ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಾವೃತವಾದ ಮನೆ, ಕುಸಿದ ಗೋಡೆ

ಮುಂಗಾರು ಮಳೆ ನಿರ್ವಹಣೆಗೆ ಸಿದ್ಧತೆ ಮಾಡಿಕೊಳ್ಳದ ಪಾಲಿಕೆ; ಜನರ ಆಕ್ರೋಶ
Last Updated 2 ಜೂನ್ 2018, 5:06 IST
ಅಕ್ಷರ ಗಾತ್ರ

ಬೆಳಗಾವಿ: ನಗರದಲ್ಲಿ ಶುಕ್ರವಾರ ಅರ್ಧ ತಾಸಿಗೂ ಹೆಚ್ಚು ಸಮಯ ಸುರಿದ ಮಳೆಯಿಂದ ತಂಪಾದ ವಾತಾವರಣ ನಿರ್ಮಾಣವಾಗಿದೆ. ಕೆಲವೆಡೆ ಹಾನಿಯೂ ಆಗಿದೆ.

ಚವಾಟ ಗಲ್ಲಿಯಲ್ಲಿ ಮನೆಯೊಂದರ ಸೀಟುಗಳು ಹಾರಿ ಹೋಗಿದ್ದು, ಗೋಡೆಯೂ ಕುಸಿದುಬಿದ್ದಿದೆ. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶಿಥಿಲಗೊಂಡಿದ್ದ ಗೋಡೆ ಬಿದ್ದಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ. ಕೆಲವು ಮನೆಗಳು ಜಲಾವೃತವಾಗಿದ್ದವು. ನೀರು  ಹೊರಹಾಕಲು ಮನೆಯವರು ಪರದಾಡಿದರು. ಚರಂಡಿ ಹೂಳೆತ್ತದ ಕಾರಣ, ನೀರು ರಸ್ತೆಗಳ ಮೇಲೆ ಹರಿಯುತ್ತಿದ್ದುದು ಕಂಡುಬಂದಿತು. ‘ಕೇವಲ ಅರ್ಧ ಗಂಟೆ ಸುರಿದ ಮಳೆಗೇ ಈ ಪರಿಸ್ಥಿತಿಯಾದರೆ, ದೊಡ್ಡ ಮಳೆಯಾದರೆ ಏನು ಮಾಡುವುದು? ನಗರಪಾಲಿಕೆಯು ಮುಂಗಾರು ಮಳೆ ನಿರ್ವಹಣೆಗೆ ಸಿದ್ಧತೆ ಮಾಡಿಕೊಂಡಂತಿಲ್ಲ’ ಎಂಬ ಮಾತುಗಳು ಸಾರ್ವಜನಿಕರಿಂದ ಕೇಳಿಬಂದವು.

ಪಾಂಗುಳ ಗಲ್ಲಿ, ಭೋವಿ ಗಲ್ಲಿ ಹಾಗೂ ಬೆಂಡಿಬಜಾರ್‌ನಲ್ಲಿ ರಸ್ತೆಯಲ್ಲಿ ನೀರು ನಿಂತು, ಕಾಲುವೆಯಂತಾಗಿತ್ತು. ಅಕ್ಕಪಕ್ಕದ ಕೆಲವು ಅಂಗಡಿಗಳಿಗೂ ನೀರು ನುಗ್ಗಿತ್ತು. ಸೆಲ್ಲಾರ್‌ನಲ್ಲಿದ್ದ ಕೆಲವು ಬಟ್ಟೆ ಅಂಗಡಿಗಳಿಗೆ ನೀರು ನುಗ್ಗಿದೆ. ಶಾಸ್ತ್ರಿನಗರದಲ್ಲೂ ಕೆಲವು ಮನೆಗಳಿಗೆ ನೀರು ನುಗ್ಗಿದ್ದರಿಂದ ನಿವಾಸಿಗಳು ತೊಂದರೆ ಅನುಭವಿಸಬೇಕಾಯಿತು.

ಜಿಲ್ಲಾ ಪಂಚಾಯ್ತಿ ಕಚೇರಿ, ಪೊಲೀಸ್‌ ಕೇಂದ್ರ ಕಚೇರಿ, ಹನುಮಾನ್‌ನಗರ ವೃತ್ತ, ಸರಸ್ವತಿನಗರದ ವಿವಿಧೆಡೆ ಮರಗಳು ಬಿದ್ದಿವೆ. ವಿದ್ಯುತ್‌ ಕಂಬಗಳು ಕೂಡ ಬಿದ್ದಿದ್ದರಿಂದ, ನಗರದ ಬಹುತೇಕ ಕಡೆಗಳಲ್ಲಿ ರಾತ್ರಿವರೆಗೂ ವಿದ್ಯುತ್‌ ಪೂರೈಕೆ ಇರಲಿಲ್ಲ. ಮರಗಳನ್ನು ತೆರವುಗೊಳಿಸುವುದು ಹಾಗೂ ವಿದ್ಯುತ್‌ ಮಾರ್ಗ ದುರಸ್ತಿಯಲ್ಲಿ ಕಾರ್ಮಿಕರು ತೊಡಗಿದ್ದರು.

‘ಮಳೆ, ಗಾಳಿಯಿಂದಾಗಿ ಅಲ್ಲಲ್ಲಿ ಮರಗಳು ವಿದ್ಯುತ್‌ ಕಂಬಗಳ ಮೇಲೆ ಬಿದ್ದಿವೆ. 20ಕ್ಕೂ ಹೆಚ್ಚು ಕಂಬಗಳು ಮುರಿದಿವೆ. 7 ಪರಿವರ್ತಕಗಳು  ಸುಟ್ಟಿವೆ’ ಎಂದು ಹೆಸ್ಕಾಂ ಎಇಇ ಅಶ್ವಿನ್‌ ಶಿಂಧೆ ತಿಳಿಸಿದರು.

ಚವಾಟ ಗಲ್ಲಿಯಲ್ಲಿ ಮಳೆ ಹಾನಿ ಪ್ರದೇಶಗಳಿಗೆ ಶಾಸಕ ಅನಿಲ ಬೆನಕೆ ಭೇಟಿ ನೀಡಿ ಪರಿಶೀಲಿಸಿದರು. ಪರಿಹಾರ ಕೊಡಿಸುವ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT