ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್‌: ಹೆಚ್ಚು ಪ್ರೇಕ್ಷಕರಿಗೆ ಅವಕಾಶ ಅಸಾಧ್ಯ

Last Updated 28 ಏಪ್ರಿಲ್ 2021, 14:51 IST
ಅಕ್ಷರ ಗಾತ್ರ

ಟೋಕಿಯೊ: ಈ ಬಾರಿ ಒಲಿಂಪಿಕ್ಸ್‌ಗೆ ಪೂರ್ಣಪ್ರಮಾಣದಲ್ಲಿ ಪ್ರೇಕ್ಷಕರಿಗೆ ಅನುಮತಿ ನೀಡುವುದು ಕಷ್ಟಸಾಧ್ಯ ಎಂದು ಹೇಳಿರುವ ಆಯೋಜಕರು ಎಷ್ಟು ಮಂದಿ ಸ್ಥಳೀಯ ಪ್ರೇಕ್ಷಕರನ್ನು ಕ್ರೀಡಾಂಗಣದ ಒಳಗೆ ಬಿಡಬೇಕು ಎಂಬುದನ್ನು ಜೂನ್‌ನಲ್ಲಿ ನಿರ್ಧರಿಸುವುದಾಗಿ ಬುಧವಾರ ತಿಳಿಸಿದ್ದಾರೆ.

ಜುಲೈ 23ರಿಂದ ನಡೆಯಲಿರುವ ಒಲಿಂಪಿಕ್ಸ್‌ಗೆ ವಿದೇಶಿ ಪ್ರೇಕ್ಷಕರನ್ನು ಈಗಾಗಲೇ ನಿಷೇಧಿಸಲಾಗಿದೆ. ಜಪಾನ್ ಪ್ರೇಕ್ಷಕರ ಸಂಖ್ಯೆಯನ್ನು ಈ ತಿಂಗಳ ಅಂತ್ಯದಲ್ಲಿ ನಿರ್ಧರಿಸುವ ಸಾಧ್ಯತೆ ಇತ್ತು. ಆದರೆ ಕ್ರೀಡಾಕೂಟ ಆರಂಭಕ್ಕೆ ಮೂರು ತಿಂಗಳು ಇರುವಾಗಲೇ ಟೋಕಿಯೊ ಸೇರಿದಂತೆ ಜಪಾನ್‌ನ ವಿವಿಧ ನಗರಗಳು ಕೊರೊನಾ ತುರ್ತು ಪರಿಸ್ಥಿತಿಯನ್ನು ಎದುರಿಸುತ್ತಿವೆ. ಈ ಹಿನ್ನೆಲೆಯಲ್ಲಿ ನಿರ್ಧಾರ ಕೈಗೊಳ್ಳಲು ಇನ್ನಷ್ಟು ಸಮಯ ಬೇಕು ಎಂದು ಆಯೋಜಕರು ಹೇಳಿದ್ದಾರೆ.

‘ಹೊಸ ತಳಿಯ ವೈರಾಣುಗಳು ಒಳಗೊಂಡಂತೆ ದೇಶದಲ್ಲಿ ಕೋವಿಡ್‌ ಸೋಂಕು ಪ್ರಕರಣಗಳು ಏರುಗತಿಯಲ್ಲಿ ಸಾಗುತ್ತಿವೆ. ಈ ಹಿನ್ನೆಲೆಯಲ್ಲಿ ಒಲಿಂಪಿಕ್‌ ಮತ್ತು ಪ್ಯಾರಾಲಿಂಪಿಕ್‌ ಕೂಟದ ವೇಳೆ ಪ್ರತಿ ಕ್ರೀಡಾಂಗಣದಲ್ಲಿ ಎಷ್ಟು ಪ್ರೇಕ್ಷರಿಗೆ ಅವಕಾಶ ನೀಡಬೇಕು ಎಂಬುದನ್ನು ಈಗಲೇ ನಿರ್ಧರಿಸುವುದು ಅಸಾಧ್ಯ’ ಎಂದು ಉನ್ನತ ಮಟ್ಟದ ಸಭೆಯ ನಂತರ ಅಧಿಕಾರಿಗಳು ತಿಳಿಸಿದರು. ‘ಈ ಹಿಂದಿನ ಕೂಟಗಳಂತೆ ಈ ಬಾರಿ ಕ್ರೀಡಾಂಗಣಗಳು ತುಂಬಿ ತುಳುಕಲು ಸಾಧ್ಯವಿಲ್ಲ’ ಎಂದು ಟೋಕಿಯೊ ಒಲಿಂಪಿಕ್ಸ್‌ ಮುಖ್ಯಸ್ಥ ಸೀಕೊ ಹಶಿಮೊಟೊ ವಿವರಿಸಿದರು.

ನಿತ್ಯವೂ ಪರೀಕ್ಷೆ

ಹೊಸ ಕೋವಿಡ್ ನಿಯಮಾವಳಿಗಳನ್ನು ಸಭೆಯಲ್ಲಿ ಸಿದ್ಧಪಡಿಸಲಾಗಿದ್ದು ಕ್ರೀಡಾಕೂಟದಲ್ಲಿ ಒಳಗೊಂಡವರನ್ನು ನಿತ್ಯವೂ ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಲಾಗಿದೆ. ಈ ಹಿಂದೆ ನಾಲ್ಕು ದಿನಗಳಿಗೊಮ್ಮೆ ಪರೀಕ್ಷೆ ನಡೆಸುವ ತೀರ್ಮಾನ ಕೈಗೊಳ್ಳಲಾಗಿತ್ತು.

ಸ್ಥಳೀಯ ಪ್ರೇಕ್ಷಕರಿಗೆ ಟಿಕೆಟ್ ಮಾರಾಟ ಕಳೆದ ವರ್ಷವೇ ಆರಂಭವಾಗಬೇಕಾಗಿತ್ತು. ಆದರೆ ಅದನ್ನು ಮುಂದೂಡಲಾಗಿತ್ತು. ಈ ವರ್ಷ ಇನ್ನೂ ಅದು ಆರಂಭಗೊಳ್ಳಲಿಲ್ಲ. ವಿದೇಶಿ ಪ್ರೇಕ್ಷಕರು ಖರೀದಿಸಿದ ಟಿಕೆಟ್‌ಗಳ ಮೊತ್ತವನ್ನು ಹಿಂದಿರುಗಿಸುವ ಕಾರ್ಯ ಈಗಾಗಲೇ ಆರಂಭಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT