನಲ್‌ ಪ್ರವೇಶಿಸಿದ ಮೊದಲ ಜೋಡಿ ಎಂಬ ಹಿರಿಮೆಗೆ ಚಿರಾಗ್‌–ಸಾತ್ವಿಕ್‌ ಪಾತ್ರವಾದರು.

2017ರ ಆವೃತ್ತಿಯ ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಭಾರತದ ಕಿಡಂಬಿ ಶ್ರೀಕಾಂತ್‌ ಪ್ರಶಸ್ತಿ ಜಯಿಸಿದ್ದರು. 2012ರಲ್ಲಿ ಸೈನಾ ನೆಹ್ವಾಲ್‌ ಮಹಿಳಾ ಸಿಂಗಲ್ಸ್‌ ಫೈನಲ್‌ ತಲುಪಿದ ಸಾಧನೆ ಮಾಡಿದ್ದರು.

ಭಾರತದ ಜೋಡಿಗೆ ಆರಂಭದಲ್ಲೇ ಹಿನ್ನಡೆ: ಮೊದಲ ಗೇಮ್‌ನ ಆರಂಭದಲ್ಲೇ ವಿಶ್ವದ ನಂ.1 ಇಂಡೊನೇಷ್ಯಾ ಜೋಡಿ 7–1 ಪಾಯಿಂಟ್ಸ್ ಮುನ್ನಡೆ ಗಳಿಸಿತು. ಚಾಣಾಕ್ಷ ಆಟದ ಮೂಲಕ ತಿರುಗೇಟು ನೀಡಿದ ಭಾರತದ ಶಟ್ಲರ್‌ಗಳು 17–17 ಸಮಬಲ ಸಾಧಿಸುವಲ್ಲಿ ಯಶಸ್ವಿಯಾದರು. ಶೀಘ್ರ ಮೂರು ಗೇಮ್‌ ಪಾಯಿಂಟ್‌ ಗಳಿಸಿದ ಇಂಡೊನೇಷ್ಯಾ ಆಟಗಾರರು ಮುನ್ನುಗ್ಗಿದರು. ಒಂದು ಪಾಯಿಂಟ್‌ ಉಳಿಸಿಕೊಂಡ ಸಾತ್ವಿಕ್‌–ಚಿರಾಗ್‌, ಮತ್ತೊಂದು ಪಾಯಿಂಟ್‌ ಕಳೆದುಕೊಂಡು, ಗೇಮ್‌ ಕೈಚೆಲ್ಲಿದರು.

ಎಡರನೇ ಗೇಮ್‌ನಲ್ಲೂ ಜಿದ್ದಾಜಿದ್ದಿ ಪೈಪೋಟಿ ಕಂಡುಬಂತು. 6–6 ಪಾಯಿಂಟ್ಸ್‌ನೊಂದಿಗೆ ಸಮಬಲದಲ್ಲಿ ಸಾಗಿದ್ದ ಗೇಮ್‌ 10–10ರವರೆಗೆ ಅದೇ ಸ್ಥಿತಿಯಲ್ಲಿತ್ತು. ಈ ಭಾರತದ ಶಟ್ಲರ್‌ಗಳು ಮಾಡಿದ ಪ್ರಮಾದದಿಂದಇಂಡೊನೇಷ್ಯಾ ಜೋಡಿ ಒಂದು ಪಾಯಿಂಟ್‌ ಜೇಬಿಗೆ ಹಾಕಿಕೊಂಡಿತು. 11–10ರಿಂದ ವಿರಾಮಕ್ಕೆ ತೆರಳಿತು. ಆಟ ಮತ್ತೆ ಆರಂಭವಾದಾಗ ಗೇಮ್‌ 12–12ಕ್ಕೆ ತಲುಪಿತು. ಬಳಿಕ ವೇಗದ ಆಟಕ್ಕೆ ಮನೆಮಾಡಿದ ಎದುರಾಳಿ ಜೋಡಿ 18–13 ಮುನ್ನಡೆ ತನ್ನದಾಗಿಸಿಕೊಂಡಿತು. ಒತ್ತಡವನ್ನು ಹೇರುತ್ತಲೇ ಸಾಗಿದ ಅಗ್ರ ಶ್ರೇಯಾಂಕದ ಆಟಗಾರರು ಗೇಮ್‌ ಜೊತೆಗೆ ಪಂದ್ಯವನ್ನು ತಮ್ಮದಾಗಿಸಿಕೊಂಡರು.

ವಿಶ್ವದ 11ನೇ ಕ್ರಮಾಂಕದ ಭಾರತ ಚಿರಾಗ್‌–ಸಾತ್ವಿಕ್‌, ಫೈನಲ್‌ ತಲುಪುವ ಹಾದಿಯಲ್ಲಿ ಹಾಲಿ ವಿಶ್ವ ಚಾಂಪಿಯನ್ಸ್ ಇಂಡೊನೇಷ್ಯಾದ ಮೊಹಮ್ಮದ್‌ ಎಹಸಾನ್‌– ಹೆಂಡ್ರಾ ಸೆತಿಯವಾನ್‌ ಅವರನ್ನು ಸೋಲಿಸಿ ಅಚ್ಚರಿ ಮೂಡಿಸಿದ್ದರು.

ಚೆನ್‌, ಯಂಗ್‌ಗೆ ಸಿಂಗಲ್ಸ್‌ ಗರಿ: ರಿಯೊ ಒಲಿಂಪಿಕ್‌ ಚಾಂಪಿಯನ್‌ ಐದನೇ ಶ್ರೇಯಾಂಕದ ಚೀನಾದ ಚೆನ್‌ ಲಾಂಗ್‌ ಅವರು ಪುರುಷರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಭಾನುವಾರ ನಡೆದ ಫೈನಲ್‌ ಪಂದ್ಯದಲ್ಲಿಅವರು ಇಂಡೊನೇಷ್ಯಾದ ಜೊನಾಥನ್‌ ಕ್ರಿಸ್ಟಿ ವಿರುದ್ಧ 21–12, 21–12ರಿಂದ ಗೆಲುವಿನ ನಗೆ ಬೀರಿದರು. ಇದರೊಂದಿಗೆ ಚೆನ್‌, ಫ್ರೆಂಚ್‌ ಓಪನ್‌ ಇತಿಹಾಸದಲ್ಲಿ ಪ್ರಶಸ್ತಿ ಉಳಿಸಿಕೊಂಡ ಎರಡನೇ ಶಟ್ಲರ್‌ ಎನಿಸಿಕೊಂಡರು. 1983–84ರಲ್ಲಿ ಭಾರತದ ವಿಮಲ್‌ ಕುಮಾರ್‌ ಈ ಸಾಧನೆ ಮಾಡಿದ್ದರು.

ಮಹಿಳಾ ಸಿಂಗಲ್ಸ್‌ ವಿಭಾಗದಲ್ಲಿ ಕೊರಿಯಾದ ಯುವ ಆಟಗಾರ್ತಿ ಆ್ಯನ್‌ ಸೆ ಯಂಗ್‌ ಚಾಂಪಿಯನ್‌ ಪಟ್ಟ ಧರಿಸಿದರು. ಅಂತಿಮ ಹಣಾಹಣಿಯಲ್ಲಿ ಅವರು 16–21, 21–18, 21–5ರಿಂದ ಹಾಲಿ ಒಲಿಂಪಿಕ್‌ ಚಾಂಪಿಯನ್‌ ಕರೋಲಿನಾ ಮರಿನ್‌ ಅವರ ಸವಾಲು ಮೀರಿದರು. ಕರೋಲಿನಾ ಮೂರು ಬಾರಿಯ ವಿಶ್ವ ಚಾಂಪಿಯನ್‌ ಎಂಬುದು ಗಮನಾರ್ಹ ಸಂಗತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT